ADVERTISEMENT

ಒಳನೋಟ: ಡ್ರಗ್ಸ್ ಸುಳಿಯಲ್ಲಿ ರಾಜ್ಯ– ಗಾಂಜಾ ಗಮ್ಮತ್ತಿನ ಆಪತ್ತು, ಬಂದಿದೆ ಕುತ್ತು

ಯುವಸಮೂಹವೇ ಗುರಿ l ಅಧಿಕಾರಸ್ಥರಿಂದ ರಕ್ಷಣೆ

ಸಂತೋಷ ಜಿಗಳಿಕೊಪ್ಪ
Published 12 ಫೆಬ್ರುವರಿ 2022, 20:59 IST
Last Updated 12 ಫೆಬ್ರುವರಿ 2022, 20:59 IST
ಬೀದರ್ ಕಡೆಯಿಂದ ಸೋಲಾಪುರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 342 ಕೆ.ಜಿ. ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದ ಸಂದರ್ಭ
ಬೀದರ್ ಕಡೆಯಿಂದ ಸೋಲಾಪುರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 342 ಕೆ.ಜಿ. ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದ ಸಂದರ್ಭ   

ಬೆಂಗಳೂರು: ಕ್ಷಣಿಕ ನಶೆಯಲ್ಲಿ ತೇಲಿಸಿ ಸಾವಿನ ದವಡೆಗೆ ದೂಡುವ ಮಾದಕ ವಸ್ತುವಾದ ‘ಗಾಂಜಾ’ ಹಾವಳಿ ರಾಜ್ಯದಲ್ಲಿ ವಿಪರೀತವಾಗಿದೆ. ಬೆಂಗಳೂರು ಸೇರಿವಿವಿಧ ನಗರಗಳಲ್ಲಿ ವ್ಯಸನಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯುವಸಮೂಹ ಈ ಚಟಕ್ಕೆ ಬೀಳುತ್ತಿದ್ದು, ಗಾಂಜಾ ಸಾಗಣೆ ಹಾಗೂ ಮಾರಾಟಕ್ಕೆ ಲಗಾಮು ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ.

ಹೊರರಾಜ್ಯದಲ್ಲಿ ಬೆಳೆಯುವ ಗಾಂಜಾ ಹಾಗೂ ಅದರ ಉತ್ಪನ್ನಗಳನ್ನು ಟನ್‌ಗಟ್ಟಲೇ ಕರ್ನಾಟಕಕ್ಕೆ ತಂದು ಮಾರುವ ಜಾಲಗಳು ಸಕ್ರಿಯವಾಗಿವೆ.

ಜಾಲದಲ್ಲಿರುವ ಪೆಡ್ಲರ್ ಹಾಗೂ ಉಪ ಪೆಡ್ಲರ್‌ಗಳು, ವ್ಯವಸ್ಥಿತವಾಗಿ ಗಾಂಜಾ ಮಾರಿ ವಾರ್ಷಿಕ ಕೋಟಿಗಟ್ಟಲೇ ವ್ಯವಹಾರ ನಡೆಸುತ್ತಿದ್ದಾರೆ.

ADVERTISEMENT

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಗಾಂಜಾ ಹಾಗೂ ಇತರೆ ಮಾದಕ ವಸ್ತುವನ್ನು ದೇಶದಲ್ಲಿ ನಿಷೇಧಿಸಲಾಗಿದೆ. ರಾಜ್ಯ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ತಂಡಗಳು, ಮೇಲಿಂದ ಮೇಲೆ ಕಾರ್ಯಾ ಚರಣೆ ನಡೆಸಿದರೂ ಜಾಲಗ ಳನ್ನು ಬುಡ ಸಮೇತ ಕಿತ್ತೆಸೆಯಲು ಸಾಧ್ಯವಾಗುತ್ತಿಲ್ಲ.

‘ಗಾಂಜಾ ವ್ಯಸನಿಗಳ ಬಗ್ಗೆ ಎನ್‌ಸಿಬಿ (ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ) ಅಧಿಕಾರಿಗಳು ಇತ್ತೀಚೆಗೆ ಅಧ್ಯ ಯನ ನಡೆಸಿದ್ದರು. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಗಾಂಜಾ ವ್ಯಸನಿಗಳಿರುವ ನಗರವೆಂಬ ಅಪಖ್ಯಾತಿ ರಾಜಧಾನಿ ಬೆಂಗಳೂರಿಗೆ ಬಂದಿದೆ. ರಾಜ್ಯದ ಇತರೆ ನಗರಗಳಲ್ಲೂ ಗಾಂಜಾ ಸೇವನೆ ಅಧಿಕ ವಾಗಿದೆ. ಮುಂಬರುವ ದಿನಗಳಲ್ಲಿ ಗಾಂಜಾದಿಂದಲೇ ರಾಜ್ಯಕ್ಕೆ ಆಪತ್ತು ಎದುರಾಗುವ ಸಾಧ್ಯತೆ ಇದೆ. ಇದನ್ನು ಮಟ್ಟಹಾಕಲು ಪ್ರತ್ಯೇಕವಾದ ಎಸ್‌ಸಿಬಿ (ರಾಜ್ಯ ಮಾದಕ ವಸ್ತು ನಿಯಂತ್ರಣ ಘಟಕ) ಅಗತ್ಯವಿದೆ’ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಡಿಶಾ, ತ್ರಿಪುರಾ, ಬಿಹಾರ, ಮಧ್ಯಪ್ರದೇಶ, ಕೇರಳ ಹಾಗೂ ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಗಾಂಜಾ ಬರುತ್ತದೆ. ಅದನ್ನೇ ಕೆ.ಜಿ.ಗೆ ₹ 10 ಸಾವಿರದಿಂದ ₹ 20 ಸಾವಿರ ಕೊಟ್ಟು ಪೆಡ್ಲರ್‌ಗಳು ಖರೀದಿಸುತ್ತಾರೆ. ಹಣ್ಣು, ತರಕಾರಿ, ವಿವಿಧ ಕೃಷಿ ಉತ್ಪನ್ನಗಳು, ಬಟ್ಟೆ, ದಿನಸಿ, ದಿನೋಪಯೋಗಿ ವಸ್ತುಗಳ ಸಾಗಣೆ ನೆಪದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜ್ಯಕ್ಕೆ ಗಾಂಜಾ ಪ್ರವೇಶಿಸುತ್ತದೆ. ಬಸ್, ರೈಲು ಮೂಲಕವೇ ಸರಬರಾಜಾಗುತ್ತದೆ’ ಎಂದೂ ತಿಳಿಸಿದರು.

ಗಲ್ಲಿ ಗಲ್ಲಿಗೂ ಪೂರೈಕೆ: ‘ರಾಜ್ಯಕ್ಕೆ ಬರುವ ಗಾಂಜಾ, ಪೆಡ್ಲರ್‌ಗಳ ಅಡ್ಡೆ ಸೇರುತ್ತದೆ. ನಂತರ, ಪ್ರತಿ ಕೆ.ಜಿ.ಗೆ ₹ 50 ಸಾವಿರದಿಂದ ₹ 60 ಸಾವಿರವರೆಗೆ ಉಪಪೆಡ್ಲರ್‌ಗಳಿಗೆ ಮಾರಲಾಗುತ್ತದೆ. ಅವರ ಮೂಲಕ ಗಲ್ಲಿ ಗಲ್ಲಿಗೂ ತಲುಪುತ್ತದೆ. ಆರಂಭದಲ್ಲಿ ಪರಿಚಯಸ್ಥರಿಗೆ ಮಾತ್ರ ಗಾಂಜಾ ಮಾರುತ್ತಾರೆ. ನಂತರ, ಅವರಿಂದ ಸಂಪರ್ಕಕ್ಕೆ ಸಿಗುವವರಿಗೂ ಗಾಂಜಾ ಮಾರಾಟ ಮಾಡುತ್ತಾರೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ತಳ್ಳುಗಾಡಿ, ಗೂಡಂಗಡಿ, ಬೇಕರಿ, ಪಾನ್‌ ಶಾಪ್‌, ತಿನಿಸು ಅಂಗಡಿ, ತರಕಾರಿ, ಹಣ್ಣು ಮಾರಾಟ ಮಳಿಗೆ ಹಾಗೂ ಯುವಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಗಾಂಜಾ ಮಾರಾಟ ಜೋರಾಗಿರುತ್ತದೆ. ಸಿಗರೇಟ್‌ ಹಾಗೂ ತಂಬಾಕು ಉತ್ಪನ್ನ ಮಾರಾಟ ಮಾಡುವ ಸ್ಥಳದಲ್ಲೂ ಗಾಂಜಾ ಹೆಚ್ಚಾಗಿ ಸಿಗುತ್ತದೆ. 10 ಗ್ರಾಂ ಗಾಂಜಾಕ್ಕೆ ₹ 200ರಿಂದ ₹250 ದರ ಇರುತ್ತದೆ. 10 ಗ್ರಾಂ, 50 ಗ್ರಾಂ, 100 ಗ್ರಾಂ, 250 ಗ್ರಾಂ ಪೊಟ್ಟಣದಲ್ಲಿ ವ್ಯಸನಿಗಳು ಗಾಂಜಾ ಖರೀದಿಸುತ್ತಾರೆ. ಗಾಂಜಾ ಚಿಗುರೆಲೆ, ಹೂವು, ಹಣ್ಣು, ಬೀಜ, ಸೊಪ್ಪು, ಎಲೆ, ಮೊಗ್ಗು, ಚರಸ್, ಹಶೀಷ್‌ಗೆ (ಎಣ್ಣೆ) ಬೇಡಿಕೆ ಇದೆ.’

‘ಒಬ್ಬ ವ್ಯಸನಿ, ಒಂದು ಬಾರಿಗೆ ಕನಿಷ್ಠ 10 ಗ್ರಾಂ ಗಾಂಜಾ ತೆಗೆದುಕೊಳ್ಳುತ್ತಾನೆ. ಆತನ ಸಾಮರ್ಥ್ಯಕ್ಕೆ ತಕ್ಕಂತೆ ಗರಿಷ್ಠ ಗಾಂಜಾ ಸೇದುತ್ತಾನೆ. ಯುವಕರೇ ಹೆಚ್ಚು ಗಾಂಜಾ ವ್ಯಸನಿಗಳಾಗುತ್ತಿದ್ದಾರೆ. ಆ ಪೈಕಿ ಹಲವರು, ಸುಲಿಗೆ, ದರೋಡೆ, ಹಲ್ಲೆ, ಕೊಲೆ ಯತ್ನದಂಥ ಅಪರಾಧ ಕೃತ್ಯ ಎಸಗುತ್ತಿದ್ದಾರೆ’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

ವಿದ್ಯಾವಂತರೇ ಹೆಚ್ಚು: ‘ಕೆಲ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು, ಕೆಲ ಸಾಫ್ಟ್‌ವೇರ್‌ ಕಂಪನಿಗಳ ಉದ್ಯೋಗಿಗಳೇ ಹೆಚ್ಚಾಗಿ ಗಾಂಜಾ ಸೇವಿಸುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಅಂಥವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಒತ್ತಡ ಹೆಚ್ಚು. ಅದರಿಂದ ಹೊರಬರಲು ಹಲವರು ಗಾಂಜಾ ಸೇವಿಸುತ್ತಾರೆ. ಇವರೇ ನಮಗೆ ಕಾಯಂ ಗ್ರಾಹಕರು’ ಎಂಬುದಾಗಿ ಪ್ರಕರಣವೊಂದರಲ್ಲಿ ಸೆರೆಸಿಕ್ಕ ಪೆಡ್ಲರ್ ಹೇಳಿಕೆ ನೀಡಿದ್ದ’ ಎಂದೂ ತಿಳಿಸಿದರು.

ಪೆಡ್ಲರ್‌ಗಳಿಗೆ ‘ಖಾಕಿ’, ‘ಖಾದಿ’ ರಕ್ಷಣೆ: ‘ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿರುವ ಗಾಂಜಾ ಜಾಲವನ್ನು ಕೆಲ ಪೊಲೀಸರು ಹಾಗೂ ಕೆಲ ರಾಜಕಾರಣಿಗಳೇ ರಕ್ಷಿಸುತ್ತಿದ್ದಾರೆ. ಪೆಡ್ಲರ್ ಜೊತೆ ಶಾಮೀಲಾಗಿರುವ ಅವರೆಲ್ಲ, ಜನರನ್ನು ಗಾಂಜಾ ಮತ್ತಿನಲ್ಲಿ ತೇಲಿಸಿ ದುಡ್ಡು ಮಾಡುತ್ತಿದ್ದಾರೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಬೆಳವಣಿಗೆಯನ್ನು ತಿಳಿಯಲು ಕೆಲವರನ್ನು ಭಾತ್ಮಿದಾರರೆಂದು ಪೊಲೀಸರು ನೇಮಿಸಿಕೊಂಡಿರುತ್ತಾರೆ. ಅಕ್ರಮಗಳ ಬಗ್ಗೆ ಕೆಲ ದಿನ ಮಾಹಿತಿ ನೀಡುವ ಭಾತ್ಮಿದಾರ, ಕ್ರಮೇಣ ಗಾಂಜಾ ಪೆಡ್ಲರ್ ಜೊತೆ ಕೈ ಜೋಡಿಸುತ್ತಾನೆ. ಹಣ ಸಂಪಾದಿಸಿ, ಐಷಾರಾಮಿ ಜೀವನ ನಡೆಸುತ್ತಾನೆ. ಆತನೇ ಕೆಲ ಪೊಲೀಸರಿಗೂ ‘ಮಾಮೂಲಿ’ ಕೊಡಿಸಿ, ಗಾಂಜಾ ಮಾರಾಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಾನೆ. ಕಾಮಾಕ್ಷಿಪಾಳ್ಯದಲ್ಲಿ ಸಿಕ್ಕಿಬಿದ್ದ ಭಾತ್ಮಿದಾರನೇ ಇದಕ್ಕೆ ನಿದರ್ಶನ’ ಎಂದೂ ತಿಳಿಸಿದರು.

‘ಪೆಡ್ಲರ್ ಹಾಗೂ ಉಪಪೆಡ್ಲರ್‌ಗಳನ್ನು ಆಗಾಗ ಬಂಧಿಸುವ ಕೆಲ ಪೊಲೀಸರು, ಅವರ ಜೊತೆ ಕೈ ಜೋಡಿಸಿ ತಮ್ಮ ಪಾಲು ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್.ಟಿ.ನಗರದ ಮನೆ ಭದ್ರತೆಯಲ್ಲಿದ್ದ ಪೊಲೀಸರಿಬ್ಬರು ಗಾಂಜಾ ಸಮೇತ ಸಿಕ್ಕಿಬಿದ್ದಿದ್ದರು. ಇಂಥ ಹಲವು ಪೊಲೀಸರಿಗೆ ಮೊದಲು ಮೂಗುದಾರ ಹಾಕಬೇಕಿದೆ’ ಎಂದೂ ಹೇಳಿದರು.

ಹೆದ್ದಾರಿಯಲ್ಲೇ ಗಾಂಜಾ ಸಾಗಣೆ

‘ಡ್ರಗ್ಸ್ವ್ಯಸನಿಯೇ, ಕ್ರಮೇಣ ಗಾಂಜಾ ಮಾರಾಟದ ಪೆಡ್ಲರ್ ಆಗಿ ಮಾರ್ಪಡುತ್ತಿದ್ದಾನೆ. ಸಣ್ಣ ಪ್ರಮಾಣದಲ್ಲಿ ಗಾಂಜಾ ಮಾರಾಟಕ್ಕೆ
ಇಳಿದ ವ್ಯಕ್ತಿ, ಟನ್‌ಗಟ್ಟಲೇ ವ್ಯವಹಾರ ನಡೆಸುತ್ತಿದ್ದಾನೆ. ಇಂಥವರ ವಿರುದ್ಧ ನಿರಂತರವಾಗಿ ದಾಳಿ ಮಾಡಲಾಗುತ್ತಿದ್ದು, ಅವರು ಮಾತ್ರ ದಂಧೆ ಬಿಟ್ಟಿಲ್ಲ’ ಎಂದು ಬೆಂಗಳೂರು ಸಿಸಿಬಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಎನ್‌ಡಿಪಿಎಸ್: ಕನಿಷ್ಟ 1 ವರ್ಷ, ಗರಿಷ್ಠ 20 ವರ್ಷ ಶಿಕ್ಷೆ

ನಾರ್ಕೋಟಿಕ್‌ ಆ್ಯಂಡ್‌ ಸೈಕೋಟ್ರೋಪಿಕ್‌ ಸಬ್‌ಸ್ಟ್ಯಾನ್ಸಸ್‌ ಕಾಯ್ದೆ (ಎನ್‌ಡಿಪಿಎಸ್) ಅನ್ವಯ ಮಾದಕ ಔಷಧ ಹಾಗೂ ನಿದ್ರಾಜನ್ಯ ವಸ್ತಗಳನ್ನು ನಿಷೇಧಿಸಲಾಗಿದೆ.

ಗಾಂಜಾ ಅಥವಾ ಭಂಗಿಸೊಪ್ಪು ನಿಷೇಧದ ಬಗ್ಗೆ ಕಾಯ್ದೆಯ ಕಲಂ 2ರಲ್ಲಿ ಉಲ್ಲೇಖಿಸಲಾಗಿದೆ.

ಗಾಂಜಾ ಹಾಗೂ ಅದರ ಉತ್ಪನ್ನಗಳ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ, ಕಾಯ್ದೆಯ ಕಲಂ 20ರಡಿ ಆರೋಪಿಗಳ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ.

* ಗಾಂಜಾ ಸಸ್ಯ ಬೆಳೆಸಿದರೆ, ಉತ್ಪಾದಿಸಿದರೆ, ಸಿದ್ಧಪಡಿಸಿದರೆ, ಸ್ವಾಧೀನದಲ್ಲಿಟ್ಟುಕೊಂಡರೆ, ಮಾರಿದರೆ, ಖರೀದಿಸಿದರೆ, ಸಾಗಿಸಿದರೆ, ಆಮದು ಮಾಡಿಕೊಂಡರೆ, ರಫ್ತು ಮಾಡಿದರೆ ಗರಿಷ್ಟ ಹತ್ತು ವರ್ಷ ಕಠಿಣ ಸೆರೆವಾಸ ಹಾಗೂ ಗರಿಷ್ಟ ₹ 1 ಲಕ್ಷ ದಂಡ. (ಜಾಮೀನುರಹಿತ)
* ಸಣ್ಣ ಪ್ರಮಾಣದಲ್ಲಿ (1 ಕೆ.ಜಿ ಹಾಗೂ ಅದಕ್ಕಿಂತ ಕಡಿಮೆ) ಗಾಂಜಾ ಒಳಗೊಂಡಿದ್ದರೆ, ಗರಿಷ್ಟ 1 ವರ್ಷ ಕಠಿಣ ಸೆರೆವಾಸ ಹಾಗೂ ಗರಿಷ್ಟ ಹತ್ತು ಸಾವಿರ ದಂಡ. (ಜಾಮೀನು ಸಹಿತ)
* ಮಧ್ಯಮ ಪ್ರಮಾಣದಲ್ಲಿ (1 ಕೆ.ಜಿ.ಯಿಂದ 20 ಕೆ.ಜಿ) ಗಾಂಜಾ ಒಳಗೊಂಡಿದ್ದರೆ, ಗರಿಷ್ಟ 10 ವರ್ಷ ಕಠಿಣ ಶಿಕ್ಷೆ ಹಾಗೂ ಗರಿಷ್ಟ 1 ಲಕ್ಷ ದಂಡ. (ಜಾಮೀನು ರಹಿತ)
* ವಾಣಿಜ್ಯ ಪ್ರಮಾಣದಲ್ಲಿ (20 ಕೆ.ಜಿ ಹಾಗೂ ಅದಕ್ಕಿಂತ ಹೆಚ್ಚು) ಗಾಂಜಾ ಒಳಗೊಂಡಿದ್ದರೆ, ಕನಿಷ್ಟ ಹತ್ತು ವರ್ಷ ಹಾಗೂ ಗರಿಷ್ಟ ಇಪ್ಪತ್ತು ವರ್ಷ ಕಠಿಣ ಸೆರೆವಾಸ. ಕನಿಷ್ಟ 1 ಲಕ್ಷ ಹಾಗೂ ಗರಿಷ್ಟ 2 ಲಕ್ಷ ದಂಡ (ಜಾಮೀನು ರಹಿತ)
* ರಾಂಜಾ ರಾಳದ ಉತ್ಪನ್ನಗಳಾದ ಚರಸ್‌, ಹಶೀಷ್‌ ಹಾಗೂ ಅದರ ಉತ್ಪನ್ನ. ಸಣ್ಣ ಪ್ರಮಾಣ (100 ಗ್ರಾಂ–ಅದಕ್ಕಿಂತ ಕಡಿಮೆ), ಮಧ್ಯಮ ಪ್ರಮಾಣ (100 ಗ್ರಾಂ.ನಿಂದ 1 ಕೆ.ಜಿ.ವರೆಗೆ) ಹಾಗೂ ವಾಣಿಜ್ಯ ಪ್ರಮಾಣ (1 ಕೆ.ಜಿ.ಗಿಂತ ಹೆಚ್ಚು) ಒಳಗೊಂಡಿದ್ದರೆ ಕಠಿಣ ಶಿಕ್ಷೆ.
* ಡ್ರಗ್ಸ್ ಸಾಗಣೆ ಹಾಗೂ ಮಾರಾಟದಲ್ಲಿ ಪದೇ ಪದೇ ಭಾಗಿಯಾಗುವವರನ್ನು ‘ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಣಿಕೆ ತಡೆ (ಪಿಐಟಿ–ಎನ್‌ಡಿಪಿಎಸ್)’ ಕಾಯ್ದೆಯಡಿ ಬಂಧಿಸಲು ಅವಕಾಶವಿದೆ. ಆರೋಪಿಗೆ ಶಿಕ್ಷೆ ವಿಧಿಸಲು ಪೊಲೀಸ್ ಮುಖ್ಯಸ್ಥರಿಗೆ ಅಧಿಕಾರವಿದ್ದು, ಇದು ಜಾಮೀನು ರಹಿತ ಅಪರಾಧ.
– ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಬಹುದಾದ ಕಾರಣಗಳಿಗಾಗಿ ಹೆಚ್ಚಿನ ಶಿಕ್ಷೆ ಹಾಗೂ ದಂಡವನ್ನೂ ವಿಧಿಸಬಹುದು

ರಾಜ್ಯದಲ್ಲಿ ಗಾಂಜಾ ವಿರುದ್ಧ ಎನ್‌ಸಿಬಿ ಕಾರ್ಯಾಚರಣೆ

ವರ್ಷ;ಪ್ರಕರಣ;ಜಪ್ತಿ ಮಾಡಲಾದ ಗಾಂಜಾ(ಕೆ.ಜಿ.ಗಳಲ್ಲಿ);ಬಂಧಿತ ಆರೋಪಿಗಳು

2016;4;1,553;12

2017;6;232;17

2018;14;4,916;23

2019;4;2,058; 8

2020;4;1,980;10

2021;12;7,565;47


‘ಡೆಲಿವರಿ ಬಾಯ್‌ಗಳೇ ಪೂರೈಕೆದಾರರು’
‘ಆಹಾರ ಪೂರೈಕೆ ಮಾಡಲೆಂದು ಸ್ವಿಗ್ಗಿ, ಝೊಮ್ಯಾಟೊ, ಡೊನ್ಜು ಸೇರಿದಂತೆ ಹಲವು ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರ ಕೆಲ ಡೆಲಿವರಿ ಬಾಯ್‌ಗಳು, ಗಾಂಜಾ ಪೂರೈಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇವರ ಜಾಲ ದೊಡ್ಡದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಪೆಡ್ಲರ್‌ನ ₹ 1.68 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಗಾಂಜಾ ಪೆಡ್ಲರ್ ಬಿಹಾರದ ಅಂಜಯ್‌ ಕುಮಾರ್ ಸಿಂಗ್ (54) ಎಂಬಾತನಿಗೆ ಸೇರಿದ್ದ ₹ 1.68 ಕೋಟಿ ಮೌಲ್ಯದ ಆಸ್ತಿಯನ್ನು ಪೊಲೀಸರು ಜಪ್ತಿ ಮಾಡಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ಪೆಡ್ಲರ್‌ ಆಸ್ತಿಯನ್ನು ಜಪ್ತಿ ಮಾಡಿದ ರಾಜ್ಯದ ಮೊದಲ ಪ್ರಕರಣ ಇದಾಗಿತ್ತು.

'2016ರಲ್ಲಿ ಬೆಂಗಳೂರಿಗೆ ಬಂದಿದ್ದ ಅಂಜಯ್‌ , ಒಡಿಶಾ ಹಾಗೂ ಆಂಧ್ರಪ್ರದೇಶದಿಂದ ಡ್ರಗ್ಸ್ ತಂದು ಮಾರುತ್ತಿದ್ದ. ಅದರಿಂದಲೇ ಆಸ್ತಿ ಗಳಿಸಿದ್ದ. ಆತನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶ ಪಡೆದು, ಆರೋಪಿ ಹಾಗೂ ಪತ್ನಿ ಶೀಲಾದೇವಿ ಹೆಸರಿನಲ್ಲಿ ಆಸ್ತಿ ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.