ADVERTISEMENT

ಒಳನೋಟ: ನಿರ್ವಹಣೆ ಕೊರತೆ ಸೊರಗಿದ ಮೈದಾನಗಳು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 19:31 IST
Last Updated 26 ಡಿಸೆಂಬರ್ 2020, 19:31 IST
   

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣವೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಚಟುವಟಿಕೆಗಳಿಗೆ ವೇದಿಕೆಯಾಗಿದೆ. ಸಿಂಥೆಟಿಕ್‌ ಟ್ರ್ಯಾಕ್‌ಗಳನ್ನು ಹೊಂದಿರುವ ಧಾರವಾಡ, ಬೆಳಗಾವಿ, ಬಳ್ಳಾರಿ ಮತ್ತು ಗದಗ ಮೈದಾನಗಳು ಅಥ್ಲೀಟ್‌ಗಳಿಗೆ ಅನುಕೂಲವಾಗಿವೆ. ಆದರೆ, ವಾಕಿಂಗ್‌ ಪ್ರಿಯರು ಕೂಡ ಇದೇ ಟ್ರ್ಯಾಕ್‌ ಬಳಸಿಕೊಳ್ಳುತ್ತಿದ್ದಾರೆ.

ಈ ಭಾಗದಲ್ಲಿ ಹಲವಾರು ಕ್ರೀಡಾಪಟುಗಳಿದ್ದರೂ ಜಿಲ್ಲೆಗೆ ಕನಿಷ್ಠ ಒಂದಾದರೂ ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲ. ಇರುವ ಟ್ರ್ಯಾಕ್‌ಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ.

ವಿಜಯಪುರ, ಹಾವೇರಿ, ಕಾರವಾರದಲ್ಲಿರುವ ಮಾಲಾದೇವಿ ಮೈದಾನ, ಶಿರಸಿಯಲ್ಲಿರುವ ಜಿಲ್ಲಾ ಕ್ರೀಡಾಂಗಣ, ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿಯ ನೆಹರೂ ಮೈದಾನ ಮತ್ತು ಹೊಸಪೇಟೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಅನೇಕ ಬಾರಿ ರಾಜಕೀಯ ಕಾರ್ಯಕ್ರಮಗಳು ನಡೆದಿವೆ. ಬಳಿಕ ಸ್ವಚ್ಛಗೊಳಿಸದ ಕಾರಣ ಮೈದಾನದ ಅಂದವೇ ಹಾಳಾಗುತ್ತಿದೆ. ಸಿಂಥೆಟಿಕ್‌ ಟ್ರ್ಯಾಕ್‌ ಹೊಂದಿರುವ ಜಿಲ್ಲೆಗಳಲ್ಲಿಯೂ ಪ್ರತಿ ವರ್ಷ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಹೀಗೆ ರಾಷ್ಟ್ರೀಯ ದಿನಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಧಾರವಾಡದ ಆರ್‌.ಎನ್‌. ಶೆಟ್ಟಿ ಮೈದಾನದಲ್ಲಿ ರಾಷ್ಟ್ರೀಯ ಕಾರ್ಯಕ್ರಮ ನಡೆಸಿದಾಗ ಸಿಂಥೆಟಿಕ್‌ ಹಾಳಾಗಿ ಹೋಗುತ್ತದೆ. ರಾಷ್ಟ್ರೀಯ ದಿನಾಚರಣೆಗೆ ಬದಲಿ ಕ್ರೀಡಾಂಗಣ ವ್ಯವಸ್ಥೆ ಮಾಡಬೇಕು ಎಂದು ಕ್ರೀಡಾಪಟುಗಳು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ.

ADVERTISEMENT

ಬೆಳಗಾವಿಯ ಕೆಎಲ್‌ಇ ಆವರಣದಲ್ಲಿರುವ ಕ್ರೀಡಾ ಇಲಾಖೆಯ ಮೈದಾನ ಕ್ರೀಡಾಪಟುಗಳಿಗಾಗಿಯೇ ಹೆಚ್ಚು ಬಳಕೆಯಾಗುತ್ತದೆ. ಬಾಗಲಕೋಟೆಯಲ್ಲಿ ಸೈಕ್ಲಿಂಗ್‌, ಕುಸ್ತಿ, ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತವೆ. ಈ ಮೈದಾನವನ್ನು ರಾಜಕೀಯ ಪಕ್ಷಗಳ ಕಾರ್ಯಕ್ರಮಕ್ಕೆ ನೀಡಿಲ್ಲ ಎನ್ನುವುದು ವಿಶೇಷ. ಗದಗ ಮೈದಾನ ಹಾಕಿ, ಫುಟ್‌ಬಾಲ್‌ ಮತ್ತು ಅಥ್ಲೆಟಿಕ್ಸ್‌ ಕ್ರೀಡೆಗಳಿಗೆ ಬಳಕೆಯಾಗುತ್ತಿದೆ.

ಹಾವೇರಿ ಮೈದಾನದಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ಹಬ್ಬದ ಸಂದರ್ಭದಲ್ಲಿ ಲಾರಿಗಳನ್ನು ತೊಳೆದು, ಪೂಜೆ ಮಾಡಲು ಈ ಮೈದಾನ ಬಳಸಲಾಗುತ್ತಿದೆ. ಕನಿಷ್ಠ, ವಾಲಿಬಾಲ್‌ ನೆಟ್ ಸೌಲಭ್ಯವೂ ಇಲ್ಲದ ಕಾರಣ ಸ್ಥಳೀಯ ಆಟಗಾರರರು ಮರಕ್ಕೆ ನೆಟ್ ಕಟ್ಟಿ ಆಡುತ್ತಾರೆ. ಹೊಸಪೇಟೆ ಮೈದಾನದಲ್ಲಿ ಹೈಮಾಸ್ಟ್‌ ದೀಪದ ವ್ಯವಸ್ಥೆಯಿದ್ದರೂ ಯಾವಾಗಲಾದರೊಮ್ಮೆ ಬಳಸುತ್ತಾರೆ. ಹೀಗಾಗಿ ನಾಯಿ, ಹಂದಿಗಳಿಗೆ ಮೈದಾನ ಆಶ್ರಯತಾಣವಾಗಿದೆ.

ಹಳೆಯದಾದ ಸಿಂಥೆಟಿಕ್‌ ಟ್ರ್ಯಾಕ್‌
ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಅಥ್ಲೀಟುಗಳನ್ನು ನಾಡಿಗೆ ನೀಡಿರುವ ಮಂಗಳೂರಿನಲ್ಲಿ, ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣವಾಗಿದ್ದು 2012ರ ವೇಳೆಗೆ. ಮಂಗಳ ಕ್ರೀಡಾಂಗಣದಲ್ಲಿರುವ ಈ ಟ್ರ್ಯಾಕ್‌ ಈಗ ಹಳೆಯದಾಗಿದೆ. ಒಲಿಂಪಿಕ್ಸ್‌ ಶಿಬಿರದಲ್ಲಿರುವ ಪೂವಮ್ಮ ಅವರು ಕೆಲವು ದಿನಗಳಿಂದ ಇಲ್ಲೇ ಅಭ್ಯಾಸ ಮಾಡುತ್ತಿದ್ದಾರೆ.

ಅಥ್ಲೀಟುಗಳ ಹಿತದೃಷ್ಟಿಯಿಂದ ಇಲ್ಲಿ ಹೊಸದಾಗಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಮಾಡಬೇಕಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಈ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಹೊಸ ಕಟ್ಟಡ, ಗ್ಯಾಲರಿಗಳು ನಿರ್ಮಾಣವಾಗುತ್ತಿವೆ.

ಇದರ ಜೊತೆಗೆ ಸುಸಜ್ಜಿತ ಈಜು ಕೊಳದ ನಿರೀಕ್ಷೆಯಲ್ಲೂ ಈ ಕರಾವಳಿ ನಗರ ಇದೆ. ಈಗ ಲೇಡಿಹಿಲ್‌ ಎಂಬಲ್ಲಿ ನಗರ‍‍ಪಾಲಿಕೆ ನಿರ್ವಹಿಸುತ್ತಿರುವ ಈಜುಕೊಳ ಮಾತ್ರ ಇದೆ. ಹಲವು ಕಡೆ ಜಾಗ ನೋಡಿದ ನಂತರ, ಎಮ್ಮೆಕೆರೆ ಎಂಬಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಈಜುಕೊಳ ನಿರ್ಮಿಸಲು ತೀರ್ಮಾನಿಸಿ, ಇತ್ತೀಚೆಗೆ ಕಾಮಗಾರಿ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.