ADVERTISEMENT

‘ಕಾವೇರಿ– 2’ ತಂತ್ರಾಂಶ | ಹೊಸ ವ್ಯವಸ್ಥೆ ಜನಸ್ನೇಹಿ: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 23:29 IST
Last Updated 8 ಜುಲೈ 2023, 23:29 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ‘ಸ್ವತ್ತುಗಳ ನೋಂದಣಿ ವ್ಯವಸ್ಥೆಯಲ್ಲಿನ ಸಮಸ್ಯೆ, ಆಡಳಿತದಲ್ಲಿ ಪಾರದರ್ಶಕತೆ, ವೇಗ ತರುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ‘ಕಾವೇರಿ– 2’ ತಂತ್ರಾಂಶ ಜಾರಿಗೆ ತರಲಾಗಿದೆ. ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಸಂಸ್ಥೆಯ ಸಹಯೋಗದಲ್ಲಿ ಎಲ್ಲಾ 256 ಉಪ ನೋಂದಣಿ ಕಚೇರಿಗಳಲ್ಲಿ ಅಳವಡಿಸಿರುವ ಈ ತಂತ್ರಜ್ಞಾನ ಜನಸ್ನೇಹಿ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮರ್ಥಿಸಿದರು.

‘ಕಾವೇರಿ– 2’ನಲ್ಲಿನ ಗೊಂದಲಗಳ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಎಲ್ಲ ನೋಂದಣಿ ಕಚೇರಿಗಳಲ್ಲಿ ಈ ತಂತ್ರಾಂಶವನ್ನು ಪೂರ್ಣ ಸ್ವರೂಪದಲ್ಲಿ ಅಳವಡಿಸಿ ಇನ್ನೂ ತಿಂಗಳು ತುಂಬಿಲ್ಲ. ಯಾವುದೇ ತಂತ್ರಾಂಶವನ್ನು ಅಳವಡಿಸಿದಾಗ ಅದು ಹೊಂದಾಣಿಕೆಯಾಗಲು, ನಾವು ಆ ವ್ಯವಸ್ಥೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯಬೇಕು. ಕನಿಷ್ಠ ಆರು ತಿಂಗಳಾದರೂ ಅಗತ್ಯ. ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಅದಕ್ಕೆ ಪರಿಹಾರ ಕಂಡುಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ’ ಎಂದರು.

‘ಜಾಗ ಖರೀದಿಸುವವರ ಮತ್ತು ಮಾರಾಟ ಮಾಡುವವರ ಹಿತರಕ್ಷಣೆ, ಜೊತೆಗೆ ಉಪ ನೋಂದಣಿ ಕಚೇರಿಗಳಲ್ಲಿ ನಡೆಯುತ್ತಿರುವ ವಂಚನೆ, ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ತಡೆ ಈ ತಂತ್ರಾಂಶದಿಂದ ಸಾಧ್ಯವಾಗಲಿದೆ. ನೋಂದಣಿ ಪೂರ್ವ, ನೋಂದಣಿ ಮತ್ತು ನೋಂದಣಿ ನಂತರ ಈ ಮೂರೂ ಹಂತಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಸೂಕ್ತ ದಾಖಲೆಗಳನ್ನು ನಾಗರಿಕರೇ ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಿದ ನಂತರ ಉಪ ನೋಂದಣಾಧಿಕಾರಿಗಳು ಪರಿಶೀಲಿಸುತ್ತಾರೆ. ಬಳಿಕ ನಿಗದಿತ ಶುಲ್ಕ ಪಾವತಿಸಲು ತಿಳಿಸಲಾಗುತ್ತದೆ. ಶುಲ್ಕ ಪಾವತಿಸಿದ ಬೆನ್ನಲ್ಲೆ, ನಾಗರಿಕರೇ ನೋಂದಣಿಗೆ ಸಮಯ ನಿಗದಿ‍ಪಡಿಸಿಕೊಳ್ಳಬಹುದು. ಎಲ್ಲ ಹಂತಗಳಲ್ಲಿ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಉಪ ನೋಂದಣಾಧಿಕಾರಿಗಳು ನೆಪ ಹೇಳಿಕೊಂಡು ಪ್ರಕ್ರಿಯೆ ವಿಳಂಬ ಮಾಡುವ ಅಥವಾ ತಿರಸ್ಕರಿಸುವ ಪ್ರಮೇಯವೇ ಇಲ್ಲ’ ಎಂದೂ ವಿವರಿಸಿದರು.

ADVERTISEMENT

‘ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸರ್ವರ್‌ ಡೌನ್‌ ಎನ್ನುವ ವಿಷಯ ಇನ್ನು ಮುಂದಿರಲ್ಲ. ಇಡೀ ರಾಜ್ಯಕ್ಕೆ ಒಂದೇ ಸರ್ವರ್‌. ನೆಟ್‌ವರ್ಕ್‌ ಸಿಗುತ್ತಿಲ್ಲ ಎನ್ನುವ ಆರೋಪಕ್ಕೂ ಅವಕಾಶವಿಲ್ಲ. ಯಾಕೆಂದರೆ, ಕೇಬಲ್‌ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ. ಅಪರೂಪದ ಸಂದರ್ಭಗಳಲ್ಲಿ ಕೇಬಲ್‌ ತುಂಡಾದರೆ ಇಂಟರ್‌ನೆಟ್‌ ಕಡಿತಗೊಳ್ಳಬಹುದಷ್ಟೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದರೆ ಶುಲ್ಕ ಪಾವತಿಗೆ ಸಮಸ್ಯೆಯಾಗಬಹುದು. ಕೃಷಿ ಜಮೀನುಗಳ ವಿವರ ಪಡೆಯಲು ‘ಭೂಮಿ’, ಗ್ರಾಮೀಣ ಮತ್ತು ನಗರ ಪ್ರದೇಶದ ಕೃಷಿಯೇತರ ಸ್ವತ್ತುಗಳಿಗೆ ‘ಇ– ಸ್ವತ್ತು’, ‘ಇ– ಆಸ್ತಿ’, ಶುಲ್ಕಗಳ ಪಾವತಿಗೆ ‘ಖಜಾನೆ–2’, ಕೃಷಿ ಸಾಲ ಪರಿಶೀಲನೆಗೆ ‘ಫ್ರೂಟ್ಸ್‌’, ನಿಗದಿತ ಸಮಯದಲ್ಲಿ ಸೇವೆ ನೀಡಲು ‘ಸಕಾಲ’ ಜೊತೆ ಈ ತಂತ್ರಾಂಶ ಸಂಯೋಜಿತವಾಗಿದೆ. ದಾಖಲೆಗಳ ನೈಜತೆ ಪರಿಶೀಲಿಸುವ ಈ ವ್ಯವಸ್ಥೆಯಿಂದ ಮೋಸದ ನೋಂದಣಿಗೆ ಬ್ರೇಕ್‌ ಬೀಳಲಿದೆ. ಹಾಗೆಂದು, ಎಲ್ಲಾ ಗೊಂದಲಗಳು ಪರಿಹಾರವಾಗಿದೆ ಎಂದಲ್ಲ. ಸಣ್ಣಪುಟ್ಟ ಗೊಂದಲಗಳು, ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಪರಿಹಾರ ಕಂಡುಕೊಳ್ಳಲು ರಾಜ್ಯ, ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದಲ್ಲಿ ತಾಂತ್ರಿಕ ಪರಿಣತರ ನೆರವು ಪಡೆಯಲಾಗಿದೆ. ನಾಗರಿಕರ ನೆರವಿಗೆ ಸಹಾಯವಾಣಿಯಿದೆ. ಇಲಾಖೆಯ ಯುಟ್ಯೂಬ್‌ ಚಾನೆಲ್‌, ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಮಾಹಿತಿಗಳಿವೆ. ಕಚೇರಿ ಸಿಬ್ಬಂದಿ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಆಂತರಿಕ ವ್ಯವಸ್ಥೆಯಡಿ ಸರ್ವೀಸ್‌ ಡೆಸ್ಕ್ ಇದೆ’ ಎಂದೂ ತಿಳಿಸಿದರು.

‘ಎಲ್ಲ ನೋಂದಣಿ ಕಚೇರಿಗಳಲ್ಲಿ ನೋಂದಣಿಗೆ ಸಲ್ಲಿಕೆಯಾದ ದಾಖಲೆಗಳ ಪರಿಶೀಲನೆ ಬೆಳಿಗ್ಗೆ 10ರಿಂದ 11ರವರೆಗೆ, ಸಂಜೆ 4.30ರಿಂದ 5.30ವರೆಗೆ  ನಡೆಯುತ್ತದೆ. ಎಲ್ಲ ದಾಖಲೆಗಳು ಸಿದ್ಧಪಡಿಸಿಟ್ಟುಕೊಂಡರೆ 15 ನಿಮಿಷಗಳಲ್ಲಿ ಅಪ್‌ಲೋಡ್‌ ಸಾಧ್ಯವಿದೆ. 24 ಗಂಟೆಯ ಒಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲೇಬೇಕು. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಕಚೇರಿ ಸಿಬ್ಬಂದಿ ನೆಪ ಹೇಳಿ ಜಾರಿಕೊಳ್ಳುವಂತೆಯೂ ಇಲ್ಲ. ದಿನಕ್ಕೆ 40 ದಾಖಲೆಗಳು ನೋಂದಣಿ ಆಗುತ್ತಿದ್ದ ಉಪ ನೋಂದಣಿ ಕಚೇರಿಯಲ್ಲಿ ಈ ತಂತ್ರಾಂಶ ಅಳವಡಿಸಿದ ಬಳಿಕ 190 ದಾಖಲೆಗಳು ನೋಂದಣಿಯಾದ ನಿದರ್ಶನವಿದೆ. ನೋಂದಣಿ ವಿಳಂಬವಾಗುತ್ತಿದೆ. ಕಚೇರಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತಿದೆ ಎನ್ನುವ ಪ್ರಮೇಯವೇ ಈಗ ಇಲ್ಲ’. ‘ಕಾವೇರಿ– 1ನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ. ಹೀಗಾಗಿ, ಸಾಂಪ್ರದಾಯಿಕ ನೋಂದಣಿಗೆ ಇನ್ನು ಅವಕಾಶವೇ ಇಲ್ಲ. ಉತ್ತಮ ಆಡಳಿತದ ಕಡೆಗಿನ ಸರ್ಕಾರದ ನಡೆಯಿದು. ಈ ಹೊಸ ವ್ಯವಸ್ಥೆಗೆ ಶೇ 98ರಷ್ಟು ಸಕಾರತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸರಳೀಕೃತ ವ್ಯವಸ್ಥೆಗೆ ಜನರು ಒಮ್ಮೆ ಹೊಂದಿಕೊಂಡರೆ ಮುಂದೆ ಕಷ್ಟವೇನೂ ಅಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.