ADVERTISEMENT

ಒಳನೋಟ: ಡ್ರಗ್ಸ್ ಸುಳಿಯಲ್ಲಿ ರಾಜ್ಯ– ಗಾಂಜಾ ತಡೆಯಲು ಮಾಹಿತಿದಾರರ ಜಾಲ ಬಲಗೊಳ್ಳಲಿ

ಜಿ.ಶಿವಕುಮಾರ
Published 12 ಫೆಬ್ರುವರಿ 2022, 20:45 IST
Last Updated 12 ಫೆಬ್ರುವರಿ 2022, 20:45 IST
   

ಬೆಂಗಳೂರು: ‘ಪೊಲೀಸರು ಮಾಹಿತಿ ದಾರರ ಜಾಲ ಬಲಗೊಳಿಸಬೇಕು. ಪೆಡ್ಲರ್‌ಗಳು ರಾಜ್ಯಕ್ಕೆ ಗಾಂಜಾ ತರಲು ರೈಲು ಮಾರ್ಗವನ್ನೇ ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಹೊರ ರಾಜ್ಯಗಳಿಂದ ಅದರಲ್ಲೂ ಮುಖ್ಯವಾಗಿ ವಿಶಾಖಪಟ್ಟಣದಿಂದ ಬರುವ ರೈಲುಗಳ ಮೇಲೆ ಹದ್ದಿನ ಕಣ್ಣು ಇಡಬೇಕು. ಪ್ರತಿಯೊಂದು ನಿಲ್ದಾಣದಲ್ಲೂ ಬೋಗಿಗಳ ತಪಾಸಣೆ ನಡೆಸಬೇಕು. ಹಾಗಾದಾಗ ಗಾಂಜಾ ಪಿಡುಗಿಗೆ ಕಡಿವಾಣ ಸಾಧ್ಯ’.

ಇದು ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿ.ಕೆ.ಶಿವರಾಂ ಹಾಗೂ ಬಿ.ಬಿ.ಅಶೋಕ್‌ಕುಮಾರ್‌ (ಟೈಗರ್‌) ಅವರ ಅಭಿಪ್ರಾಯ.

‘ಗಾಂಜಾ ಪತ್ತೆಗೆಂದೇ ಶ್ವಾನದಳಕ್ಕೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಗಾಂಜಾ ಪತ್ತೆಗೆ ಬಳಸುವ ಶ್ವಾನಗಳ ಸಂಖ್ಯೆ ಹೆಚ್ಚಬೇಕು. ಪೊಲೀಸರ ನಿರ್ಲಕ್ಷ್ಯದಿಂದಾಗಿ ಮಾಹಿತಿದಾರರ ಜಾಲ ಛಿದ್ರವಾಗಿದೆ. ಅದನ್ನು ಬಲಪಡಿಸಲು ಒತ್ತು ನೀಡಬೇಕು. ಗಾಂಜಾ ಮಾರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಪತ್ತೆಯಾದರೆ ಅದಕ್ಕೆ ಅಲ್ಲಿನ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಬಿ.ಕೆ.ಶಿವರಾಂ ತಿಳಿಸಿದರು.

ADVERTISEMENT

‘ನಾನು ಇಲಾಖೆಯಲ್ಲಿದ್ದಾಗ ಭಿಕ್ಷುಕನೊಬ್ಬ ನೀಡಿದ್ದ ಮಾಹಿತಿ ಆಧರಿಸಿ ಬ್ರಿಗೇಡ್‌ ರಸ್ತೆಯಲ್ಲಿ 5 ಕೆ.ಜಿ. ಓಪಿಎಂ ಜಪ್ತಿ ಮಾಡಿದ್ದೆ. ಹೀಗಾಗಿ ಪೊಲೀಸರು ಕೊಳೆಗೇರಿ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು, ವಿದ್ಯಾರ್ಥಿಗಳು, ಗುಮಾಸ್ತರು ಹೀಗೆ ಎಲ್ಲಾ ವರ್ಗದವರ ನಂಬಿಕೆ ಗಳಿಸಬೇಕು. ಮಾಹಿತಿ ಜಾಲವು ನೇಯ್ಗೆ ಇದ್ದಂತೆ. ಒಂದು ನೂಲು ಕಿತ್ತರೂ ಇಡೀ ಬಟ್ಟೆ ಹಾಳಾಗುತ್ತದೆ. ಇದನ್ನು ಅರಿತು ಕೆಲಸ ಮಾಡಬೇಕು’ ಎಂದರು.

ಪೆಡ್ಲರ್‌ಗಳ ಜೊತೆ ಪೊಲೀಸರ ಒಳ ಒಪ್ಪಂದ: ‘ಸ್ಥಳೀಯ ಪೊಲೀಸರು ಗಾಂಜಾ ಪೆಡ್ಲರ್‌ಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿರುತ್ತಾರೆ.ಗಾಂಜಾ ಮಾರಾಟದ ಬಗ್ಗೆ ಮಾಹಿತಿ ಬಂದರೂ ಕೆಲ ಅಧಿಕಾರಿಗಳು ಅದಕ್ಕೆ ಕಿವಿಗೊಡುವುದಿಲ್ಲ. ಅವರ ಅದಕ್ಷತನದಿಂದಲೇ ಈ ಜಾಲ ಸಕ್ರಿಯವಾಗಿದೆ’ ಎಂದು ಅಶೋಕ್‌ಕುಮಾರ್‌ ಹೇಳಿದರು.

‘ಅಧಿಕಾರಿಗಳು ಪ್ರಾಮಾಣಿಕರಾದರೆ ಗಾಂಜಾ ಮಾರಾಟ ಜಾಲ ಹತ್ತಿ‌ಕ್ಕುವುದು ಸುಲಭ. ಗಾಂಜಾ ಜಪ್ತಿಗೆ ನಿರ್ದಿಷ್ಟ ವಿಧಾನವಿದೆ. ಬಹಳ ಮಂದಿ ಪೊಲೀಸರಿಗೆ ಅದರ ಅರಿವಿಲ್ಲ. ಹೀಗಾಗಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಗಾಂಜಾ ಅಡ್ಡೆಗಳ ಮೇಲೆ ಗೆಜೆಟೆಡ್‌ ಅಧಿಕಾರಿಗಳಷ್ಟೇ ದಾಳಿ ಮಾಡಬಹುದು. ನಮ್ಮಲ್ಲಿ ಕಾನ್‌ಸ್ಟೆಬಲ್‌ಗಳೂ ಹಣದ ಆಸೆಯಿಂದ ಅಡ್ಡೆಗಳ ಮೇಲೆ ದಾಳಿ ಮಾಡುತ್ತಾರೆ. ಅದು ತಪ್ಪು’ ಎಂದರು. ‘ಪೊಲೀಸರು ಮಾಹಿತಿದಾರರ ವಿಚಾರ ಗೋಪ್ಯವಾಗಿ ಇಡಬೇಕು. ಪೊಲೀಸ್‌, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗಳು ಒಂದಾಗಿ ಗಾಂಜಾ ಸೇವನೆಯಿಂದ ಆಗಬಹುದಾದ ತೊಂದರೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.