ADVERTISEMENT

ಆಳ–ಅಗಲ | ಭೂಸುಧಾರಣೆ ಕಾಯ್ದೆ: ಉಳಿದದ್ದು ಒಂದೇ ‘ಶ್ರೀರಕ್ಷೆ’

ವಸಂತ ಕಜೆ
Published 18 ಜೂನ್ 2020, 19:30 IST
Last Updated 18 ಜೂನ್ 2020, 19:30 IST
.
.   
""

ಯಾವುದೇ ಕಾನೂನು, ವೈಜ್ಞಾನಿಕ ಸಂಶೋಧನೆ, ಔಷಧಿ, ಯಂತ್ರೋಪಕರಣ - ಇಂತಹ ಶಕ್ತಿಶಾಲಿ ಮಾಧ್ಯಮಗಳು ಸದುಪಯೋಗಕ್ಕೂ ದುರುಪಯೋಗಕ್ಕೂ ಸಮಾನ ಅವಕಾಶಗಳನ್ನು ಸೃಷ್ಟಿಸುತ್ತವಷ್ಟೆ; ಅವುಗಳ ಮೂಲ ಉದ್ದೇಶ ಜನಹಿತವೇ ಆಗಿದ್ದರೂ. ನನ್ನ ಅದೆಷ್ಟೋ ಐಟಿ ವಲಯದ ಸ್ನೇಹಿತರು ಕೃಷಿ ಆಸಕ್ತರಾಗಿದ್ದು ಅವರಿಗೆ ಭೂಮಿ ಖರೀದಿಸಲು ತೊಡಕುಂಟಾಗುತ್ತಿದ್ದುದನ್ನು ನಾನು ಬಲ್ಲೆ. ಇದನ್ನು ಮೀರಿ ಕಾನೂನಿನ ಬೈಪಾಸ್ ಪಡೆದು ಆತ್ಮೀಯರ ಹೆಸರಿನಲ್ಲಿ ಭೂಮಿ ಖರೀದಿಸಿರುವ ಕೆಲವು ಕೃಷಿಕ ಮಿತ್ರರು ತಮ್ಮ ಹವ್ಯಾಸವನ್ನು ಪೋಷಿಸಿಕೊಂಡಿರುವುದೂ ನಿಜ. ಹೆಚ್ಚಿನ ಖರೀದಿದಾರರು ಭೂಮಿಯ ರಿಯಲ್‌ ಎಸ್ಟೇಟ್‌ ಮೌಲ್ಯದೆಡೆಗೆ ಕಣ್ಣಿಟ್ಟು ಬೇಸಾಯದ ಗೋಜಿಗೆ ಹೋಗದಿರುವುದೂ ಅಷ್ಟೇ ನಿಜ.

ಅಂದರೆ ಸಕಾರಣವಾಗಿಯೇ ಈ ಕಾನೂನನ್ನು ಸಡಿಲಿಸಲಾಗಿದೆಯಾದರೂ ನನಗೆ ಈ ಬದಲಾವಣೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿವೆ.

ಈ ಕಾನೂನಿನ ಫಲಾನುಭವಿಗಳು ಶ್ರೀಮಂತರು, ಎಕರೆಗೆ ₹ 20–30 ಲಕ್ಷ ಬೆಲೆಗೆ ‘ಕೃಷಿ’ ಭೂಮಿಯನ್ನು ಖರೀದಿಸುವ ಆರ್ಥಿಕ ಅನುಕೂಲತೆ ಇರುವವರು. ಅವರಿಗೆ ಅದೇ ಕೃಷಿಭೂಮಿಯಲ್ಲಿ ತಾವು ನಡೆಸುವ ಕೃಷಿ ಚಟುವಟಿಕೆ ತಂದುಕೊಡುವ ಎಕರೆಗೆ ಬರಿಯ ₹ 20–30 ಸಾವಿರ ವಾರ್ಷಿಕ ಆದಾಯ ನಗಣ್ಯ. ಅದು ಅವರ ತಿಂಗಳ ಮೇಲುಖರ್ಚಿನಷ್ಟು ಆಗಬಹುದಷ್ಟೆ. ಆದ್ದರಿಂದ ಅವರಿಗೆ ಕೃಷಿಭೂಮಿಯ ಅಗತ್ಯವೇನು ಎನ್ನುವುದು ಪ್ರಶ್ನಾರ್ಹ. ಹಾಬಿ, ಆಸಕ್ತಿ ಇತ್ಯಾದಿ ಕಾರಣಗಳಿಗೆ ಕೃಷಿ ನಡೆಸಬಯಸುವ ಜನರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ, ನಿಜ. ಆದರೆ, ಅಂಥವರು ನೆಲವನ್ನು ನಂಬಿ, ಕೃಷಿಯ ವಾರ್ಷಿಕ ಚಕ್ರಕ್ಕೆ ಸತತ ಒಡ್ಡಿಕೊಂಡು ಮತ್ತೆ ಮತ್ತೆ ನೆಟ್ಟು, ಬೆಳೆಸಿ, ಕೊಯ್ದು, ಮಾರುವ ಪ್ರಕ್ರಿಯೆಯಲ್ಲಿ ಭಾಗವಹಿಸಲಾರರು. ನನ್ನ ಮಿತ್ರರನೇಕರು ‘ನನಗೆ ಸುಮ್ಮನೆ ಸ್ವಲ್ಪ ಹಣ್ಣಿನ ಗಿಡಗಳನ್ನು ನೆಡಬೇಕಾಗಿದೆ, ಕಾಡುಗಿಡ ಬೆಳೆಸಬೇಕಾಗಿದೆ’ ಎನ್ನುತ್ತಿದ್ದಾರೆಯೇ ವಿನಃ ಅದರಿಂದ ನಮ್ಮ ಜೀವನ ನಡೆಸಬೇಕಾಗಿದೆ ಎಂದು ಹೇಳುತ್ತಿಲ್ಲ.

ADVERTISEMENT

ಕೃಷಿ ನಡೆಯಲು ಅದನ್ನೇ ನಂಬಿದ, ಅದೇ ತಮ್ಮ ಆದಾಯದ ಮೂಲ, ಅಸ್ತಿತ್ವದ ದಾರಿ ಎಂದು ಪರಿಗಣಿಸುವ ಬದ್ಧತೆಯುಳ್ಳ ಮಂದಿಯ ಅಗತ್ಯವಿದೆ. ಆದಾಯ ಹೆಚ್ಚಿದಂತೆ ಬೇಕಿದ್ದಾಗ ಮಾಡುವ, ಬೇಡವೆನಿಸಿದಾಗ ಬಿಡುವ ಸ್ವಾತಂತ್ರ್ಯ ಹೆಚ್ಚುತ್ತದೆ. ಅಂದರೆ ಬದ್ಧತೆಯು ಕಡಿಮೆಯಾಗುತ್ತದೆ. ಆದ್ದರಿಂದ ಈ ಹೊಸ ಕೃಷಿಕರು ತಮ್ಮ ಸೃಜನಶೀಲತೆಗೆ ಒಂದು ದಾರಿಯನ್ನು ಕಂಡುಕೊಂಡಷ್ಟು ನಿಶ್ಚಿತವಾಗಿ ಹಸಿದ ಹೊಟ್ಟೆಯನ್ನು ತುಂಬಿಸಬಲ್ಲರೆಂದು ನನಗೆ ಅನಿಸುತ್ತಿಲ್ಲ. ಅವರು ಒಂದುವೇಳೆ ಕೃಷಿಯನ್ನು ಪೂರ್ಣಾವಧಿ ತೊಡಗುವಿಕೆಯಾಗಿ ಪರಿಗಣಿಸುವುದಿದ್ದರೆ ನನ್ನದು ತಕರಾರಿಲ್ಲ.

ನನ್ನ ಇನ್ನೊಂದು ಆತಂಕವಿರುವುದು ಭೂಮಿಯು ದೊಡ್ಡ ಹಿಡುವಳಿಗಳಾಗಿ ಒಗ್ಗೂಡುವ ಬಗ್ಗೆ. ಕಾರ್ಪೊರೇಟ್ ಫಾರ್ಮಿಂಗ್ ಎನ್ನುವ ಭೂತವೊಂದು ಆಗಾಗ್ಗೆ ಹೆಡೆಯೆತ್ತಲು ಹವಣಿಸುತ್ತಲೇ ಇದೆ. ಭೂಮಿಯ ಮಿತಿಯನ್ನು ಹೆಚ್ಚಿಸಿರುವುದರಿಂದ ಇದಕ್ಕೆ ಅವಕಾಶವಾದಂತೆ ನನಗನಿಸುತ್ತಿದೆ. ಸಣ್ಣ ಹಿಡುವಳಿಗಳಲ್ಲಿ ಕೃಷಿಕನ ಕುಟುಂಬವೇ ಶ್ರಮವಹಿಸಿ ದುಡಿದು ತಮಗೆ ಬೇಕಾದ ಆಹಾರ ಬೆಳೆದು ಉಳಿದುದನ್ನು ಮಾರುವುದು ನಮಗೆ ಅನುಸರಣೀಯವಾದ ಆದರ್ಶ. ಇದಕ್ಕೆ ಪ್ರತಿಯಾಗಿ ನೂರು ಎಕರೆಯಷ್ಟು ಭೂಮಿಯನ್ನು ಯಂತ್ರ-ಕೀಟನಾಶಕಗಳಿಲ್ಲದೆ ನಿರ್ವಹಿಸುವುದು ಕಷ್ಟಕರ. ಅಂದರೆ ಭೂಮಿತಿಯ ಹೆಚ್ಚಳವು ರಫ್ತು ಆಧಾರಿತ, ಅಸಾವಯವ-ಯಾಂತ್ರೀಕೃತ ಕೃಷಿಯೆಡೆಗೆ ದಿಕ್ಕುಮಾಡಿರುವಂತೆ ಕಾಣುತ್ತದೆ. ಇದು ನಿಜವೆಂದಾದರೆ ಅದೊಂದು ದುರಂತವೇ ಸರಿ.

ಈ ಕಾನೂನಿನ ಬದಲಾವಣೆಯ ಹೊರತಾಗಿಯೂ ಕೃಷಿಕರಿಗೆ ತಮ್ಮ ಕೃಷಿಭೂಮಿಯ ಬಗ್ಗೆ, ಕೃಷಿ ಸಂಸ್ಕೃತಿಯ ಬಗ್ಗೆ ಸಂವೇದನೆ ಕಡಿಮೆಯಾಗುತ್ತಿದೆ. ತಮ್ಮ ಆದಾಯಕ್ಕೂ ನಗರದ ಆದಾಯ-ಜೀವನ ಶೈಲಿಗೂ ಅಂತರ ಹೆಚ್ಚುತ್ತಿರುವುದರಿಂದ ಕೀಳರಿಮೆ ಉಂಟಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಹಳ್ಳಿಯೂ ನಗರದಂತೆ ಆಗಬೇಕು, ಕೃಷಿಗೆ ನಗರ ಉದ್ಯೋಗದ ಥಳುಕು ಬರಬೇಕು ಎನ್ನುವ ತುಡಿತವೇ ಕೃಷಿಕರಲ್ಲೂ ಬಹಳಷ್ಟು ಕಾಣುತ್ತದೆ. ಈ ಮನೋಸ್ಥಿತಿಯು ಈಗಾಗಲೇ ಕೃಷಿಗೆ ಹಾನಿ ಮಾಡಿದೆ. ಕಾನೂನು ಸಡಿಲವಾದ ಬಳಿಕ ಭೂಮಿ ಮಾರುವುದಕ್ಕೂ ಇದೇ ಕಾರಣವಾಗಬಹುದಷ್ಟೆ. ಆದ್ದರಿಂದ ನಾಳೆಯದಿನ ಕೃಷಿಭೂಮಿ ಅಪಾತ್ರರ ಸೊತ್ತಾದರೆ ಇದಕ್ಕೆ ಮೂಲಕಾರಣ ಕೃಷಿಯ ಬಗೆಗಿನ ಕೃಷಿಕರದೇ ಧೋರಣೆ. ಇದರಿಂದ ಹೊರಬಂದರೆ ಯಾವುದೇ ಕೃಷಿಕನಾದರೂ ತನ್ನ ಭೂಮಿಯನ್ನು (ಕಾರಣವಿಲ್ಲದೆ) ಮಾರಲಾರ. ಕೃಷಿಕ ಮಾರದಿರುವ ನಿರ್ಧಾರ ಕೈಗೊಂಡರೆ ಖರೀದಿದಾರ ಈ ಕಾನೂನಿನ ದುರ್ಲಾಭ ಪಡೆಯಲಾರ. ಇದೊಂದೇ ಇನ್ನುಳಿದಿರುವ ಶ್ರೀರಕ್ಷೆ. ಇದು ಕೃಷಿ ಸಮುದಾಯವನ್ನು ರಕ್ಷಿಸಲಿ.

ವಸಂತ ಕಜೆ

ಲೇಖಕ: ಯುವ ಕೃಷಿಕ, ‘ITಯಿಂದ ಮೇಟಿಗೆ’ ಕೃತಿಯ ಕರ್ತೃ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.