ADVERTISEMENT

ಒಳನೋಟ: ಅಡಿಕೆ ಮಂಡಿಯಲ್ಲಿ ದಲ್ಲಾಳಿ ಹಾವಳಿ

ದರ ಏರಿಳಿತ: ಗುಟ್ಕಾ, ಪಾನ್ ಮಸಾಲ, ಸಿಗರೇಟ್ ಕಂಪನಿಗಳ ಲಾಬಿಯೆಂಬ ದೂರು

ಸದಾಶಿವ ಎಂ.ಎಸ್‌.
Published 18 ಡಿಸೆಂಬರ್ 2021, 19:21 IST
Last Updated 18 ಡಿಸೆಂಬರ್ 2021, 19:21 IST
ಶಿರಸಿಯ ಟಿಎಸ್ಎಸ್ ಸಂಸ್ಥೆಯ ವ್ಯಾಪಾರಿ ಅಂಗಳದಲ್ಲಿ ರಾಶಿ ಹಾಕಲಾಗಿರುವ ಕೆಂಪಡಿಕೆ ಮತ್ತು ಚಾಲಿ.
ಶಿರಸಿಯ ಟಿಎಸ್ಎಸ್ ಸಂಸ್ಥೆಯ ವ್ಯಾಪಾರಿ ಅಂಗಳದಲ್ಲಿ ರಾಶಿ ಹಾಕಲಾಗಿರುವ ಕೆಂಪಡಿಕೆ ಮತ್ತು ಚಾಲಿ.   

ಕಾರವಾರ: ‘ಅಡಿಕೆ ಮಾರುಕಟ್ಟೆ ಎನ್ನುವುದು ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವ ರೀತಿಯಾಗಿದೆ. ಅಡಿಕೆಯಿಂದ ತಯಾರಾಗುವ ಕೊನೆಯ ಉತ್ಪನ್ನವೇನು ಎಂಬುದಕ್ಕೆ ನೈತಿಕವಾಗಿ ಉತ್ತರಿಸಲು ಸಾಧ್ಯವಿಲ್ಲ...’

ಹೀಗೆಂದು ಮಾತು ಆರಂಭಿಸಿದವರು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ ಕಮ್ಮರಡಿ.

ಅಡಿಕೆ ದರ ಏರಿಕೆಯಾದಾಗಲೆಲ್ಲ ಗುಟ್ಕಾ ನಿಷೇಧ, ಕ್ಯಾನ್ಸರ್‌ಕಾರಕ ಮುಂತಾದ ‘ಗುಮ್ಮ’ಗಳು ಸದ್ದು ಮಾಡುತ್ತವೆ. ಇದರ ಹಿಂದೆ ಗುಟ್ಕಾ, ಪಾನ್‌ಮಸಾಲ ತಯಾರಕರು, ಸಿಗರೇಟ್ ಕಂಪನಿಗಳ ಕೈವಾಡ ಇದೆ ಎಂಬ ಆರೋಪ ಸಾಮಾನ್ಯ. ಅಡಿಕೆ ಮಾರುಕಟ್ಟೆಯಲ್ಲಿ ದರ ಏರಿಳಿತಕ್ಕೆ ಇದು ಕಾರಣವೇ ಎಂದು ಕೇಳಿದಾಗ ಅವರು ಹೀಗೆ ವಿವರಿಸಿದರು.

ADVERTISEMENT

‘ಅಡಿಕೆ ಮಾರುಕಟ್ಟೆಯೇ ತುಂಬ ವಿರೂಪವಾಗಿದೆ. ಅದರಿಂದ ತಯಾರಿಸಲಾಗುವ ಗುಟ್ಕಾವನ್ನು ಕೆಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ವಿವಿಧೆಡೆ ಹತ್ತಾರು ಕಾನೂನು ತೊಡಕುಗಳನ್ನು ಎದುರಿಸುತ್ತಿದೆ. ನಿಷೇಧಿತ ಸರಕು ಅಂತಿಮ ಉತ್ಪನ್ನವಾಗಲು ಸಾಧ್ಯವಿಲ್ಲ. ಹಾಗಾಗಿ, ಅಡಿಕೆಯ ಅಂತಿಮ ಉತ್ಪನ್ನ ಯಾವುದು ಎಂದು ನೈತಿಕವಾಗಿ ಹೇಳಲಾಗದು. ಆದರೂ ಈ ಮಾರುಕಟ್ಟೆಯಲ್ಲಿ ಇರುವಷ್ಟು ಸ್ಪರ್ಧೆ ಮತ್ತ್ಯಾವ ಕೃಷಿ ಉತ್ಪನ್ನಗಳಿಗೂ ಇಲ್ಲ. ದರ ಏರಿಳಿತದಲ್ಲಿ ಮಧ್ಯವರ್ತಿಗಳ ಕೈವಾಡವಂತೂ ದೊಡ್ಡ ಪ್ರಮಾಣದಲ್ಲಿದೆ’ ಎಂದು ಹೇಳುತ್ತಾರೆ.

‘ದರ ಮತ್ತಷ್ಟು ಏರಬಹುದು’: ಶಿರಸಿಯ ತೋಟಗಾರ್ಸ್ ಸಹಕಾರ ಮಾರಾಟ ಸೊಸೈಟಿ (ಟಿ.ಎಸ್.ಎಸ್) ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ‘ವಿದೇಶಗಳಿಂದ ಅಡಿಕೆಯ ಅಕ್ರಮ ಆಮದು ನಿಲ್ಲಿಸಲು ಸರ್ಕಾರ ಕ್ರಮ ಕೈಗೊಂಡಿದ್ದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿ ದರ ಏರಿಕೆಯಾಗಿದೆ. ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ’ ಎಂದು ಪ್ರತಿಪಾದಿಸುತ್ತಾರೆ.

‘ಹಿಂದಿನ ಕೆಲವು ವರ್ಷಗಳವರೆಗೆ ದೇಶದಲ್ಲಿ ಅಡಿಕೆ ಉತ್ಪಾದನೆಯು ವರ್ಷಕ್ಕೆ ಶೇ 15ರ ದರದಲ್ಲಿ ಹೆಚ್ಚುತ್ತಿತ್ತು. ಆದರೆ, ಅದರ ಉತ್ಪನ್ನಗಳ ಬಳಕೆಯೂ ಶೇ 20ರಿಂದ ಶೇ 21ರ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಈ ಅಂತರವನ್ನು ಸರಿಪಡಿಸಲು ಹಾಗೂ ಸ್ಥಳೀಯ ಮಾರುಕಟ್ಟೆಯನ್ನು ಹಿಡಿತದಲ್ಲಿಡಲು, ಪಾನ್‌ಮಸಾಲ ಉತ್ಪಾದಕರು ಅಕ್ರಮ ದಾರಿಗಳನ್ನು ಕಂಡುಕೊಂಡಿದ್ದರು. ಇಂಡೋನೇಷ್ಯಾ, ಮಲೇಷ್ಯಾ ಹಾಗೂ ಥಾಯ್ಲೆಂಡ್‌ನಿಂದ ಕಳ್ಳಸಾಗಣೆ ಮಾಡಿಸುತ್ತಿದ್ದರು. ಅದಕ್ಕೆ ದಕ್ಷಿಣ ಏಷ್ಯಾ ಮುಕ್ತ ಮಾರುಕಟ್ಟೆ ಪ್ರದೇಶ (ಎಸ್.ಎ.ಎಫ್‌.ಟಿ.ಎ) ಒಪ್ಪಂದವನ್ನು ದುರ್ಬಳಕೆ ಮಾಡಿಕೊಂಡು ಶ್ರೀಲಂಕಾ, ಬಾಂಗ್ಲಾದೇಶ ಅಥವಾ ನೇಪಾಳದ ಮೂಲಕ ತರಿಸುತ್ತಿದ್ದರು’ ಎಂದು ಹೇಳುತ್ತಾರೆ.

‘ದೇಸೀ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುತ್ತಿದ್ದಂತೆ ಇಂಥ ಪ್ರಕರಣಗಳು ಹೆಚ್ಚುತ್ತಿದ್ದವು. ಇದರ ವಿರುದ್ಧ ವಿವಿಧ ಸಂಘ, ಸಂಸ್ಥೆಗಳು ಸುಮಾರು 10 ವರ್ಷಗಳಿಂದ ನಿರಂತರ ಹೋರಾಡಿದ್ದವು. ಅದು ಈಗ ಫಲ ನೀಡುತ್ತಿದೆ. ಮುಂಬರುವ ವರ್ಷಗಳಲ್ಲಿ ಅಡಿಕೆ ದರವು ಪ್ರತಿ ವರ್ಷ ಕ್ವಿಂಟಲ್‌ಗೆ ₹ 4 ಸಾವಿರದಿಂದ ₹ 5 ಸಾವಿರ ಏರಿಕೆಯಾಗುತ್ತಲೇ ಇರಬಹುದು. ಕೆಲವೇ ವರ್ಷಗಳಲ್ಲಿ ₹1 ಲಕ್ಷಕ್ಕೇರಿದರೂ ಆಶ್ಚರ್ಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಉಪ ಉತ್ಪನ್ನಕ್ಕೆ ಆದ್ಯತೆ ಬೇಕು’
‘ಪೌಷ್ಟಿಕ ಆಹಾರಕ್ಕೆ, ಉಸಿರಿನ ಶುದ್ಧಿಗೆ, ಕೆಲವು ಕ್ಯಾನ್ಸರ್‌ಗಳನ್ನು ಗುಣಪಡಿಸಲು, ಅಲ್‌ಝೈಮರ್ ಕಾಯಿಲೆಗೆ ಔಷಧವಾಗಿ ಕೂಡ ಅಡಿಕೆ ನೆರವಾಗುತ್ತದೆ ಎಂದು ಅಧ್ಯಯನ ವರದಿಗಳಿವೆ. ಅದರ ಕೆಂಪು ಚೊಗರು ನೈಸರ್ಗಿಕವಾದ ಬಣ್ಣ ನೀಡುತ್ತದೆ. ಅದನ್ನು ಆಹಾರಕ್ಕೆ, ಬಟ್ಟೆಗೆ ಬಳಕೆ ಮಾಡಬಹುದು. ಮಾರುಕಟ್ಟೆಯಲ್ಲಿ ದರ ಸ್ಥಿರವಾಗಿರಲು ಇಂಥ ಉಪ ಉತ್ಪನ್ನಗಳನ್ನು ಮಾಡಬೇಕು’ ಎನ್ನುತ್ತಾರೆ ಡಾ.ಟಿ.ಎನ್.ಪ್ರಕಾಶ ಕಮ್ಮರಡಿ.

‘ನಮ್ಮ ಮಾರುಕಟ್ಟೆಗೆ ವಿದೇಶಗಳಿಂದ ಅಡಿಕೆ ಬಂದರೂ ಸ್ಥಳೀಯ ಮಾರುಕಟ್ಟೆ ಮೇಲೆ ಅಷ್ಟಾಗಿ ಪರಿಣಾಮ ಆಗದು. ಪ್ರಪಂಚದ ಶೇ 60ರಷ್ಟು ನಮ್ಮ ದೇಶದಲ್ಲೇ ಉತ್ಪಾದನೆಯಾಗುತ್ತದೆ. 700 – 800 ಲಕ್ಷ ಕ್ವಿಂಟಲ್ ಅಡಿಕೆ ಉತ್ಪಾದನೆಯಾಗುವ ನಮ್ಮ ದೇಶಕ್ಕೆ ಹೊರ ದೇಶಗಳಿಂದ 2–3 ಲಕ್ಷ ಕ್ವಿಂಟಲ್ ಆವಕವಾದರೆ ದರದಲ್ಲಿ ಭಾರಿ ಏರಿಳಿತ ಆಗದು’ ಎಂದೂ ಅವರು ಪ್ರತಿಪಾದಿಸುತ್ತಾರೆ.

‘ನಿಜವೆನ್ನಲು ಪುರಾವೆಯಿಲ್ಲ’
‘ಅಡಿಕೆ ಮಾರುಕಟ್ಟೆಯಲ್ಲಿ ದರ ಭಾರಿ ಪ್ರಮಾಣದಲ್ಲಿ ಏರಿಳಿತ ಕಾಣುವುದರಲ್ಲಿ ಗುಟ್ಕಾ ಮತ್ತು ಸಿಗರೇಟ್ ಕಂಪನಿಗಳ ಕೈವಾಡವಿದೆ ಎನ್ನುವುದು ಜನಾಭಿಪ್ರಾಯ. ಉತ್ತಮ ದರ ಬಂದಿದೆ ಎನ್ನುವ ಹಂತದಲ್ಲೇ ವಿವಿಧ ಅಪಪ್ರಚಾರಗಳು ಕೇಳಿಬರುತ್ತವೆ. ಆದರೆ, ಆದು ನಿಜ ಎಂದು ಖಚಿತವಾಗಿ ಹೇಳಲು ಯಾವುದೇ ಪುರಾವೆಗಳಿಲ್ಲ’ ಎನ್ನುತ್ತಾರೆ ತೀರ್ಥಹಳ್ಳಿಯ ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಿಜಯದೇವ್‌.

‘ಈ ಬಾರಿ ಅಡಿಕೆಗೆ ಬೇಡಿಕೆ ಹೆಚ್ಚಿದ್ದೇ ದರ ಏರಿಕೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಭದ್ರಾವತಿ, ಚನ್ನಗಿರಿ ಭಾಗದ ಉತ್ಪನ್ನ ಈಗಾಗಲೇ ಮಾರಾಟವಾಗಿದೆ. ಮಾರುಕಟ್ಟೆಗೆ ಸದ್ಯ ತೀರ್ಥಹಳ್ಳಿ, ಹೊಸನಗರ, ಶೃಂಗೇರಿ, ಕೊಪ್ಪ ಭಾಗದಿಂದ ಆವಕವಿದೆ. ಉತ್ತಮ ದರವಿರುವ ಕಾರಣ ಬೆಳೆಗಾರರು ತಕ್ಷಣ ಮಾರಾಟ ಮಾಡುತ್ತಿದ್ದಾರೆ’ ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.