ADVERTISEMENT

ಒಳನೋಟ: ಡ್ರಗ್ಸ್ ಸುಳಿಲಿ ರಾಜ್ಯ– ಕಲ್ಯಾಣ ಕರ್ನಾಟಕದಲ್ಲಿ ಏರುತ್ತಿದೆ ಗಾಂಜಾ ಅಮಲು

ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣದೊಂದಿಗೆ ದಂಧೆಕೋರರ ನಂಟು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 20:45 IST
Last Updated 12 ಫೆಬ್ರುವರಿ 2022, 20:45 IST
ಕಲಬುರ್ಗಿ ಜಿಲ್ಲೆ ಕಾಳಗಿಯ ಲಕ್ಷ್ಮಣನಾಯಕ ತಾಂಡಾದಲ್ಲಿ ಕುರಿ ಸಾಕಾಣಿಕೆ ಶೆಡ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಅಡಗಿಸಿ ಇಡಲಾಗಿದ್ದ ಬಂಕರ್ (ಸಂಗ್ರಹ ಚಿತ್ರ)
ಕಲಬುರ್ಗಿ ಜಿಲ್ಲೆ ಕಾಳಗಿಯ ಲಕ್ಷ್ಮಣನಾಯಕ ತಾಂಡಾದಲ್ಲಿ ಕುರಿ ಸಾಕಾಣಿಕೆ ಶೆಡ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಅಡಗಿಸಿ ಇಡಲಾಗಿದ್ದ ಬಂಕರ್ (ಸಂಗ್ರಹ ಚಿತ್ರ)   

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌ ಜಿಲ್ಲೆಗಳು ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಆ ರಾಜ್ಯಗಳ ಮೂಲಕ ರಾಜ್ಯಕ್ಕೆ ಗಾಂಜಾ ಬರುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಎಗ್ಗಿಲ್ಲದೇ ಸಾಗಿದೆ.

ಇದರಲ್ಲಿ ಪ್ರಭಾವಿ ರಾಜಕೀಯ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಆರೋಪಗಳು ಕೇಳಿಬಂದಿವೆ.

ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಲಕ್ಷ್ಮಣ ನಾಯಕ ತಾಂಡಾದಲ್ಲಿ ಕುರಿ ಶೆಡ್‌ನ ಆಳದ ಬಂಕರ್‌ನಲ್ಲಿ ಇಡಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 1,352 ಕಿಲೋ ಗಾಂಜಾವನ್ನು ಬೆಂಗಳೂರು ಪೊಲೀಸರು 2020ರ ಸೆಪ್ಟೆಂಬರ್‌ನಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದರು. ದೊಡ್ಡಪ್ರಮಾಣದ ಜಾಲವನ್ನು ಬಯಲಿಗೆಳೆದಿದ್ದರು. ಬಳಿಕ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಮಲಾಪುರ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಗಾಂಜಾ ಗಿಡಗಳನ್ನು ರಹಸ್ಯವಾಗಿ ಬೆಳೆಯುವ ಹಾಗೂ ಮಹಾರಾಷ್ಟ್ರ, ತೆಲಂಗಾಣದಿಂದಲೂ ವಾಹನಗಳ ಮೂಲಕ ಕಲಬುರಗಿಗೆ ತಂದು ಇಲ್ಲಿಂದ ಬೆಂಗಳೂರು, ಗೋವಾಕ್ಕೆ ಪೂರೈಕೆ ಮಾಡುವ ಜಾಲಗಳೂ ಸಕ್ರಿಯವಾಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ADVERTISEMENT

ಕಡಿಮೆ ಜಮೀನು ಹೊಂದಿರುವ ಬಡ ರೈತರು ದಿಢೀರ್ ಶ್ರೀಮಂತರಾಗುವ ಆಸೆಗೆ ಬಿದ್ದು ಹೊಲದ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆದು ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಆರು ಆರೋ‍ಪಿಗಳು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಹಿಂದಿನ ದಾಖಲೆಗಳಿಂದ ಸಾಬೀತಾಗಿದೆ. ಕೆಲವರು ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ಗಾಂಜಾ ಮಾರಾಟದಲ್ಲಿ ತೊಡಗುತ್ತಿದ್ದಾರೆ. ಬೀದರ್‌ನಿಂದ ಗೋವಾಕ್ಕೆ ಗಾಂಜಾ ಪೂರೈಕೆಯಾಗುತ್ತಿದೆ. ಕಳ್ಳಸಾಗಣೆದಾರರು ಶಾಲಾ ಬ್ಯಾಗ್‌ಗಳಲ್ಲೇ ಪ್ರಯಾಣಿಕರ ಸೋಗಿನಲ್ಲಿ ಸಾಗಣೆ ಮಾಡಿ ಅನೇಕ ಬಾರಿ ಸಿಕ್ಕಿ ಬಿದ್ದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕೆಲ ಡಾಬಾಗಳಲ್ಲಿ ರಾಜಸ್ಥಾನದಿಂದ ಅಫೀಮು ತಂದು ಮಾರಾಟ ಮಾಡುವ ಜಾಲವೂ ಈಚೆಗೆ ಪತ್ತೆಯಾಗಿದೆ.

ಬೀದರ್‌ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 47 ಗಾಂಜಾ ಪ್ರಕರಣಗಳು ದಾಖಲಾಗಿವೆ. ಮಾದಕ ವಸ್ತುಗಳ ಕಳ್ಳ ಸಾಗಣೆಯ ಒಂದು ಜಾಲ ಇದೆ. ಬೀದರ್ ಜಿಲ್ಲೆಯ ವ್ಯಕ್ತಿಗಳನ್ನು ಸಾಗಣೆಗೆ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇದೀಗ ಪೊಲೀಸರು ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಣೆ ತಡೆ (ಪಿಐಟಿ ಎನ್‌ಡಿಪಿಎಸ್‌ ಕಾಯ್ದೆ-1988) ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ.

ಈ ಜಾಲದ ಸೂತ್ರಧಾರಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಇಂದಿಗೂ ಸಾಧ್ಯವಾಗಿಲ್ಲ. ಹೀಗಾಗಿ ಬೀದರ್‌ ಜಿಲ್ಲೆ ಎರಡು ರಾಜ್ಯಗಳಿಗೆ ಹೊಂದಿಕೊಂಡಿರುವ ಕಾರಣ ನೆರೆಯ ರಾಜ್ಯದ ಜಿಲ್ಲೆಯ ಅಧಿಕಾರಿಗಳೊಂದಿಗೂ ನಿರಂತರ ಸಂಪರ್ಕ ಹೊಂದಿ, ಸಭೆಗಳನ್ನು ನಡೆಸುತ್ತಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಕಳೆದ ವರ್ಷ ಮೂರು ಕಡೆ ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 25 ಕೆ.ಜಿ. ಗಾಂಜಾ ಸಸಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ವರದಿ: ಚಂದ್ರಕಾಂತ ಮಸಾನಿ, ಮನೋಜಕುಮಾರ್ ಗುದ್ದಿ, ಬಿ.ಜಿ. ಪ್ರವೀಣಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.