ADVERTISEMENT

ಒಳನೋಟ: ಆನ್‌ಲೈನ್‌ನತ್ತ ಖಾಸಗಿ ಮಾರುಕಟ್ಟೆ ಒಲವು

ಜಿ.ಬಿ.ನಾಗರಾಜ್
Published 6 ನವೆಂಬರ್ 2021, 22:00 IST
Last Updated 6 ನವೆಂಬರ್ 2021, 22:00 IST
   

ಚಿತ್ರದುರ್ಗ: ಖಾಸಗಿ ಕೃಷಿ ಮಾರುಕಟ್ಟೆ ಸ್ಥಾಪನೆಗೆ ಮುಕ್ತ ಅವಕಾಶ ದೊರೆತರೂ ರಾಜ್ಯದಲ್ಲಿ ಇಂತಹ ಪ್ರಯತ್ನಗಳು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಆದರೆ, ಸ್ಥಳೀಯ ವ್ಯಾಪಾರಿಗಳು, ರೈತರ ಸಂಸ್ಥೆಗಳನ್ನು ಬಳಸಿ ಸಿಂಧನೂರು, ಕಲಬುರಗಿಯಂತಹ ಕಡೆ ಖಾಸಗಿ ಕಂಪನಿಗಳು ಖರೀದಿ ಆರಂಭಿಸಿವೆ. ಆನ್‌ಲೈನ್‌ ವಹಿವಾಟಿಗೂ ಒತ್ತು ನೀಡಿವೆ.

ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಸಿಕ್ಕ ಮುಕ್ತ ಅವಕಾಶವು ಕೃಷಿ ಸಂಬಂಧಿತ ಉದ್ಯಮದಲ್ಲಿ ತೊಡಗಿಸಿಕೊಂಡವರನ್ನು ಆಕರ್ಷಿಸಿದೆ. ಲಾಭ–ನಷ್ಟದ ಲೆಕ್ಕಾಚಾರದಲ್ಲಿ ತೊಡಗಿಕೊಂಡಿರುವ ಅವರು, ಮಾರುಕಟ್ಟೆ ಕಾರ್ಯಾರಂಭಿಸಲು ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ‘ಅಕ್ಷಯ ಫುಡ್‌ ಪಾರ್ಕ್‌’ 2020ರ ಅಕ್ಟೋಬರ್‌ನಲ್ಲೇ ಎಪಿಎಂಸಿ ಸ್ಥಾಪನೆಗೆ ಪರವಾನಗಿ ಪಡೆದಿದೆ. ಫುಡ್‌ ಪಾರ್ಕ್‌ ನಿರ್ಮಿಸುವ ಉದ್ದೇಶದಿಂದ ಪಡೆದ 106 ಎಕರೆ ಭೂಮಿಯಲ್ಲಿ ಖಾಸಗಿ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ.

ADVERTISEMENT

ಎಪಿಎಂಸಿ ಮಾದರಿಯ ಮುಕ್ತ ಟೆಂಡರ್‌ ವ್ಯವಸ್ಥೆ ಇಲ್ಲಿಲ್ಲ. ಅಂತರ್ಜಾಲ ಕೇಂದ್ರಿತ ವಹಿವಾಟಿಗೆ ಒತ್ತು ನೀಡಲಾಗುತ್ತಿದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ–ನಾಮ್‌) ಮಾದರಿಯಲ್ಲಿ ಆ್ಯಪ್‌ ಅಭಿವೃದ್ಧಿಪಡಿಸುವ ಪ್ರಯತ್ನ ನಡೆಯುತ್ತಿದೆ. ಕೋಲ್ಡ್‌ ಸ್ಟೋರೇಜ್‌ನಲ್ಲಿ ದಾಸ್ತಾನು ಮಾಡಿದ ಹಣ್ಣು ಹಾಗೂ ಧಾನ್ಯಗಳನ್ನು ಬೇಡಿಕೆ ಇರುವ ಭಾಗಕ್ಕೆ ರವಾನೆ ಮಾಡಲಾಗುತ್ತದೆ. ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ದಾಸ್ತಾನು ಇಟ್ಟ ರೈತರಿಗೆ ಮಾತ್ರ ಇದರ ಪ್ರತಿಫಲ ಸಿಗಲಿದೆ.

1,250 ಟನ್‌ ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣವಾಗಿದೆ. ಪ್ರತಿ ಚೇಂಬರ್‌ನಲ್ಲಿ 150 ಟನ್‌ ಆಹಾರ ಧಾನ್ಯ ದಾಸ್ತಾನು ಇಡಬಹುದಾಗಿದೆ. ಅನೇಕ ರೈತರು ಹಣ್ಣು, ಧಾನ್ಯಗಳನ್ನು ಇಲ್ಲಿ ಇಡುತ್ತಿದ್ದಾರೆ. ಧಾನ್ಯಗಳ ಸ್ವಚ್ಛತೆ, ಗ್ರೇಡಿಂಗ್‌ ಹಾಗೂ ಪ್ಯಾಕಿಂಗ್‌ ಸೇವೆ ಪಡೆಯುತ್ತಿದ್ದಾರೆ. ಕಾಶ್ಮೀರದ ಸೇಬು ಕೂಡ ಸಂಗ್ರಹಿಸಿ ಇಡಲಾಗುತ್ತಿದೆ.

ಚಳ್ಳಕೆರೆ ತಾಲ್ಲೂಕಿನ ಚೆನ್ನಮ್ಮಹಳ್ಳಿ ಸಮೀಪ, ಟೊಮೆಟೊಗೆ ಖಾಸಗಿ ಮಾರುಕಟ್ಟೆಯೊಂದು ಜುಲೈನಲ್ಲಿ ಸ್ಥಾಪನೆಯಾಗಿದೆ. ಅಂದಾಜು ಹತ್ತು ಎಕರೆ ಪ್ರದೇಶದಲ್ಲಿರುವ ಮಾರುಕಟ್ಟೆಯಲ್ಲಿ ಎಪಿಎಂಸಿ ಮಾದರಿಯಲ್ಲಿ ಬಹಿರಂಗ ಹರಾಜು ನಡೆಯುತ್ತದೆ. ಟೊಮೆಟೊ ಖರೀದಿಸಲು ಉತ್ತರ ಭಾರತದ ವಿವಿಧ ರಾಜ್ಯಗಳ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಿದ್ದಾರೆ.

ರಾಮನಗರದಲ್ಲಿ ಖಾಸಗಿ ಮಾವು ಮಾರಾಟ ಮಂಡಿ ಕಾರ್ಯನಿರ್ವಹಿಸುತ್ತಿದೆ. ಮಾವಿನ ಕೊಯ್ಲು ಅವಧಿಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಮೂರು ವರ್ಷಗಳಿಂದ ಈ ಖಾಸಗಿ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದ್ದು, ಹೊರ ಜಿಲ್ಲೆಗಳಿಂದಲೂ ಇಲ್ಲಿಗೆ ಮಾವು ಬರುತ್ತಿದೆ. ಏಪ್ರಿಲ್‌ನಿಂದ ಆರಂಭವಾಗಿ ಜೂನ್‌ವರೆಗೆ ಮಾತ್ರ ಈ ಮಾರುಕಟ್ಟೆ ತೆರೆದಿರುತ್ತದೆ.

ಮೂರೂ ಕಾಯ್ದೆಗಳನ್ನು ಪರಾಮರ್ಶಿಸಿ

ಕೇವಲ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಹಾನಿಗಳೇನು ಎಂದು ಮಾತ್ರ ನೋಡಿದರೆ ಸತ್ಯ ಸಷ್ಟವಾಗಿ ಕಾಣುವುದಿಲ್ಲ. ಇದರೊಂದಿಗೆ ಖರಾಬು ಗುತ್ತಿಗೆ ವ್ಯವಸಾಯ ಪದ್ಧತಿ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ ತಿದ್ದುಪಡಿಯನ್ನೂ ಸೇರಿಸಿ ಒಟ್ಟಿಗೆ ಪರಾಮರ್ಶಿಸಬೇಕು.

ಗುತ್ತಿಗೆ ವ್ಯವಸಾಯ ಪದ್ಧತಿಯಲ್ಲಿ ಸಣ್ಣಸಣ್ಣ ರೈತರ ಜಮೀನನ್ನು ದೊಡ್ಡ ಕುಳಗಳು ಗುತ್ತಿಗೆ ಪಡೆಯುತ್ತವೆ. ದೇಶದಲ್ಲಿ ಇದು ಈಗಾಗಲೇ ಅನಧಿಕೃತವಾಗಿ ನಡೆದೇ ಇತ್ತು. ಈಗ ಅದಕ್ಕೆ ಕಾನೂನು ರಕ್ಷಣೆ ನೀಡಿದಂತಾಗಿದೆ. ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯು, ಅನಧಿಕೃತ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಯನ್ನು ನಿಯಂತ್ರಿಸುತ್ತಿತ್ತು. ಆದರೆ, ಈ ಕಾಯ್ದೆಯನ್ನೂ ತಿದ್ದುಪಡಿ ಮಾಡಿ ಯಾರು, ಎಷ್ಟು ಬೇಕಾದರೂ ಆಹಾರ ದಾಸ್ತಾನು ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ. ಹಾಗಿದ್ದರೆ, ಎಪಿಎಂಸಿ ಏಕೆ ಬೇಕು ಎಂಬ ಪ್ರಶ್ನೆ ಹುಟ್ಟುತ್ತದೆ. ಇನ್ನೊಂದೆಡೆ, ಕೃಷಿಯಲ್ಲಿ ನೇರ ಹೂಡಿಕೆಗೆ ನಮ್ಮ ಪ್ರಧಾನಿ ಆಹ್ವಾನ ನೀಡಿದ್ದಾರೆ. ಮುಂದೊಂದು ದಿನ ಎನ್‌ಆರ್‌ಐಗಳೇ ಈ ದೇಶದ ಕೃಷಿ ಹಾಗೂ ಮಾರುಕಟ್ಟೆಯನ್ನು ನಿಯಂತ್ರಿಸುತ್ತಾರೆ. ಆಹಾರ ಭದ್ರತೆ, ಉದ್ಯೋಗ ಭದ್ರತೆ ಎರಡೂ ಚಕ್ರಗಳು ಮುರಿದುಬೀಳುತ್ತವೆ.

ಕೆ.ಟಿ.ಗಂಗಾಧರ,ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವರಿಷ್ಠ

ಆದಾಯಕ್ಕಿಂತ ವೆಚ್ಚ ಹೆಚ್ಚು

ಕಲ್ಯಾಣ ಕರ್ನಾಟಕ ಭಾಗದಲ್ಲಿ 300ಕ್ಕೂ ಹೆಚ್ಚು ದಾಲ್‌ಮಿಲ್‌ (ತೊಗರಿ ಖರೀದಿಸಿ ಬೇಳೆ ಮಾಡುವ ಮಿಲ್‌)ಗಳಿವೆ. ಮುಂಚೆ ತೊಗರಿ ಖರೀದಿಗೆ ಎಲ್ಲರೂ ಎಪಿಎಂಸಿಗೇ ಬರಬೇಕಾಗಿತ್ತು. ಪ‍್ರತಿ ವರ್ಷ ಸಂಗ್ರಹವಾಗುತ್ತಿದ್ದ ಸೆಸ್‌ ₹ 8.30 ಕೋಟಿ ದಾಟುತ್ತಿತ್ತು.ಆದರೆ, ಈಗ ₹ 3.20 ಕೋಟಿಗೆ ಕುಸಿಯುತ್ತಿದೆ. ಇದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿದೆ

ಗುರುಬಸಪ್ಪ ಕಣಕಿ,ಅಧ್ಯಕ್ಷ, ಎಪಿಎಂಸಿ ಕಲಬುರಗಿ

ಕತ್ತು ಹಿಸುಕಿದರೆ ಉಳಿಯುವುದುಂಟೇ?

ರಾಜ್ಯದಲ್ಲಿ 173 ಮುಖ್ಯ ಎಪಿಎಂಸಿಗಳು ಕ್ರಿಯಾಶೀಲವಾಗಿದ್ದವು. ಈ ವರ್ಷ 88 ಮಾರುಕಟ್ಟೆಗಳು ವಹಿವಾಟು ನಿಲ್ಲಿಸಿವೆ. ಉಳಿದೆಡೆ ಸಿಬ್ಬಂದಿ ಸಂಬಳ ಕೊಡುವುದಕ್ಕೆ, ವಿದ್ಯುತ್‌ ಶುಲ್ಕ ಭರಿಸುವುದಕ್ಕೂ ಪರದಾಡುವಂತಾಗಿದೆ. ಕಾಯ್ದೆ ತಿದ್ದುಪಡಿಯ ಪರಿಣಾಮ ಒಂದೇ ವರ್ಷದಲ್ಲಿ ಕಣ್ಣಿಗೆ ಕಾಣುತ್ತಿದೆ. ಎಪಿಎಂಸಿಗಳು ರೈತನ ಕತ್ತು ಇದ್ದ ಹಾಗೆ. ಸರ್ಕಾರ ಕತ್ತು ಹಿಸುಕುತ್ತಿದೆ. ರೈತ ಉಳಿಯುವುದುಂಟೇ?

ಎಪಿಎಂಸಿಯಲ್ಲಿ ದರ ಕುಸಿದರೆ ಸರ್ಕಾರದ ಮೂಗು ಹಿಡಿದು ಕೇಳಬಹುದು. ಆದರೆ, ಖಾಸಗಿ ಮಾರುಕಟ್ಟೆಯಲ್ಲಿಯಾರನ್ನು ಯಾರೂ ಕೇಳುವಂತಿಲ್ಲ. ಕಾನೂನು ಚೌಕಟ್ಟೇ ಇಲ್ಲದ ವ್ಯಾಪಾರದಿಂದ ಸರ್ಕಾರಿ ಮಾರುಕಟ್ಟೆಗಳು ಮುಚ್ಚುತ್ತವೆ. ಹಿಂದೆ ಎಪಿಎಂಸಿಗಳೇ ಸರ್ಕಾರಕ್ಕೆ ಸಾಲ ನೀಡುವಷ್ಟು ಬಲಿಷ್ಠವಾಗಿದ್ದವು. ಈಗ ಸರ್ಕಾರ ಅವುಗಳ ಅಸ್ತಿತ್ವವನ್ನೇ ನಿರ್ನಾಮ ಮಾಡಹೊರಟಿದೆ.

ಬಡಗಲಪುರ ನಾಗೇಂದ್ರ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ಹಾಳು ಮಾಡುವುದರಲ್ಲಿ ಬಿಜೆಪಿ ನಂ.1

ಈಗಾಗಲೇ ಶೇ 80ರಷ್ಟು ಮಾರುಕಟ್ಟೆಗಳು ಬಂದ್ ಆಗಿವೆ. ವಹಿವಾಟು ಸ್ಥಗಿತಗೊಂಡಿದೆ. ಕಾಯ್ದೆ ತಿದ್ದುಪಡಿ ಮಾಡಿ ವರ್ಷದಲ್ಲಿಯೇ ಎಪಿಎಂಸಿಗಳಿಗೆ ಇಂಥ ದುಃಸ್ಥಿತಿ ಬಂದಿದೆ. ಇದು ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ರೈತರಿಗೆ ಮಾಡಿದ ದ್ರೋಹದ ಬಹುದೊಡ್ಡ ಕೊಡುಗೆ.

ಎಪಿಎಂಸಿಗಳನ್ನು ಕಟ್ಟಿದವರು ರೈತರು. ಅಲ್ಲಿನ ಆಡಳಿತ ಮಂಡಳಿ ರೈತರದ್ದು. ವ್ಯವಸ್ಥೆಯನ್ನು ಹಾಳು ಮಾಡುವುದರಲ್ಲಿ ಬಿಜೆಪಿಯವರು ನಂ. 1. ಅವರು ಒಂದು ಎಪಿಎಂಸಿ ಕಟ್ಟಿ ತೋರಿಸಲಿ. ಅವರಿಗೆ ಕಟ್ಟುವುದು ಗೊತ್ತೇ ಇಲ್ಲ. ಒಂದು ಎಪಿಎಂಸಿ ಬಂದ್ ಆಗುವುದರಿಂದ ಸಹಸ್ರಾರು ಹಮಾಲರು, ಗುಮಾಸ್ತರು, ವ್ಯಾಪಾರಸ್ಥರು ದಿವಾಳಿ ಆಗುತ್ತಾರೆ. ಹೀಗೆ ಕೋಟಿಗಟ್ಟಲೇ ಜನರನ್ನು ದಿವಾಳಿ ಮಾಡಿ, ಹೊಟ್ಟೆಗೆ ಬಡಿದು ಒಬ್ಬ ಅಂಬಾನಿಗೆ ಅನುಕೂಲ ಮಾಡುವುದು ಯಾವ ನ್ಯಾಯ?

ಕೋಡಿಹಳ್ಳಿ ಚಂದ್ರಶೇಖರ, ಅಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.