ADVERTISEMENT

ಒಳನೋಟ: ಪೌಷ್ಠಿಕ ಯೋಜನೆಯಡಿ ಬುಡಕಟ್ಟು ಜನರಿಗೆ ‘ಕಳಪೆ’ ಆಹಾರ ಪೂರೈಕೆ

ಬಾಲಚಂದ್ರ ಎಚ್.
Published 26 ಅಕ್ಟೋಬರ್ 2025, 6:15 IST
Last Updated 26 ಅಕ್ಟೋಬರ್ 2025, 6:15 IST
<div class="paragraphs"><p>ಚಾಮರಾಜನಗರ ಜಿಲ್ಲೆಯ ಕುಣಗಳ್ಳಿಯಲ್ಲಿ ಬುಡಕಟ್ಟು ಸಮುದಾಯದವರಿಗೆ ಪೌಷ್ಟಿಕ ಆಹಾರದ ಕಿಟ್‌ ವಿತರಿಸುತ್ತಿರುವುದು</p></div>

ಚಾಮರಾಜನಗರ ಜಿಲ್ಲೆಯ ಕುಣಗಳ್ಳಿಯಲ್ಲಿ ಬುಡಕಟ್ಟು ಸಮುದಾಯದವರಿಗೆ ಪೌಷ್ಟಿಕ ಆಹಾರದ ಕಿಟ್‌ ವಿತರಿಸುತ್ತಿರುವುದು

   

ಚಾಮರಾಜನಗರ: ಒಲೆ ಮೇಲೆ ಬೇಳೆ ಬೇಯಲು ಹಾಕಿದರೆ ಅರ್ಧ ಬೆಂದಿರುತ್ತವೆ, ಉಳಿದರ್ಧ ಬೇಯುವುದಿಲ್ಲ, ಅಡುಗೆ ಎಣ್ಣೆ ದುರ್ವಾಸನೆ ಬೀರುತ್ತದೆ, ಕಾಳುಗಳು ಮುಗ್ಗುಲು ಹಿಡಿದು ಹುಳು ಬಿದ್ದಿರುತ್ತವೆ, ಬಹುಪಾಲು ಮೊಟ್ಟೆಗಳು ಕೊಳೆತು ಹೋಗಿರುತ್ತವೆ, ಬೆಲ್ಲ ಜಿನುಗುತ್ತಿರುತ್ತದೆ..

ಹೀಗೆ ಬುಡಕಟ್ಟು ಸಮುದಾಯಗಳಿಗೆ ರಾಜ್ಯ ಸರ್ಕಾರ ಪೂರೈಕೆ ಮಾಡುತ್ತಿರುವ ಪೌಷ್ಟಿಕ ಆಹಾರದ ಕಳಪೆ ಗುಣಮಟ್ಟವನ್ನು ತೆರೆದಿಟ್ಟರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದ ಸೋಲಿಗ ಮಹಿಳೆ ಮಹದೇವಮ್ಮ.

ADVERTISEMENT

ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮವೇ ‘ಅಪೌಷ್ಟಿಕತೆ’ಯಿಂದ ಬಳಲುತ್ತಿದೆ. ಯೋಜನೆಯ ಮೂಲ ಆಶಯವೇ ‘ಮಣ್ಣು’ಪಾಲಾಗುತ್ತಿದೆ ಎಂಬ ದೂರುಗಳು ರಾಜ್ಯದಾದ್ಯಂತ ವ್ಯಾಪಕವಾಗಿವೆ. ಪೌಷ್ಟಿಕ ಆಹಾರ ಪೂರೈಕೆ ಯೋಜನೆಯಡಿ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ರಾಮನಗರ ಜಿಲ್ಲೆಗಳಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಗಳ ಕುಟುಂಬಗಳಿಗೆ ಪ್ರತಿ ತಿಂಗಳು ಅಕ್ಕಿ, ರಾಗಿ, ತೊಗರಿಬೇಳೆ, ಹುರುಳಿಕಾಳು, ಕಡಲೆಕಾಳು, ಅಲಸಂದೆ, ಹೆಸರುಕಾಳು, ಕಡಲೆಬೀಜ, ಬೆಲ್ಲ, ಸಕ್ಕರೆ, ತುಪ್ಪ, ಮೊಟ್ಟೆಗಳನ್ನೊಳಗೊಂಡ ಪೌಷ್ಟಿಕ ಆಹಾರದ ಕಿಟ್‌ ವಿತರಿಸಲಾಗುತ್ತಿದೆ.

ಹನೂರು ತಾಲ್ಲೂಕಿನ ಹಾಡಿಗಳಿಗೆ ಈಚೆಗೆ ಪೂರೈಕೆ ಮಾಡಲಾಗಿರುವ ಕಲಬೆರಕೆ ಬೇಳೆ

ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ನಾಯಕ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಮೇದ, ಯರವ, ಗೌಡಲು, ಸಿದ್ದಿ, ಕೊರಗ, ಇರುಳಿಗ, ಗೊಂಡ, ಕುಡಿಯ, ಮಲೆಕುಡಿಯ, ಹಸಲರು, ಹಕ್ಕಿಪಿಕ್ಕಿ, ಡೋಂಗ್ರಿ ಗೆರಾಸಿಯ, ಮರಾಠಿ ನಾಯಕ ಸಮುದಾಯದವರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.‌

ಪೌಷ್ಟಿಕ ಆಹಾರ ಪೂರೈಕೆಗೆ ರಾಜ್ಯ ಸರ್ಕಾರ ವಾರ್ಷಿಕ ₹ 120 ಕೋಟಿ ವ್ಯಯಿಸುತ್ತಿದ್ದರೂ ಆದಿವಾಸಿಗಳಿಗೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ. ಆಹಾರದ ಕಳಪೆ ಕಿಟ್‌ ನೀಡುತ್ತಿದ್ದಾರೆ ಎಂದು ದೂರುತ್ತಾರೆ ಚಾಮರಾಜನಗರದ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ.

ನಿಯಮಗಳ ಪ್ರಕಾರ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸಬೇಕು. ಪ್ಯಾಕಿಂಗ್ ಮೇಲೆ ತಯಾರಿಕಾ ದಿನಾಂಕ, ಬಾಳಿಕೆಯ ಅವಧಿ, ಗುಣಮಟ್ಟ ಪರೀಕ್ಷೆ ಸಹಿತ ಇತರ ಮಾಹಿತಿಗಳು ನಮೂದಿಸಿರಬೇಕು. ಆದರೆ, ಹಾಡಿಗಳಿಗೆ ಪೂರೈಕೆಯಾಗುತ್ತಿರುವ ಆಹಾರ ಪದಾರ್ಥಗಳ ಪ್ಯಾಕ್‌ ಮೇಲೆ ಯಾವುದೇ ಮಾಹಿತಿ ಕಾಣಸಿಗುವುದಿಲ್ಲ. ವಿತರಣೆಗೂ ಮುನ್ನ ಆಹಾರದ ಗುಣಮಟ್ಟ ಪರೀಕ್ಷೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಹಿರಿಯ ಅಧಿಕಾರಿಗಳ ಬಳಿಯೂ ಉತ್ತರ ಇಲ್ಲ.

ಹಲವು ಬಾರಿ ರಾಗಿಯಲ್ಲಿ ದೂಳು, ಕಲಬೆರಕೆ ಬೇಳೆ, ಹುಳು ಹಿಡಿದ ಕಾಳುಗಳು, ದುರ್ವಾಸನೆ ಬೀರುವ ಅಡುಗೆ ಎಣ್ಣೆ ಹಂಚಿಕೆ ಮಾಡಲಾಗುತ್ತಿದೆ. ಈ ವರ್ಷದ ಆಗಸ್ಟ್‌ನಲ್ಲಿ ವಿತರಿದ ಕಡಲೆಬೀಜದ ಗುಣಮಟ್ಟ ಹೇಗಿದೆ ನೋಡಿ ಎಂದು ಹುಳುಬಿದ್ದ ಕಾಳುಗಳನ್ನು ಮುಂದಿಟ್ಟರು ಮಾದೇಗೌಡ.

ಜಿನುಗುವ ಬೆಲ್ಲ ಬಾಯಿಗಿಟ್ಟರೆ ಹುಳಿಯ ಅನುಭವವಾಗುತ್ತದೆ, ಕಾಳುಗಳ ಗಾತ್ರ ತೀರಾ ಕಿರಿದಾಗಿದ್ದು ಸಾರು ರುಚಿಸುವುದಿಲ್ಲ, ಬೇಯುವುದಿಲ್ಲ. ಅವಧಿ ಮೀರಿದ ಮೊಟ್ಟೆಗಳಲ್ಲಿ ಅರ್ಧದಷ್ಟು ಬಳಕೆಗೆ ಯೋಗ್ಯವಾಗಿರುವುದಿಲ್ಲ ಎಂದು ಹಾಡಿಯ ಮಹದೇವಮ್ಮ ದೂರಿದರು.

ಮೂರು ತಿಂಗಳ ಹಿಂದೆ ಹೆಸರಿಲ್ಲದ ಕಂಪೆನಿಯ ಕಂದು ಬಣ್ಣಕ್ಕೆ ತಿರುಗಿದ್ದ ದುರ್ವಾಸನೆ ಬೀರುವ ಸೂರ್ಯಕಾಂತಿ ಅಡುಗೆ ಎಣ್ಣೆಯನ್ನು ಚಾಮರಾಜನಗರದಲ್ಲಿ ಪೂರೈಕೆ ಮಾಡಲಾಗಿತ್ತು. ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಬದಲಿ ಅಡುಗೆ ಎಣ್ಣೆ ವಿತರಿಸುವ ಭರವಸೆ ನೀಡಿದ್ದರು. ಇದುವರೆಗೆ ಬೆರಳೆಣಿಕೆ ಮಂದಿಗೆ ಹೊರತಾಗಿ ಬಹುಪಾಲು ಜನರಿಗೆ ಎಣ್ಣೆ ಸಿಕ್ಕಿಲ್ಲ. ಬಾಟೆಲ್‌ನ ಮುಚ್ಚಳ ತೆಗೆದ ಕಾರಣಕ್ಕೆ ವಾಪಸ್‌ ಪಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಮುಚ್ಚಳ ತೆಗೆಯದೆ ನಮಗಾದರೂ ಎಣ್ಣೆ ಕಳಪೆ ಎಂದು ಹೇಗೆ ಗೊತ್ತಾಗುತ್ತದೆ ಎಂದು ಪ್ರಶ್ನಿಸುತ್ತಾರೆ ಅವರು.

ಸಂಶಯಾಸ್ಪದ ವರದಿ: 
ಕಲಬೆರಕೆ ಅಡುಗೆ ಎಣ್ಣೆ ವಿತರಣೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳು ಮೇ 23ರಂದು ಅಡುಗೆ ಎಣ್ಣೆ ಮಾದರಿಯನ್ನು ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳಿಸಿದ್ದರು. ಪರೀಕ್ಷೆಗೊಳಪಡಿಸಿದ ಮುಖ್ಯ ಆಹಾರ ವಿಶ್ಲೇಷಕರು ನೀಡಿರುವ ವರದಿ ಬುಡಕಟ್ಟು ಸಮುದಾಯಗಳ ಜನರಲ್ಲಿ ಅಚ್ಚರಿ ಉಂಟುಮಾಡಿದೆ.

ಕಂದುಬಣ್ಣದ ದುರ್ವಾಸನೆ ಬೀರುವ ಅಡುಗೆ ಎಣ್ಣೆ ಬಳಕೆ ಯೋಗ್ಯವಾಗಿದ್ದು ಅಯೋಡಿನ್‌ ಹಾಗೂ ಆಸಿಡ್ ಪ್ರಮಾಣ ಸೇರಿದಂತೆ ಇತರ ಅಂಶಗಳು ನಿಗದಿತ ಪ್ರಮಾಣದಲ್ಲಿದ್ದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ನಿಯಂತ್ರಣ ಕಾಯ್ದೆಯ ಅನುಸಾರವಾಗಿವೆ ಎಂದು ವಿಭಾಗೀಯ ಆಹಾರ ಪ್ರಯೋಗಾಲಯದಿಂದ ವರದಿ ನೀಡಲಾಗಿದೆ. ಡಿ.31, 2024ರಲ್ಲಿ ಪರೀಕ್ಷೆಗೆ ಕಳುಹಿಸಲಾಗಿದ್ದ ತೊಗರಿಬೇಳೆ, ಅಲಸಂದೆ ಕಾಳು, ರಾಗಿಯ ಗುಣಮಟ್ಟವೂ ಉತ್ತಮವಾಗಿದೆ ಎಂಬ ವರದಿ ಬಂದಿದೆ.

ಚಾಮರಾಜನಗರ ಜಿಲ್ಲೆಯ ಯರಕನಗದ್ದೆ ಕಾಲೊನಿಯಲ್ಲಿ ಕುಳಿತಿರುವ ಆದಿವಾಸಿಗಳು

ಜನರ ಸವಾಲು: 
ಮುಗ್ಗುಲು ಹಿಡಿದು ಬೇಳೆ ಕಾಳುಗಳು, ದುರ್ವಾಸನೆ ಬೀರುವ ಅಡುಗೆ ಎಣ್ಣೆ ಬಳಕೆಗೆ ಯೋಗ್ಯ ಎಂದಾದರೆ ಅಧಿಕಾರಿಗಳೇ ನಮಗೆ ನೀಡಿರುವ ಆಹಾರ ಪದಾರ್ಥಗಳನ್ನು ತಿಂದು ಇವೆಲ್ಲಾ ಒಳ್ಳೆಯ ಗುಣಮಟ್ಟದಿಂದ ಇದೆ ಎಂದು ಸಾಬೀತು ಪಡಿಸಲಿ. ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳಪೆ ಆಹಾರದ ಮಾದರಿಗಳ ಬದಲಾಗಿ ಬೇರೆ ಬದಲಿ ಮಾದರಿಗಳನ್ನು ಕಳುಹಿಸಿರುವ ಅನುಮಾನವಿದೆ ಎಂದು ಸಂಶಯ ವ್ಯಕ್ತಪಡಿಸುತ್ತಾರೆ ಆದಿವಾಸಿ ಸಮುದಾಯದ ಮುಖಂಡ ಸಿ.ಮಾದೇಗೌಡ.

‘ನಾವು ವಾಪಸ್‌ ನೀಡಿದ ಎಣ್ಣೆ, ಕಾಳುಗಳನ್ನು ಸೀಲ್‌ ಮಾಡಿ ನಮ್ಮ ಎದುರಿಗೆ ಪ್ರಯೋಗಾಲಯಕ್ಕೆ ಪರಿಶೀಲನೆಗೆ ಕಳುಹಿಸಬೇಕಿತ್ತು. ಆದರೆ ಬೇರೆ ಬ್ಯಾಚ್‌ನ ಪಡಿತರವನ್ನು ಕಳುಹಿಸಿದ್ದಾರೆ. ಕಾಡಿನಂಚಿನಲ್ಲಿರುವ ನಮಗೆ ಸರ್ಕಾರವೇ ಮೋಸ ಮಾಡಿದರೆ ಇನ್ಯಾರಿಗೆ ದೂರಬೇಕು‘ ಎನ್ನುತ್ತಾರೆ ಅವರು. 

ಆದಿವಾಸಿಗಳಿಗೆ ಮಳೆಗಾಲದಲ್ಲಿ ಕೂಲಿ ಸಿಗುವುದಿಲ್ಲ, ಈ ಅವಧಿಯಲ್ಲಿ ಸರ್ಕಾರ ಪೂರೈಸುವ ಪೌಷ್ಟಿಕ ಆಹಾರವನ್ನೇ ಬಹುತೇಕರು ನೆಚ್ಚಿಕೊಂಡಿದ್ದಾರೆ. ಆದರೆ, ನಿಯಮಿತವಾಗಿ ಕಿಟ್ ವಿತರಣೆಯಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮೂರು ತಿಂಗಳ ಪೌಷ್ಟಿಕ ಆಹಾರದ ಕಿಟ್‌ಗಳು ವಿತರಣೆಗೆ ಬಾಕಿ ಇವೆ ಎನ್ನುತ್ತಾರೆ ಸೋಲಿಗರ ಮುಖಂಡ ಮುತ್ತಯ್ಯ.

ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮದಡಿ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸಮುದಾಯಗಳಿಗೆ ವಿತರಿಸಿರುವ ಹೆಸರೇ ಇಲ್ಲದ ಎಲ್ಲಿಯವರೆಗೆ ಬಳಸಬಹುದು ಎನ್ನುವ ಮಾಹಿತಿಯೂ ಇಲ್ಲದ ಅಡುಗೆಎಣ್ಣೆ.

ಜಿಲ್ಲಾ ಸಮಿತಿಯ ಅಧಿಕಾರ ಮೊಟಕು: 
ಸರ್ಕಾರದ ಮಹತ್ವಾಕಾಂಕ್ಷಿ ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮ ಹಳಿತಪ್ಪಲು ಟೆಂಡರ್ ಪ್ರಕ್ರಿಯೆಯಲ್ಲಿ ಆಗಿರುವ ಬದಲಾವಣೆ ಹಾಗೂ ಜಿಲ್ಲಾ ಸಮಿತಿಯ ಅಧಿಕಾರ ಮೊಟಕುಗೊಳಿಸಿರುವುದು ಪ್ರಮುಖ ಕಾರಣ ಎಂದು ಆರೋಪಗಳು ಕೇಳಿಬಂದಿವೆ.

ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಸಮಿತಿಯಿಂದ ಟೆಂಡರ್ ಕರೆಯಲಾಗುತ್ತಿತ್ತು. ಟೆಂಡರ್‌ ಪಡೆದ ಸಂಸ್ಥೆಯು ಸಮಿತಿಯ ಕಣ್ಗಾವಲು ಹಾಗೂ ನಿಯಂತ್ರಣಕ್ಕೆ ಒಳಪಡುತ್ತಿತ್ತು. ಕಳಪೆ ಆಹಾರ ಪೂರೈಕೆಯಾದ ಬಗ್ಗೆ ಸಮಿತಿಗೆ ದೂರುಗಳು ಬಂದರೆ ಟೆಂಡರ್‌ದಾರ ಸಂಸ್ಥೆಗೆ ನೋಟಿಸ್‌ ನೀಡುವ, ಪದೇಪದೇ ನಿಯಮ ಉಲ್ಲಂಘಿಸಿದರೆ ಟೆಂಡರ್‌ ರದ್ದುಗೊಳಿಸುವ, ಕಪ್ಪುಪಟ್ಟಿಗೆ ಸೇರಿಸುವ ಅಧಿಕಾರ ಜಿಲ್ಲಾ ಸಮಿತಿಗೆ ಇತ್ತು.

ಜಿಲ್ಲಾ ಸಮಿತಿಗಳ ಅಧಿಕಾರ ಮೊಟಕುಗೊಳಿಸಿ ರಾಜ್ಯಮಟ್ಟದಲ್ಲಿ ಟೆಂಡರ್‌ ಹಂಚಿಕೆ ಆರಂಭಿಸಿದ ಮೇಲೆ ಸಮಸ್ಯೆ ಗಂಭೀರವಾಗಿದೆ. ಕಳಪೆ ಆಹಾರ ಪೂರೈಕೆ ಮಾಡಿದ ಸಂಸ್ಥೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಜಿಲ್ಲಾ ಸಮಿತಿಗೆ ಇಲ್ಲದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಹೆಸರೇಳಲು ಬಯಸದ ಜಿಲ್ಲಾಮಟ್ಟದ ಅಧಿಕಾರಿಗಳು.

ರಾಜ್ಯ ಮಟ್ಟದ ಅಧಿಕಾರಿಗಳು ದೂರಿಗೆ ಸ್ಪಂದಿಸುವುದಿಲ್ಲ. ‘ಪರಿಶೀಲಿಸುತ್ತೇವೆ’ ಎಂಬ ಸಿದ್ದ ಉತ್ತರ ಹೊರತಾಗಿ ಕ್ರಮ ಜರುಗಿಸುವುದಿಲ್ಲ. ಇತ್ತ ಟೆಂಡರ್ ಪಡೆದ ಸಂಸ್ಥೆಯ ಪ್ರತಿನಿಧಿಗಳು ಕ್ಯಾರೆ ಎನ್ನುವುದಿಲ್ಲ. ಆದಿವಾಸಿಗಳ ನೋವು ಅರಣ್ಯರೋಧನವಾಗಿದೆ. ಟೆಂಡರ್ ಪಡೆದವರು ಕೆಲವು ಜಿಲ್ಲೆಗಳಲ್ಲಿ ಆಹಾರ ಪದಾರ್ಥಗಳನ್ನು ಪೂರೈಸಲು ಉಪ ಗುತ್ತಿಗೆ ನೀಡಿರುವ ದೂರುಗಳು ಕೇಳಿ ಬಂದಿವೆ. ಉಪ ಗುತ್ತಿಗೆ ಪಡೆದವರು ಲಾಭದಾಸೆಗೆ ಕಳಪೆ ಆಹಾರ ಪದಾರ್ಥಗಳನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರುತ್ತಾರೆ ಮುಖಂಡರು.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟ ಪಂಚಾಯಿತಿ ವ್ಯಾಪ್ತಿಯ ಪೋಡುಗಳಲ್ಲಿರುವ ಆದಿವಾಸಿಗಳು

ಕರಾವಳಿಯಲ್ಲೂ ಇದೇ ಕಥೆ: 

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 478 ಹಾಡಿಗಳಲ್ಲಿ 95,537 ಮಂದಿ ಬುಡಕಟ್ಟು ಸಮುದಾಯದವರು ವಾಸವಿದ್ದಾರೆ. ಉಭಯ ಜಿಲ್ಲೆಗಳಲ್ಲಿ 15,991 ಕೊರಗರು, 9,640 ಮಲೆಕುಡಿಯರು, 69,726 ಮರಾಠಿ ನಾಯಕರು, 180 ಮಂದಿ ಡೋಂಗ್ರಿ ಗೆರಾಸಿಯ ಸಮುದಾಯದವರು ನೆಲೆಸಿದ್ದಾರೆ.

ಅಪೌಷ್ಟಿಕತೆ ಹಾಗೂ ಅನುವಂಶೀಯ ಕಾಯಿಲೆಗಳಿಂದ ಬಳಲುತ್ತಿರುವ ಆದಿವಾಸಿಗಳಿಗೆ ಪೂರೈಕೆಯಾಗುತ್ತಿರುವ ಆಹಾರದಲ್ಲಿ ಗುಣಮಟ್ಟದ ಕೊರತೆ ಕಾಡುತ್ತಿದೆ. ಜೂನ್‌ ತಿಂಗಳಲ್ಲಿ ಕೊಳೆತ ಮೊಟ್ಟೆ, ಬಣ್ಣ ಕಳೆದುಕೊಂಡ ಅಡುಗೆ ಎಣ್ಣೆ, ಹುಳು ಬಿದ್ದ ದವಸ ಧಾನ್ಯಗಳನ್ನು ವಿತರಿಸಲಾಗಿದ್ದು ಕೊರಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಆಹಾರ ವಿತರಿಸುವುದರಿಂದ ದೀರ್ಘ ಕಾಲ ದಾಸ್ತಾನಿರಿಸಲಾಗದೆ ಬಹುಪಾಲು ಆಹಾರ ಪದಾರ್ಥಗಳು ಕೆಡುತ್ತಿವೆ. ಕರಾವಳಿಯ ಆಹಾರ ಪದ್ಧತಿಗೆ ತಕ್ಕಂತೆ ಪೌಷ್ಟಿಕ ಆಹಾರ ನೀಡಬೇಕು, ಬೆಳ್ತಿಗೆ ಅಕ್ಕಿ ಬದಲಾಗಿ ಕುಚಲಕ್ಕಿ, ಸಕ್ಕರೆ ಬದಲಾಗಿ ಬೆಲ್ಲ ವಿತರಿಸಬೇಕು ಎಂಬುದು ಕೊರಗ ಸಮುದಾಯದ ಮುಖಂಡರ ಒತ್ತಾಯ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಿ ಸಮುದಾಯದ 4,240 ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡಲಾಗುತ್ತಿದೆ. ತಿಂಗಳಿಗೊಮ್ಮೆ ವಿತರಿಸುವ ಬದಲು ಒಂದೂವರೆ ತಿಂಗಳಿಗೆ ಕಿಟ್‌ ನೀಡಲಾಗುತ್ತಿದೆ ಎಂಬುದು ಸಿದ್ದಿ ಜನರ ಆರೋಪ.

‘ಕಳೆದ ವರ್ಷ 6 ತಿಂಗಳಿಗೊಮ್ಮೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗಿತ್ತು. ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಆಗಾಗ ವ್ಯತ್ಯಾಸ ಉಂಟಾಗುತ್ತಲೇ ಇರುತ್ತದೆ. ಹಲವು ಸಲ ಒಡೆದ ಮೊಟ್ಟೆ ಹಾಗೂ ಕಳಪೆ ಧಾನ್ಯಗಳನ್ನು ಕೊಡಲಾಗಿದೆ ಎಂದು ಹಳಿಯಾಳದ ಜೂಲಿಯಾನಾ ಸಿದ್ದಿ ದೂರಿದರು.

ಮೂರ್ನಾಲ್ಕು ತಿಂಗಳ ಕಿಟ್ ವಿತರಣೆ:
‌ಅಪೌಷ್ಟಿಕತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಪೌಷ್ಟಿಕ ಆಹಾರದ ಹೆಸರಿನಲ್ಲಿ ಕಳಪೆ ಆಹಾರ ನೀಡಿದರೆ ಅವರ ಆರೋಗ್ಯ ಮತ್ತಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ.

ಪ್ರತಿತಿಂಗಳು ನಿಯಮಿತವಾಗಿ ಆಹಾರ ಪದಾರ್ಥಗಳನ್ನು ವಿತರಿಸಿದೆ ಮೂರು ತಿಂಗಳ ಆಹಾರವನ್ನು ಒಟ್ಟಿಗೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಆಹಾರ ಪದಾರ್ಥಗಳನ್ನು ಹುಳು ಬೀಳುತ್ತಿದ್ದು ಬಳಸಲಾಗದೆ ಹಾಳಾಗುತ್ತಿವೆ. ಐದಾರು ಕೆ.ಜಿ ಬೇಳೆ ಕಾಳುಗಳು, ಎಣ್ಣೆಕಾಳುಗಳು, ಬೆಲ್ಲ, ಆರೇಳು ಲೀಟರ್ ಅಡುಗೆ ಎಣ್ಣೆಯನ್ನು ಒಂದೇ ಬಾರಿ ಕೊಟ್ಟಾಗ ಕೆಲವರು ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಮುಖಂಡರು.

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ಬುಡಕಟ್ಟು ನಿವಾಸಿಗಳ ಜೀವನಮಟ್ಟ ಸುಧಾರಿಸಲು ಗುಣಮಟ್ಟದ ಆಹಾರಪದಾರ್ಥಗಳನ್ನು ನೀಡಬೇಕು. ಕಳಪೆ ಗುಣಮಟ್ಟದ ತಿನ್ನಲು ಯೋಗ್ಯವಲ್ಲದ ಪದಾರ್ಥಗಳನ್ನು ಸರಬರಾಜು ಮಾಡಿದ ಪೂರೈಕೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳದಿದ್ದರೆ ಇದೇ ರೀತಿಯ ಅವಾಂತರಗಳು ಮುಂದುವರೆಯುತ್ತದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಯರಕನಗದ್ದೆ ಕಾಲೋನಿ
‘ಸ್ಥಳೀಯವಾಗಿ ಖರೀದಿಸಿ ನೀಡಿ’
ಸ್ಥಳೀಯ ಆಹಾರ ಪದ್ಧತಿಗೆ ಒಗ್ಗಿರುವುದರಿಂದ ಸ್ಥಳೀಯವಾಗಿಯೇ ಆಹಾರ ಪದಾರ್ಥಗಳನ್ನು ಖರೀದಿಸಿ ನೀಡಬೇಕು, ಕುಚ್ಚಲಕ್ಕಿ, ಗಾಣದ ಎಣ್ಣೆ (ತೆಂಗಿನ ಎಣ್ಣೆ) ಹಾಗೂ ದವಸ ಧಾನ್ಯಗಳನ್ನೂ ನೀಡಬೇಕು.
ಗಂಗಾಧರ ಗೌಡ, ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ
‘ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಿ’
ಪ್ರಾಚೀನ ಆಹಾರ ಪದ್ಧತಿಗೆ ಒಗ್ಗಿರುವ ಹಲವರು ಪೌಷ್ಟಿಕ ಆಹಾರ ಸೇವನೆ ಮಾಡುವುದಿಲ್ಲ. ಅಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿ ಪೌಷ್ಟಿಕ ಆಹಾರ ಸೇವನೆಯ ಅಗತ್ಯತೆ ಹಾಗೂ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಮದ್ಯವ್ಯಸನಿಗಳಿಗೆ ಕೌನ್ಸೆಲಿಂಗ್ ಮೂಲಕ ವ್ಯಸನಮುಕ್ತಗೊಳಿಸಬೇಕು, ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು.
ಎಚ್.ಎಂ.ಕಾವೇರಿ, ಬುಡಕಟ್ಟು ಸಮುದಾಯದ ಪರ ಹೋರಾಟಗಾರ್ತಿ 
ಸ್ಥಳೀಯವಾದ ಆಹಾರ ನೀಡಿ
ಎಲ್ಲ ಆದಿವಾಸಿಗಳಿಗೂ ಏಕರೂಪದ ‍ಪೌಷ್ಠಿಕ ಆಹಾರ ನೀಡುವ ಬದಲಿಗೆ ಪ್ರಾದೇಶಿಕತೆಗೆ ಅನುಗುಣವಾಗಿ ಸ್ಥಳೀಯ ಆಹಾರ ಪದ್ಧತಿಯಂತೆ ನೀಡಬೇಕು. ಕಾಳಸಂತೆಯಲ್ಲಿ ಆಹಾರ ಮಾರಾಟ ಮಾಡದಂತೆ ಮನವರಿಕೆ ಮಾಡಿಕೊಡಕೊಡಬೇಕು.   
ವಿ.ಮುತ್ತಯ್ಯ, ರಾ‌ಜ್ಯ ಮೂಲನಿವಾಸಿ ಬುಡಗಟ್ಟುಜನರ ವೇದಿಕೆಯ ಸಂಚಾಲಕ
ಆರೋಗ್ಯ ತಪಾಸಣೆ ನಡೆಸಿ
ಸರ್ಕಾರ ವಿತರಿಸುವ ಪೌಷ್ಟಿಕ ಆಹಾರದ ಮಹತ್ವ ಹಾಗೂ ಬಳಕೆಯ ಬಗ್ಗೆ ಕೊರಗರಿಗೆ ಅರಿವಿಲ್ಲ. ಅಧಿಕಾರಿಗಳು ಹಾಡಿಗಳಿಗೆ ಬಂದು ಪೌಷ್ಟಿಕ ಆಹಾರದ ಮಹತ್ವ ತಿಳಿಸಿಕೊಡಬೇಕು, ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು.‌
ಸುಶೀಲಾ ನಾಡ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ
ಮಳೆಗಾಲದಲ್ಲಿ ಪೂರೈಕೆ ವ್ಯತ್ಯಯ
‘ಮಳೆಗಾಲದಲ್ಲಿ ಕಿಟ್ ಪೂರೈಕೆಯಲ್ಲಿ ವ್ಯತ್ಯಯ ಸಹಜ. ಕಳೆದ ಆರು ತಿಂಗಳಿನಿಂದ ಕಿಟ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ’
ವೈ.ಕೆ.ಉಮೇಶ್, ಉತ್ತರ ಕನ್ನಡ ಪರಿಶಿಷ್ಟ ವರ್ಗಗಳಕಲ್ಯಾಣ ಇಲಾಖೆ ಉಪನಿರ್ದೇಶಕ

ಕಾಳಸಂತೆಯಲ್ಲಿ ಮಾರಾಟ

ಪೌಷ್ಟಿಕ ಆಹಾರದ ಕಿಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ದೂರುಗಳು ಅಲ್ಲಲ್ಲಿ ಕೇಳಿಬಂದಿವೆ. ದುಶ್ಚಟಗಳಿಗೆ ಹಣ ಹೊಂದಿಸಲು ಕೆಲವರು ಪೌಷ್ಟಿಕ ಆಹಾರವನ್ನು ತೀರಾ ಕಡಿಮೆ ದರಕ್ಕೆ ನಗರ ಸೇರಿದಂತೆ ಹಾಡಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕೆಲವು ಹಾಡಿಗಳಿಗೆ ಪೌಷ್ಟಿಕ ಆಹಾರ ಖರೀದಿಸಲೆಂದೇ ಪ್ರತಿ ತಿಂಗಳು ವರ್ತಕರು ಬರುತ್ತಾರೆ. ಕೆಲವರು ಅಂಗಡಿಗಳಿಗೆ ಖುದ್ದು ಕೊಂಡೊಯ್ದು ಮಾರಾಟ ಮಾಡಿ ಬರುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ಕೊಡಗಿನ ಆದಿವಾಸಿ ಸಮುದಾಯಗಳ ಮುಖಂಡರು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ ರಿಯಾಲಿಟಿ ಚೆಕ್ ಮಾಡಿದಾಗ ಕೆಲವರು ಕಾಳಸಂತೆಯಲ್ಲಿ ಪೌಷ್ಟಿಕ ಆಹಾರ ಮಾರಾಟವಾಗುತ್ತಿರುವುದು ಕಂಡುಬಂತು. ಈ ಕುರಿತು ವ್ಯಕ್ತಿಯೊಬ್ಬರನ್ನು ಪ್ರಶ್ನಿಸಿದಾಗ ‘ಮದ್ಯ ಸೇವಿಸಲು ಹಣ ಇಲ್ಲ, ಹಾಗಾಗಿ ಮಾರಾಟ ಮಾಡಲು ಬಂದಿದ್ದೇನೆ’ ಎಂಬ ಉತ್ತರ ನೀಡಿದರು. ‘ಮನೆ ನಡೆಸಲು ಹಣ ಬೇಕಲ್ಲವೇ ? ದುಡಿಮೆ ಇಲ್ಲದಾಗ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದು ಅನಿವಾರ್ಯ’ ಎಂದು ಮಹಿಳೆಯೊಬ್ಬರು ಉತ್ತರಿಸಿದರು. ಇನ್ನೂ ಕೆಲವರು ಆಹಾರ ನಮಗೆ ಒಗ್ಗುವುದಿಲ್ಲ’ ಎಂದರು.

77 ಮಂದಿಗೆ ಸಿಕಲ್‌ಸೆಲ್‌ ರೋಗ
ಚಾಮರಾಜನಗರ ಜಿಲ್ಲೆಯಲ್ಲಿ 77 ಮಂದಿ ಆದಿವಾಸಿಗಳು ಕುಡುಗೋಲು (ಸಿಕಲ್‌ಸೆಲ್‌) ಕಾಯಿಲೆಯಿಂದ ಬಳಲುತ್ತಿದ್ದಾರೆ. 1,000 ಮಂದಿಯಲ್ಲಿ ರೋಗವಾಹಕರು ಇದ್ದಾರೆ. ರಕ್ತಹೀನತೆ, ಮಧುಮೇಹ, ರಕ್ತದೊತ್ತಡದಂತೆ ಅಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವ ಬುಡಕಟ್ಟು ಸಮುದಾಯಗಳ ಜನರಿಗೆ ಅಪೌಷ್ಟಿಕ ಆಹಾರ ಪೂರೈಕೆಯಾಗುತ್ತಿರುವುದು ಆರೋಗ್ಯ ಸಮಸ್ಯೆಗಳು ಮತ್ತಷ್ಟು ಗಂಭೀರವಾಗಲು ಕಾರಣವಾಗಿದೆ.
‘ದೂರು ಬಂದರೆ ಕ್ರಮ’
ರಾಜ್ಯದ 8 ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ಪ್ರತಿ ತಿಂಗಳು ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲು ಮಾರ್ಚ್‌ನಲ್ಲಿ ಆರ್‌ಆರ್‌ ಎಂಟರ್‌ಪ್ರೈಸಸ್‌ ಸಂಸ್ಥೆಗೆ ₹ 120 ಕೋಟಿ ವೆಚ್ಚದ ಟೆಂಡರ್ ನೀಡಲಾಗಿದೆ. ನಿಯಮಿತವಾಗಿ ಆಹಾರ ಪದಾರ್ಥಗಳು ವಿತರಣೆಯಾಗದ ಹಾಗೂ ಕಳಪೆ ಆಹಾರ ಪೂರೈಕೆ ಮಾಡಿರುವ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಲಾಗುವುದು. ‍
ಸುರೇಶ್‌, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ‌
ಕಳಪೆಯಾಗಿದ್ದರೆ ಬದಲಿ ಆಹಾರ ಪೂರೈಕೆ
ಗುಣಮಟ್ಟ ಕಳಪೆಯಾಗಿದ್ದರೆ ಬದಲಿ ಆಹಾರ ಪೂರೈಕೆ ಮಾಡಲಾಗುವುದು, ಫಲಾನುಭವಿಗಳ ಬೇಡಿಕೆಯಂತೆ ಸಫಲ್ ಅಡುಗೆ ಎಣ್ಣೆ ಪೂರೈಕೆ ಮಾಡಲಾಗುತ್ತಿದೆ. ವಿತರಣೆಗೆ ಬಾಕಿ ಇರುವ ಆಹಾರ ಪದಾರ್ಥಗಳನ್ನು ಶೀಘ್ರ ಹಂಚಿಕೆ ಮಾಡಲಾಗುವುದು.
ಮುನಿರಾಜು, ಆರ್‌ಆರ್‌ ಎಂಟರ್‌ಪ್ರೈಸಸ್‌ ಆಹಾರ ಪೂರೈಕೆದಾರರು

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ ಪೂರಕ ಮಾಹಿತಿ: ಗಿರೀಶ್‌ ಕೆ.ಎಸ್‌, ನವೀನ್‌ ಕುಮಾರ್ ಜಿ, ಗಣಪತಿ ಹೆಗಡೆ, 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.