ADVERTISEMENT

Explainer | ಎಲ್ಲಿಗೆ ಹೋಗುತ್ತಿವೆ ಈ ರೇಷನ್‌ ಕಾರ್ಡ್‌ಗಳು?

*ತಗ್ಗಿದ ಬಡತನದ ಪ್ರಮಾಣ * ರಾಜ್ಯದ ಕುಟುಂಬಗಳ ಸಂಖ್ಯೆಗಿಂತಲೂ ಹೆಚ್ಚಿನ ಚೀಟಿ ವಿತರಣೆ

ಕೆ.ಜೆ.ಮರಿಯಪ್ಪ
Published 31 ಮಾರ್ಚ್ 2020, 19:20 IST
Last Updated 31 ಮಾರ್ಚ್ 2020, 19:20 IST
.
.   
""
""

ಅರ್ಹರಿಗೆ ಪಡಿತರ ಚೀಟಿ ಕೊಟ್ಟಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ 2008ರ ವಿಧಾನಸಭೆ ಚುನಾವಣೆಗೂ ಮುನ್ನ ಗುಡುಗಿದ್ದರು. ಅಧಿಕಾರಕ್ಕೆ ಬಂದರೆ ಎಲ್ಲ ಅರ್ಹರಿಗೆ ಪಡಿತರ ಚೀಟಿ ಕೊಡುವುದಾಗಿ ಘೋಷಿಸಿದ್ದರು.ಮನೆಮನೆಗೆ ಕಾರ್ಡ್ ತಲುಪಿಸುವುದಾಗಿ ಭರವಸೆ ನೀಡಿದರು. ‘ವಚನ ಭ್ರಷ್ಟತೆ’ ಹಾಗೂ ‘ಪಡಿತರ ಚೀಟಿ’ ಸಮಸ್ಯೆಗಳೇ ಚುನಾವಣೆಯ ಪ್ರಮುಖ ವಿಚಾರಗಳಾಗಿದ್ದವು. ನಂತರ ಬಂದ ಲೋಕಸಭೆ ಚುನಾವಣೆ ಸಮಯದಲ್ಲೂ ಇದೇ ವಿಚಾರ ಮುನ್ನೆಲೆಗೆ ಬಂತು. ಮುಂದಿನ ದಿನಗಳಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಟೋಕನ್ ಕೊಡಲಾಯಿತು. ಈ ಟೋಕನ್ ಆಧಾರದ ಮೇಲೆ ಪಡಿತರ ವಿತರಣೆ ಚಾಲ್ತಿಗೆ ಬಂತು. ಕೊನೆಗೆ ಟೋಕನ್ ಇದ್ದವರಿಗೆಲ್ಲ ಪಡಿತರಕಾರ್ಡ್ ವಿತರಿಸಲಾಯಿತು.

ಟೋಕನ್ ನೀಡುವಾಗ ಯಾವುದೇ ಮಾನದಂಡ ಅನುಸರಿಸಲಿಲ್ಲ. ಅರ್ಹತೆಯನ್ನೂ ಪರಿಗಣಿಸಲಿಲ್ಲ. ಟೋಕನ್ ಹೊಂದಿದವರಿಗೆಲ್ಲ ಪಡಿತರ ಚೀಟಿ ಕೊಟ್ಟಿದ್ದರಿಂದ ಸುಮಾರು 80 ಲಕ್ಷದಷ್ಟಿದ್ದ ಕಾರ್ಡ್ ಸಂಖ್ಯೆ ಒಮ್ಮೆಲೆ ಒಂದು ಕೋಟಿ ದಾಟಿತು. ಈ ಪ್ರಮಾಣ ಇಂದಿಗೂ ಬೆಳೆಯುತ್ತಲೇ ಸಾಗಿದೆ.

ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಆಹಾರ ಸಚಿವರಾಗಿದ್ದವರು ಪಡಿತರ ಚೀಟಿ ವಿತರಣೆಗೆ ಹೊಸ ವ್ಯವಸ್ಥೆ ರೂಪಿಸಲಾಗುವುದು ಎಂದು ಹಿಂದಿನ ಸಚಿವರ ರೀತಿಯಲ್ಲೇ ಹೇಳಿಕೆ ಕೊಟ್ಟರು. ಜಗದೀಶ್ ಶೆಟ್ಟರ್ ಅವಧಿಯಲ್ಲಿ (2012–13) ಆಹಾರ ಸಚಿವರಾಗಿದ್ದ ಡಿ.ಎನ್.ಜೀವರಾಜ್ ಕೆಲ ಸುಧಾರಣೆಗೆ ಕೈಹಾಕಿದರು.

ADVERTISEMENT

ತೂಕದಲ್ಲಿ ಮೋಸ ಮಾಡುವುದನ್ನು ತಡೆಯುವ ಸಲುವಾಗಿ ವಿದ್ಯುನ್ಮಾನ ಯಂತ್ರಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸುವ ಕೆಲಸ ಆರಂಭವಾಯಿತು. ಇದಕ್ಕಾಗಿ ಹತ್ತಾರು ಕೋಟಿ ಖರ್ಚು ಮಾಡಲಾಯಿತು. ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು. ನಂತರ ಬಂದ ಸರ್ಕಾರಗಳು ಇದನ್ನು ಮುಂದುವರಿಸಲಿಲ್ಲ. ಈಗ ಈ ಯಂತ್ರಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಲವೆಡೆ ಮೂಲೆಗೆ ಸೇರಿದ್ದು, ದೂಳು ಹಿಡಿದಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಲೋಪದೋಷಗಳನ್ನು ಸರಿಪಡಿಸುವ ಕೆಲಸ ಆಗಲೇ ಇಲ್ಲ ಎಂದು ಜನರು ಆರೋಪಿಸಿದ್ದರು.

ಬಿಜೆಪಿ ಸರ್ಕಾರದ ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಪೂರ್ಣ ಐದು ವರ್ಷಗಳ ಅಧಿಕಾರ ನಡೆಸಿದರು. ಇವರ ಕಾಲದಲ್ಲಿ ದಿನೇಶ್ ಗುಂಡೂರಾವ್ ಆಹಾರ ಸಚಿವರಾಗಿದ್ದರು. 2015ರಲ್ಲಿ ಆನ್‌ಲೈನ್ ಮೂಲಕ ಪಡಿತರ ಚೀಟಿ ವಿತರಿಸುವುದಾಗಿ ಸಚಿವರು ಘೋಷಿಸಿದರು.

ಪಡಿತರ ಚೀಟಿ ಬೇಕಾದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ದಾಖಲೆಗಳನ್ನು ಪರಿಶೀಲಿಸಿದ ನಂತರ ಅರ್ಹರಿಗೆ ನಿಗದಿತ ದಿನದಂದು ಭಾವಚಿತ್ರಗಳನ್ನು ತೆಗೆದು ಕಾರ್ಡ್ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಯಿತು. ಅರ್ಜಿ ಸಲ್ಲಿಸಲು ಅನಕ್ಷರಸ್ಥರು, ರೈತಾಪಿ ವರ್ಗ ಕಂಪ್ಯೂಟರ್ ಸೆಂಟರ್‌ಗಳನ್ನು ಹುಡುಕುವುದರಲ್ಲೇ ಸುಸ್ತಾದರು. ನಂತರ ಯು.ಟಿ.ಖಾದರ್ ಆಹಾರ ಸಚಿವರಾದರೂ ಇದೇ ವ್ಯವಸ್ಥೆ ಮುಂದುವರಿಯಿತು. ನಂತರ ಬಂದ ಜೆಡಿಎಸ್– ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲೂ ಇದೇ ವ್ಯವಸ್ಥೆ ಮುಂದುವರಿದಿತ್ತು. ಈಗಲೂ ಸಮಸ್ಯೆ ಹಾಗೇ ಇದೆ.

ಪಡಿತರ ಚೀಟಿಗಳು ಮತ್ತು ಫಲಾನುಭವಿಗಳು

10.94 ಲಕ್ಷ ಅಂತ್ಯೋದಯ ಅನ್ನ ಯೋಜನೆ ಚೀಟಿಗಳು

46.57 ಲಕ್ಷಅಂತ್ಯೋದಯ ಅನ್ನ ಯೋಜನೆ ಫಲಾನುಭವಿಗಳು

20.39 ಲಕ್ಷ ಎಪಿಲ್‌ ಚೀಟಿಗಳು

72.66 ಲಕ್ಷ ಎಪಿಲ್ ಚೀಟಿ ಫಲಾನುಭವಿಗಳು

1.16 ಕೋಟಿ ಬಿಪಿಎಲ್‌ ಚೀಟಿಗಳು

3.83 ಕೋಟಿ ಬಿಪಿಎಲ್ ಚೀಟಿ ಫಲಾನುಭವಿಗಳು

1.47 ಕೋಟಿ ಒಟ್ಟು ಪಡಿತರ ಚೀಟಿಗಳ ಸಂಖ್ಯೆ

5.02 ಕೋಟಿ ಒಟ್ಟು ಫಲಾನುಭವಿಗಳು

–––––––––––

ಪಡಿತರ ಹಂಚಿಕೆ

35 ಕೆ.ಜಿ.

ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಕಾರ್ಡ್‌ಗೆ ನೀಡಲಾಗುತ್ತಿರುವ ಅಕ್ಕಿ

7 ಕೆ.ಜಿ.

ಬಿಪಿಎಲ್‌ ಪಡಿತರ ಚೀಟಿಯ ಕುಟುಂಬದ ಪ್ರತಿ ಸದಸ್ಯರಿಗೆ ವಿತರಿಸಲಾಗುವ ಆಹಾರ ಧಾನ್ಯದ ಪ್ರಮಾಣ

10 ಕೆ.ಜಿ.

ಎಪಿಎಲ್‌ ಚೀಟಿ ಹೊಂದಿರುವ ಕುಟುಂಬಕ್ಕೆ ವಿತರಿಸಲಾಗುವ ಗರಿಷ್ಠ ಪ್ರಮಾಣದ ಅಕ್ಕಿ (ಏಕ ಸದಸ್ಯ ಕುಟುಂಬಕ್ಕೆ 5 ಕೆ.ಜಿ. ಮಾತ್ರ ವಿತರಿಸಲಾಗುತ್ತದೆ)

***

ನ್ಯಾಯಬೆಲೆ ಅಂಗಡಿ
19,921 ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡಲಾಗುತ್ತಿದೆ. 9,883 ನ್ಯಾಯಬೆಲೆ ಅಂಗಡಿಗಳನ್ನು ಸಹಕಾರ ಸಂಘಗಳು, 22 ಅಂಗಡಿಗಳನ್ನು ಗ್ರಾಮ ಪಂಚಾಯಿತಿಗಳು, 57 ಅಂಗಡಿಗಳನ್ನು ನಗರ ಸ್ಥಳೀಯ ಸಂಸ್ಥೆಗಳು, 191 ಅಂಗಡಿಗಳನ್ನು ಮಹಿಳಾ ಸ್ವಸಹಾಯ ಸಂಘಗಳು, 9,768 ನ್ಯಾಯಬೆಲೆ ಅಂಗಡಿಗಳನ್ನು ಖಾಸಗಿ ವ್ಯಕ್ತಿಗಳು ನಡೆಸುತ್ತಿದ್ದಾರೆ.

***

ಅಕ್ಕಿ ಹಂಚಿಕೆ
ರಾಜ್ಯಕ್ಕೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 21.74 ಲಕ್ಷ ಕ್ವಿಂಟಾಲ್‌ ಅಕ್ಕಿಯನ್ನು ಹಂಚಿಕೆ ಮಾಡುತ್ತದೆ. ಕೆ.ಜಿ.ಗೆ ₹3 ದರದಲ್ಲಿ ನೀಡುತ್ತದೆ. ಕೇಂದ್ರದ ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಕಾರ್ಡ್‌ಗೆ 2 ಕೆ.ಜಿ ಅಕ್ಕಿ ನೀಡುತ್ತಿದ್ದು, ಪ್ರತಿ ಕೆ.ಜಿ ಅಕ್ಕಿಯನ್ನು ₹29 ದರದಲ್ಲಿ ಖರೀದಿಸುತ್ತಿದೆ.

ಪ್ರಸಾದ್ ಕಾಲದಲ್ಲಿ ಸಮಸ್ಯೆ ಜೋರು
ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು. ಆಗ ಪಡಿತರ ಚೀಟಿಯ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.ಬಡವರಿಗೆ ಪಡಿತರ ಚೀಟಿ ಸಿಗುತ್ತಿಲ್ಲ ಎಂಬ ದೊಡ್ಡ ಮಟ್ಟದ ಕೂಗು ಎದ್ದಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಮಹದೇವ ಪ್ರಸಾದ್ ಸಮಸ್ಯೆ ಪರಿಹರಿಸಲು ಮುಂದಾಗಿದ್ದರು. ಭಾವಚಿತ್ರ ಸಹಿತ ಕಾರ್ಡ್ ವಿತರಣೆಗೆ ಕ್ರಮ ಕೈಗೊಂಡಿದ್ದರು.

ಪಡಿತರ ಚೀಟಿ ವಿತರಿಸುವ ಹೊಣೆಯನ್ನು ‘ಕೊಮ್ಯಾಟ್’ ಎಂಬ ಖಾಸಗಿ ಸಂಸ್ಥೆಗೆ ವಹಿಸಿದ್ದರು. ಈ ಸಂಸ್ಥೆಯು ಫಲಾನುಭವಿಗಳ ಭಾವಚಿತ್ರ ಸಹಿತ ಕಾರ್ಡ್ ವಿತರಣೆಮಾಡಿತ್ತು. ಆ ಸಮಯದಲ್ಲೂ ಅರ್ಹರಿಗೆ ಕಾರ್ಡ್ ಸಿಗಲಿಲ್ಲ. ಗೊಂದಲ ಮುಗಿಯಲಿಲ್ಲ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

‘ಕಾರ್ಡ್ ವಿತರಣೆಯಲ್ಲಿ ಅಕ್ರಮಗಳು ನಡೆದಿವೆ, ಈ ಸಂಸ್ಥೆಗೆ ಜವಾಬ್ದಾರಿ ನೀಡುವಲ್ಲೂ ಭ್ರಷ್ಟಾಚಾರ ನಡೆದಿದೆ’ ಎಂಬ ಆರೋಪಗಳು ಕೇಳಿ ಬಂದಿದ್ದವು.

ಸಿದ್ದರಾಮಯ್ಯ ಕಾಲದಲ್ಲಿ ಆನ್‌ಲೈನ್ ಸೌಲಭ್ಯ
ಬಿಜೆಪಿ ಸರ್ಕಾರದ ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಪೂರ್ಣ ಐದು ವರ್ಷಗಳ ಅಧಿಕಾರ ನಡೆಸಿದರು. ಇವರ ಕಾಲದಲ್ಲಿ ದಿನೇಶ್ ಗುಂಡೂರಾವ್ ಆಹಾರ ಸಚಿವರಾಗಿದ್ದರು. 2015ರಲ್ಲಿ ಆನ್‌ಲೈನ್ ಮೂಲಕ ಪಡಿತರ ಚೀಟಿ ವಿತರಿಸುವುದಾಗಿ ಸಚಿವರು ಘೋಷಿಸಿದರು.

ಪಡಿತರ ಚೀಟಿ ಬೇಕಾದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ದಾಖಲೆಗಳನ್ನು ಪರಿಶೀಲಿಸಿದ ನಂತರ ಅರ್ಹರಿಗೆ ನಿಗದಿತ ದಿನದಂದು ಭಾವಚಿತ್ರಗಳನ್ನು ತೆಗೆದು ಕಾರ್ಡ್ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಯಿತು. ಅರ್ಜಿ ಸಲ್ಲಿಸಲು ಅನಕ್ಷರಸ್ಥರು, ರೈತಾಪಿ ವರ್ಗ ಕಂಪ್ಯೂಟರ್ ಸೆಂಟರ್‌ಗಳನ್ನು ಹುಡುಕುವುದರಲ್ಲೇ ಸುಸ್ತಾದರು. ನಂತರ ಡಾ.ಯು.ಟಿ.ಖಾದರ್ ಆಹಾರ ಸಚಿವರಾದರೂ ಇದೇ ವ್ಯವಸ್ಥೆ ಮುಂದುವರಿಯಿತು.

ಈಗ ಆಧಾರ್ ಜೋಡಣೆ
ಈಗಲೂ ಆನ್‌ಲೈನ್ ಮೂಲಕ ಅರ್ಜಿ ಪಡೆದು ಪಡಿತರ ಚೀಟಿ ವಿತರಿಸುವ ಕಾರ್ಯ ಮುಂದುವರಿದಿದೆ. ಉಳ್ಳವರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹವರ ಪತ್ತೆಗೆ ಈಗ ಮತ್ತೊಂದು ಮಾರ್ಗ ಕಂಡುಕೊಳ್ಳಲಾಗಿದೆ. ಪಡಿತರ ಚೀಟಿಯ ಜತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರಿಂದ ಅಕ್ರಮ ತಡೆಯಬಹುದು ಎಂಬುದು ಆಹಾರ ಸಚಿವ ಕೆ.ಗೋಪಾಲಯ್ಯ ಸಮರ್ಥನೆ. ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿದವರು ಬೆರಳಚ್ಚು ನೀಡುವ ಮೂಲಕ ಖಾತರಿಪಡಿಸಬೇಕಿದೆ.

ಅಕ್ರಮ ತನಿಖೆ; ತಿವಾರಿ ಸಾವು

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿದ ಸಮಯದಲ್ಲಿ ಆಹಾರ ಇಲಾಖೆಯಲ್ಲಿ ನಡೆದ ಅಕ್ರಮದ ವಿಚಾರ ತಳಕು ಹಾಕಿಕೊಂಡಿತ್ತು.

ಸಿಎಜಿ ವರದಿಯನ್ನು ಆಧರಿಸಿ ಇಲಾಖೆಯಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಮೊತ್ತದ ಅಕ್ರಮ, ‘ಕೊಮ್ಯಾಟ್’ ಸಂಸ್ಥೆಯು ಇಲಾಖೆಗೆ ಕೊಟ್ಯಂತರ ರೂಪಾಯಿ ವಂಚಿಸಿದೆ ಎಂಬ ಆರೋಪದ ಬಗ್ಗೆ ತಿವಾರಿ ತನಿಖೆಗೆ ಮುಂದಾಗಿದ್ದರು. ಈ ಸಮಯದಲ್ಲಿ ಕೆಲವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ತಿವಾರಿ ಸಾವಿನ ಜತೆಗೆ ಈ ವಿಚಾರಗಳು ತಳಕು ಹಾಕಿಕೊಂಡಿದ್ದವು. ಆದರೆ ಯಾವುದೂ ತಾರ್ಕಿತ ಅಂತ್ಯ ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.