ADVERTISEMENT

ಒಳನೋಟ | ‘ಗಂಗಾ ಕಲ್ಯಾಣ’ದಲ್ಲಿ ಯಾರೋ ಫಲಾನುಭವಿ, ಇನ್ಯಾರಿಗೋ ಸೌಕರ್ಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 3:21 IST
Last Updated 7 ಆಗಸ್ಟ್ 2022, 3:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ’2018ರಲ್ಲಿ ಗಂಗಾಕಲ್ಯಾಣಯೋಜನೆಗೆ ನನ್ನನ್ನು ಆಯ್ಕೆ ಮಾಡಲಾಗಿತ್ತು. ಕಾರ್ಯಾದೇಶ ಪತ್ರವನ್ನೂ ನೀಡಲಾಗಿತ್ತು. ಆದರೆ, ಮುಂದೊಂದು ದಿನ ನನಗೆ ಬಂದ ಬೋರ್‌ವೆಲ್‌ ರದ್ದಾಗಿ, ಬೇರೊಬ್ಬರಿಗೆ ಹೋಗಿದೆ ಎಂದು ತಿಳಿಸಿದರು. ಇದಕ್ಕೆ ಯಾರು ಕಾರಣ, ಯಾರನ್ನು ಕೇಳಬೇಕು, ಎಲ್ಲಿಗೆ ಹೋಗಬೇಕು ಎಂದು ನನಗೆ ಗೊತ್ತಿಲ್ಲ. ಹಾಗಾಗಿ, ಕೈಚೆಲ್ಲಿ ಸುಮ್ಮನಿದ್ದೇನೆ...’–ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಂಗಪ್ಪ ಆದಪ್ಪ ಮಕ್ಕಣ್ಣವರ ನೋವಿದು.

ಭೂ ಒಡೆತನ, ಗಂಗಾ ಕಲ್ಯಾಣ, ಐರಾವತ ಹಾಗೂ ವಿವಿಧ ಸ್ವಯಂ ಉದ್ಯೋಗ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಹಲವು ಕಡೆ ಇಂಥ ಉದಾಹರಣೆಗಳಿವೆ. ಆರಂಭದ ಫಲಾನುಭವಿ ಒಬ್ಬರಾದರೆ ಸೌಲಭ್ಯ ಮುಟ್ಟುವುದು ಇನ್ನೊಬ್ಬರಿಗೆ.

‘ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಯೊಬ್ಬರು 2019ರಲ್ಲಿ ಕೊಳವೆಬಾವಿ ಕೊರೆಯಿಸಿದ್ದರು. ಅವರಿಗೆ ವಿದ್ಯುತ್‌ ಸಂಪರ್ಕ ಹಾಗೂ ಪರಿಕರಗಳು 2022ರಲ್ಲಿ ಬಂದಿವೆ. ಹೀಗೆ ತಡವಾಗುವುದರಿಂದ ಕೆಲವರು ಯೋಜನೆಗೆ ಆಯ್ಕೆಯಾಗಿದ್ದನ್ನೇ ಮರೆತಿದ್ದಾರೆ. ರೈತರು ಇಂಥ ಸಮಸ್ಯೆಗಳೊಂದಿಗೆ ಬರುತ್ತಾರೆ. ಆದರೆ, ಫಲಾನುಭವಿಗಳನ್ನು ಶಾಸಕರೇ ಆಯ್ಕೆ ಮಾಡುವುದರಿಂದ ನಾವೂ ಅಸಹಾಯಕರಾಗಿದ್ದೇವೆ’ ಎಂದುರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನವರ ಹೇಳುತ್ತಾರೆ.

ರೈತರು ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೂ, ಯೋಜನೆ ಮಂಜೂರು ಮಾಡುತ್ತಿಲ್ಲ. ಶಾಸಕರು ಯಾರ ಹೆಸರು ಹೇಳುತ್ತಾರೆ ಎಂಬುದು ಮುಖ್ಯವೇ ಹೊರತು; ನಿಜವಾದ ಫಲಾನುಭವಿ ಅಲ್ಲ.

‘ಪರಿಶಿಷ್ಟ ಜಾತಿಯವರ ಅಭಿವೃದ್ಧಿಗೆ ನಿಗಮಗಳಿದ್ದರೂ, ಆ ಸಮುದಾಯದವರು ಅಂಬೇಡ್ಕರ್ ನಿಗಮದ ಸೌಲಭ್ಯಗಳನ್ನು ಪಡೆಯುವುದು ನಡೆದಿದೆ. ಬಹುಪಾಲು ಎಲ್ಲ ಅಭಿವೃದ್ಧಿ ನಿಗಮಗಳೂ ‘ಕೆಲವರ ಸ್ವತ್ತು’ ಎಂಬಂತಾಗಿವೆ’ ಎನ್ನುವುದು ಹುಬ್ಬಳ್ಳಿಯ ಪ್ರೇಮನಾಥ ಚಿಕ್ಕತುಂಬಳ ಮತ್ತು ಗುರುನಾಥ ಉಳ್ಳಿಕಾಶಿ ಬೇಸರ ವ್ಯಕ್ತಪಡಿಸುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಧಾರವಾಡ ಜಿಲ್ಲಾ ವ್ಯವಸ್ಥಾಪಕಿ ಪ್ರಿಯದರ್ಶಿನಿ ಹಿರೇಮಠ, ‘ಕೆಲವೊಮ್ಮೆ ಫಲಾನುಭವಿ ಈ ಹಿಂದೆ ಯಾವುದಾದರೂ ಯೋಜನೆಯ ಲಾಭ ಪಡೆದಿದ್ದರೆ ಅವರನ್ನು ಮರಳಿ ಆಯ್ಕೆ ಮಾಡಲು ಆಗುವುದಿಲ್ಲ. ಅಂಥ ಸಂದರ್ಭದಲ್ಲಿ ಯೋಜನೆ ಅನ್ಯರ ಪಾಲಾಯಿತು ಎಂದು ಭಾವಿಸುತ್ತಾರೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.