ADVERTISEMENT

ಒಳನೋಟ | ಸಾಲದ ‘ಶೂಲ’ಕ್ಕೆ ಕಂಗಾಲು

ಎಚ್.ಬಾಲಚಂದ್ರ
ಆದಿತ್ಯ ಕೆ.ಎ
Published 19 ಜನವರಿ 2025, 0:30 IST
Last Updated 19 ಜನವರಿ 2025, 0:30 IST
<div class="paragraphs"><p>ಬೆಳಗಾವಿ ಜಿಲ್ಲೆಯ ನಾಗನೂರು ಪಟ್ಟಣದಲ್ಲಿ ಬಾಣಂತಿ, ವೃದ್ಧರು, ಮಕ್ಕಳನ್ನು ಫೈನಾನ್ಸ್‌ ಸಿಬ್ಬಂದಿ ಮನೆಯಿಂದ ಹೊರ ಹಾಕಿರುವ ದೃಶ್ಯ</p></div>

ಬೆಳಗಾವಿ ಜಿಲ್ಲೆಯ ನಾಗನೂರು ಪಟ್ಟಣದಲ್ಲಿ ಬಾಣಂತಿ, ವೃದ್ಧರು, ಮಕ್ಕಳನ್ನು ಫೈನಾನ್ಸ್‌ ಸಿಬ್ಬಂದಿ ಮನೆಯಿಂದ ಹೊರ ಹಾಕಿರುವ ದೃಶ್ಯ

   
ಮೈಕ್ರೋ ಫೈನಾನ್ಸ್ ಸಾಲ ವಸೂಲಿ ಕ್ರಮಕ್ಕೆ ಬೆದರಿ ಊರು ಬಿಟ್ಟ ಕುಟುಂಬಗಳು

ಚಾಮರಾಜನಗರ/ಬೆಂಗಳೂರು: ಪ್ರಕರಣ–1: ‘ಮಗಳ ವಿದ್ಯಾಭ್ಯಾಸಕ್ಕೆಂದು ₹2 ಲಕ್ಷ ಸಾಲ ಪಡೆದುಕೊಂಡಿದ್ದೆ. ದುಡ್ಡಿಲ್ಲದೆ ಸಾಲದ ಕಂತು, ಬಡ್ಡಿ ಕಟ್ಟಲಾಗದೆ ಮತ್ತೊಂದು ಫೈನಾನ್ಸ್‌ನಲ್ಲಿ ಸಾಲ ಪಡೆದೆ. ಹೀಗೆ ಆರು ಮೈಕ್ರೋ ಫೈನಾನ್ಸ್‌ಗಳ ₹6 ಲಕ್ಷ ಸಾಲ ಹೆಗಲೇರಿದೆ. ಸದ್ಯ ಸಾಲ ಮರುಪಾವತಿ ಮಾಡುವಷ್ಟು ಶಕ್ತಿ ನನ್ನಲ್ಲಿಲ್ಲ’ ಎಂದು ಹೇಳಿದ್ದು, ಫೈನಾನ್ಸ್‌ನವರ ಒತ್ತಡದಿಂದ ಮಾನಸಿಕವಾಗಿ ಜರ್ಜರಿತಗೊಂಡಿರುವ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಪುರ ಗ್ರಾಮದ ಪುಟ್ಟತಾಯಮ್ಮ.

ಪ್ರಕರಣ–2: ‘ಮಕ್ಕಳಿಬ್ಬರೂ ಕಾಯಿಲೆ ಯಿಂದ ನರಳುತ್ತಿದ್ದರು. ಗ್ರಾಮದಲ್ಲಿದ್ದ ಸಣ್ಣ ಕ್ಲಿನಿಕ್‌ಗೆ ಎರಡು ಬಾರಿ ಹೋದರೂ ಸುಧಾರಣೆ ಆಗಿರಲಿಲ್ಲ. ನಗರದ ದೊಡ್ಡ ಆಸ್ಪತ್ರೆಯೊಂದಕ್ಕೆ ಹೋಗಲು ಮತ್ತಷ್ಟು ಹಣಬೇಕಿತ್ತು. ಸಕಾಲದಲ್ಲಿ ಮೈಕ್ರೋ ಫೈನಾನ್ಸ್‌ನವರು ನೆರವಾಗಿದ್ದರು. ಸಾಲ ನೀಡುವಾಗ ಷರತ್ತು ಹಾಕಿರಲಿಲ್ಲ. ಇದೀಗ ಷರತ್ತಿನ‌ ಮೇಲೆ ಷರತ್ತು ಹಾಕುತ್ತಿದ್ದಾರೆ. ಸಾಲ ವಸೂಲಾತಿಗಾಗಿ ಅವರ ಬೆದರಿಕೆಗೆ ಮನೆಯನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ’ ಎಂದು ಹೆಸರೇಳಲು ಬಯಸದ ಮತ್ತೊಬ್ಬ ಮಹಿಳೆ ಆತಂಕ ವ್ಯಕ್ತಪಡಿಸಿದರು.

ADVERTISEMENT

ಪ್ರಕರಣ–3: ‘ಧುತ್ತೆಂದು ಸಂಕಷ್ಟ ಎದುರಾಗಿತ್ತು. ಸ್ಥಿತಿವಂತರು, ಅಂಗಡಿ ಮಾಲೀಕರ ಬಳಿ ಕೈಸಾಲ ಕೇಳಿದಾಗಲೂ ಸಿಗಲಿಲ್ಲ. ಅಷ್ಟರಲ್ಲಿ ಮೈಕ್ರೋ ಫೈನಾನ್ಸ್‌ನ ಪ್ರತಿನಿಧಿ ನನ್ನನ್ನು ಸಂಪರ್ಕಿಸಿ ‘ಆಧಾರ್ ಕಾರ್ಡ್’ ಪಡೆದು ಸಾಲ ಕೊಟ್ಟರು. ಆದರೆ, ಸಕಾಲದಲ್ಲಿ ಸಾಲ, ಬಡ್ಡಿ ಮರು ಪಾವತಿಸಲು ಸಾಧ್ಯವಾಗಲಿಲ್ಲ. ಈಗ ವಸೂಲಾತಿದಾರರು ಪ್ರತಿನಿತ್ಯ ಮನೆಗೆ ಬರುತ್ತಿದ್ದಾರೆ. ಅವರ ಒತ್ತಡ ‌ಸಹಿಸಿಕೊಳ್ಳಲೂ ಆಗುತ್ತಿಲ್ಲ...’ – ಹೀಗೆಂದು ಹೇಳುತ್ತಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಧಮ್ಮ ಕಣ್ಣೀರು ಸುರಿಸಿದರು.

ರಾಜ್ಯದ ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಕಲಬುರಗಿ, ಬೀದರ್, ಬೆಳಗಾವಿ, ಹಾವೇರಿ, ರಾಯಚೂರು, ಯಾದಗಿರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್‌ ಹಾಗೂ ಸ್ವ–ಸಹಾಯ ಸಂಘಗಳು ಸಾಲ ವಸೂಲಿಗೆ ಅಳವಡಿಸಿಕೊಂಡಿರುವ ಕ್ರಮಗಳು ಆತಂಕ ಸೃಷ್ಟಿಸುತ್ತಿವೆ. ಸಾಲ ಪಡೆದವರ ನೆಮ್ಮದಿಯೂ ಹಾಳಾಗುತ್ತಿದೆ. ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ.

ದೊಡ್ಡ ಬ್ಯಾಂಕ್‌ಗಳು ಸಾಲ ನೀಡಲು ಕೇಳುವ ದಾಖಲೆಗಳನ್ನು ಪೂರೈಸಲು ಸಾಧ್ಯವಾಗದೇ ಮೈಕ್ರೋ ಫೈನಾನ್ಸ್‌ ಹಾಗೂ ಸ್ವ–ಸಹಾಯ ಸಂಘಗಳತ್ತ ಗ್ರಾಮೀಣ ಪ್ರದೇಶದ ಜನರು ಮುಖ ಮಾಡಿದ್ದಾರೆ. ಅಲ್ಲಿ ಸಾಲ ಪಡೆದವರು ವಾಪಸ್‌ ಕೊಡಲಾಗದೆ, ಬಡ್ಡಿಯೂ ಕಟ್ಟಲಾಗದೆ ರಾತ್ರೋರಾತ್ರಿ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವ್ಯಾಪಾರ, ಮಕ್ಕಳ ವಿದ್ಯಾಭ್ಯಾಸ, ಕೃಷಿ, ಮದುವೆಗೆಂದು ಫೈನಾನ್ಸ್‌ ಸಂಸ್ಥೆಗಳಲ್ಲಿ ಸಾಲ ಪಡೆದವರು ಸಾಲ ತೀರಿಸಲಾಗದೆ ಮನೆ ತೊರೆಯುತ್ತಿದ್ದಾರೆ. ಹಲವು ಊರುಗಳಲ್ಲಿ ದಂಪತಿ ನಡುವೆ ಜಗಳ ನಡೆದು ಬೇರೆ ಆಗಿರುವ ನಿದರ್ಶನಗಳಿವೆ. ರಾಜ್ಯದ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೂ ಈ ಸಮಸ್ಯೆ ಚಾಚಿಕೊಂಡಿದೆ.

‘ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೂ ವಸೂಲಾತಿದಾರ ಒಳಕ್ಕೆ ನುಗುತ್ತಾನೆ. ಅಂಗಳ ಬಿಟ್ಟು ಕದಲುವುದಿಲ್ಲ, ಕೆಟ್ಟ ಪದಗಳಿಂದ ಬೈಯುತ್ತಾರೆ. ಅವರ ಬೈಗುಳಗಳನ್ನು ಕೇಳಲಾಗದು, ಹೇಳಲು ಆಗದು’ ಎಂದು ಹಲವರು ನೊಂದು ನುಡಿಯುತ್ತಾರೆ.

‘ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಸಾಲ ವಸೂಲಾತಿ ವೇಳೆ ನಿಯಮಾವಳಿ ಮೀರುವಂತಿಲ್ಲ. ಆದರೆ, ಅವರ ದೌರ್ಜನ್ಯ ಮಿತಿಮೀರಿದ್ದು, ಪೊಲೀಸರಿಗೆ ದೂರು ನೀಡಿದರೂ ನ್ಯಾಯ ಸಿಗುತ್ತಿಲ್ಲ’ ಎಂದು ರೈತ ಮುಖಂಡರು ಹೇಳಿದ್ದಾರೆ.

‘ಈ ರೀತಿ ಸಂಸ್ಥೆಗಳಲ್ಲಿ ಸಾಲ ಪಡೆದುಕೊಳ್ಳಲು ಹೆಚ್ಚಿನ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ. ಆಧಾರ್‌ ಕಾರ್ಡ್‌, ಸಹಿ ನೀಡಿದರೆ ಸಾಕು. ₹5 ಸಾವಿರದಿಂದ ₹3 ಲಕ್ಷದ ವರೆಗೆ ಸಾಲ ತಕ್ಷಣವೇ ದೊರೆಯುತ್ತದೆ. ಹೆಚ್ಚಿನ ಬಡ್ಡಿಯಾದರೂ ತೊಂದರೆ ಇಲ್ಲ ಎಂದು ಭಾವಿಸಿ ಸಾಲ ಪಡೆದವರು ಆಪತ್ತಿಗೆ ಸಿಲುಕುತ್ತಿದ್ದಾರೆ. ಗುಂಪು ಸಾಲ ಸಹ ವಿತರಣೆ ಮಾಡುತ್ತಾರೆ. ಸಾಲ ವಸೂಲಾತಿಗೇ ಪ್ರತ್ಯೇಕ
ಪ್ರತಿನಿಧಿಗಳನ್ನು ನೇಮಿಸಿಕೊಂಡಿದ್ದು, ಅವರು ಹೊತ್ತಲ್ಲದ ಹೊತ್ತಿನಲ್ಲಿ, ತಡರಾತ್ರಿಯೂ ಮನೆಗೆ ನುಗ್ಗುತ್ತಾರೆ. ಅವರ ಕಿರುಕುಳ ನಿಲ್ಲಿಸಲು ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿಗೆ ತರಬೇಕು ’ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿ, ಈ ಕೆಟ್ಟ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.

‘ವಾಹನ ಸಾಲ, ಕೈಸಾಲ, ಗುಂಪು ಸಾಲ ಸೇರಿದಂತೆ 12 ಬಗೆಯ ಸಾಲ ವಿತರಣೆ ಮಾಡುತ್ತಿದ್ದಾರೆ. ಪ್ರತಿಯೊಂದು ಫೈನಾನ್ಸ್‌ ಸಂಸ್ಥೆಯೂ ಬೇರೆ ಬೇರೆ ಬಡ್ಡಿ ವಿಧಿಸುತ್ತಾರೆ. ನಿಯಮದಂತೆ ಬಡ್ಡಿ ಪಡೆಯಬೇಕು. ಕೆಲವು ಸಂಸ್ಥೆಗಳು ಶೇ 22ರಿಂದ ಶೇ 26ರಷ್ಟು, ಇನ್ನೂ ಕೆಲವು ಸಂಸ್ಥೆಗಳು ಶೇ 30ರಿಂದ 36ರಷ್ಟು ಬಡ್ಡಿ ತೆಗೆದುಕೊಳ್ಳುತ್ತಿವೆ. ಇವರಿಗೆ ಯಾವುದೇ ಕಾಯ್ದೆ ಅನ್ವಯ ಆಗುವುದಿಲ್ಲವೇ’ ಎಂದು ಕುರುಬೂರು ಶಾಂತಕುಮಾರ್ ಪ್ರಶ್ನಿಸಿದರು.

ಈ ಫೈನಾನ್ಸ್‌ ಸಂಸ್ಥೆಗಳು ಕಾಡಿನ ಆದಿವಾಸಿಗಳನ್ನು ಬಿಟ್ಟಿಲ್ಲ. ಅವರ ಅಗತ್ಯವನ್ನೇ ಬಂಡವಾಳ ಮಾಡಿಕೊಂಡು ಬಡ್ಡಿಗೆ ಸಾಲ ಕೊಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ನಂತರ ಸಾಲ ಮರುಪಾವತಿಗೆ ನೀಡುತ್ತಿರುವ ಒತ್ತಡಕ್ಕೆ ಆದಿವಾಸಿಗಳು ಊರು ಬಿಡುತ್ತಿದ್ದಾರೆ. ಅದರಲ್ಲೂ ರಾಮನಗರ ಜಿಲ್ಲೆಯ ಇರುಳಿಗ ಸಮುದಾಯವರು ಸಹ ಫೈನಾನ್ಸ್ ಸಾಲದ ಶೂಲಕ್ಕೆ ಸಿಲುಕಿ ನರಳುತ್ತಿದ್ದಾರೆ.

‘ಕೋವಿಡ್‌ ಕಾಲದಲ್ಲೇ ಕಷ್ಟಕ್ಕೆ ಸಿಕ್ಕಿದ್ದೇವೆ. ಇನ್ನೂ ಚೇತರಿಸಿಕೊಳ್ಳಲಾಗಿಲ್ಲ. ಕೂಲಿ ಕೆಲಸ ಸಿಗದಿರುವುದು, ಕುಟುಂಬದಲ್ಲಿ ಯಾರಿಗಾದರೂ ಅನಾರೋಗ್ಯ, ಹಬ್ಬ–ಹರಿದಿನದ ಕಾರಣಕ್ಕೆ ಕೆಲವೊಮ್ಮೆ ಸಾಲದ ಕಂತು ಪಾವತಿಸಲು ಆಗುವುದಿಲ್ಲ. ಆದರೆ, ಫೈನಾನ್ಸ್‌ನವರು ಅದ್ಯಾವುದನ್ನೂ ಕೇಳದೆ ವಸೂಲಿಗೆ ನಿಲ್ಲುತ್ತಾರೆ. ಇವರಿಂದ ಸಾಲ ಪಡೆದು ನಾವೀಗ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ರಾಮನಗರ ಜಿಲ್ಲೆಯಲ್ಲಿ ಸಾಲ ಪಡೆದವರು ಹೇಳಿದರು.

ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಪುರದಲ್ಲಿ ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರ ಒತ್ತಡಕ್ಕೆ ಬೆದರಿ ಮನೆ ಖಾಲಿ ಮಾಡಿರುವ ಸಂತ್ರಸ್ತರು

ಹಸುಳೆ, ಬಾಣಂತಿ ಹೊರಹಾಕಿದ ಸಿಬ್ಬಂದಿ:

ಸಾಲ ಮರುಪಾವತಿಸಲು ವಿಳಂಬ ಮಾಡಿದ್ದಕ್ಕೆ ಬೆಳಗಾವಿ ಜಿಲ್ಲೆಯ ನಾಗನೂರು ಪಟ್ಟಣದಲ್ಲಿ ಫೈನಾನ್ಸ್‌ ಪ್ರತಿನಿಧಿಗಳು ಕುಟುಂಬದ ಏಳು ಸದಸ್ಯರನ್ನು ಹೊರಗೆ ಹಾಕಿ, ಮನೆಗೆ ಬೀಗ ಹಾಕಿರುವ ಘಟನೆ ನಡೆದಿದೆ. ಮನೆಯಲ್ಲಿದ್ದ ಹಸಿ ಬಾಣಂತಿ, ಒಂದೂವರೆ ತಿಂಗಳ ಕಂದಮ್ಮ, ಎರಡು ಪುಟಾಣಿ ಮಕ್ಕಳನ್ನೂ ಹೊರಗೆ ಹಾಕಲಾಗಿದೆ.

ರೈತ ಶಂಕರೆಪ್ಪ ಗದ್ದಾಡಿ ಚೆನ್ನೈ ಮೂಲದ ಫೈನಾನ್ಸ್‌ ಕಂಪನಿಯೊಂದರಿಂದ ಹೈನುಗಾರಿಕೆಗೆ ₹5 ಲಕ್ಷ ಸಾಲ ಪಡೆದಿದ್ದರು. ಅದರಲ್ಲಿ ₹3.16 ಲಕ್ಷ ತೀರಿಸಿದ್ದರು. ಸಾಲದ ಹಣದಿಂದ ಖರೀದಿಸಿದ್ದ ಎರಡು ಹಸು, ಎರಡು ಎಮ್ಮೆಗಳು ರೋಗದಿಂದ ಸತ್ತ ಕಾರಣದಿಂದ ಸಾಲ ಪಾವತಿಸಲು ವರ್ಷ ವಿಳಂಬವಾಗಿತ್ತು. ಫೈನಾನ್ಸ್‌ನವರು ಬಡ್ಡಿ, ಚಕ್ರಬಡ್ಡಿ ಸೇರಿಸಿ ₹4.35 ಲಕ್ಷ ಸಾಲದ ಬಾಬ್ತು ಕಟ್ಟುವಂತೆ ಸೂಚಿಸಿದ್ದರು. ಹಣ ಹೊಂದಿಸಲಾಗದೆ ರೈತ ಸಾಲ ಪಾವತಿಸಲು ಆಗಲಿಲ್ಲ. ನ್ಯಾಯಾಲಯದ ಮೂಲಕ ಆದೇಶ ಪಡೆದ ಫೈನಾನ್ಸ್‌ ಸಿಬ್ಬಂದಿ, ಏಕಾಏಕಿ ಎಲ್ಲರನ್ನೂ ಮನೆಯಿಂದ ಹೊರಹಾಕಿದ್ದರು. ಆ ರೈತ ಕುಟುಂಬ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದೆ.

‘ಲಾಡ್ಜ್‌ಗೆ ಬಾ...’:

‘ಸಾಲ ಕಟ್ಟಲಾಗದಿದ್ದರೆ ಲಾಡ್ಜ್‌ಗೆ ಬಾ, ಗಿರಾಕಿಗಳು ಕೊಡುವ ಹಣದಲ್ಲಿ ಸಾಲ ಮರು ಪಾವತಿಸಬಹುದು’ ಎಂದು ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕ ಹಾಗೂ ಸಾಲ ವಸೂಲಿಗಾರರು ಮಾನಹಾನಿ ಮಾಡಿದ್ದಾರೆ ಎಂದು ಮನನೊಂದ ಕಲಬುರ್ಗಿಯ ಮಿಲತ್ ನಗರದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿಯ ಶಹಾಬಾದ್‌ನ ಬಸವೇಶ್ವರ ನಗರದ ಇಮ್ರಾನ್‌ ಲೇಡೀಸ್ ಕಾರ್ನರ್ ಅಂಗಡಿ ತೆರೆಯಲು ಮೈಕ್ರೋ ಫೈನಾನ್ಸ್‌ನಿಂದ ₹40 ಸಾವಿರ ಸಾಲ ಪಡೆದಿದ್ದರು, ಅಂಗಡಿ ಸರಿಯಾಗಿ ನಡೆಯದಿದ್ದಾಗ ಬಂದ್ ಮಾಡಬೇಕಾಯಿತು. ಕೂಲಿ ಮಾಡಿ ಅರ್ಧ ಸಾಲ ತೀರಿಸಿದರೂ ವಸೂಲಿಗಾರರ ಕಾಟ ತಾಳಲಾರದೆ ಊರು ಬಿಟ್ಟು, ಹೈದರಾಬಾದ್‌ನಲ್ಲಿ ಕೆಲಸ ಹುಡುಕಿಕೊಂಡಿದ್ದಾರೆ. ಕೆಲವು ತಿಂಗಳು ಅಲ್ಲಿ ದುಡಿದು ಉಳಿದರ್ಧ ಸಾಲ ತೀರಿಸುತ್ತೇನೆ ಎನ್ನುತ್ತಾರೆ ಇಮ್ರಾನ್.

ನಂಜನಗೂಡು ತಾಲ್ಲೂಕಿನ ಶಿರಮಹಳ್ಳಿ, ಹುಲ್ಲಹಳ್ಳಿ, ಹೆಗ್ಗಡದಹಳ್ಳಿ, ರಾಂಪುರ, ಕುರಿಹುಂಡಿ, ಕಗ್ಗಲೂರು ಗ್ರಾಮಗಳಲ್ಲಿ ಸಾಲದ ಬಾಧೆಯಿಂದ ಹಲವು ಕುಟುಂಬಗಳು ಊರು ಬಿಟ್ಟಿವೆ.

ನ್ಯಾಯಕ್ಕಾಗಿ ಆಗ್ರಹಿಸಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿಯಲ್ಲಿ ಮನವಿ ಸಲ್ಲಿಸಿದ ಮಹಿಳೆಯರು

ಹೇಗೆ ನಡೆಯುತ್ತೆ ‘ಜಾಲ’?:

‘ಹಳ್ಳಿಗಳಿಗೆ ಭೇಟಿ ನೀಡುವ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳನ್ನು ಸಂಪರ್ಕಿಸಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವುದಾಗಿ ಆಸೆ ತೋರಿಸುತ್ತಾರೆ. ವಾಸ್ತವವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಲಿಕೆ ಮಾಡಿದರೆ ಬಡ್ಡಿಯ ದರ ಕಡಿಮೆ ಏನೂ ಇರುವುದಿಲ್ಲ. ಕಂತು ಕಟ್ಟಲಾಗದವರಿಗೆ ಮಾನಸಿಕ ಹಿಂಸೆ ಶುರುಮಾಡುತ್ತಾರೆ. ಬಡ್ಡಿಗೆ ಬಡ್ಡಿ ಬೆಳೆದು ಸಾಲದ ವಿಷವರ್ತುಲದಲ್ಲಿ ಸಿಲುಕಿದವರು ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ, ಊರು ಬಿಟ್ಟು ಹೋಗುವ ಘಟನೆಗಳು ನಡೆಯುತ್ತಿವೆ’ ಎಂದು ವಾಸ್ತವ ತೆರೆದಿಡುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಮಳವಳ್ಳಿ ತಾಲ್ಲೂಕು ಕಾರ್ಯದರ್ಶಿ ಎನ್.ಲಿಂಗರಾಜ ಮೂರ್ತಿ. 

ಬೆಳಗಾವಿ ತಾಲ್ಲೂಕಿನ ಹಾಲಭಾವಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ವೊಂದು ₹100 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಪ್ರಕರಣ ಈಚೆಗೆ ಬಯಲಾಗಿದ್ದು, ಫೈನಾನ್ಸ್‌ಗಳಲ್ಲಿ ಸಾಲ ಪಡೆದಿರುವ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯಮನಾಪುರ ಗ್ರಾಮದಲ್ಲಿ ನಾಲ್ವರು ಮಹರ್ಷಿ ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘ ರಚಿಸಿ ಬೆಳಗಾವಿ, ಬೈಲಹೊಂಗಲ, ಗೋಕಾಕ, ಯಮಕನಮರಡಿ ಸೇರಿದ ಹತ್ತಾರು ಹಳ್ಳಿಗಳ 7,000ಕ್ಕೂ ಹೆಚ್ಚು ಮಹಿಳೆಯರ ಆಧಾರ್‌, ರೇಷನ್ ಕಾರ್ಡ್, ಫೋಟೊ ದಾಖಲೆ ಪಡೆದು ₹ 200 ಕೋಟಿ ಸಾಲ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಸಾಲದಲ್ಲಿ ಅರ್ಧ ಮಾತ್ರ ಮಹಿಳೆಯರಿಗೆ ಕೊಟ್ಟಿರುವ ಆರೋಪ ಇದ್ದು ಉಳಿದ ಹಣವನ್ನು ಮಹಿಳೆಯರಿಗೆ ನೀಡಿಲ್ಲ .

ಹಣ ಪಡೆದ ಆರೋಪಿಗಳು ತಲೆ ಮರೆಸಿಕೊಂಡಾಗ ಸಾಲ ನೀಡಿದ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಮಹಿಳೆಯರ ಮನೆಗೆ ಬಂದು ಪೀಡಿಸಲು ಶುರುಮಾಡಿದಾಗ ಕಂಗಾಲಾದ ಮಹಿಳೆಯರು ಆರೋಪಿಗಳ ವಿರುದ್ಧ ಜನವರಿ 6ರಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಧನಕ್ಕೆ ಒಳಗಾದ ಒಂದೇ ದಿನದಲ್ಲಿ ಆರೋಪಿಗಳು ಜಾಮೀನು ಮೇಲೆ ಹೊರಬಂದಿದ್ದಾರೆ. ಆದರೆ, ಸಾಲದ ಹೊರೆ ಹೊತ್ತ ಮಹಿಳೆಯರಿಗೆ ಮಾತ್ರ ತಲೆಮರೆಸಿಕೊಂಡು ಓಡಾಡುವ ಸ್ಥಿತಿ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಅವ್ಯಾಹತವಾಗಿದ್ದು ಬಡ ರೈತರು, ಮೀನು ಮಾರಾಟಗಾರರು, ಕೂಲಿಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಾರವಾರ, ಅಂಕೋಲಾ ಸೇರಿ ವಿವಿಧೆಡೆ ದಿನದ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ₹1 ಸಾವಿರ ಸಾಲಕ್ಕೆ ನಿತ್ಯ ₹100 ಬಡ್ಡಿ. ಒಂದು ದಿನ ವಿಳಂಬವಾದರೂ ದುಪ್ಪಟ್ಟು ಪಾವತಿಸಬೇಕು.

ಮುಂಡಗೋಡ ತಾಲ್ಲೂಕಿನಲ್ಲಿ ಅನಧಿಕೃತ ಬಡ್ಡಿ ವ್ಯವಹಾರದ ದೂರುಗಳ ಕಾರಣದಿಂದ ಪೊಲೀಸರು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಬಡ್ಡಿ, ಸಾಲ ತೀರಿಸಲಾಗದ ವ್ಯಕ್ತಿಯೊಬ್ಬರ ಬೈಕ್ ಜಪ್ತಿ ಮಾಡಿ ಬೆದರಿಕೆ ಹಾಕಿದ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗೆ ಕಿರುಕುಳ ನೀಡಿದ ಪ್ರಕರಣಗಳ ಪಟ್ಟಿ ಸಾಗುತ್ತಾ ಹೋಗುತ್ತದೆ.

ಕರಾವಳಿಯಲ್ಲೂ ಸಕ್ರಿಯ:‌

ಕರಾವಳಿಯಲ್ಲಿ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಹೆಚ್ಚಾಗಿದ್ದು ಸಣ್ಣ ಹಣಕಾಸು ಸಂಸ್ಥೆಗಳಿಂದ ಶೇ 40ರ ವರೆಗೂ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ.

ಮಂಗಳೂರು ನಗರದ ಯುವತಿ ಲೋನ್ ಆ್ಯಪ್‌ನಲ್ಲಿ ₹10 ಸಾವಿರ ಸಾಲಕ್ಕೆ ಅರ್ಜಿ ಹಾಕಿದರೆ ಅವರಿಗೆ ಬಡ್ಡಿ ಕಡಿತಗೊಳಿಸಿ ನೀಡಿದ್ದು ₹7,500. ಸಾಲ ಮರುಪಾವತಿ ಮಾಡಿದ ಬಳಿಕವೂ ಯುವತಿಯ ಮುಖವನ್ನು ನಗ್ನ ಚಿತ್ರಕ್ಕೆ ಜೋಡಿಸಿ ಬಹಿರಂಗಗೊಳಿಸುವ ಬೆದರಿಕೆಯೊಡ್ಡಿ ₹51 ಸಾವಿರ ಹಣ ಕೀಳಲಾಗಿದೆ. ವಂಚನೆ ಸಂಬಂಧ ಯುವತಿ ನಗರದ ಸೆನ್ ಕ್ರೈಂ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪರ– ವಿರೋಧ ಅಭಿಪ್ರಾಯ:

ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಪುರ ಹಾಗೂ ದೇಶವಳ್ಳಿಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರಕುಳದಿಂದ ಗ್ರಾಮಸ್ಥರು ಊರು ಬಿಟ್ಟಿದ್ದಾರೆ ಎಂಬ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಬಳಿಕ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ.

‘ಘಟನೆ ಬಳಿಕ ಉಭಯ ಗ್ರಾಮದವರಿಗೆ ಮೈಕ್ರೋ ಫೈನಾನ್ಸ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಾಗದವರು ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಮರುಪಾವತಿ ಸಾಮರ್ಥ್ಯ ಮೀರಿ ಸಾಲ ಮಾಡಿದವರು ಮಾತ್ರ ಸಮಸ್ಯೆಗೆ ಸಿಲುಕಿದ್ದಾರೆ’ ಎಂದು ಗ್ರಾಮದ ಕೆಲವು ಮುಖಂಡರು ಅಭಿಪ್ರಾಯಪಟ್ಟರು.

ಸಾಲ ಪಡೆದವರು ಮರುಪಾವತಿ ಮಾಡಲೇಬೇಕು. ಆದರೆ ಮಹಿಳೆಯರಿಗೆ ನಿಂದಿಸುವುದು, ದೌರ್ಜನ್ಯ ನಡೆಸುವುದು, ವಸೂಲಿ ಮಾಡಲು ಹಲ್ಲೆ ನಡೆಸುವುದು ತರವಲ್ಲ. ಸಾಲ ಪಡೆದು ಕೃಷಿ ಉತ್ಪನ್ನ ವಹಿವಾಟು ನಡೆಸಿ ನಷ್ಟವಾದರೆ ವಿಮೆ ರಕ್ಷಣೆ ಬೇಕು ಎನ್ನುವ ಆಗ್ರಹ ಹಲವು ಗ್ರಾಮಗಳ ಹಿರಿಯರದ್ದಾಗಿದೆ.

ವಸೂಲಾತಿ ವಿಧಾನ... 

*ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಸಾಲ ಮರುಪಾವತಿ ಮಾಡಬೇಕು

*ವಸೂಲಿಗಾಗಿ ಊರಿಗೆ ಬರುವ ಸಣ್ಣ ಫೈನಾನ್ಸ್‌ ಪ್ರತಿನಿಧಿಗಳು

*ಸಾಲದ ಕಂತನ್ನು ಸರಿಯಾಗಿ ಪಾವತಿಸದಿದ್ದರೆ ದಂಡ

*ಸಾಲ ಕಟ್ಟದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ಬೆದರಿಕೆ

*ಸಾಲ ವಸೂಲಾತಿಗೆ ಕಟ್ಟುಮಸ್ತಾದ ಯುವಕರ ನೇಮಕ 

ನಿಯಮಗಳು ಏನು ಹೇಳುತ್ತವೆ...

ಸಾರ್ವಜನಿಕರ ಅಗತ್ಯತೆಗಳಿಗೆ ಅನುಗುಣವಾಗಿ ಹಲವು ಪ್ರಕಾರಗಳ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ)ಗಳು ಸಾಲ ವಿತರಿಸುತ್ತಿದ್ದು ಅವುಗಳಲ್ಲಿ ಮೈಕ್ರೋ ಫೈನಾನ್ಸ್ ಕೂಡ ಒಂದು. ಮೈಕ್ರೋ ಫೈನಾನ್ಸ್‌ಗಳು ಕಡಿಮೆ ಆದಾಯ ಹೊಂದಿರುವವನ್ನು ಗುರಿಯಾಗಿಸಿ ಸಣ್ಣ ಪ್ರಮಾಣದ ಸಾಲ ವಿತರಿಸುತ್ತವೆ. ಸಾಲ ವಿತರಣೆಗೂ ಮುನ್ನ ಕಂಪೆನಿ ಕಾಯ್ದೆಯಡಿ ನೋಂದಣಿ ಮಾಡಿಕೊಂಡು ಆರ್‌ಬಿಐನಿಂದ ಸಾಲ ವಿತರಣೆಗೆ ಕಡ್ಡಾಯವಾಗಿ ಪರವಾನಗಿ ಪಡೆದಿರಬೇಕು. ಸಾಲ ವಿತರಣೆ ಹಾಗೂ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಗ್ರಾಹಕರೊಂದಿಗೆ ನ್ಯಾಯಯುತ ವ್ಯವಹಾರ ನಡೆಸಬೇಕು ಎನ್ನುತ್ತವೆ ನಿಯಮಗಳು.

ಮೈಕ್ರೋ ಫೈನಾನ್ಸ್‌ಗಳು ಆರ್‌ಬಿಐ ನಿಯಂತ್ರಣಗಳಿಗೆ ಒಳಪಡುವುದಿಲ್ಲ. ಕೈಗಾರಿಕಾ ಕಾಯ್ದೆಯ ನೀತಿಸಂಹಿತೆಗೊಳಪಟ್ಟು ರಚನೆಯಾಗಿರುವ ಸ್ವಯಂ ನಿಯಂತ್ರಣ ಸಂಘಟನೆಯಾಗಿರುವ ಮೈಕ್ರೋ ಫೈನಾನ್ಸ್‌ ಇಂಡಸ್ಟ್ರಿ ನೆಟ್‌ವರ್ಕ್ ಅಡಿ ಮೈಕ್ರೋ ಫೈನಾನ್ಸ್‌ಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಸಾಲ ವಿತರಣೆ ಮಾಡುವಾಗ ಆರ್‌ಬಿಐ ನಿಗದಿಪಡಿಸಿರುವ ಬಡ್ಡಿಯ ಮಾನದಂಡ ಅನುಸರಿಸಬೇಕು.

ಸಾಲ ವಸೂಲಾತಿ ಪ್ರಕ್ರಿಯೆಗೆ ಅಗತ್ಯಬಿದ್ದರೆ ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅವಕಾಶ ಇದ್ದರೂ ಸಾಲ ವಸೂಲಾತಿ ಸಿಬ್ಬಂದಿಗೆ ಸಾಲ ವಸೂಲು ಮಾಡುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಕಡ್ಡಾಯವಾಗಿ ತರಬೇತಿ ನೀಡಿರಬೇಕು.

ಬಲವಂತದಿಂದ ಸಾಲ ವಸೂಲಾತಿ ಮಾಡುವಂತಿಲ್ಲ. ಸಾಲ ಪಡೆದವರು ಅಥವಾ ಕುಟುಂಬ ಸದಸ್ಯರು ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದರೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು, ಅಗತ್ಯವಿದ್ದರೆ ಹೆಚ್ಚುವರಿ ಸಾಲ ನೀಡಬೇಕು. ಆಗಲೂ ಸಾಲ ಮರುಪಾವತಿ ಮಾಡದಿದ್ದರೆ ಅಂತಹ ಸಾಲವನ್ನು ‘ವಸೂಲಾಗದ ಸಾಲ’ದ ಪಟ್ಟಿಗೆ ಸೇರಿಸಬೇಕು.

ಸಾಲ ಪಡೆದವರು ಆರ್ಥಿಕವಾಗಿ ಶಕ್ತರಾಗಿದ್ದು ಉದ್ದೇಶಪೂರ್ವಕವಾಗಿ ಮರುಪಾವತಿ ಮಾಡದಿದ್ದರೆ ಅಂಥವರಿಗೆ ಸಾಲ ಕಟ್ಟುವಂತೆ ಹಲವು ಬಾರಿ ಸೂಚನೆ ನೀಡಬಹುದು. ಅಡಮಾನ ರಹಿತ ಸಾಲ ನೀಡಿರುವುದರಿಂದ ಮೈಕ್ರೋ ಫೈನಾನ್ಸ್‌ಗಳು ವಸೂಲಾಗದ ಸಾಲ ಎಂದೇ ಪರಿಗಣಿಸಬೇಕಾಗುತ್ತದೆ ಎನ್ನುತ್ತವೆ ನಿಯಮಗಳು.

‘ಕಿಡ್ನಿ ಮಾರುತ್ತೇನೆ, ಅವಕಾಶ ಕೊಡಿ’

ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಪುರ ಗ್ರಾಮದ ಬಾಲಕನೊಬ್ಬ, ಪೋಷಕರ ಪಡೆದಿದ್ದ ಸಾಲ ತೀರಿಸಲು ಮೂತ್ರಪಿಂಡ ಮಾರಾಟ ಮಾಡುವುದಾಗಿ ಹೇಳಿಕೆ ನೀಡಿ ಸಮಸ್ಯೆಯ ಗಂಭೀರತೆ ತೆರೆದಿಟ್ಟಿದ್ದಾನೆ.

‘ಮೈಕ್ರೋ ಫೈನಾನ್ಸ್‌ವೊಂದರಲ್ಲಿ ಪರಿಚಿತರಿಗೆ ಸಾಲ ಕೊಡಿಸಿರುವ ಪೋಷಕರು ಕಂತು ಕಟ್ಟಲಾಗದೆ ನಿತ್ಯ ಕಿರುಕುಳ ಅನುಭವಿಸುತ್ತಿದ್ದು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ. ಅವರಿಲ್ಲದೆ ಬದುಕುವ ಶಕ್ತಿ ಇಲ್ಲ. ಸರ್ಕಾರ ಒಂದು ಕಿಡ್ನಿ ಮಾರಾಟ ಮಾಡಲು ಅವಕಾಶ ಕೊಟ್ಟರೆ ಎಲ್ಲ ಸಾಲವನ್ನೂ ತೀರಿಸಿಬಿಡುತ್ತೇನೆ’ ಎಂದು ಬಾಲಕ ಹೇಳಿದ್ದಾನೆ. ಇದರಿಂದ ವಸೂಲಾತಿದಾರರ ದೌರ್ಜನ್ಯ ತೀವ್ರತೆ ಅರಿವಾಗುತ್ತಿದೆ.

ಇದೇ ರೀತಿ ತಾಲ್ಲೂಕಿನ ದೇಶವಳ್ಳಿ ಹಾಗೂ ಹೆಗ್ಗವಾಡಿಪುರ ಗ್ರಾಮದ ಶೋಭಾ, ಸುಮಾ, ನಾಗಮ್ಮ ಮೈಕ್ರೋ ಫೈನಾನ್ಸ್‌ ಪ್ರತಿನಿಧಿಗಳ ಒತ್ತಡ ತಾಳಲಾರದೆ ಊರು ತೊರೆದಿರುವ ಮಾಹಿತಿ ಜಿಲ್ಲಾಡಳಿತಕ್ಕೆ ತಹಶೀಲ್ದಾರ್‌ ಸಲ್ಲಿರುವ ವರದಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ವಿಳಾಸ ಪತ್ತೆಯಾಗಬಹುದು ಎಂಬ ಭಯದಲ್ಲಿ ನಾಪತ್ತೆಯಾದವರು ಮಾಧ್ಯಮದವರ ಜೊತೆ ಮಾತನಾಡಲು ನಿರಾಕರಿಸಿದ್ದು, ಮತ್ತೆ ಊರಿಗೆ ಬರಲೂ ಹಿಂದೇಟು ಹಾಕುತ್ತಿದ್ದಾರೆ.

ಆತ್ಮಹತ್ಯೆ ಪ್ರಕರಣಗಳು 

*ತುಮಕೂರು ಜಿಲ್ಲೆಯ ತಿಪಟೂರಿನ ಭೋವಿ ಕಾಲೋನಿಯ ನಿವಾಸಿ ಸಾದೀಕ್‌ ಬೇಗಂ (42) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮೈಕ್ರೋ ಫೈನಾನ್ಸ್‌ನವರ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು

*ಮಂಡ್ಯ ಜಿಲ್ಲೆ ಮಳವಳ್ಳಿಯ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಮಲಿಯೂರು ಗ್ರಾಮದಲ್ಲಿ ಕಂತಿನ ಹಣ ಕಟ್ಟುವುದು ತಡವಾಯಿತು ಎಂದು ಸಾಲ ವಸೂಲಾತಿ ಏಜೆಂಟರು ನಿಂದಿಸಿದ್ದ ಕಾರಣಕ್ಕೆ ಮಹಿಳೆಯೊಬ್ಬರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

*ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರ ಹಿಂದೆ, ಮೈಕ್ರೋಫೈನಾನ್ಸ್ ಸಾಲ ವಸೂಲಿಯ ಒತ್ತಡ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

*ಬಾಗಲಕೋಟೆಯಲ್ಲಿ ಖಾಸಗಿ ಫೈನಾನ್ಸ್‌ ಸಿಬ್ಬಂದಿ ಸಾಲ ವಸೂಲಾತಿ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ, ಹಲ್ಲೆ, ನಿಂದನೆ ಮಾಡಿದ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

*ಹಾವೇರಿ ಜಿಲ್ಲೆಯ ತಡಸ ಗ್ರಾಮದಲ್ಲಿ ಫೈನಾನ್ಸ್‌ನವರ ಒತ್ತಡದಿಂದ ಬೇಸತ್ತು ಮಹಮ್ಮದ್‌ ಸಾಹೀದ್ ಮೌಲಾಸಾಬ ಮೀಟಾಯಿಗಾರ (37) ಆತ್ಮಹತ್ಯೆ ಮಾಡಿದ್ದಾರೆ.

ಸಹಾಯವಾಣಿ ಆರಂಭ

ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಖಾಸಗಿ ಫೈನಾನ್ಸ್‌ಗಳು ಸಂಘ-ಸಂಸ್ಥೆಗಳು, ಮೈಕ್ರೋ ಫೈನಾನ್ಸ್ ಗಳು ಹಾಗೂ ಇತರೆ ಬ್ಯಾಂಕ್‍ಗಳ ಸಾಲ ವಸೂಲಾತಿ ಪ್ರತಿನಿಧಿಗಳು ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ನೀಡಿದರೆ ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ 08226-223160 ಹಾಗೂ ವಾಟ್ಸ್‌ ಆ್ಯಪ್ ಸಂಖ್ಯೆ 9740942901, ಇ ಮೇಲ್- ffmcchamarajanagar@gmail.com ಮತ್ತು ಪೊಲೀಸ್ ಕಂಟ್ರೋಲ್ ರೂಂ 9480804600ಗೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಪೂರಕ ಮಾಹಿತಿ: ಜಿಲ್ಲಾ ವರದಿಗಾರರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.