ADVERTISEMENT

ಒಳನೋಟ | ಕಟ್ಟಡ ಕಾರ್ಮಿಕರಿಗೆ ಮೃಷ್ಟಾನ್ನ; ಹೊರರಾಜ್ಯದವರಿಗೆ ಚಿತ್ರಾನ್ನ

ಚಿದಂಬರ ಪ್ರಸಾದ್
Published 22 ಫೆಬ್ರುವರಿ 2020, 23:26 IST
Last Updated 22 ಫೆಬ್ರುವರಿ 2020, 23:26 IST
   

ಮಂಗಳೂರು: ‘ನಿತ್ಯ ಬೆಳಿಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡುತ್ತೇವೆ. ಪಕ್ಕದಲ್ಲಿಯೇ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಎರಡು ಹೊತ್ತಿನ ಊಟಕ್ಕೆ ಏನು ಕೊರತೆ ಇಲ್ಲ. ಆದರೆ, ಅದನ್ನು ಮೀರಿದ ಯೋಚನೆ ಮಾಡುವ ಆರ್ಥಿಕ ಶಕ್ತಿಯೂ ನಮಗಿಲ್ಲ. ಇದ್ದುದರಲ್ಲಿಯೇ ಜೀವನ ನಡೆಯುತ್ತಿದೆ’

ನೇತ್ರಾವತಿ ತೀರದಲ್ಲಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಒಡಿಶಾ, ಪಶ್ಚಿಮ ಬಂಗಾಳದ ಕಾರ್ಮಿಕರ ನೋವಿನ ಕಥೆ ಇದು. ಅಕ್ರಮ ಮರಳು ಗಣಿಗಾರಿಕೆಯಲ್ಲಿ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾರೋ ಮರಳು ತೆಗೆಸುತ್ತಾರೆ. ಎಲ್ಲಿಂದಲೋ ಬಂದ ಕಾರ್ಮಿಕರು ಜೀವದ ಹಂಗು ತೊರೆದು ಮರಳು ತೆಗೆಯುತ್ತಾರೆ. ಮರಳು ಮಾರಾಟದಿಂದ ಬರುವ ಲಾಭ ಇಲ್ಲಿನ ದೊಡ್ಡ ಜನಗಳ ಪಾಲಾಗುತ್ತದೆ. ಅಷ್ಟಿಷ್ಟು ಕೂಲಿ ಮಾತ್ರ ಈ ಕಾರ್ಮಿಕರಿಗೆ ದೊರೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿಗೆ ಹೆಂಚಿನ ಉದ್ಯಮ ಜೋರಾಗಿತ್ತು. ಆ ಸಂದರ್ಭದಲ್ಲಿ ಹೊರ ರಾಜ್ಯ, ಜಿಲ್ಲೆಗಳ ಕಾರ್ಮಿಕರು ಇಲ್ಲಿನ ಹೆಂಚು ತಯಾರಿಕೆ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದರು. ಈಗ ಆ ಘಟಕಗಳು ಬಾಗಿಲು ಮುಚ್ಚಿವೆ. ಆದರೆ, ಮೀನುಗಾರಿಕೆ, ಕಟ್ಟಡ ನಿರ್ಮಾಣ, ಮನೆಗೆಲಸ, ಎಲೆಕ್ಟ್ರಿಕಲ್‌, ವಾಚಮನ್‌ ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರದ್ದೇ ಪಾರುಪತ್ಯವಿದೆ.

ADVERTISEMENT

ಅದರಲ್ಲೂ ಕಟ್ಟಡ ಕಾರ್ಮಿಕರಿಗಂತೂ ಎಲ್ಲಿಲ್ಲದ ಬೇಡಿಕೆ. ಉತ್ತರ ಕರ್ನಾಟಕದ ಬಹುತೇಕ ಕಾರ್ಮಿಕರು ಮೂಲ್ಕಿ ಬಳಿ ಒಂದು ಕಾಲೊನಿಯನ್ನೇ ನಿರ್ಮಿಸಿಕೊಂಡಿದ್ದಾರೆ. ಅಲ್ಲಿ ಎರಡಂತಸ್ತಿನ ಕಟ್ಟಡಗಳಲ್ಲಿ ಒಂದಿಷ್ಟು ಸುಖಮಯ ಜೀವನ ಕಳೆಯುತ್ತಿದ್ದಾರೆ. ವಿಜಯಪುರ, ಬಾಗಲಕೋಟೆಗೆ ತೆರಳುವ ಬಸ್‌ಗಳು ಈ ಕಾಲೊನಿಗೆ ಬಂದೇ ಹೋಗುತ್ತವೆ!

ಉತ್ತರ ಕರ್ನಾಟಕದ ಮಳೆ, ಬೆಳೆ ಇಲ್ಲದೇ ಕಂಗಾಲಾದ ಜನರು, ಮಂಗಳೂರಿಗೆ ಬರುತ್ತಾರೆ. ಅದೇ ಭಾಗದ ಕಾರ್ಮಿಕ ಗುತ್ತಿಗೆದಾರರು, 100–150 ಕಾರ್ಮಿಕರ ತಂಡದೊಂದಿಗೆ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರೊಂದಿಗೆ ವ್ಯವಹಾರ ಮಾಡುತ್ತಾರೆ. ಕಾರ್ಮಿಕರಿಗೆ ನಿತ್ಯ ₹600– ₹800 ಕೂಲಿ ಸಿಗುತ್ತದೆ. ಅದರಲ್ಲಿ ಕಾರ್ಮಿಕ ಗುತ್ತಿಗೆದಾರನಿಗೂ ಪಾಲು ಸಿಗುತ್ತದೆ.

‘ಊರಾನಕಿಂತ ಇಲ್ಲೇ ಜೀವನ ಸ್ವಲ್ಪ ಸುಧಾರಣಿ ಆಗೇತಿ. ನಮಗ ಏನಿಲ್ಲಂದ್ರು ದಿನಾ ₹500ಕ್ಕ ಚಿಂತಿ ಇಲ್ಲ. ನಮ್ಮ ಮಕ್ಳು ಇಲ್ಲೇ ಸರ್ಕಾರಿ ಸಾಲ್ಯಾಗ ಓದತಾರ. ಇನ್ನ ಊರಿಂದ ಕಾಳು ಬರ್ತಾವ. ಒಂದೆರಡ ವರ್ಷದಾಗ ಮನಷ್ಯಾರ ಆಕ್ಕೇವ್ರಿ’ ಎಂದು ವಿಜಯಪುರ ಜಿಲ್ಲೆಯ ಕಾರ್ಮಿಕ ಪುಂಡಲೀಕ ತಮ್ಮ ಜೀವನವನ್ನು ಬಿಚ್ಚಿಟ್ಟರು.

ಇನ್ನು ಮೀನುಗಾರಿಕೆಯಲ್ಲಿ ಸ್ಥಳೀಯ ಮೀನುಗಾರರ ಜತೆಗೆ ಹೊರ ರಾಜ್ಯದ ಕಾರ್ಮಿಕರದ್ದೂ ಸಿಂಹಪಾಲಿದೆ. ವಾರಗಟ್ಟಲೆ ಸಮುದ್ರದಲ್ಲಿ ಮೀನು ಹಿಡಿಯಲು ತೆರಳುತ್ತಾರೆ. ಮತ್ತೆ ದಡ ಸೇರಿದಾಗಲೇ ಜೀವನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.