ADVERTISEMENT

ಆಳ–ಅಗಲ: ಧ್ರುವ ಯಾನ ಸವಾಲು ಗೆದ್ದ ವಿಮಾನ

ಮಹಿಳಾ ಪೈಲಟ್‌ಗಳ ಹೆಮ್ಮೆಯ ಸಾಧನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 19:31 IST
Last Updated 12 ಜನವರಿ 2021, 19:31 IST
ಪೈಲಟ್‌ಗಳಾದ ಪಾಪಗಿರಿ ತನ್ಮಯಿ, ಝೋಯಾ ಅಗರ್‌ವಾಲ್‌, ಆಕಾಂಕ್ಷಾ ಸೊನಾವನೆ, ಶಿವಾನಿ ಮನ್ಹಾಸ್‌ –ಪಿಟಿಐ ಚಿತ್ರ
ಪೈಲಟ್‌ಗಳಾದ ಪಾಪಗಿರಿ ತನ್ಮಯಿ, ಝೋಯಾ ಅಗರ್‌ವಾಲ್‌, ಆಕಾಂಕ್ಷಾ ಸೊನಾವನೆ, ಶಿವಾನಿ ಮನ್ಹಾಸ್‌ –ಪಿಟಿಐ ಚಿತ್ರ   

ಜನವರಿ 11, 2021ರಂದು ಸಿಲಿಕಾನ್ ಐಟಿ ಸ್ಯಾನ್ ಫ್ರಾನ್ಸಿಸ್ಕೊದಿಂದ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ವಿಮಾನವನ್ನು ಮುನ್ನಡೆಸಿಕೊಂಡು ಬಂದಿದ್ದು ಮಹಿಳೆಯರೇ ಇದ್ದ ಪೈಲಟ್ ಪಡೆ. ತಾಂತ್ರಿಕ ದೃಷ್ಟಿಕೋನದಲ್ಲಿ ಈ ಹಾರಾಟದೊಂದಿಗೆ ಭಾರತ ಸವೆಸಿದ್ದು ಸಾಂಪ್ರದಾಯಿಕವಲ್ಲದ ಹಾಗೂ ಸವಾಲಿನ ಹಾದಿ ಎಂಬುದು ಇಲ್ಲಿ ಗಮನಾರ್ಹ.

ಕ್ಯಾಪ್ಟನ್ ಝೋಯಾ ಅಗರ್‌ವಾಲ್ ನೇತೃತ್ವದಲ್ಲಿ ಬೋಯಿಂಗ್ 777-200 ಎಲ್ಆರ್ ವಿಮಾನ ಹೊಸ ಮಾರ್ಗದಲ್ಲಿ ಉದ್ಘಾಟನಾ ಹಾರಾಟ ನಡೆಸಿತು. ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾದ ವಿಮಾನ ವಾರಕ್ಕೆ ನಾಲ್ಕು ಬಾರಿ ಈ ಮಾರ್ಗದಲ್ಲಿ ಸಂಚರಿಸಲಿದೆ. ಉತ್ತರ ಧ್ರುವ ಮಾರ್ಗವು ತನ್ನ ಸೌಂದರ್ಯದಿಂದಾಗಿ ಆಕರ್ಷಕವಾಗಿದೆ. ಸಮಯ ಮತ್ತು ಇಂಧನ ಎರಡನ್ನೂ ಉಳಿಸುವುದರಿಂದ ಆರ್ಥಿಕವಾಗಿಯೂ ಆಕರ್ಷಕ ಎನಿಸಿದೆ.

ತಡೆರಹಿತ

ADVERTISEMENT

ಈ ಹಾರಾಟದಲ್ಲಿ ಏರ್ ಇಂಡಿಯಾ ವಿಮಾನವು 10 ಟನ್ ಇಂಧನ ಉಳಿಸುವಲ್ಲಿ ಯಶಸ್ವಿಯಾಗಿದೆ. ಸ್ಯಾನ್ ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ಹಾರಾಟ ನಡೆಸುವ ಹೆಚ್ಚಿನ ವಿಮಾನಗಳು ಇಂಧನ ತುಂಬುವುದಕ್ಕಾಗಿ ಒಂದು ಜಾಗದಲ್ಲಿ ಇಳಿದು, ಪುನಃ ಪ್ರಯಾಣ ಮುಂದುವರಿಸುತ್ತವೆ. ಹೀಗಾಗಿ ಈ ಮಾರ್ಗವನ್ನು ಕ್ರಮಿಸಲು ಕನಿಷ್ಠ 21 ಗಂಟೆ 50 ನಿಮಿಷ ಬೇಕೇಬೇಕು. ಆದರೆ ಏರ್ ಇಂಡಿಯಾ ವಿಮಾನವು ಇಂಧನ ಭರ್ತಿಗಾಗಿ ಎಲ್ಲಿಯೂ ಇಳಿಯದೆ ಹಾರಾಟ ನಡೆಸಿ 4 ಗಂಟೆಗಳ ಪ್ರಯಾಣವನ್ನು ಉಳಿಸಿದೆ. ಅಂದರೆ, 17 ಗಂಟೆ 45 ನಿಮಿಷಗಳಲ್ಲಿ ನಿಗದಿತ ಹಾದಿ ಕ್ರಮಿಸಿದೆ.

ಅಗ್ಗದ ದರದ ಹಾರಾಟ

ಈ ಮಾರ್ಗದ ಪ್ರಯಾಣ ಗರಿಷ್ಠ ಅವಧಿ 39 ಗಂಟೆಗಳು. ಅಂದರೆ, ಮೊನ್ನೆಯ ವಿಮಾನ ತೆಗೆದುಕೊಂಡ ಸಮಯದ ದುಪ್ಪಟ್ಟು ಸಮಯ. ಕುತೂಹಲಕಾರಿ ವಿಚಾರವೆಂದರೆ, ಈ ಮಾರ್ಗದಲ್ಲಿ ಇದು ಎರಡನೇ ಅಗ್ಗದ ಹಾರಾಟ ಎನಿಸಿದೆ. ಅತಿ ಅಗ್ಗದ ದರದ ವಿಮಾನ ಟಿಕೆಟ್‌ಗೂ ಏರ್ ಇಂಡಿಯಾದ ಈ ವಿಮಾನ ಪ್ರಯಾಣದ ದರಕ್ಕೂ ನಡುವೆ ಇರುವುದು ಸುಮಾರು ₹1000 ವ್ಯತ್ಯಾಸ ಮಾತ್ರ.

ನೇರ ರೇಖೆ ಮಾರ್ಗದ ಗ್ರಹಿಕೆ

ವಿಮಾನ ಸಾಗಿ ಬಂದ ಹಾದಿಯನ್ನು ಸಾಮಾನ್ಯ ವ್ಯಕ್ತಿಯೊಬ್ಬ ನಕ್ಷೆಯಲ್ಲಿ ಗಮನಿಸಿದಾಗ ಅದು ವಕ್ರವಾಗಿರುವಂತೆ ತೋರುತ್ತದೆ. ಅರೆ, ನೇರವಾಗಿ ಗೆರೆ ಎಳೆದಂತೆ ಸಾಗಿಬಂದರೆ ಪ್ರಯಾಣದ ಹಾದಿ, ಸಮಯ, ಹಣ ಉಳಿತಾಯವಾಗುವುದಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ನಾವು ಎರಡು ಆಯಾಮದ (ಟು ಡೈಮೆನ್ಷನ್) ವಿವರಣೆಯನ್ನು ಪರಿಶೀಲಿಸುತ್ತಿದ್ದೇವೆ ಎಂಬುದನ್ನು ಮರೆಯುವುದರಿಂದ ಈ ಸಾಮಾನ್ಯ ತಪ್ಪು ಆಗುತ್ತದೆ. ಇದರರ್ಥ ಅಟ್ಲಾಸ್ ನಮ್ಮ ಸಾಮಾನ್ಯ ಗ್ರಹಿಕೆಯ ದಾರಿ ಯನ್ನು ತಪ್ಪಿಸುತ್ತದೆ. ವಾಯುಯಾನ ಕ್ಷೇತ್ರ ಗೊತ್ತಿರದ ಯಾರಿಗಾದರೂ ಈ ಗೊಂದಲ ಉಂಟಾಗುವುದರಲ್ಲಿ ಅಚ್ಚರಿಯಿಲ್ಲ.

ದಕ್ಷಿಣ ಧ್ರುವ ಏಕೆ ಸೂಕ್ತವಲ್ಲ?

ಧ್ರುವ ಮಾರ್ಗಗಳು ಅಗ್ಗದ ಮಾರ್ಗಗಳು ಎಂದಾದರೆ, ದಕ್ಷಿಣ ಧ್ರುವದಲ್ಲಿ ಪ್ರಯಾಣ ಏಕೆ ಕಷ್ಟ ಎಂಬ ಸಹಜ ಪ್ರಶ್ನೆ ಏಳುತ್ತದೆ. ಭಾರತ ಸೇರಿದಂತೆ ಹೆಚ್ಚಿನ ದೇಶಗಳು ಉತ್ತರ ಗೋಳಾರ್ಧದಲ್ಲಿವೆ. ಬೆಂಗಳೂರು ನಗರವು ದಕ್ಷಿಣ ಭಾರತದಲ್ಲಿದೆಯೇ ವಿನಾ, ಅದು ದಕ್ಷಿಣ ಧ್ರುವಕ್ಕೆ ಹತ್ತಿರವಾಗಿದೆ ಎಂದು ಅರ್ಥವಲ್ಲ.

ಮುಖ್ಯವಾಗಿ ಉತ್ತರ ಧ್ರುವಕ್ಕೆ ಹೋಲಿಸಿದರೆ, ದಕ್ಷಿಣ ಧ್ರುವದಲ್ಲಿ ವೈಮಾನಿಕ ಮೂಲಸೌಕರ್ಯ ಇಲ್ಲ. ತುರ್ತಾಗಿ ತಿರುವು ತೆಗೆದುಕೊಳ್ಳಬೇಕಾದ ಅಥವಾ ವಿಮಾನವನ್ನು ಇಳಿಸಬೇಕಾದ ಸಂದರ್ಭ ಎದುರಾದರೆ, ಅಂಥ ಸವಲತ್ತುಗಳಿಗೆ ಅಲ್ಲಿ ಬರವಿದೆ. ಉತ್ತರ ಧ್ರುವಕ್ಕೆ ಹೋಲಿಸಿದರೆ ದಕ್ಷಿಣ ಧ್ರುವದಲ್ಲಿ ಭೂ ಪ್ರದೇಶ ಕಡಿಮೆ. ಅಲ್ಲದೆ, ಹೆಚ್ಚಿನ ಜನರು ಉತ್ತರ ಗೋಳಾರ್ಧದಲ್ಲಿ ವಾಸಿಸುತ್ತಿದ್ದಾರೆ. ದಕ್ಷಿಣ ಧ್ರುವ ಮಾರ್ಗಗಳ ಮೂಲಕ ವಿಮಾನಗಳ ಬೇಡಿಕೆ ವಾಣಿಜ್ಯಿಕ ದೃಷ್ಟಿಯಿಂದಲೂ ಸಮರ್ಥನೀಯವಾಗಿಲ್ಲ.

ಉತ್ತರ ಧ್ರುವಕ್ಕೆ ಹೋಲಿಸಿದರೆ ದಕ್ಷಿಣ ಧ್ರುವ ಹೆಚ್ಚು ತಂಪಾಗಿರುತ್ತದೆ. ಇಂಧನ ಘನರೂಪ ತಾಳುವ ಅಪಾಯ ಇರುತ್ತದೆ. ವಿಮಾನದ ಇಂಧನವು ಮೈನಸ್ 47 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹೆಪ್ಪುಗಟ್ಟುತ್ತದೆ. ಉತ್ತರ ಧ್ರುವದಲ್ಲಿ, ಕನಿಷ್ಠ ತಾಪಮಾನ ಮೈನಸ್ 40 ಡಿಗ್ರಿ ಸೆಲ್ಸಿಯಸ್. ಆದರೆ ದಕ್ಷಿಣ ಧ್ರುವ ಮಾರ್ಗದಲ್ಲಿ ತಾಪಮಾನ ಮೈನಸ್ 60 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಉತ್ತರ ಧ್ರುವ ಮಾರ್ಗದ ಹಾರಾಟ ಇದೇ ಮೊದಲಲ್ಲ

ಏರ್ ಇಂಡಿಯಾದ ಪೈಲಟ್‌ಗಳು ಉತ್ತರ ಧ್ರುವ ಮಾರ್ಗದಲ್ಲಿ ಹಾರಾಡಿದ್ದು ಇದೇ ಮೊದಲಲ್ಲ. 2007ರಲ್ಲಿ ಏರ್ ಇಂಡಿಯಾ ಕ್ಯಾಪ್ಟನ್ ಅಮಿತಾಭ್ ಸಿಂಗ್ ಅವರು ಹೊಚ್ಚ ಹೊಸ ಬೋಯಿಂಗ್ 777 ಅನ್ನು ಚಲಾಯಿಸುವಾಗ ಈ ಮಾರ್ಗ ಆಯ್ಕೆ ಮಾಡಿಕೊಂಡ ಮೊದಲಿಗರು ಎನಿಸಿದ್ದಾರೆ. ನಂತರ 2019ರ ಆಗಸ್ಟ್‌ನಲ್ಲಿ ಕ್ಯಾಪ್ಟನ್ ರಜನೀಶ್ ಶರ್ಮಾ ನೇತೃತ್ವದಲ್ಲಿ ದೆಹಲಿ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವೆ ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಹಾರಾಟ ನಡೆಸಿತು. ಈ ಧ್ರುವ ಪ್ರದೇಶದಲ್ಲಿ ಗಾಳಿಯ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿಮಾನ ಚಲಾಯಿಸುವುದರಿಂದ 2 ಟನ್‌ನಿಂದ 7 ಟನ್ ಇಂಧನವನ್ನು ಉಳಿಸಬಹುದು ಎಂಬುದು ತಜ್ಞರ ವಿಶ್ಲೇಷಣೆ.

ನಿವೇದಿತಾ ಸಾಧನೆ

ಜೆಟ್‌ ವಿಮಾನವನ್ನು ಚಲಾಯಿಸಿದ ಜಗತ್ತಿನ ಅತಿ ಕಿರಿಯ ವಯಸ್ಸಿನ ಮಹಿಳೆ ಎಂಬ ದಾಖಲೆ ಭಾರತದ ನಿವೇದಿತಾ ಭಾಸಿನ್‌ ಅವರ ಹೆಸರಿನಲ್ಲಿದೆ.

1963ರಲ್ಲಿ ಜನಿಸಿದ ಇವರು 1990ರ ಜನವರಿ 1ರಂದು ಮುಂಬೈ– ಔರಂಗಾಬಾದ್‌– ಉದಯಪುರ ನಡುವೆ ಜೆಟ್‌ ವಿಮಾನ ಹಾರಾಟ ನಡೆಸುವ ಮೂಲಕ ಈ ದಾಖಲೆ ಮಾಡಿದ್ದರು.

1985ರಲ್ಲಿ ಕಲ್ಕತ್ತಾ– ಸಿಲ್ಚಾರ್‌ ಮಾರ್ಗದಲ್ಲಿ ಸಂಚರಿಸಿದ ಮಹಿಳಾ ಪೈಲಟ್‌ಗಳನ್ನು ಮಾತ್ರ ಹೊಂದಿದ್ದ ಜಗತ್ತಿನ ಮೊದಲ ವಿಮಾನ ಹಾರಾಟದಲ್ಲಿ ಇವರು ಸಹಪೈಲಟ್‌ ಆಗಿದ್ದರು. ಇಂಥ ಇನ್ನೂ ಅನೇಕ ದಾಖಲೆಗಳು ನಿವೇದಿತಾ ಅವರ ಹೆಸರಿನಲ್ಲಿವೆ. 35 ವರ್ಷಗಳ ಸೇವಾ ಅನುಭವದಲ್ಲಿ ಅವರು ಬೋಯಿಂಗ್‌ ಬಿ737, ಏರ್‌ಬಸ್‌ ಎ300, ಏರ್‌ಬಸ್‌ ಎ330, ಡ್ರೀಮ್‌ಲೈನರ್‌ ಬೋಯಿಂಗ್‌787 ಮುಂತಾದ ವಿಮಾನಗಳನ್ನೂ ಚಲಾಯಿಸಿದ್ದಾರೆ. 22,000 ಗಂಟೆಗಳ ಹಾರಾಟದ ಅನುಭವ ಪಡೆದಿದ್ದಾರೆ. ಈಗ ಇವರ ಇಡೀ ಕುಟುಂಬ ಪೈಲಟ್‌ಗಳಿಂದಲೇ ತುಂಬಿದೆ. ಪತಿ, ಪುತ್ರಿ, ಪುತ್ರ ಎಲ್ಲರೂ ಪೈಲಟ್‌ಗಳಾಗಿ ಬೇರೆಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ರಾಷ್ಟ್ರಗಳು

ಭಾರತ ಶೇ 12.4

ಐರ್ಲೆಂಡ್‌ ಶೇ 9.9

ದಕ್ಷಿಣ ಆಫ್ರಿಕಾ ಶೇ. 9.8

ಕೆನಡಾ ಶೇ 6.9

ಜರ್ಮನಿ ಶೇ 6.8

ಜಾಗತಿಕ ಸರಾಸರಿ ಶೇ 5.1

ಗರಿಷ್ಠ ಮಹಿಳಾ ಪೈಲಟ್‌ಗಳನ್ನು ಹೊಂದಿರುವ ನಾಗರಿಕ ವಿಮಾನಯಾನ ಸಂಸ್ಥೆ

ಏರ್‌ ಇಂಡಿಯಾ ಶೇ 12.7

ಕನಿಷ್ಠ ಪ್ರಮಾಣದ ಮಹಿಳಾ ಪೈಲಟ್‌ಗಳನ್ನು ಹೊಂದಿರುವ ನಾಗರಿಕ ವಿಮಾನಯಾನ ಸಂಸ್ಥೆ

ಸಿಂಗಪುರ ಏರ್‌ಲೈನ್ಸ್‌ ಶೇ 0.04

----

ಆಧಾರ: ಇಂಟರ್‌ನ್ಯಾಷನಲ್‌ ಸೊಸೈಟಿ ಆಫ್‌ ವುಮನ್‌ ಏರ್‌ಲೈನ್‌ ಪೈಲಟ್ಸ್‌, ಪಿಟಿಐ

(ವರದಿ: ಉದಯ ಯು., ಅಮೃತ ಕಿರಣ್ ಬಿ.ಎಂ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.