ಆದಾಯ ತೆರಿಗೆ
ನವದೆಹಲಿ: 1961ರ ಹಳೆಯ ಆದಾಯ ತೆರಿಗೆ ಕಾಯ್ದೆ ಬದಲಿಗೆ ಹೊಸ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಹಳೆಯ ಕಾಯ್ದೆಯಲ್ಲಿನ ಅಸ್ಪಷ್ಟತೆ ತೆಗೆದುಹಾಕಿ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ನಿಯಮಗಳ ಜಾರಿ ಈ ಕಾಯ್ದೆಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.
ಈ ಹೊಸ ಮಸೂದೆಯನ್ನು ಬಜೆಟ್ ಅಧಿವೇಶನದಲ್ಲೇ ಸಂಸತ್ತಿನಲ್ಲಿ ಮಂಡಿಸಲಿದ್ದು, ಬಳಿಕ, ಮತ್ತಷ್ಟು ಪರಿಶೀಲನೆಗೆ ಹಣಕಾಸಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಗೆ ಸಲ್ಲಿಸಲಾಗುತ್ತದೆ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೊಸ ಮಸೂದೆಯಲ್ಲಿ ದೀರ್ಘ ವಾಕ್ಯಗಳು, ಅಸ್ಪಷ್ಟ ಕಲಂಗಳು ಇರುವುದಿಲ್ಲ ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ತುಹಿನ್ ಕಾಂತಾ ಹೇಳಿದ್ದಾರೆ. ಹಾಗಿದ್ದರೆ, ಸರ್ಕಾರ ಮಾಡಲು ಹೊರಟಿರುವುದೇನು? ಮತ್ತು ಇದರಿಂದ ತೆರಿಗೆ ಪಾವತಿದಾರರಿಗೆ ಯಾವ ಅನುಕೂಲ ಆಗಲಿದೆ ಎಂಬುದರ ಕುರಿತು ಪಿಟಿಐ ಹಂಚಿಕೊಂಡಿರುವ ವಿವರಣೆ ಇಲ್ಲಿದೆ.
1. ಐ-ಟಿ ಕಾಯ್ದೆಯ ಪರಾಮರ್ಶೆ ಏಕೆ ಬೇಕು?
ಆದಾಯ ತೆರಿಗೆ ಕಾನೂನನ್ನು ಸುಮಾರು 60 ವರ್ಷಗಳ ಹಿಂದೆ 1961ರಲ್ಲಿ ಜಾರಿಗೆ ತರಲಾಗಿದ್ದು, ಅಂದಿನಿಂದ ಜನರು ಹಣ ಗಳಿಸುವ ರೀತಿಯಲ್ಲಿ ಮತ್ತು ಕಂಪನಿಗಳು ವ್ಯಾಪಾರ ಮಾಡುವ ರೀತಿ ಸೇರಿದಂತೆ ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಭಾರತ ಗಣರಾಜ್ಯ ವ್ಯವಸ್ಥೆಯ ಆರಂಭಿಕ ದಿನಗಳಲ್ಲಿ, ವಿಶಿಷ್ಟವಾದ ಸವಾಲುಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ 1961ರ ಕಾಯ್ದೆಯನ್ನು ರೂಪಿಸಲಾಗಿದೆ. ಕಾಲಾನಂತರದಲ್ಲಿ ದೇಶವು ಪ್ರಗತಿ ಹೊಂದುತ್ತಿದ್ದಂತೆ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಆದಾಯ ತೆರಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಪ್ರಸ್ತುತ, ತಂತ್ರಜ್ಞಾನವು ಜನರು ತೆರಿಗೆ ಪಾವತಿಸುವ ಮತ್ತು ಆದಾಯದ ರಿಟರ್ನ್ ಸಲ್ಲಿಸುವ ವಿಧಾನವನ್ನು ಬದಲಾಯಿಸಿದೆ. ಬ್ಯಾಂಕ್‌ಗಳು, ಉದ್ಯೋಗದಾತರು, ಫಾರೆಕ್ಸ್ ಡೀಲರ್‌ಗಳು ಮತ್ತು ಆಸ್ತಿ ವಹಿವಾಟಿನ ಸಮಯದಲ್ಲಿ ಸಲ್ಲಿಸಿದ ಟಿಡಿಎಸ್ ಸ್ಟೇಟ್‌ಮೆಂಟ್‌ನಂತಹ ವಿವಿಧ ಮೂಲಗಳಿಂದ ತೆರಿಗೆ ಇಲಾಖೆಗೆ ಲಭ್ಯವಿರುವ ಡೇಟಾವನ್ನು ಆಧರಿಸಿ ಐಟಿಆರ್ ಫಾರ್ಮ್‌ಗಳನ್ನು ಮೊದಲೇ ಭರ್ತಿ ಮಾಡುವ ವ್ಯವಸ್ಥೆಯೂ ಇದೆ.
ತಾಂತ್ರಿಕ ಪ್ರಗತಿ ಮತ್ತು ದೇಶದ ಸಾಮಾಜಿಕ-ಆರ್ಥಿಕ ರಚನೆಯಲ್ಲಿನ ಬದಲಾವಣೆಗಳ ದೃಷ್ಟಿಯಿಂದ, ಕಾನೂನಿನಲ್ಲಿ ನೂರಾರು ತಿದ್ದುಪಡಿಗಳ ಮೂಲಕ ಬೃಹತ್ ಆಗಿರುವ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಅವಶ್ಯಕತೆ ಇದೆ. ಕಾನೂನು ಮತ್ತು ವಿವಿಧ ವಿಭಾಗಗಳು, ಉಪ-ವಿಭಾಗಗಳು ಹಾಗೂ ನಿಬಂಧನೆಗಳ ಬಹು ಉಲ್ಲೇಖಗಳನ್ನು ಅರ್ಥಮಾಡಿಕೊಳ್ಳುವುದು ಸಾಮಾನ್ಯ ಜನರಿಗೆ ಅಸಾಧ್ಯವಾಗಿದೆ ಎಂದು ಸರ್ಕಾರ ಹೇಳಿದೆ.
2 ಹಣಕಾಸು ಸಚಿವೆ ಮಾಡಿದ್ದ ಘೋಷಣೆ ಏನು?
6 ತಿಂಗಳಲ್ಲಿ 1961ರ ಆದಾಯ ತೆರಿಗೆ ಕಾಯ್ದೆಯ ಸಮಗ್ರ ಪರಾಮರ್ಶೆ ನಡೆಸುವುದಾಗಿ 2024ರ ಜುಲೈ ತಿಂಗಳ ಬಜೆಟ್ ಬಾಷಣದಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೊಷಿಸಿದ್ದರು. ಕಾಯ್ದೆಯನ್ನು ಸಂಕ್ಷಿಪ್ತವಾಗಿ, ಸ್ಪಷ್ಟವಾಗಿ, ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿಸುವುದು ಪರಾಮರ್ಶೆಯ ಉದ್ದೇಶವಾಗಿದೆ ಎಂದು ಸೀತಾರಾಮನ್ ಹೇಳಿದ್ದರು. ಇದು ವಿವಾದಗಳು ಮತ್ತು ವ್ಯಾಜ್ಯಗಳನ್ನು ಕಡಿಮೆ ಮಾಡುತ್ತದೆ. ಆ ಮೂಲಕ ತೆರಿಗೆದಾರರಿಗೆ ತೆರಿಗೆ ನಿಶ್ಚಿತತೆಯನ್ನು ಒದಗಿಸುತ್ತದೆ ಎಂದು ಹೇಳಿದ್ದರು
3. ಹೊಸ ಆದಾಯ ತೆರಿಗೆ ಕಾಯ್ದೆ ಹೇಗಿರುತ್ತದೆ?
ಹೊಸ ಕಾನೂನು ಹೆಚ್ಚು ಸರಳ ಮತ್ತು ಓದುಗ ಸ್ನೇಹಿಯಾಗಿರಬೇಕೆಂದು ನಿರೀಕ್ಷಿಸಲಾಗಿದೆ. ಇದನ್ನು ಸಾಮಾನ್ಯ ವ್ಯಕ್ತಿಯೂ ಅರ್ಥಮಾಡಿಕೊಳ್ಳಬೇಕು. ಸದ್ಯದ ಕಾಯ್ದೆಯಲ್ಲಿರುವ ಸಂಪುಟಗಳನ್ನು ಅರ್ಧಕ್ಕೆ ಇಳಿಸುವುದು ಮತ್ತು ಭಾಷೆಯನ್ನು ಸರಳಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ ತೆರಿಗೆದಾರರು ತಮ್ಮ ನಿಖರವಾದ ತೆರಿಗೆ ಹೊಣೆಗಾರಿಕೆಯನ್ನು ತಿಳಿದುಕೊಳ್ಳಬಹುದು. ಇದು ವ್ಯಾಜ್ಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ವಿವಾದಿತ ತೆರಿಗೆ ಬೇಡಿಕೆಗಳನ್ನು ಕಡಿತಗೊಳಿಸುತ್ತದೆ ಎಂದು ಸರ್ಕಾರ ತಿಳಿಸಿದೆ.
4. ಹೊಸ ಕಾನೂನು ಹೇಗೆ ಸರಳೀಕರಣಗೊಳ್ಳುತ್ತದೆ?
ಆದಾಯ ತೆರಿಗೆ ಕಾಯ್ದೆ 1961, ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಭದ್ರತಾ ವಹಿವಾಟು ತೆರಿಗೆ, ಉಡುಗೊರೆ ಮತ್ತು ಸಂಪತ್ತು ತೆರಿಗೆ ಸೇರಿದಂತೆ ನೇರ ತೆರಿಗೆಗಳನ್ನು ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿದೆ, ಪ್ರಸ್ತುತ ಕಾಯ್ದೆಯು ಸುಮಾರು 298 ವಿಭಾಗಗಳು ಮತ್ತು 23 ಅಧ್ಯಾಯಗಳನ್ನು ಹೊಂದಿದೆ. ಕಾಲಾನಂತರದಲ್ಲಿ, ಸಂಪತ್ತು ತೆರಿಗೆ, ಉಡುಗೊರೆ ತೆರಿಗೆ, ಫ್ರಿಂಜ್ ಬೆನಿಫಿಟ್ ತೆರಿಗೆ ಮತ್ತು ಬ್ಯಾಂಕಿಂಗ್ ನಗದು ವಹಿವಾಟು ತೆರಿಗೆ ಸೇರಿದಂತೆ ವಿವಿಧ ಸುಂಕಗಳನ್ನು ಸರ್ಕಾರ ರದ್ದುಗೊಳಿಸಿದೆ.
ಅಲ್ಲದೆ, 2022ರಿಂದ ಬಂದ ಹೊಸ ಆದಾಯ ತೆರಿಗೆ ನಿಯಮದಿಂದಾಗಿ ಕೆಲವು ತಿದ್ದುಪಡಿ ಮಾಡಲಾಯಿತು.ಅದೇ ರೀತಿ, ಕಳೆದ 6 ದಶಕಗಳಲ್ಲಿ ಹಲವು ವಿಭಾಗಗಳನ್ನು ತಿದ್ದುಪಡಿ ಮಾಡಲಾಗಿದೆ. ಕೆಲವನ್ನು ಸೇರಿಸಲಾಗಿದೆ, ಮತ್ತೆ ಕೆಲವನ್ನು ತೆಗೆದುಹಾಕಲಾಗಿದ್ದರೂ ಹಳೆ ಕಾಯ್ದೆಯು ಸುದೀರ್ಘವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಕಾಯ್ದೆಯು ಈ ಎಲ್ಲ ತಿದ್ದುಪಡಿಗಳು ಮತ್ತು ವಿಭಾಗಗಳಿಂದ ಮುಕ್ತವಾಗಿರುತ್ತದೆ. ಅಪ್ರಸ್ತುತ ನಿಯಮಗಳು ಇರುವುದಿಲ್ಲ. ತೆರಿಗೆ ತಜ್ಞರ ಸಹಾಯವಿಲ್ಲದೆ ಜನರು ಅದನ್ನು ಗ್ರಹಿಸುವಂತೆ ಭಾಷೆ ಇರುತ್ತದೆ ಎಂದು ಸರ್ಕಾರ ಹೇಳಿದೆ.
5. ಹೊಸ ಕಾಯ್ದೆಯಿಂದ ಹೆಚ್ಚು ತೆರಿಗೆ ಬಿದ್ದು ಸಾಮಾನ್ಯ ಜನರಿಗೆ ಹೊರೆಯಾಗಲಿದೆಯೇ?
ಈ ಹೊಸ ಕಾಯ್ದೆ ರೂಪಿಸುತ್ತಿರುವ ಮೂಲ ಉದ್ದೇಶವೇ ಭಾಷೆ ಸರಳೀಕರಣ ಮತ್ತು ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ಅನುಸರಣೆಗಳನ್ನು ತಗ್ಗಿಸುವುದಾಗಿದೆ. ಹೊಸ ಆದಾಯ ತೆರಿಗೆ ಕಾನೂನಿನಲ್ಲಿ ಆದಾಯ ತೆರಿಗೆ ದರಗಳನ್ನು ತಿರುಚುವುದು ಅಸಂಭವವಾಗಿದೆ. ಇದು ಪ್ರತಿ ವರ್ಷ ಫೆಬ್ರುವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಾಗುವ ಕೇಂದ್ರ ಬಜೆಟ್‌ನ ಭಾಗವಾಗಿರುತ್ತದೆ. ತೆರಿಗೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
6. ಹೊಸ ಆದಾಯ ತೆರಿಗೆ ಕಾನೂನನ್ನು ತರಲು ಸರ್ಕಾರವು ಈ ಹಿಂದೆ ಪ್ರಯತ್ನ ಮಾಡಿತ್ತೇ?
2010ರಲ್ಲಿ 'ನೇರ ತೆರಿಗೆಗಳ ಕೋಡ್ ಬಿಲ್, 2010' ಅನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಅದನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಬಳಿಕ, 2014ರಲ್ಲಿ ಸರ್ಕಾರ ಬದಲಾದ ಕಾರಣ ಮಸೂದೆ ಅನುಷ್ಠಾನಕ್ಕೆ ಬರಲಿಲ್ಲ. 2017ರ ನವೆಂಬರ್ ತಿಂಗಳಲ್ಲಿ ಆದಾಯ ತೆರಿಗೆ ಕಾಯ್ದೆಯನ್ನು ಪುನರ್‌ರಚಿಸಲು ಸರ್ಕಾರವು ಆರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು 2019ರ ಆಗಸ್ಟ್ ತಿಂಗಳಲ್ಲಿ ಹಣಕಾಸು ಸಚಿವರಿಗೆ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.