ಚಿತ್ರ: ಕಣಕಾಲಮಠ
‘ಕಾಸಿದ್ದವನೇ ಬಾಸು’ ಎಂಬುದು ಹಳೆಯ ನುಡಿ. ಈಗ ‘ಪೇಟೆಂಟ್ ಪಡೆದವನೇ ಬಾಸು’ ಎಂಬ ಮಾತು ಜಾಗತಿಕ ವೇದಿಕೆಯಲ್ಲಿ ಚಾಲ್ತಿಯಲ್ಲಿದೆ. ಒಂದೇ ಒಂದು ‘ಕ್ರಾಂತಿಕಾರಿ ಐಡಿಯಾ’ ಹೊಂದಿದ ಪೇಟೆಂಟ್‌ನ ಕಿಮ್ಮತ್ತು ಹಲವು ಕೋಟಿಗಳು. ಪೇಟೆಂಟ್‌ಗಾಗಿ ದೇಶ ದೇಶಗಳ ಮಧ್ಯೆ, ದೈತ್ಯ ಕಂಪನಿಗಳ ಮಧ್ಯೆ ದೊಡ್ಡ ಕಾನೂನು ಸಮರವೇ ನಡೆಯುತ್ತಿದೆ. ಸಂಶೋಧನೆ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತ ಮುಂದೆ ಇದ್ದರೂ ಪೇಟೆಂಟ್ ಪಡೆಯುವ ರೇಸ್‌ನಲ್ಲಿ ಹಿಂದೆ ಉಳಿದಿದೆ. ಪ್ರಖ್ಯಾತ ವೈಜ್ಞಾನಿಕ ಸಂಸ್ಥೆಗಳು ಹಲವಿದ್ದರೂ ಪೇಟೆಂಟ್ ಅರ್ಜಿ ಸಲ್ಲಿಕೆಯ ರೇಸ್‌ನಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ!
ಯಾವುದೇ ಒಂದು ದೇಶ, ರಾಜ್ಯ, ಕಂಪನಿ, ಶೈಕ್ಷಣಿಕ ಸಂಸ್ಥೆಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಪಾರಮ್ಯ ಸಾಧಿಸಲು ಹೊಸ ಆವಿಷ್ಕಾರಗಳು ಮತ್ತು ಅದರ ಸಾರ್ವಜನಿಕ ಉಪಯೋಗ ಅಥವಾ ಅನ್ವಯ ಅತಿ ಮುಖ್ಯ. ಇಂತಹ ಆವಿಷ್ಕಾರಗಳಿಗೆ ಕಾನೂನು ಬದ್ಧ ಸಂಪೂರ್ಣ ರಕ್ಷಣೆ ಮತ್ತು ಹಕ್ಕು ಪಡೆಯುವುದಕ್ಕೆ ಪೇಟೆಂಟ್ (ಬೌದ್ಧಿಕ ಆಸ್ತಿ ಹಕ್ಕು) ಎನ್ನಲಾಗುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪೇಟೆಂಟ್ ಪಡೆಯಲು ಜಗತ್ತಿನ ಬಲಾಢ್ಯ ದೇಶಗಳ ಮಧ್ಯೆ ಭಾರೀ ಪೈಪೋಟಿಯೇ ಏರ್ಪಟ್ಟಿದೆ. ಖಾಸಗಿ ದೈತ್ಯ ಕಂಪನಿಗಳ ನಡುವೆಯೂ ತುರುಸಿನ ಸ್ಪರ್ಧೆ ನಡೆದಿದೆ. ಪಿಎಚ್.ಡಿ ಹಾಗೂ ಎಂ.ಫಿಲ್ ಪಡೆಯುವುದು ಹೆಚ್ಚುಗಾರಿಕೆಯಲ್ಲ, ಸಂಶೋಧ ನೆಯ ಹಕ್ಕು ಪಡೆಯುವುದೇ ಅತಿ ಮುಖ್ಯ ಎನ್ನುವುದು ಇಂದಿನ ಔದ್ಯೋಗಿಕ ಪೈಪೋಟಿಯಲ್ಲಿ ಮೈಲಿಗಲ್ಲು.
ನಿಮಗೆ ನೆನಪಿರಬಹುದು ದಶಕಗಳ ಹಿಂದೆ ಅರಿಶಿಣಕ್ಕೆ ಪೇಟೆಂಟ್ ಪಡೆಯಲು ಭಾರತ ದೊಡ್ಡ ಸಮರವನ್ನೇ ನಡೆಸಿತ್ತು. ಅಮೆರಿಕಾದ ಕಂಪನಿಗಳೂ ಇದಕ್ಕೆ ಪೈಪೋಟಿ ಒಡ್ಡಿದ್ದವು. ಅಂತಿಮವಾಗಿ ಭಾರತಕ್ಕೆ ಜಯ ಸಿಕ್ಕಿತ್ತು. ಭಾರತದ ಮನೆ–ಮನೆಗಳಲ್ಲೂ ಅರಿಶಿಣ ಔಷಧವಾಗಿ ಸಾವಿರಾರು ವರ್ಷಗಳಿಂದಲೂ ಬಳಸುತ್ತಾ ಬರಲಾಗಿತ್ತು. ಆದರೆ, ಅದರ ಹಕ್ಕುಸ್ವಾಮ್ಯ ಪಡೆಯುವ ಪ್ರಯತ್ನ ಎಂದೂ ಮಾಡಿರಲಿಲ್ಲ. ಭಾರತದಲ್ಲಿ ಆವಿಷ್ಕಾರಗಳಿಗೆ ಪೇಟೆಂಟ್ ಪಡೆಯುವ ಕಾಯ್ದೆಯನ್ನು 1970 ರಲ್ಲಿ ಕೇಂದ್ರ ಜಾರಿ ತಂದಿತ್ತಾದರೂ, ಅದರ ಬಗ್ಗೆ ತಲೆ ಕೆಡಿಸಿಕೊಂಡವರು ಕಡಿಮೆ. ಜಾಗತೀಕರಣದ ಪ್ರಬಲ ಚಂಡ ಮಾರುತ ಜಗತ್ತಿನೆಲ್ಲೆಡೆ ತಂತ್ರಜ್ಞಾನದ ಕ್ರಾಂತಿಯ ಕಿಚ್ಚೂ ಹಬ್ಬಿಸಿತು. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಶಾಖೆಗಳಲ್ಲಿ ವಿಶ್ವವೇ ಊಹಿಸಲಾಗದ ಹೊಸ ಆವಿಷ್ಕಾರಗಳಾದವು. ಈ ಹೊಸತುಗಳಿಗೆ ಪೇಟೆಂಟ್ ಪಡೆಯುವ ಪರಿಪಾಠವೂ ಹೆಚ್ಚಾಯಿತು.
ಯಾವುದೇ ಒಂದು ಹೊಸ ಉತ್ಪನ್ನ ತಯಾರು ಮಾಡಿದರೆ ಅದರ ನಕಲು ಮಾರನೇ ದಿನವೇ ಮಾರುಕಟ್ಟೆಗಳಿಗೆ ಕಾಲಿಡುತ್ತವೆ. ಕರೆನ್ಸಿ ನೋಟುಗಳಿಂದ ಹಿಡಿದು, ಮದ್ಯದವರೆಗೆ ಎಲ್ಲದರ ನಕಲು ಮಾಲು ಸಿಗುತ್ತವೆ. ಅದೇ ರೀತಿಯಲ್ಲಿ ಅಮೆರಿಕಾವೋ, ರಷ್ಯಾ ಅಥವಾ ಫ್ರಾನ್ಸ್ ಐದನೇ ತಲೆಮಾರಿನ ಯುದ್ಧ ವಿಮಾನ ತಯಾರಿಸಿದರೆ, ಮತ್ಯಾವುದೋ ದೇಶ ಅದರ ತಂತ್ರಜ್ಞಾನ ಮತ್ತು ಮಾದರಿಯ ವಿನ್ಯಾಸವನ್ನು ಕದ್ದು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ತಯಾರಿಸುವ ಚಾಕಚಕ್ಯತೆ ಹೊಂದಿವೆ. ಅದೇ ರೀತಿಯಲ್ಲಿ ಔಷಧ, ಲಸಿಕೆಗಳ ಫಾರ್ಮುಲಾಗಳನ್ನೇ ಕದಿಯುವ ಅಥವಾ ಬೌದ್ಧಿಕ ಚೌರ್ಯ ನಡೆಸುವ ಕಲೆ ಹಲವು ದೇಶಗಳ ಬುದ್ಧಿವಂತ ಕಳ್ಳರಿಗೆ ಲಭಿಸಿದೆ. ‘ಪೇಟೆಂಟ್’ ಇದಕ್ಕೆ ಕಡಿವಾಣ ಹಾಕಬಲ್ಲದು. ವಾಣಿಜ್ಯಿಕವಾಗಿ ರಕ್ಷಣೆ ಒದಗಿಸಬಲ್ಲದು. ಕದ್ದವರನ್ನು ಅಂತರರಾಷ್ಟ್ರೀಯ ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಿ, ಭಾರೀ ಮೊತ್ತದ ದಂಡ ಕಕ್ಕಿಸಲು ಪೇಟೆಂಟ್‌ನಿಂದ ಮಾತ್ರ ಸಾಧ್ಯ.
ವಿಶ್ವಕ್ಕೆ ‘ಸೊನ್ನೆ’ ಕೊಟ್ಟವರು ನಾವು. ವಿಶ್ವದಲ್ಲೇ ಮೊದಲ ಬಾರಿಗೆ ಭಾರತೀಯರೇ ತುಕ್ಕು ಹಿಡಿಯದ ಉಕ್ಕು ತಯಾರಿಕೆ ಮಾಡಿದ್ದರು... ಹೀಗೆ ಹಲವು ಪ್ರಥಮಗಳನ್ನು ಹೇಳಿಕೊಳ್ಳುವ ನಾವು ಆಧುನಿಕ ಯುಗದಲ್ಲಿ ನಮ್ಮಲ್ಲಿ ಆಗುತ್ತಿರುವ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಎಷ್ಟು ಪೇಟೆಂಟ್ ಪಡೆದುಕೊಂಡಿದ್ದೇವೆ ಎಂಬುದನ್ನು ಜಾಗತಿಕ ಮಾಪನದಲ್ಲಿಟ್ಟು ಅಳೆಯಲು ಹೋದರೆ ಸ್ಥಿತಿ ಅಷ್ಟೇನೂ ಉತ್ತೇಜನದಾಯಕವಾಗಿಲ್ಲ. ಮೊದಲಿಗೆ ಸಂಶೋಧಕರ ಸಂಖ್ಯೆಯನ್ನು ತೆಗೆದುಕೊಳ್ಳೊಣ, ಆ ಮೇಲೆ ಪೇಟೆಂಟ್ ವಿಷಯಕ್ಕೆ ಬರೋಣ; ಯುನೆಸ್ಕೋ ಇನ್ಸ್‌ಟಿಟ್ಯೂಟ್ ಆಫ್ ಸ್ಟಾಟಿಸ್ಟಿಕ್ಸ್ 2016 ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಪ್ರತಿ 10 ಲಕ್ಷ ಜನರಲ್ಲಿ ದಕ್ಷಿಣ ಕೊರಿಯಾದಲ್ಲಿ 7,100, ಜಪಾನ್‌ನಲ್ಲಿ 5,210, ಅಮೆರಿಕಾ 4,313, ಯೂರೋಪಿಯನ್ ಒಕ್ಕೂಟ 3,749, ಚೀನಾ 1,206 ಸಂಶೋಧಕರಿದ್ದರೆ, ಭಾರತದಲ್ಲಿ 216 ಮಂದಿ ಮಾತ್ರ ಇದ್ದರು.
ಪೇಟೆಂಟ್ ಪಡೆಯುವ ರೇಸ್‌ನಲ್ಲಿ ಭಾರತ ತೀರಾ ಹಿಂದುಳಿದಿದೆ ಎಂಬುದನ್ನು ಅಂಕಿ– ಅಂಶಗಳು ಬೊಟ್ಟು ಮಾಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದ ಸ್ವಲ್ಪಮಟ್ಟಿನ ಉತ್ತೇಜನ ಸಿಗುತ್ತಿದೆ. ವರ್ಲ್ಡ್ ಇಂಟೆಲೆಕ್ಚುವಲ್ ಪ್ರಾಪರ್ಟಿ ಆರ್ಗನೈಸೇಷನ್‌ನ (ಡಬ್ಲ್ಯುಐಪಿಒ) ವರದಿಯ ಪ್ರಕಾರ ಚೀನಾ 13,81,594 ಅರ್ಜಿಗಳನ್ನು ಸಲ್ಲಿಸಿದ್ದರೆ 4,20,144 ಗೆ ಒಪ್ಪಿಗೆ ಸಿಕ್ಕಿದೆ. ಅಮೆರಿಕಾದಲ್ಲಿ 6,06,956 ಅರ್ಜಿಗಳು ಸಲ್ಲಿಕೆಯಾಗಿದ್ದರೆ, 3,18,829ಕ್ಕೆ ಒಪ್ಪಿಗೆ ಸಿಕ್ಕಿದೆ. ಜಪಾನ್‌ನಲ್ಲಿ 3,18,481 ಅರ್ಜಿಗಳು ಸಲ್ಲಿಕೆಯಾಗಿದ್ದರೆ 1,99,577 ಕ್ಕೆ ಒಪ್ಪಿಗೆ ಸಿಕ್ಕಿದೆ. ಯುರೋಪ್ ಒಕ್ಕೂಟದಿಂದ 1,66,585 ಅರ್ಜಿ ಸಲ್ಲಿಕೆಯಾಗಿದ್ದರೆ 1,05,645 ಕ್ಕೆ ಒಪ್ಪಿಗೆ ಸಿಕ್ಕಿದೆ. ಭಾರತದಲ್ಲಿ 46,582 ಅರ್ಜಿ ಸಲ್ಲಿಕೆಯಾಗಿದ್ದು, 12,387 ಕ್ಕೆ ಒಪ್ಪಿಗೆ ಸಿಕ್ಕಿದೆ. ಯಾರು ಯಾವುದೇ ದೇಶಕ್ಕೆ ಹೋಗಿ ಅಲ್ಲಿಂದ ಪೇಟೆಂಟ್‌ಗೆ ಅರ್ಜಿ ಸಲ್ಲಿಸಬಹುದು. ವಿದೇಶಗಳಲ್ಲಿ ಆ ಪ್ರಕ್ರಿಯೆ ಬೇಗನೆ ನಡೆಯುತ್ತದೆ. ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ಪಡೆಯಬಹುದು.
ಪೇಟೆಂಟ್ ಪಡೆಯಲು ವೈಯಕ್ತಿಕವಾಗಿ ಅರ್ಜಿ ಸಲ್ಲಿಸಲು ₹1.30 ಲಕ್ಷದವರೆಗೆ ಆಗುತ್ತದೆ. ಕಂಪನಿಗಳು ಪೇಟೆಂಟ್‌ಗೆ ಸಲ್ಲಿಸಿದರೆ ಆ ಮೊತ್ತ ಹಲವು ಪಟ್ಟು ಹೆಚ್ಚಾಗುತ್ತದೆ, ಅಂದರೆ, ₹30 ಲಕ್ಷದಿಂದ ₹50 ಲಕ್ಷದವರೆಗೆ ವೆಚ್ಚವಾಗುತ್ತದೆ. ನಿರ್ದಿಷ್ಟ ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಬೇರೆ ಯಾರು ಅರ್ಜಿ ಸಲ್ಲಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತು ತಮ್ಮದೇ ವಿಶಿಷ್ಟ ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಿ ಪೇಟೆಂಟ್ ಪಡೆದುಕೊಳ್ಳಬೇಕು. ಆಗ ಮಾತ್ರ ಆವಿಷ್ಕಾರಕ್ಕೆ ಕಾನೂನಿನ ರಕ್ಷಣೆ ಸಿಗುತ್ತದೆ.
ವಿವಿಧ ರಾಜ್ಯಗಳಲ್ಲಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸುವ ಪ್ರವೃತ್ತಿ ಆಶಾದಾಯಕವಾಗಿಲ್ಲ. ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ, ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದೆ. ವಿಜ್ಞಾನ–ತಂತ್ರಜ್ಞಾನ ಮತ್ತು ಐಟಿ ರಾಜಧಾನಿ ಎಂದು ಬೆನ್ನು ತಟ್ಟಿಕೊಳ್ಳುವ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ ಎನ್ನುತ್ತದೆ ನೀತಿ ಆಯೋಗದ ಅಂಕಿ– ಅಂಶಗಳು. ಇನ್ನೂ ಅಚ್ಚರಿಯ ಸಂಗತಿ ಎಂದರೆ ವಿಜ್ಞಾನ–ತಂತ್ರಜ್ಞಾನ ಬೋಧಿಸುವ ಶೈಕ್ಷಣಿಕ ಸಂಸ್ಥೆಗಳ ಪೈಕಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸುವ ಸಂಖ್ಯೆ ಸರ್ಕಾರಿ ಸಂಸ್ಥೆಗಳಿಗಿಂತ ಮತ್ತು ಖಾಸಗಿ ಸಂಸ್ಥೆಗಳೇ ಹೆಚ್ಚು. ಭಾರತದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಾಗಲಿ, ಐಐಟಿಗಳಾಗಲಿ ಮೊದಲ ಹತ್ತು ಸಂಸ್ಥೆಗಳಲ್ಲಿ ರ್‍ಯಾಂಕಿಂಗ್ ಪಡೆದುಕೊಂಡಿಲ್ಲ. ಹಾಗೆಂದು ಅಲ್ಲಿ ಸಂಶೋಧನೆಗಳು ಆವಿಷ್ಕಾರಗಳು ನಡೆಯುತ್ತಾ ಇಲ್ಲ ಎಂದೇನಲ್ಲ, ಪೇಟೆಂಟ್ ಪಡೆಯುವತ್ತ ವಿಶೇಷ ಗಮನ ಹರಿಸಿಲ್ಲ.
‘2023 ರ ಪ್ರಕಾರ, ಜಾಗತಿಕ ಆವಿಷ್ಕಾರ ಸೂಚ್ಯಂಕದ ಪ್ರಕಾರ 132 ದೇಶಗಳಲ್ಲಿ ಭಾರತ 40 ನೇ ಸ್ಥಾನವನ್ನು ಉಳಿಸಿಕೊಂಡಿದೆ. 10 ವರ್ಷಗಳಿಂದೀಚೆಗೆ ಪೇಟೆಂಟ್‌ಗೆ ಅರ್ಜಿ ಹಾಕುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ಅರ್ಜಿ ಸಲ್ಲಿಸುವ ಪ್ರಮಾಣ ಶೇ 31.6 ಇದು ಇತ್ತೀಚಿನ ವರ್ಷಗಳಲ್ಲೇ ಅಧಿಕ’ ಎನ್ನುತ್ತಾರೆ ನೀತಿ ಆಯೋಗ ಉಪಾಧ್ಯಕ್ಷ, ಸುಮನ್ ಬೆರಿ.
ವೈಸ್ ವರ್ಕ್ ಕಂಪನಿಯ ಮುಖ್ಯಕಾರ್ಯ ನಿರ್ವಹಣಾ ಧಿಕಾರಿ ಡಾ.ಮದನ್ ಕುಮಾರ್ ಶ್ರೀನಿವಾಸನ್ ಅವರ ಪ್ರಕಾರ, ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ, ಅರಿವಿನ ಕೊರತೆ ಮತ್ತು ಇತರ ಕಾರಣಗಳಿಂದ ಪೇಟೆಂಟ್‌ಗೆ ಅರ್ಜಿ ಸಲ್ಲಿಸುವವರು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಉತ್ತೇಜನದ ಕಾರಣ ಅರ್ಜಿ ಹಾಕುವವರ ಸಂಖ್ಯೆ ಗಣನೀಯವಾಗಿ ಏರಿದೆ. ಆದರೆ ಏನೇನೂ ಸಾಲದು.
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ
ಚಿತ್ರಗಳು: ಕಣಕಾಲಮಠ
ಕರ್ನಾಟಕದ ಹಳೆಯ ಮತ್ತು ಆಯ್ದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ಆವಿಷ್ಕಾರ ಮತ್ತು ಪೇಟೆಂಟ್ ಸ್ಥಿತಿಗತಿ ಚಿಂತಾಜನಕ ಸ್ಥಿತಿಯಲ್ಲಿವೆ. ಈ ಹಿನ್ನಡೆಗೆ ಅನುದಾನದ ಕೊರತೆಯೇ ಪ್ರಮುಖ ಕಾರಣ ಎಂಬುದು ಈ ವಿಶ್ವವಿದ್ಯಾಲಯಗಳ ಕುಲಪತಿಗಳ ಒಕ್ಕೊರಲಿನ ಅಭಿಪ್ರಾಯ. ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ಮೈಸೂರಿನ ಸಿಎಫ್‌ಟಿಆರ್‌ಐನಿಂದ ಮಾಹಿತಿ ಸಂಗ್ರಹಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಗುಲಬರ್ಗಾ ವಿಶ್ವವಿದ್ಯಾಲಯ ಈವರೆಗೆ 3 ಪೇಟೆಂಟ್ ಮಾತ್ರ ಪಡೆದಿದೆ.
ಕಲಬುರಗಿ ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಇದುವರೆಗೆ 12 ಪೇಟೆಂಟ್‌ಗಳನ್ನು ಪಡೆದುಕೊಂಡಿದೆ.
ಮಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗವು ಆರು ಅಮೆರಿಕದ ಪೇಟೆಂಟ್ ಹಾಗೂ ಐದು ಭಾರತದ ಪೇಟೆಂಟ್ ಪಡೆದುಕೊಂಡಿದೆ.
ಸುರತ್ಕಲ್‌ನ ಎನ್ ಐ ಟಿಕೆ ಯಲ್ಲಿ ಪೇಟೆಂಟ್ ಗಾಗಿ 148 ಅರ್ಜಿಗಳು ಸಲ್ಲಿಕೆಯಾಗಿವೆ. 75 ಕ್ಕೆ ಪೇಟೆಂಟ್ ದೊರೆತಿದೆ.
ಮೈಸೂರು ವಿಶ್ವವಿದ್ಯಾಲಯ 49 ಅರ್ಜಿಗಳನ್ನು ಸಲ್ಲಿಸಿತ್ತು. ಅವುಗಳಲ್ಲಿ 31ಕ್ಕೆ ಪೇಟೆಂಟ್ ಸಿಕ್ಕಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಎರಡು ಪೇಟೆಂಟ್ ಪಡೆದಿವೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಸಂಶೋಧನೆಗೆ ಸಂಬಂಧಿಸಿದಂತೆ ಒಟ್ಟು 23 ಪೇಟೆಂಟ್‌ಗಳನ್ನು ಪಡೆದಿದೆ.
ಬೆಂಗಳೂರು ವಿಶ್ವವಿದ್ಯಾಲಯ 70 ಪೇಟೆಂಟ್‌ಗಳನ್ನು ಪಡೆದಿದೆ.
ಬೆಂಗಳೂರಿನ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್) 2012 ರಿಂದ 21 ರ ಅವಧಿಯಲ್ಲಿ 83 ಪೇಟೆಂಟ್‌ಗಳನ್ನು ಪಡೆದಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಪೇಟೆಂಟ್ ಅರ್ಜಿ ಸಲ್ಲಿಕೆ ಮತ್ತು ಪೇಟೆಂಟ್ ಪಡೆದ ದತ್ತಾಂಶ ಇಟ್ಟುಕೊಂಡಿಲ್ಲ ಎಂದು ಸಂಸ್ಥೆಯ ನಿರ್ದೇಶಕಿ ಪ್ರತಿಮಾ ಮೂರ್ತಿ ಹೇಳಿದ್ದಾರೆ.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪೇಟೆಂಟ್ ಪಡೆಯುವ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
ಚಿತ್ರ: ಕಣಕಾಲಮಠ
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಅನಾಲಿಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿ 121 ಪೇಟೆಂಟ್‌ಗಳನ್ನು ಪಡೆದಿರುವ ಬೆಂಗಳೂರಿನ ಯುವ ಸಂಶೋಧಕ ಡಾ.ಮದನ್ ಕುಮಾರ್ ಶ್ರೀನಿವಾಸನ್ ಅವರು ಪೇಟೆಂಟ್ ಪಡೆಯುವ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ‘ಇಂಡಿಯಾ ಪೇಟೆಂಟ್ ಇನಿಷಿಯೇಟಿವ್’ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಬಹುತೇಕ ಎಲ್ಲ ಪೇಟೆಂಟ್‌ಗಳು ವಾಣಿಜ್ಯಿಕವಾಗಿ ಯಶಸ್ವಿ ಉತ್ಪನ್ನವಾಗಿ ಮಾರುಕಟ್ಟೆಯಲ್ಲಿವೆ. ವಿಶ್ವವ್ಯಾಪಿ 300 ಕ್ಕೂ ಹೆಚ್ಚು ಕಂಪನಿಗಳು ಇವರ ಆವಿಷ್ಕಾರದ ಗ್ರಾಹಕರಾಗಿ ಸೇವೆ ಪಡೆದಿವೆ. ಆಕ್ಸೆಂಚರ್‌ನ ಕ್ಲೌಡ್ ಎಐ ವಿಭಾಗದ ಸ್ಥಾಪಕರು ಇವರು.
‘ಭಾರತದಲ್ಲಿ ಸಾಕಷ್ಟು ಸಂಶೋಧನೆ ಮತ್ತು ಆವಿಷ್ಕಾರಗಳೂ ನಡೆಯುತ್ತಿವೆ. ಆದರೆ ಪೇಟೆಂಟ್ ಪಡೆಯುವ ಬಗ್ಗೆ ಯಾರೂ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಅರಿವಿನ ಕೊರತೆ ಬಹಳ ಮುಖ್ಯ. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಈ ಬಗ್ಗೆ ಆಸಕ್ತಿ ಹೊಂದಿಲ್ಲ. ಎಲ್ಲದಕ್ಕೂ ಅನುದಾನದ ಕೊರತೆ ಎಂದು ಕಾರಣ ಮುಂದಿಡುತ್ತಾರೆ’ ಎಂದು ಅವರು ತಿಳಿಸಿದರು.
‘ಐಐಟಿ, ಐಐಎಸ್‌ಸಿ ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳು ಸೈನ್ಸ್ ಪೇಪರ್ ಮಂಡಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತವೆಯೇ ಹೊರತು ಪೇಟೆಂಟ್‌ಗೆ ಆದ್ಯತೆ ನೀಡುತ್ತಿಲ್ಲ. ಪೇಟೆಂಟ್ ಪಡೆದೂ ಆ ಬಳಿಕ ಸೈನ್ಸ್ ಪೇಪರ್ ಮಂಡಿಸುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಐಐಟಿಗಳಲ್ಲಿ ಪಿಎಚ್.ಡಿ ಪಡೆಯಲು ಎರಡು ಸೈನ್ಸ್ ಪೇಪರ್ ಅಥವಾ ಒಂದು ಪೇಟೆಂಟ್ ಪಡೆದಿರಬೇಕು ಎಂಬ ನಿಯಮವಿದೆ. ಆದರೂ ಯಾರೂ ಪೇಟೆಂಟ್ ಪಡೆಯಲು ಹೋಗುವುದಿಲ್ಲ’ ಎಂದು ವಿವರಿಸಿದರು.
ಸಂಶೋಧನೆ ಮತ್ತು ಆವಿಷ್ಕಾರಗಳ ಅನ್ವಯ ಹೆಚ್ಚಾಗಿ ಕೃಷಿ, ಆಹಾರ, ಕೈಗಾರಿಕೆ, ಔಷಧ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಕಂಡು ಹಿಡಿದ ಲಸಿಕೆ ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ. ವಂಶವಾಹಿ ತಿದ್ದುಪಡಿಗೆ ಬಳಸುವ ಕ್ರಿಸ್ಪಾರ್ ಟೂಲ್ ಕೂಡಾ ಮತ್ತೊಂದು ಜನಪ್ರಿಯ ನಿದರ್ಶನ. ಕೃಷಿ ವಿಶ್ವವಿದ್ಯಾಲಯಗಳ ಸಾಕಷ್ಟು ಪೇಟೆಂಟ್‌ಗಳು ಬಳಕೆಗೆ ಬರುತ್ತವೆ. ವೈವಿಧ್ಯ ತಳಿಗಳು, ಕೃಷಿ ಯಂತ್ರೋಪಕರಣಗಳ ತಂತ್ರಜ್ಞಾನ ಇತ್ಯಾದಿ. ಈ ನಿಟ್ಟಿನಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ಆವಿಷ್ಕಾರಗಳನ್ನು ಕಾರ್ಯಗತಗೊಳಿಸಿ ‘ಅನ್ನದ ಬಟ್ಟಲಿಗೆ’ ಬರುವಂತೆ ಮಾಡಿರುವ ಕಾರಣ, ಆ ಉತ್ಪನ್ನಗಳು ಸಾಕಷ್ಟು ಜನಪ್ರಿಯವಾಗಿವೆ.
ಮೈಸೂರಿನ ಸಿಎಫ್‌ಟಿಆರ್‌ಐ 65 ಭಾರತೀಯ ಪೇಟೆಂಟ್ ಮತ್ತು 4 ಅಂತರರಾಷ್ಟ್ರೀಯ ಪೇಟೆಂಟ್‌ಗಳನ್ನು ಹೊಂದಿದೆ. ಇವೆಲ್ಲವೂ ಆಹಾರ ಸಂಸ್ಕರಣೆ ಹಾಗೂ ಉತ್ಪನ್ನಗಳ ಆವಿಷ್ಕಾರವಾಗಿವೆ. ಕಳೆದ ವರ್ಷ 150ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ನವೋದ್ಯಮಗಳಿಗೆ ನೀಡುವ ಒಪ್ಪಂದ ಮಾಡಿಕೊಂಡಿದೆ. ಪ್ರತಿ ವರ್ಷ 20ರಿಂದ 30 ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸುತ್ತಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್.
ಎರಡು ವರ್ಷಗಳಲ್ಲಿ ರಾಜ್ಯದಿಂದ ಪೇಟೆಂಟ್‌ಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗಿದೆ. 2,100 ಅರ್ಜಿಗಳು ಸಲ್ಲಿಕೆಯಾಗಿದ್ದು, 80 ಕ್ಕೆ ಪೇಟೆಂಟ್ ಸಿಕ್ಕಿದೆ. ನಮ್ಮ ಸಂಸ್ಥೆ ವತಿಯಿಂದ ಪೇಟೆಂಟ್‌ಗೆ ಅರ್ಜಿ ಹಾಕುವುದರಿಂದ ಹಿಡಿದು ವಿವಿಧ ಪ್ರಕ್ರಿಯೆಗಳ ಬಗ್ಗೆ ಉಚಿತವಾಗಿ ಮಾರ್ಗದರ್ಶನ ಮಾಡುತ್ತೇವೆ. ಎಂಜಿನಿಯರಿಂಗ್ ಕಾಲೇಜುಗಳು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಈ ಸಂಬಂಧ ತರಬೇತಿ ನೀಡುತ್ತಿದ್ದೇವೆ. ಈಗಿಗ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ
ಡಾ.ಯು.ಟಿ.ವಿಜಯ್, ಕಾರ್ಯದರ್ಶಿ (ಕಾರ್ಯನಿರ್ವಾಹಕ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಡಾ.ಯು.ಟಿ.ವಿಜಯ್
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪೇಟೆಂಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ದುಬಾರಿ ಆಗಿದ್ದರಿಂದ ಕಡಿಮೆ ಗ್ರೇಡ್ ಹೊಂದಿದ ವಿ.ವಿ.ಗಳು ಇಷ್ಟು ಹಣ ಖರ್ಚು ಮಾಡಲು ಮುಂದಾಗುವುದಿಲ್ಲ. ಸರ್ಕಾರ ಅನುದಾನ ನೀಡಿದರೆ ಪೇಟೆಂಟ್ ಪಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದು
ಪ್ರೊ.ದಯಾನಂದ ಅಗಸರ, ಕುಲಪತಿ, ಗುಲಬರ್ಗಾ ವಿಶ್ವವಿದ್ಯಾಲಯ
ಕೋವಿಡ್– 19 ಪೂರ್ವದಲ್ಲಿ ಯುಜಿಸಿ ಹಾಗೂ ಬೇರೆ ಬೇರೆ ಏಜೆನ್ಸಿಗಳಿಂದ ಸಂಶೋಧನೆಗೆ ಆರ್ಥಿಕ ನೆರವು ದೊರೆಯುತ್ತಿತ್ತು. ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಭಾಗಗಳಿಗೆ ಫೆಲೊಷಿಪ್‌ಗಳು ಸಿಗುತ್ತಿದ್ದವು. ಯುವ ಸಂಶೋಧಕರಿಗೆ ಇದು ವರದಾನವಾಗಿತ್ತು. ಅದು ಈಗ ನಿಂತು ಹೋಗಿದೆ
ಪ್ರೊ. ಪಿ.ಎಲ್.ಧರ್ಮ, ಕುಲಪತಿ, ಮಂಗಳೂರು ವಿಶ್ವವಿದ್ಯಾಲಯ
ವಿಜ್ಞಾನಿಗಳು ಸಂಶೋಧಿಸಿದ ಹೊಸ ತಳಿಗಳನ್ನು ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ ವೆರೈಟೀಸ್ ಅಂಡ್ ಫಾರ್ಮಸ್ ರೈಟ್ಸ್ ಅಥಾರಿಟಿಗೆ (ಪಿಪಿವಿಎಫ್ಆರ್‌ಎ) ಸಲ್ಲಿಸುತ್ತೇವೆ. ಆ ಸಂಸ್ಥೆಯು ಪರಿಶೀಲಿಸಿ ಪ್ರಮಾಣ ಪತ್ರ ನೀಡುತ್ತದೆ. ಪೇಟೆಂಟ್ ನಿಟ್ಟಿನಲ್ಲಿ ಏಜೆಂಟ್ ಮೂಲಕ ಸಂಬಂಧಪಟ್ಟ ಸಂಸ್ಥೆಗೆ ಅರ್ಜಿ ಸಲ್ಲಿಸುತ್ತೇವೆ. ಕಾನೂನು ವಿಚಾರ ಮೊದಲಾದವನ್ನು ಏಜೆಂಟ್ ನಿರ್ವಹಿಸುತ್ತಾರೆ
ಪ್ರೊ. ಬಿ.ಡಿ.ಬಿರಾದಾರ, ಧಾರವಾಡ ಕೃಷಿ ವಿವಿ
ಸಾಕಷ್ಟು ಸಂಶೋಧಕರು ಅಕಾಡೆಮಿಕ್ ವಲಯದ ಸಂಶೋಧನೆಗಳನ್ನು ತಂತ್ರಜ್ಞಾನ ಅನ್ವಯಕ್ಕೆ ಉದ್ಯಮಗಳಿಗೆ ಕೊಡುತ್ತಿಲ್ಲ. ಕೈಗಾರಿಕೆಗಳು ನಮ್ಮ ಅನ್ವೇಷಣೆಯನ್ನೇ ಅಲ್ಪಸ್ವಲ್ಪ ಮಾರ್ಪಾಡು ಮಾಡಿ ಅದಕ್ಕೆ ಪೇಟೆಂಟ್ ಪಡೆದು ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ನಾನು 100 ಅರ್ಜಿ ಹಾಕಿದ್ದು, 40 ಕ್ಕೆ ಪೇಟೆಂಟ್ ಪಡೆದಿದ್ದೇನೆ.
ಪ್ರೊ.ಕೆ.ಆರ್.ವೇಣುಗೋಪಾಲ, ವಿಶ್ರಾಂತ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ
ಕಳೆದ ಹತ್ತು ವರ್ಷಗಳಲ್ಲಿ 1,143 ಅರ್ಜಿಗಳನ್ನು ಸಲ್ಲಿಸಿದ್ದು, 694 ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಇವುಗಳಲ್ಲಿ ಫಾರ್ಮಾಸ್ಯುಟಿಕಲ್ ಉತ್ಪನ್ನಗಳಿಗೆ ಸಂಬಂಧಿಸಿದಂತೆ 481, ಮಾಪನ, ಪರೀಕ್ಷೆ ಮತ್ತು ನ್ಯಾವಿಗೇಷನ್‌ಗೆ ಸಂಬಂಧಿಸಿದಂತೆ 417 ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಗೆ 406 ಪೇಟೆಂಟ್‌ಗಳನ್ನು ಪಡೆದುಕೊಂಡಿದೆ.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಪೇಟೆಂಟ್ ಹೊಂದಿದ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ವಾಣಿಜ್ಯಿಕವಾಗಿ ಮಹತ್ವ ಪಡೆದಿವೆ. ಸಂಶೋಧನೆಗಳು ಕೇವಲ ಪ್ರಯೋಗಾಲಯದಲ್ಲಿ ಉಳಿಯದೇ ಉತ್ಪನ್ನವಾಗಿ ಮಾರುಕಟ್ಟೆಗೆ ಹೋಗುತ್ತಿದೆ. ಈ ವಿದ್ಯಮಾನ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಐಐಎಸ್‌ಸಿಯ ಐಪಿಟಿಇಎಲ್ (ಇಂಟೆಲಕ್ಚ್ಯುವಲ್ ಪ್ರಾಪರ್ಟಿ ಅಂಡ್ ಟೆಕ್ನಾಲಜಿ ಲೈಸೆನ್ಸಿಂಗ್) ಅಧ್ಯಕ್ಷ ಪ್ರೊ.ಸೂರ್ಯಸಾರಥಿ ಬೋಸ್ ಹೇಳಿದ್ದಾರೆ.
ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ ರಾಜ್ಯಗಳು(2023)
ತಮಿಳುನಾಡು;7686
ಮಹಾರಾಷ್ಟ್ರ;5626
ಉತ್ತರಪ್ರದೇಶ;5664
ಕರ್ನಾಟಕ;5408
ಪಂಜಾಬ್;3405
ತೆಲಂಗಾಣ;2438
ದೆಹಲಿ;1960
ಉತ್ತರಖಂಡ್;1637
ಆಂಧ್ರಪ್ರದೇಶ;1445
ರಾಜಸ್ತಾನ;1278
ಗುಜರಾತ್;1215
ಹರಿಯಾಣ;959
ಪಶ್ಚಿಮ ಬಂಗಾಳ;646
ಮಧ್ಯಪ್ರದೇಶ;646
ಒಡಿಶಾ;567
ಚಂಡಿಗಢ;507
ಕೇರಳ;497
ಜಾರ್ಖಂಡ್;353
ಛತ್ತಿಸ್‌ಗಢ;313
ಹಿಮಾಚಲ ಪ್ರದೇಶ;279
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.