ADVERTISEMENT

ಒಳನೋಟ | ಕ್ರೀಡೆ: ಕ್ರೀಡೆಗಳ ‘ಕಲ್ಯಾಣ’ ಮರೀಚಿಕೆ

ಸತೀಶ್‌ ಬಿ
Published 30 ಏಪ್ರಿಲ್ 2022, 19:31 IST
Last Updated 30 ಏಪ್ರಿಲ್ 2022, 19:31 IST
ತಗ್ಗು ದಿಣ್ಣೆಗಳಿಂದ ಕೂಡಿರುವ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮೈದಾನ
ತಗ್ಗು ದಿಣ್ಣೆಗಳಿಂದ ಕೂಡಿರುವ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮೈದಾನ   

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಯಚೂರಿನಲ್ಲಿ ಸ್ಥಾಪನೆಯಾಗಿರುವ ರಾಯಚೂರು ವಿಶ್ವವಿದ್ಯಾಲಯಗಳಲ್ಲಿ ಕ್ರೀಡಾಪಟುಗಳ ಸಾಧನೆಗಿಂತ ಸೌಲಭ್ಯ ಕೊರತೆಗಳೇ ಹೆಚ್ಚು ಕಂಡು ಬರುತ್ತಿವೆ.

ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕರ ಮೂರು, ತರಬೇತುದಾರರ ಎರಡು ಹುದ್ದೆಗಳನ್ನು ಎರಡು ವರ್ಷಗಳಿಂದ ಭರ್ತಿ ಮಾಡಿಲ್ಲ. ಅಲ್ಲದೆ, ವಿ.ವಿ ವ್ಯಾಪ್ತಿಯ 350 ಕಾಲೇಜುಗಳ ಪೈಕಿ 200ಕ್ಕೂ ಹೆಚ್ಚು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಬೋಧಕರ ಹುದ್ದೆಗಳು ಖಾಲಿ ಇವೆ.

2021–22ನೇ ಸಾಲಿನಲ್ಲಿ ವಿ.ವಿಯ ತಂಡಗಳು 15ಕ್ಕೂ ಹೆಚ್ಚು ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಿವೆ. ಒಂದರಲ್ಲೂ ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. ಇದು ಇಲ್ಲಿನ ಸೌಲಭ್ಯಗಳ ಕೊರತೆ ಮತ್ತು ಗುಣಮಟ್ಟದ ತರಬೇತಿ ಸಿಗದಿರುವುದಕ್ಕೆ ಉದಾಹರಣೆ.

ADVERTISEMENT

ವಿ.ವಿ ಯಲ್ಲಿ ಸಿಂಥೆಟಿಕ್ ಟ್ರ್ಯಾಕ್, ಹಾಕಿ, ಫುಟ್‌ಬಾಲ್ ಮೈದಾನಗಳು ಇಲ್ಲ. ಯಾವುದೇ ಕ್ರೀಡಾಕೂಟಕ್ಕೆ ಹೋಗುವ ಒಂದು ವಾರ ಮುನ್ನ ತರಬೇತಿ ನೀಡಲಾಗುತ್ತದೆ. ಇದರಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದರೂ ಬರಿಗೈಯಲ್ಲಿ ವಾಪಸ್‌ ಬರಬೇಕಾಗಿದೆ ಎನ್ನುವುದು ಕ್ರೀಡಾಪಟುಗಳ ಅಳಲು.

ಕಲಬುರಗಿಯ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಿ ದಶಕ ಕಳೆದರೂ ದೈಹಿಕ ಶಿಕ್ಷಣ ವಿಭಾಗವನ್ನು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಒಬ್ಬ ತಾತ್ಕಾಲಿಕ ತರಬೇತುದಾರ ನೇಮಕಗೊಂಡಿದ್ದಾರೆ. ಎರಡು ಒಳಾಂಗಣ ಬ್ಯಾಡ್ಮಿಂಟನ್ ಅಂಕಣಗಳನ್ನು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಇಲ್ಲ.

‌‘ಪ್ರತಿ ವರ್ಷ ಕ್ರೀಡೆಯಲ್ಲಿ ಆಸಕ್ತಿ ಇರುವವರನ್ನು ಗುರುತಿಸಿ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಕಳಿಸಲಾಗುತ್ತದೆ. ತರಬೇತಿ ಇಲ್ಲದ ಕಾರಣ ವಿದ್ಯಾರ್ಥಿಗಳಿಂದ ಯಾವುದೇ ಸಾಧನೆ ಮೂಡಿಬರುತ್ತಿಲ್ಲ’ ಎನ್ನುತ್ತಾರೆ ವಿ.ವಿಯ ಕ್ರೀಡಾ ತರಬೇತುದಾರ ಡಾ.ಚಿದಾನಂದ ಶಿಂಧೆ.

ರಾಯಚೂರು ವಿಶ್ವವಿದ್ಯಾಲಯವು 2021ರಿಂದ ಸ್ವತಂತ್ರ ಕಾರ್ಯನಿರ್ವಹಣೆ ಆರಂಭಿಸಿದ್ದು, ಇದರ ವ್ಯಾಪ್ತಿಯಲ್ಲಿ 224 ಕಾಲೇಜುಗಳಿವೆ. ಸುಮಾರು 100 ಕಾಲೇಜುಗಳಲ್ಲಿ ಮಾತ್ರ ದೈಹಿಕ ಶಿಕ್ಷಣಕ್ಕೆ ಪೂರಕವಾದ ಸೌಲಭ್ಯಗಳಿವೆ.

'ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಅದನ್ನು ಜಾರಿ ಮಾಡುತ್ತೇವೆ' ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಡಾ.ಹರೀಶ ರಾಮಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.