ADVERTISEMENT

ಒಳನೋಟ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2023, 11:47 IST
Last Updated 9 ಏಪ್ರಿಲ್ 2023, 11:47 IST

‘ಸಂರಕ್ಷಣೆಯ ಸಾಧನೆ, ಸವಾಲು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಏಪ್ರಿಲ್‌ 09) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘50ರ ಸಂಭ್ರಮ ಸಾರ್ಥಕ’

ಹುಲಿ ಸಂರಕ್ಷಣೆಗೆ ಮೈಸೂರು ಅರಸರು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ವಿಶೇಷ ಕಾಳಜಿ ಜಾರಿಗೊಳಿಸಿದ ಹುಲಿ ಯೋಜನೆ ಪ್ರಯತ್ನದ ಫಲವಾಗಿ ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. ನೂತನ ತಂತ್ರಜ್ಞಾನ, ಆರಣ್ಯ ಸಿಬ್ಬಂದಿಗಳ ಪರಿಶ್ರಮ ಸರ್ಕಾರಗಳ‌ ನಿರಂತರ ಕಾಳಜಿಯಿಂದ ಹುಲಿ ಸಂತತಿ ಅಧಿಕವಾಗಿದೆ.
–ನ.ಲಿ. ಕೃಷ್ಣ, ಮದ್ದೂರು

ADVERTISEMENT

***

‘ಆಹಾರ ಕೊರತೆ ಎದುರಾಗಬಹುದು’
ಹುಲಿ ಸಂತತಿ ಗಣತಿ ಪ್ರಕಾರ ಹೆಚ್ಚುತಿದ್ದರು ವಾಸ್ತವ ಅರಿಯಬೇಕಾಗುತ್ತದೆ. ಸಂರಕ್ಷಿತ ಪ್ರದೇಶದ ಸುರಕ್ಷತೆ ಕೂಡ ಮುಖ್ಯ. ಕಾಡುಗಳಲ್ಲಿ ಬಹುತೇಕ ಪ್ರಾಣಿಗಳ ಆಹಾರ ಹುಲ್ಲು. ಲಂಟಾನಾ ಕಳೆ ನಿಯಂತ್ರಿಸಿ ಬಲಿ ಪ್ರಾಣಿಗಳಿಗೆ ಬೇಕಾಗುವ ಹುಲ್ಲನ್ನು ಬೆಳೆಸಬೇಕು. ಇಲ್ಲದಿದ್ದರೆ ಹುಲಿ, ಚಿರತೆ, ತೋಳದಂತ ಬೇಟೆ ಪ್ರಾಣಿಗಳಿಗೆ ಆಹಾರದ ಕೊರತೆ ಎದುರಾಗುತ್ತದೆ. ಆದ್ದರಿಂದ ದೇಶದ ಕಾಡುಗಳಲ್ಲಿ ಆಹಾರ ಸರಪಳಿಗೆ ದಕ್ಕೆಯಾಗದಂತೆ ನೂತನ ಉಪಾಯ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಬಹುದು.
–ಸೊ. ಸಿ. ಪ್ರಕಾಶ್, ಮಂಡ್ಯ

***

‘ಕಾಡಿನ ರಕ್ಷಣೆಯೇ ಹುಲಿಗಳ ರಕ್ಷಣೆ’
ಬಂಡೀಪುರ ಹುಲಿ ಅಭಯಾರಣ್ಯ 1973ರ ಸ್ಥಾಪನೆಗೊಂಡು 50ರ ಸಂಭ್ರಮವನ್ನು ಆಚರಣೆ ಮಾಡಿಕೊಳ್ಳುತ್ತಿದೆ. ನಾಡಿನ ವನ್ಯಮೃಗಗಳ ಸಂರಕ್ಷಣೆಯ ಹಾದಿ, ಅಭಿವೃದ್ಧಿಗೊಳಿಸಿದ ಅರಣ್ಯ ಸಿಬ್ಬಂದಿ ಪಾತ್ರ ಶ್ಲಾಘನೀಯ. ಆದರೆ, ಬಂಡೀಪುರ ಅರಣ್ಯವಾಸಿಗಳ ತಮ್ಮ ಮೂಲ ನೆಲೆಗಳನ್ನು ಬಿಟ್ಟು ಅಭಯಾರಣ್ಯ ಸ್ಥಾಪನೆಗೆ ಅನುವು ಮಾಡಿಕೊಟ್ಟಂತಹ ನಿವಾಸಿಗಳಿಗೆ ಸರ್ಕಾರವು ಇದುವರೆಗೂ ಸರಿಯಾದ ಮೂಲಸೌಕರ್ಯಗಳ ಜೊತೆಗೆ ಪುನರ್ವಸತಿ ಕಲ್ಪಿಸುತ್ತಿಲ್ಲ. ಇತ್ತೀಚೆಗೆ ಬಂಡೀಪುರವ ಸೇರಿ ಇತರೆ ಅಭಯಾರಣ್ಯಗಳ ಸುತ್ತಮುತ್ತಲಿನ ಮಾನವ ವಸತಿ ಪ್ರದೇಶಗಳಲ್ಲಿ ವನ್ಯಮೃಗಗಳ ಹಾವಳಿ ಮೀತಿಮೀರಿದೆ. ಹಾಗಾಗಿ, ಸರ್ಕಾರ ಹುಲಿಗಳ ವಿಷಯದಲ್ಲಿ ಅವುಗಳ ತಳಿ ವೈವಿಧ್ಯತೆಯ ಹಾದಿಯಲ್ಲಿ ಜೀವಿಸುವುದಕ್ಕೆ ಆದ್ಯತೆ ನೀಡಬೇಕು.
–ಬೀರಪ್ಪ ಡಿ.ಡಂಬಳಿ, ಬೆಳಗಾವಿ

***

‘ಹುಲಿಗಳ ವೈವಿಧ್ಯಮಯ ತಳಿ ಬೇಕೆನ್ನುವ ಕೂಗಿಗೆ ಮನ್ನಣೆ ಸಿಗಲಿ’
ಬದ್ಧತೆ ಇದ್ದರೆ ಸಾಧನೆ ಸಾಧ್ಯ ಎಂಬುದಕ್ಕೆ ಹುಲಿ ಯೋಜನೆ ನಿದರ್ಶನವಾಗಿದೆ. ಅಳಿವಿನಂಚಿನಲ್ಲಿದ್ದ ಹುಲಿಗಳ ಸಂರಕ್ಷಣೆಗೆ 1973ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಯೋಜನೆ ರೂಪಿಸಿದ್ದರು. ಸವಾಲುಗಳ ನಡುವೆ ಇದನ್ನು ಸಾಧಿಸಿದ್ದು ಶ್ಲಾಘನಾರ್ಹ. ಹುಲಿ ಸಂತಿತಿ ಹೆಚ್ಚಿಸುವ ಕಾಯಕದಲ್ಲಿ ನಿರತಗೊಂಡ ಪ‍್ರತಿಯೊಬ್ಬರ ಶ್ರಮ ಇಂದು ಸಾರ್ಥಕವಾಗಿದೆ. 2006ರಲ್ಲಿ ಇಳಿಕೆ ಕಂಡಿದ್ದ ಹುಲಿಗಳ ಸಂಖ್ಯೆ 2018ರಲ್ಲಿ ಮತ್ತೆ ಏರಿಕೆ ಕಂಡಿದೆ. ಹುಲಿಗಳ ಸಂರಕ್ಷಣೆಗೆ ತಂತ್ರಜ್ಞಾನದ ನೆರವು, ಅರಣ್ಯ ಸಂರಕ್ಷಕರಿಗೆ ಉತ್ತಮ ಗುಣಮಟ್ಟದ ಶಸ್ತ್ರಾಸ್ತ್ರ ಪೂರೈಕೆಯಂತಹ ಕ್ರಮಗಳು, ಹುಲಿಗಳ ಕಳ್ಳ ಬೇಟೆಯ ಮೇಲಿನ ಹದ್ದಿನಕಣ್ಣು ಮುಂತಾದವು ನಮ್ಮ ರಾಷ್ಟ್ರೀಯ ಪ್ರಾಣಿಯ ಉಳಿವಿಗೆ ಕಾರಣ. ವೈವಿಧ್ಯಮಯ ಹುಲಿಗಳ ತಳಿ ಇರಬೇಕೆನ್ನುವ ಕೂಗಿಗೆ ಮನ್ನಣೆ ಸಿಗಬೇಕು.
–ಸುರೇಶ ಕಲಾಪ್ರಿಯಾ, ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.