ADVERTISEMENT

ಬದುಕು ಕಸಿದ ಒತ್ತುವರಿ...!

ಪ್ರವಾಹ

ಜೋಮನ್ ವರ್ಗಿಸ್
Published 17 ಆಗಸ್ಟ್ 2019, 20:28 IST
Last Updated 17 ಆಗಸ್ಟ್ 2019, 20:28 IST
ಬೆಣ್ಣೆಹಳ್ಳದ ಪ್ರವಾಹದಿಂದ ಸಂಪೂರ್ಣವಾಗಿ ಜಲಾವೃತಗೊಂಡಿರುವ ಮನೆಯನ್ನು ತೋರಿಸುತ್ತಿರುವ ಹೊಳೆಆಲೂರಿನ ಗ್ರಾಮಸ್ಥ- ಪ್ರಜಾವಾಣಿ ಚಿತ್ರ/ಬನೇಶ ಕುಲಕರ್ಣಿ
ಬೆಣ್ಣೆಹಳ್ಳದ ಪ್ರವಾಹದಿಂದ ಸಂಪೂರ್ಣವಾಗಿ ಜಲಾವೃತಗೊಂಡಿರುವ ಮನೆಯನ್ನು ತೋರಿಸುತ್ತಿರುವ ಹೊಳೆಆಲೂರಿನ ಗ್ರಾಮಸ್ಥ- ಪ್ರಜಾವಾಣಿ ಚಿತ್ರ/ಬನೇಶ ಕುಲಕರ್ಣಿ   

ಗದಗ: ಅಧಿಕಾರಿಯೊಬ್ಬರು ದಶಕದ ಹಿಂದೆ ನೀಡಿದ್ದ ಸಲಹೆಯನ್ನು ಪಾಲಿಸಿದ್ದರೆ ಮೊನ್ನೆ ಸಂಭವಿಸಿದ ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಪ್ರವಾಹದಲ್ಲಿ ಜಿಲ್ಲೆಯ 27 ಗ್ರಾಮಗಳು ಜಲಾವೃತಗೊಳ್ಳುತ್ತಿರಲಿಲ್ಲ!

ಹೌದು. 2009ರಲ್ಲಿ ಜಿಲ್ಲೆಯಲ್ಲಿ ಪ್ರವಾಹ ಉಂಟಾದಾಗ 13 ಹಳ್ಳಿಗಳು ಜಲಾವೃತಗೊಂಡಿದ್ದವು. ಪ್ರವಾಹ ಇಳಿದು, ಪುನರ್ವಸತಿ ಕಾರ್ಯ ಪ್ರಾರಂಭಗೊಂಡಾಗ ಈ ಗ್ರಾಮಗಳನ್ನು ಸ್ಥಳಾಂತರಿಸಿ, ‘ಆಸರೆ’ ಮನೆಗಳನ್ನು ನಿರ್ಮಿಸಲು ಸ್ಥಳೀಯ ಶಾಸಕರು ಪಟ್ಟು ಹಿಡಿದಿದ್ದರು. ಆದರೆ, ಮನೆಗಳನ್ನು ನಿರ್ಮಿಸುವ ಬದಲು, ಹಳ್ಳ ಮತ್ತು ನದಿ ದಂಡೆಗುಂಟ ಒತ್ತುವರಿ ತೆರವುಗೊಳಿಸಿ, ನೀರು ಸುಲಭವಾಗಿ ಹರಿದುಹೋಗಲು ಅವಕಾಶ ಮಾಡಿಕೊಟ್ಟು, ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಂದಿನ ಗದಗ ಉಪವಿಭಾಗಾಧಿಕಾರಿ ಸಿ.ಶಿಖಾ ಸಲಹೆ ಕೊಟ್ಟಿದ್ದರು.

ಆದರೆ, ರಾಜಕೀಯ ಮೇಲಾಟದಲ್ಲಿ ಈ ಸಲಹೆ ಹಿನ್ನೆಲೆಗೆ ಸರಿದಿತ್ತು. ಒಟ್ಟು 6,575 ಆಸರೆ ಮನೆಗಳು ನಿರ್ಮಾಣವಾದವು. ಎಲ್ಲರಿಗೂ ಹಕ್ಕುಪತ್ರ ವಿತರಿಸಿ ಜನಪ್ರತಿನಿಧಿಗಳು ಕೈತೊಳೆದುಕೊಂಡರು. ಆದರೆ, ಈ ‘ನವ ಗ್ರಾಮ’ಗಳು ಮೂಲ ಗ್ರಾಮದಿಂದ 8ರಿಂದ 10 ಕಿ.ಮೀ ದೂರದಲ್ಲಿವೆ. ಮನೆಗಳು ಕಿರಿದಾಗಿವೆ, ಸಮರ್ಪಕ ಮೂಲಸೌಕರ್ಯ ಇಲ್ಲ. ಜಮೀನು, ಜಾನುವಾರುಗಳನ್ನು ಬಿಟ್ಟು ಇಲ್ಲಿ ನೆಲೆಸಲು ಆಗುವುದಿಲ್ಲ ಎಂದು ಶೇ 90ರಷ್ಟು ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲೇ ಉಳಿದುಕೊಂಡರು. ಕೇವಲ 568 ಕುಟುಂಬಗಳು ಮಾತ್ರ ಸ್ಥಳಾಂತರಗೊಂಡಿದ್ದವು.

ADVERTISEMENT

ಅಧಿಕಾರಿ ನೀಡಿದ್ದ ಸಲಹೆ ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿಯೂ ನಂತರದ ದಿನ ಗಳಲ್ಲಿ ಕಂಡುಬರಲಿಲ್ಲ. ಹೀಗಾಗಿ ಒತ್ತುವರಿ ಮತ್ತೆ ಹೆಚ್ಚಿತು. ನದಿಪಾತ್ರ ಕಿರಿದಾಯಿತು. ಮೊನ್ನೆ ಪ್ರವಾಹ ಸಂಭವಿಸಿದಾಗ, ಮಲಪ್ರಭಾ ಮತ್ತು ಬೆಣ್ಣೆಹಳ್ಳ ಪಾತ್ರ ಬದಲಿಸಿ ಹರಿದವು. ಒಟ್ಟು 6,172 ಹೆಕ್ಟೇರ್‌ ಪ್ರದೇಶದ ಬೆಳೆ ನೀರಿನಲ್ಲಿ ಮುಳುಗಿತು. ಹಾಗೆ ನೋಡಿದರೆ, ಬೆಣ್ಣೆಹಳ್ಳ ಜಿಲ್ಲೆಯ ಮೂಲಕ ಹರಿದಿರುವುದು ಕೇವಲ 22 ಕಿ.ಮೀ. ಮಲಪ್ರಭಾ ನದಿ ಹರಿದಿರುವುದು 30ರಿಂದ 35 ಕಿ.ಮೀ ಮಾತ್ರ. ಆದರೆ, ಇವರೆಡೂ ಜಿಲ್ಲೆಯಲ್ಲಿ ಪ್ರತಿ ವರ್ಷ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಆಪೋಶನ ತೆಗೆದುಕೊಳ್ಳುತ್ತವೆ. 25ರಿಂದ 30 ಗ್ರಾಮಗಳು ಜಲಾವೃತಗೊಳ್ಳುತ್ತವೆ.

‘ಒತ್ತುವರಿ ತೆರವು ಮಾಡದ ಕಾರಣ ಪ್ರತಿ ಬಾರಿ ಪ್ರವಾಹ ಬಂದಾಗಲೂ ಸಂತ್ರಸ್ತರ ಸಂಖ್ಯೆ ಏರುತ್ತಲೇ ಇದೆ. ಸರ್ಕಾರ ಪರಿಹಾರ ಕಾರ್ಯಕ್ಕೆ ಬಳಸುವ ಮೊತ್ತದಲ್ಲಿ ನಾಲ್ಕನೆಯ ಒಂದು ಭಾಗದಷ್ಟು ಖರ್ಚು ಮಾಡಿದರೂ ಸಾಕು, ಒತ್ತುವರಿ ತೆರವು ಮಾಡಬಹುದು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸ್ಥಳಾಂತರಕ್ಕೆ ಆಗ್ರಹ

ಮಲಪ್ರಭಾ ಪ್ರವಾಹ ಇಳಿದು ವಾರ ಕಳೆದರೂ ನರಗುಂದ ತಾಲ್ಲೂಕಿನ ಕೊನೆಯ ಹಳ್ಳಿ ಲಕಮಾಪುರಕ್ಕೆ ಹೋಗಲು ಗ್ರಾಮಸ್ಥರಿಗೆ ಸಾಧ್ಯವಾಗುತ್ತಿಲ್ಲ. ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆ ಸರಿ ಮಾಡಿದರೂ ಗ್ರಾಮಸ್ಥರು ಇಲ್ಲಿ ನೆಲೆಸಲು ಸಾಧ್ಯವಾಗದಂತಹ ಸ್ಥಿತಿ ಇದೆ. 2009ರ ಪ್ರವಾಹದ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮನವೊಲಿಸಿದರೂ ಗ್ರಾಮಸ್ಥರು ಒಪ್ಪಿರಲಿಲ್ಲ. ಈಗ ನಮ್ಮನ್ನು ಹೇಗಾದರೂ ಸ್ಥಳಾಂತರ ಮಾಡಿ ಎಂದು ಗ್ರಾಮಸ್ಥರೇ ಜಿಲ್ಲಾಡಳಿತಕ್ಕೆ ಮೊರೆಯಿಡುತ್ತಿದ್ದಾರೆ.

ದನ– ಕುರಿ ವಾಸ್ತವ್ಯ

ರಾಯಚೂರು: ಮಾನ್ವಿ ತಾಲ್ಲೂಕಿನ ಮರಕಂದಿನ್ನಿ ಗ್ರಾಮದಲ್ಲಿನ ಆಸರೆ ಮನೆಗಳನ್ನು ದನ ಕಟ್ಟಲು ಹಾಗೂ ಕುರಿ ಸಾಕಣೆಗೆ ಬಳಸಲಾಗುತ್ತಿದೆ. ಮೂಲಸೌಲಭ್ಯಗಳು ಇಲ್ಲದ ಕಾರಣಕ್ಕೆ ಸ್ಥಳೀಯರು ಈ ರೀತಿ ಮಾಡುತ್ತಿದ್ದಾರೆ. ಮಾನ್ವಿ ತಾಲ್ಲೂಕಿನ ಚೀಕಲಪರವಿ ಗ್ರಾಮದ ಸ್ಥಳಾಂತರಕ್ಕಾಗಿ ನಿರ್ಮಿಸಲಾದ ಆಸರೆ ಮನೆಗಳು ಇನ್ನೂ ಹಂಚಿಕೆಯಾಗಿಲ್ಲ. 009ರಲ್ಲಿ ಜಿಲ್ಲೆಯಲ್ಲಿ 11,133 ಮನೆ ನಿರ್ಮಿಸಲಾಗಿದೆ. 30 ಗ್ರಾಮಗಳು ಸ್ಥಳಾಂತರವಾಗಿವೆ. ಮಾತಾ ಅಮೃತಾನಂದಮಯಿ, ಇನ್ಫೊಸಿಸ್, ಸಿದ್ಧಗಂಗಾ ಮಠ ಸೇರಿ ಕೆಲ ಮಠ
ಮಾನ್ಯಗಳಿಂದ ನಿರ್ಮಿಸಿದ್ದ ಮನೆಗಳು ಸುಸಜ್ಜಿತವಾಗಿವೆ. ಜನರೂ ಸ್ಥಳಾಂತರವಾಗಿದ್ದಾರೆ.

* ಆಸರೆ ಮನೆಗಳನ್ನು ಈ ಹಿಂದೆ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಸದಸ್ಯರ ಶಿಫಾರಸ್ಸಿನ ಮೇರೆಗೆ ಹಂಚಿಕೆ ಮಾಡಲಾಗಿದೆ. ರಾಜಕೀಯ ಕಾರ್ಯತಂತ್ರದಲ್ಲಿ ದುರ್ಬಲರಿಗೆ ಸೂರು ಸಿಕ್ಕಿಲ್ಲ. ಹೀಗಾಗಿ ಮನೆಗಳನ್ನು ಮರು ಹಂಚಿಕೆ ಮಾಡಬೇಕು.

- ಬಸವರಾಜ ಹಂಚಿನಾಳ, ಗಾಡಗೋಳಿ ಗ್ರಾಮದ ಸಂತ್ರಸ್ತ

*ಆಗ ಮೈಮರೆಯದೇ ಸರ್ಕಾರ, ಆಸರೆ ಕಾಲೊನಿಗಳ ಎಲ್ಲ ಓರೆ– ಕೋರೆಗಳನ್ನು ಸರಿಪಡಿಸಿ ಸಂತ್ರಸ್ತರು ಅಲ್ಲಿ ನೆಲೆಸುವಂತೆ ಮಾಡಿದ್ದರೆ ಈ ಬಾರಿ ಲಕ್ಷಾಂತರ ಮಂದಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತಿರಲಿಲ್ಲ

- ಗವಿಸಿದ್ದಪ್ಪ ಹೊಸಮನಿ, ಸಾಮಾಜಿಕ ಹೋರಾಟಗಾರ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.