ADVERTISEMENT

ಒಳನೋಟ: ನಮ್ಮತನ ಉಳಿಸಲು ನಮ್ಮದೇ ಒಟಿಟಿ

ಶರತ್‌ ಹೆಗ್ಡೆ
Published 13 ನವೆಂಬರ್ 2021, 21:30 IST
Last Updated 13 ನವೆಂಬರ್ 2021, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಾವು ಕನ್ನಡಿಗರಲ್ಲವೇ, ವಿಶಾಲ ಹೃದಯದವರು... ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆಲ್ಲ ಚಿತ್ರಗಳನ್ನು ನೋಡುತ್ತೇವೆ...’

– ‘ಬುದ್ಧಿವಂತ’ ಚಿತ್ರದಲ್ಲಿ ಉಪೇಂದ್ರ ಅವರ ಈ ಸಂಭಾಷಣೆ ಕನ್ನಡ ಪ್ರೇಕ್ಷಕರ ಮನೋಭಾವವನ್ನು ಹಲವು ವರ್ಷಗಳ ಹಿಂದೆಯೇ ತೆರೆದಿಟ್ಟಿತ್ತು. ಚಿತ್ರಮಂದಿರವಿರಲಿ, ಒಟಿಟಿ ಇರಲಿ; ಕನ್ನಡ ನಾಡಿನ ಪ್ರೇಕ್ಷಕರ ಒಲವು ಕನ್ನಡಕ್ಕೆ ಆದ್ಯತೆಯಾಗಿ ಇಲ್ಲ. ಅವರು ಯಾವುದನ್ನೂ ಸುಲಭವಾಗಿ ಸ್ವೀಕರಿಸಿಬಿಡುತ್ತಾರೆ. ಇದು ಕನ್ನಡ ಚಿತ್ರೋದ್ಯಮದ ಖಚಿತ ಅಭಿಮತ.

ಒಂದೆಡೆ ಚಿತ್ರಗಳ ಗುಣಮಟ್ಟ ಮತ್ತಿತರ ಕಾರಣಗಳನ್ನು ತೋರಿಸಬಹುದಾದರೂ ಪ್ರೇಕ್ಷಕನ ಸ್ವೀಕಾರ ಮನೋಭಾವವೂ ಅಷ್ಟಕ್ಕಷ್ಟೇ ಇದೆ ಅನ್ನುವುದು ವಾಸ್ತವ.

ADVERTISEMENT

ಇದೇ ಸೂತ್ರವನ್ನು ಒಟಿಟಿ (ಓವರ್‌ ದಿ ಟಾಪ್‌) ಕ್ಷೇತ್ರಕ್ಕೆ ಕಾಲಿಟ್ಟಿರುವ ಬಹುರಾಷ್ಟ್ರೀಯ ಕಂಪನಿಗಳು ಪಾಲಿಸುತ್ತವೆ. ಕನ್ನಡಕ್ಕೆ ಕೇವಲ ಸಾಂಕೇತಿಕವಾದ ಜಾಗ ಕೊಟ್ಟರೆ ಸಾಕು ಎಂಬ ನಿಲುವಿಗೆ ಕಟ್ಟುಬಿದ್ದಿವೆ. ಗ್ರಾಹಕರಿಲ್ಲದ ಸರಕನ್ನು ಎಷ್ಟು ಕಾಲ ಶೋಕೇಸಿನಲ್ಲಿಡಲಿ ಎಂಬ ವ್ಯವಹಾರದ ಲೆಕ್ಕಾಚಾರ ಇಲ್ಲಿನದ್ದು.

ಒಟಿಟಿ ವೇದಿಕೆಗಳ ತಾಂತ್ರಿಕ ಪರಿಣತ, ಮಾಹಿತಿ ತಂತ್ರಜ್ಞಾನ ಕಂಪನಿಯೊಂದರ ವ್ಯವಸ್ಥಾಪಕ ನೂತನ್‌ ಕಾಮತ್‌ ಅವರು ಈ ಜಾಲದ ಒಳಹೊರಗನ್ನು ತೆರೆದಿಟ್ಟರು.

‘ಬಹುರಾಷ್ಟ್ರೀಯ ಕಂಪನಿಗಳ ಒಟಿಟಿ ವೇದಿಕೆಗಳಲ್ಲಿ ದೇಸಿ ಭಾಷೆಗಳಿಗೆ ಹತ್ತಿಪ್ಪತ್ತು ಶೇಕಡಾದಷ್ಟೇ ಅವಕಾಶ. ಅದರಲ್ಲೂ ದಕ್ಷಿಣ ಭಾರತೀಯ ಭಾಷೆಗಳ ಕಂಟೆಂಟ್‌ ಪೈಕಿ ಕನ್ನಡ ಚಿತ್ರಗಳಿಗೆ ಶೇ 5ರಷ್ಟು ಮಾತ್ರ ಅವಕಾಶ ಸಿಗುತ್ತದೆ. ಅದೂ ದೊಡ್ಡ ಬ್ಯಾನರ್‌, ನಾಯಕರು, ಬಜೆಟ್‌ ಇರುವ ಚಿತ್ರಗಳಾದರೆ ಮಾತ್ರ. ಅದನ್ನೂ ಅಳೆದೂ ತೂಗಿ ಖರೀದಿಸುತ್ತಾರೆ’ ಎನ್ನುತ್ತಾರೆ.

ಮೋಸದ ಜಾಲ!

ಅಮೆಜಾನ್‌, ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಪ್ರದರ್ಶಿಸಲು ಆಯಾ ಕಂಪನಿಗಳ ಅಗ್ರಿಗೇಟರ್‌ಗಳು (ಪ್ರತಿನಿಧಿಗಳು) ಇರುತ್ತಾರೆ. ಇವರ ಕೈಕೆಳಗೆ ನೂರಾರು ಜನ ಏಜೆಂಟರು ಇರುತ್ತಾರೆ. ಇವರು ನಿರ್ಮಾಪಕರಿಗೆ ಆಮಿಷವೊಡ್ದುವುದು, ಸಿನಿಮಾ ಅಪ್‌ಲೋಡ್‌ ಮಾಡುವ ಉಚಿತ ಸೌಲಭ್ಯಕ್ಕೂ ಹಣ ಸುಲಿಯುವುದೂ ನಡೆಯುತ್ತಿದೆ. ಇದು ರಿಯಲ್‌ ಎಸ್ಟೇಟ್‌ ದಂಧೆಯ ರೀತಿಯಲ್ಲೇ ನಡೆಯುತ್ತದೆ’ ಎಂದು ಕಾಮತ್‌ ವಿವರಿಸುತ್ತಾರೆ.

‘ಸದ್ಯ ಅಮೆಜಾನ್‌ ಪ್ರೈಮ್‌ನ ಅಗ್ರಿಗೇಟರ್‌ಗಳು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಮಾತ್ರ ಇದ್ದಾರೆ. ಹಾಗಾಗಿ ಇಲ್ಲಿಯೂ ಪ್ರತಿ ಹಂತದಲ್ಲಿ ಎಚ್ಚರ ಅಗತ್ಯ’ ಎನ್ನುತ್ತಾರೆ ಕಾಮತ್‌.

ಕನ್ನಡಿಗರ ಒಟಿಟಿ: ಕನ್ನಡದಲ್ಲೊಂದು ಅಸಾಮಾನ್ಯ ಕಂಟೆಂಟ್‌ ಬಂದರೆ ಖಂಡಿತವಾಗಿ ಅದು ಬಹುರಾಷ್ಟ್ರೀಯ ಕಂಪನಿಗಳ ಒಟಿಟಿ ವೇದಿಕೆಗಳ ಗಮನ ಸೆಳೆಯುತ್ತದೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಪೂರಕ ಎನ್ನುತ್ತಾರೆ ನಟ, ನಿರ್ದೇಶಕ ರಮೇಶ್‌ ಅರವಿಂದ್‌.

‘ಸರಿಯಾದ ಆರ್ಥಿಕ, ತಾಂತ್ರಿಕ ಮತ್ತು ವಿಷಯ ಸಂಪನ್ಮೂಲ ಇದ್ದರೆ ಒಟಿಟಿ ಕನ್ನಡ ಮನೋರಂಜನಾ ಕ್ಷೇತ್ರದ ಪಾಲಿಗೆ ಚಿನ್ನದ ಗಣಿ ಆಗಲಿದೆ. ಹೀಗೆ ಕನ್ನಡಿಗರದ್ದೇ ಒಟಿಟಿ ಸೌಧವೊಂದು ನಿರ್ಮಾಣ ಆಗಬೇಕು’ ಎಂಬ ಆಶಯವನ್ನು ಅವರು ವ್ಯಕ್ತಪಡಿಸುತ್ತಾರೆ.

ಸಣ್ಣ ಬಜೆಟ್‌ನಲ್ಲೋ, ಸಿನಿಮಾ ಮೇಲಿನ ಪ್ರೀತಿಯಿಂದಲೋ ಬಂದವರ ಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರಗಳೂ ಸಿಗುವುದಿಲ್ಲ. ಅಂಥವರಿಗಾಗಿ ಕನ್ನಡಿಗರ ಒಟಿಟಿ ನೆರವಾಗುತ್ತವೆ ಎನ್ನುವುದು ವೆಬ್‌ ಸರಣಿ ಕ್ಷೇತ್ರದಲ್ಲಿರುವವರ ನಿರೀಕ್ಷೆ.

630 ಏಕತೆರೆಯ ಚಿತ್ರಮಂದಿರಗಳು

260 ಮಲ್ಟಿಪ್ಲೆಕ್ಸ್‌ ತೆರೆಗಳು (150 ಮಾತ್ರ ಚಾಲನೆಯಲ್ಲಿ)

₹ 2 ಕೋಟಿ

ಪ್ರತಿ ಚಿತ್ರಮಂದಿರದ ವಾರ್ಷಿಕ ಕನಿಷ್ಠ ವಹಿವಾಟು

₹ 1,200 ಕೋಟಿ

ಪ್ರದರ್ಶನ ಕ್ಷೇತ್ರದ ವಹಿವಾಟು

₹ 216 ಕೋಟಿ

ಸರಾಸರಿ ಜಿಎಸ್‌ಟಿ ಪಾವತಿ

12,000
ಚಿತ್ರಮಂದಿರದ ಉದ್ಯೋಗಿಗಳು

(ಮಾಹಿತಿ: ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ)

ಒಟಿಟಿ ಸಿನಿಮಾಕ್ಕೆ ಪೂರಕ

ಸಿನಿಮಾ ಕ್ಷೇತ್ರಕ್ಕೆ ಟಿವಿ, ಒಟಿಟಿ ಎಲ್ಲವೂ ಒಂದಕ್ಕೊಂದು ಪೂರಕ. ಅವು ಸ್ಪರ್ಧಿಗಳಲ್ಲ. ಟಿವಿ ಬಂದ ಮೇಲೆ ಸಿನಿಮಾಗಳ ಪ್ರಚಾರ, ಪ್ರಸಾರ ಆಗಲು ಶುರುವಾಯಿತು. ಹೊಸ ಮಾರುಕಟ್ಟೆ ತೆರೆಯಿತು. ಎಷ್ಟೋ ಸೃಜನಶೀಲರಿಗೆ ತಮ್ಮ ಕೃತಿ ಪ್ರದರ್ಶಿಸಲು ಒಟಿಟಿ ವೇದಿಕೆ ಕೊಟ್ಟಿದೆ. ಹೊಸದೊಂದು ಬಂದಾಗ ಅದನ್ನು ಬಳಸಿಕೊಂಡು ಹೇಗೆ ಮುಂದುವರಿಯಬಹುದು ಎಂದು ಯೋಚಿಸಬೇಕು.

- ರಮೇಶ್‌ ಅರವಿಂದ್‌,ನಟ, ನಿರ್ದೇಶಕ

ಮೊದಲಿನ ವೈಭವ ನಿಶ್ಚಿತ

ಕನ್ನಡ ಚಿತ್ರರಂಗ ಖಂಡಿತವಾಗಿಯೂ ಮೊದಲಿನ ವೈಭವಕ್ಕೆ ಬರಲಿದೆ. ಕನ್ನಡದಲ್ಲಿ ಯಾವುದೂ ಒಟಿಟಿ ಗಮನಾರ್ಹ ಮಟ್ಟಕ್ಕೆ ಸ್ಥಾಪನೆ ಆಗಿಲ್ಲ. ಅದು ಬೆಳೆಯದೇ ಈ ವೇದಿಕೆಗಳ ಬಗ್ಗೆ ಭರವಸೆ ಇಡುವುದು ಕಷ್ಟ.

- ಎನ್‌.ಎಂ. ಸುರೇಶ್‌, ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಪ್ರೇಕ್ಷಕರ ಸಂಖ್ಯೆ ವೃದ್ಧಿಯಾಗದೇ ವೇದಿಕೆ ವ್ಯರ್ಥ

ಒಟಿಟಿ ವೇದಿಕೆಗಳಿಂದ ಕನ್ನಡ ಚಿತ್ರಗಳ ಮೇಲೆ ಯಾವ ಘನವಾದ ಕ್ರಾಂತಿಕಾರಿ ಪರಿಣಾಮಗಳೂ ಆಗುವುದಿಲ್ಲ. ಪ್ರೇಕ್ಷಕರ ಸಂಖ್ಯೆ ವೃದ್ಧಿಯಾಗದ ಹೊರತು ಹೊಸ ವೇದಿಕೆಗಳು ವ್ಯರ್ಥ. ಇರುವ ಪ್ರೇಕ್ಷಕರೇ ಹಂಚಿ ಹರಡಿಕೊಳ್ಳುತ್ತಾರೆ ಅಷ್ಟೆ. ಕನ್ನಡಿಗರು ಎಲ್ಲ ಭಾಷೆಗಳ ಸಿನಿಮಾ ನೋಡುತ್ತಾರೆ. ಆದರೆ ಪರಭಾಷಿಕರು ಕನ್ನಡ ಚಿತ್ರಗಳನ್ನು ನೋಡುವುದಿಲ್ಲ. ಇದಕ್ಕೆ ಗುಣಮಟ್ಟ ಒಂದೇ ಕಾರಣ ಎಂದರೆ ನಾನು ಒಪ್ಪುವುದಿಲ್ಲ. ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಚಿತ್ರಮಂದಿರಗಳೂ ಇಲ್ಲ; ಒಟಿಟಿಯೂ ಇಲ್ಲ ಎನ್ನುವುದು ಕಠೋರ ವಾಸ್ತವ. ಯಶಸ್ವೀ ತಾರೆ ಅಥವಾ ಯಶಸ್ವೀ ನಿರ್ಮಾಣ ಸಂಸ್ಥೆಗಳ ಹಿನ್ನೆಲೆ ಇದ್ದರೆ ಮಾತ್ರ ವ್ಯಾಪಾರ ಎನ್ನುವುದೇ ಪರಮ ಸತ್ಯ ಎನ್ನುವುದಾದರೆ ಯಾವ ಟಿಟಿ ಬಂದರೂ ನಿಷ್ಪ್ರಯೋಜಕ.

- ಡಾ.ನಾಗತಿಹಳ್ಳಿ ಚಂದ್ರಶೇಖರ,ನಿರ್ಮಾಪಕ, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.