ADVERTISEMENT

ಡಯಾಲಿಸಿಸ್‌ ಸೇವೆ: ಸರ್ಕಾರ–ಏಜೆನ್ಸಿ ತಿಕ್ಕಾಟ ರೋಗಿಗಳು ಹೈರಾಣು

ಒಳನೋಟ

ಜಿ.ಬಿ.ನಾಗರಾಜ್
Published 16 ಜನವರಿ 2021, 19:31 IST
Last Updated 16 ಜನವರಿ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಡಯಾಲಿಸಿಸ್‌ ಸೇವೆಯನ್ನು ಉಚಿತವಾಗಿ ಒದಗಿಸುವ ಸರ್ಕಾರದ ಆಶಯ ಈಡೇರಿದಂತೆ ಕಾಣುತ್ತಿಲ್ಲ. ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ನಡುವಿನ ತಿಕ್ಕಾಟದಲ್ಲಿ ರೋಗಿಗಳು ನರಳುವುದು ತಪ್ಪುತ್ತಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಯಾಲಿಸಿಸ್‌ ಸೇವೆಯನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಒದಗಿಸುತ್ತಿತ್ತು. ಸೇವೆಯನ್ನು ಇನ್ನಷ್ಟು ಸಮರ್ಪಕವಾಗಿ ನೀಡುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್ಎಂ) ಸರ್ಕಾರಿ–ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯನ್ನು ಮುಂದಿಟ್ಟಿತು. 2016–17ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಣೆಯಾಯಿತು. ಆದರೆ ಸೇವೆ ಸುಧಾರಣೆಯಾಗುವ ಬದಲಿಗೆ ಇನ್ನಷ್ಟು ಅಧ್ವಾನವಾಯಿತು.

ಡಯಾಲಿಸಿಸ್‌ ಸೇವೆಯನ್ನು ಪಿಪಿಪಿ ಮಾದರಿಯಲ್ಲಿ ಒದಗಿಸಲು ಬಿ.ಆರ್‌.ಶೆಟ್ಟಿ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಸಂಜೀವಿನಿ ಸಂಸ್ಥೆಗಳು ಐದು ವರ್ಷಕ್ಕೆ ಗುತ್ತಿಗೆ ಪಡೆದಿವೆ. 2017ರ ಫೆ.23ರಂದು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಈ ಒಡಂಬಡಿಕೆಯ ಪ್ರಕಾರ ರೋಗಿಯೊಬ್ಬರ ಪ್ರತಿ ಡಯಾಲಿಸಿಸ್‌ಗೆ ಸರ್ಕಾರ ₹1,150 ಪಾವತಿಸುತ್ತಿದೆ. ಒಡಂಬಡಿಕೆಗೆ ಸಹಿ ಹಾಕಿದ ಸಂಸ್ಥೆಗಳು ನಿಯಮಗಳನ್ನು ಪಾಲಿಸುತ್ತಿಲ್ಲ.

ADVERTISEMENT

ಕಟ್ಟಡ, ವಿದ್ಯುತ್‌ ಹಾಗೂ ನೀರನ್ನು ಸರ್ಕಾರ ಒದಗಿಸಿದೆ. ಡಯಾಲಿಸಿಸ್‌ಗೆ ಅಗತ್ಯವಿರುವ ಉಪಕರಣ, ಔಷಧ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಗುತ್ತಿಗೆ ಪಡೆದ ಸಂಸ್ಥೆಯ ಜವಾಬ್ದಾರಿ. ರೋಗಿಗಳ ಸಂಖ್ಯೆ ಹೆಚ್ಚಾದರೆ ಮೂರು ಪಾಳಿಯಲ್ಲಿ ಡಯಾಲಿಸಿಸ್‌ ಕೇಂದ್ರ ಕಾರ್ಯನಿರ್ವಹಿಸಬೇಕು. ಇಲ್ಲವೇ ಯಂತ್ರೋಪಕರಣಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸೇವೆ ಒದಗಿಸಬೇಕು. ಮೂತ್ರಪಿಂಡ ವೈದ್ಯರು, ಪ್ರತಿ ಮೂರು ಯಂತ್ರಕ್ಕೊಬ್ಬ ಸಿಬ್ಬಂದಿ ಇರಬೇಕು. ಆದರೆ, ಬಹುಪಾಲು ಡಯಾಲಿಸಿಸ್‌ ಕೇಂದ್ರಗಳು ಈ ಕೊರತೆ ಎದುರಿಸುತ್ತಿವೆ.

ಡಯಾಲಿಸಿಸ್‌ ಮಾಡುವಾಗ ರಕ್ತದೊತ್ತಡ ಏರುಪೇರು ಆಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಹೃದಯ ಸಂಬಂಧಿ ಕಾಯಿಲೆ ಉಲ್ಬಣವಾಗುವ ಸಾಧ್ಯತೆ ಹೆಚ್ಚು. ತುರ್ತು ಚಿಕಿತ್ಸೆಗೆ ‘ಡಿಫ್ರಿಜಿಲೇಟರ್‌’ ಯಂತ್ರ ನೆರವಿಗೆ ಬರುತ್ತದೆ. ಆದರೆ, ಬಹುಪಾಲು ಡಯಾಲಿಸಿಸ್‌ ಕೇಂದ್ರಗಳಲ್ಲಿ ಈ ಯಂತ್ರವಿಲ್ಲ.

ಡಯಾಲಿಸಿಸ್‌ ಪ್ರಕ್ರಿಯೆಗೆ ಒಳಗಾಗುವ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟದಂತೆ ‘ಹೆಪರಿನ್‌’ ಇಂಜೆಕ್ಷನ್‌ ನೀಡಲಾಗುತ್ತದೆ. ಹಲವು ತಿಂಗಳಿಂದ ಈ ಇಂಜೆಕ್ಷನ್‌ ಅನ್ನು ರೋಗಿಯೇ ಕೊಂಡೊಯ್ಯಬೇಕಾಗಿದೆ. ಡಯಾಲಸರ್‌ ಶುಚಿಗೊಳಿಸುವ ಎನ್‌ಎಸ್‌ ಬಾಟಲಿಗಳನ್ನು ರೋಗಿ ಖರೀದಿಸಬೇಕಿದೆ. ರಕ್ತದಲ್ಲಿ ಸೋಂಕು ಇರುವವರು ಡಯಾಲಸರ್, ಟ್ಯೂಬಿಂಗ್‌ಗಳನ್ನು ಖರೀದಿಸುವುದು ಅನಿವಾರ್ಯವಾಗಿದೆ.

ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಸರ್ಕಾರ ನಿಯಮಿತವಾಗಿ ಹಣ ಪಾವತಿಸುತ್ತಿಲ್ಲ ಎಂಬ ಆರೋಪಗಳಿವೆ. ಇದರಿಂದ ಖಾಸಗಿ ಏಜೆನ್ಸಿಗಳು ಒಂದೊಂದೇ ಸೇವೆಯನ್ನು ಮೊಟಕುಗೊಳಿಸುತ್ತಿವೆ. ಸರ್ಕಾರದ ಮೇಲೆ ಒತ್ತಡ ಹೇರುವಂತೆ ರೋಗಿಗಳಿಗೆ ಸೂಚಿಸುತ್ತಿವೆ. ಬಾಹ್ಯ ಒತ್ತಡ ಸೃಷ್ಟಿಯಾದಾಗ ಏಜೆನ್ಸಿ ಬದಲಿಸುವುದಾಗಿ ಭರವಸೆ ನೀಡುವ ಆರೋಗ್ಯ ಇಲಾಖೆ ಮಾತಿಗೆ ತಪ್ಪುತ್ತಿದೆ. ಸರ್ಕಾರ ಹಾಗೂ ಏಜೆನ್ಸಿಗಳ ನಡುವಿನ ಜಟಾಪಟಿಯಲ್ಲಿ ರೋಗಿಗಳು ಹೈರಾಣಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.