ADVERTISEMENT

ಒಳನೋಟ: ಅಭಿಯಾನಗಳಿಗೆ ವರ್ಷದಿಂದ ಬಾರದ ಹಣ

ಸಂತೋಷ ಈ.ಚಿನಗುಡಿ
Published 5 ಮಾರ್ಚ್ 2022, 23:00 IST
Last Updated 5 ಮಾರ್ಚ್ 2022, 23:00 IST
   

ಕಲಬುರಗಿ: ಒಂದು ವರ್ಷದಿಂದ ಜಿಲ್ಲೆಯಲ್ಲಿ ಮಾತೃವಂದನಾ ಮತ್ತು ಪೋಷಣ ಅಭಿಯಾನ ಕಾರ್ಯಕ್ರಮಗಳಿಗೆ ಹಣ ಬಂದಿಲ್ಲ.

2020ರ ಡಿಸೆಂಬರ್‌ನಿಂದ 2021ರ ಡಿಸೆಂಬರ್‌ವರೆಗೂ ಪೋಷಣ ಅಭಿಯಾನಕ್ಕೆ ಹಣ ನೀಡಿಲ್ಲ. ಬಾಲ ವಿಕಾಸ ಸಮಿತಿಗೆ ಪ್ರತಿ ತಿಂಗಳು ₹ 500 ಸಂದಾಯ ಮಾಡಬೇಕು. ಅಂಗನವಾಡಿಯವರು ತಿಂಗಳಲ್ಲಿ ಎರಡು ಜಾಗೃತಿ ಕಾರ್ಯಕ್ರಮ ಮಾಡಬೇಕು. ಆದರೆ, ಇದಕ್ಕೆ ಬೇಕಾದ ಹಣವನ್ನೂ ಇಲಾಖೆ ನೀಡಿಲ್ಲ.

ಆರು ವರ್ಷದೊಳಗಿನ ಮಕ್ಕಳಿಗೆ ಅನ್ನಪ್ರಾಶನ, ಎರಡನೇ ಗರ್ಭ ಧರಿಸಿದವರ ಮಗುವಿಗೆ ಸುಪೋಷಣೆ, ಕಿಶೋರಿಯರು, ಹಿರಿಯರಿಗೆ ಆರೋಗ್ಯ ಅರಿವು– ಹೀಗೆ ಎಲ್ಲ ಕಾರ್ಯಕ್ರಮಗಳೂ ಅನುದಾನ ಕೊರತೆಯ ಕಾರಣ ಸ್ಥಗಿತಗೊಂಡಿವೆ.

ADVERTISEMENT

ಈ ವರ್ಷ ಜನವರಿ ತಿಂಗಳಲ್ಲಿ ಮಾತ್ರ ಹಣ ಬಂದಿದ್ದು, ಎಲ್ಲ ಅಂಗನವಾಡಿಗಳಲ್ಲೂ ಒಂದೊಂದು ಕಾರ್ಯಕ್ರಮ ಮಾತ್ರ ಮಾಡಲಾಗಿದೆ.

‘ಮಾತೃವಂದನಾ’ದಲ್ಲಿ 2020ರ ಡಿಸೆಂಬರ್‌ನಿಂದ ಈವರೆಗೂ ಯಾರಿಗೂ ನೆರವಿನ ಹಣ ಪಾವತಿಸಿಲ್ಲ. ಮೂರು ಕಂತುಗಳಲ್ಲಿ ನೀಡಬೇಕಾದ ₹ 5 ಸಾವಿರ ಹಣಕ್ಕಾಗಿ ಮಹಿಳೆಯರು ವಾರಕ್ಕೊಮ್ಮೆ ಅಂಗನವಾಡಿಗೆ ಅಲೆಯುವಂತಾಗಿದೆ.

‘ತಾಯಿ ಕಾರ್ಡ್‌, ಆರೋಗ್ಯ ವಿವರ, ಅರ್ಜಿ ಭರ್ತಿ ಮಾಡಿ ಕಳುಹಿಸುವ ಕೆಲಸವನ್ನು ನಾವು ನಿಲ್ಲಿಸಿಲ್ಲ. ಹಳ್ಳಿಯ ಜನ ವಾರಕ್ಕೊಮ್ಮೆಯಾದರೂ ಅಂಗನವಾಡಿಗೆ ಬಂದು ತಕರಾರು ತೆಗೆಯುತ್ತಾರೆ. ಆದರೆ, ಇಲಾಖೆ ಹಣ ನೀಡದೇ ಇದ್ದರೆ ನಾವೇನು ಮಾಡಲು ಸಾಧ್ಯ?’ ಎಂಬ ಅಸಹಾಯಕತೆ ಹಲವು ಅಂಗನವಾಡಿ ಕಾರ್ಯಕರ್ತೆಯರದ್ದು.

ಯಾದಗಿರಿ, ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಇತರೆ ಜಿಲ್ಲೆಗಳಲ್ಲೂ ಇದೇ ಸ್ಥಿತಿ ಇದೆ.

‘ಪ್ರತಿ ವಾರ ಮಾತೃವಂದನಾ ಹಣದ ಬಗ್ಗೆ ವಿಚಾರಿಸುತ್ತೇನೆ. ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್‌ ಕಾರಣ ಇನ್ನೂ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಆದರೆ, ತಾಯಿ ಕಾರ್ಡ್‌ ಮಾಡಿಸುವಾಗ ಕಂತಿನಲ್ಲಿ ಹಣ ಬರುತ್ತದೆ ಎಂದು ಹೇಳಿದ್ದರು’

ಎಂದು ಯಾದಗಿರಿ ನಿವಾಸಿ ಶರಣಮ್ಮ ಬಸವರಾಜ ಹೇಳುತ್ತಾರೆ.

‘ಯಾದಗಿರಿ ಜಿಲ್ಲೆಗೆ ₹8 ಕೋಟಿ ಹಣ ಬರಬೇಕಿದೆ. ಆದರೆ, ₹3.50 ಕೋಟಿ ಮಾತ್ರ ಬಂದಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ಮೂರು ತಿಂಗಳಲ್ಲಿ ಪ್ರಥಮ ಕಂತು ₹ 1 ಸಾವಿರ, ಆರು ತಿಂಗಳಲ್ಲಿ ‌₹ 2 ಸಾವಿರ, ಹೆರಿಗೆ ನಂತರ ₹ 2 ಸಾವಿರ ಕೊಡಲಾಗುತ್ತಿದೆ’ ಎಂದು ಬೀದರ್‌ ಜಿಲ್ಲೆ ಔರಾದ್ ಸಿಡಿಪಿಒ ಶಿವಪ್ರಕಾಶ್ ತಿಳಿಸಿದರು.

(ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ಬಿ.ಜಿ.ಪ್ರವೀಣಕುಮಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.