ADVERTISEMENT

ಒಳನೋಟ | ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ

ರಾಜೇಶ್ ರೈ ಚಟ್ಲ
Published 6 ಡಿಸೆಂಬರ್ 2025, 23:30 IST
Last Updated 6 ಡಿಸೆಂಬರ್ 2025, 23:30 IST
<div class="paragraphs"><p>– ಸಾಂದರ್ಭಿಕ ಚಿತ್ರ</p></div>

– ಸಾಂದರ್ಭಿಕ ಚಿತ್ರ

   

ಎಐ ಚಿತ್ರ: ಕಣಕಾಲಮಠ

ಬೆಂಗಳೂರು: ರಾಜ್ಯದಲ್ಲಿ ಎಂಬತ್ತಕ್ಕೂ ಹೆಚ್ಚು ನಿಗಮ- ಮಂಡಳಿಗಳು ಸೇರಿದಂತೆ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಸಾರ್ವಜನಿಕ ವಲಯದ 125 ಉದ್ದಿಮೆಗಳಿವೆ. ಆ ಪೈಕಿ ಬಹುತೇಕ, ಇತ್ತೀಚಿನ ದಿನಗಳಲ್ಲಿ ‘ರಾಜಕೀಯ ಪುನರ್ವಸತಿ’ ಕೇಂದ್ರಗಳಾಗಿ ಪರಿವರ್ತಿತಗೊಂಡಿವೆ. ಯಾವುದೊ ಸಾರ್ವಜನಿಕ ಉದ್ದೇಶದಿಂದ, ಸಾಮಾಜಿಕ ಆಶಯದಿಂದ ಸ್ಥಾಪನೆಯಾಗುವ ಕೆಲವು ನಿಗಮ– ಮಂಡಳಿಗಳು, ಉದ್ದಿಮೆಗಳು ಅತೃಪ್ತ ರಾಜಕಾರಣಿಗಳನ್ನು ‘ಸಂತೃಪ್ತ’ಗೊಳಿಸುವ ಗಂಜಿ ಕೇಂದ್ರಗಳಾಗುತ್ತಿವೆ.

ADVERTISEMENT

ಸಂಪುಟದಲ್ಲಿ ಸ್ಥಾನ ವಂಚಿತ ಕೆಲವರಿಗೆ ನಿಗಮ, ಮಂಡಳಿ, ಉದ್ದಿಮೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಕೊಡುಗೆ ನೀಡಿ ಅಸಮಾಧಾನದ ಹೊಗೆ ಏಳದಂತೆ ನೋಡಿಕೊಳ್ಳುವ ಪ್ರಯತ್ನ ಎಲ್ಲ ಪಕ್ಷಗಳ ಅಧಿಕಾರವಧಿಯಲ್ಲೂ ನಡೆದುಕೊಂಡು ಬಂದಿದೆ. ಒಂದಷ್ಟು ಅನುದಾನ, ಅಧ್ಯಕ್ಷ– ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ, ಸರ್ಕಾರಿ ವಾಹನ, ಕೈತುಂಬ ಸಂಬಳ, ಭತ್ಯೆ, ಕೆಲವರಿಗೆ ವಸತಿ ಸೌಲಭ್ಯ, ಆಪ್ತ ಸಹಾಯಕರು, ಕಚೇರಿ ಕೆಲಸಕ್ಕೆ ಸಿಬ್ಬಂದಿ ಬಿಟ್ಟರೆ ಈ ನಿಗಮ– ಮಂಡಳಿಗಳ ಸಾಧನೆ ಶೂನ್ಯ. ಜನರ ತೆರಿಗೆ ಹಣದಲ್ಲಿ ಸರ್ಕಾರ ಸಾಕುತ್ತಿರುವ ‘ಬಿಳಿಯಾನೆ’ಗಳಾಗಿ ಬಹುತೇಕ ನಿಗಮ, ಮಂಡಳಿಗಳು ಅಸ್ವಿತ್ವ ಉಳಿಸಿಕೊಂಡಿವೆ.

ಅನೇಕ ನಿಗಮ– ಮಂಡಳಿಗಳಿಗೆ ಸ್ವಂತ ಆದಾಯ ಇಲ್ಲ. ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನೇ ಅವಲಂಬಿಸಿವೆ. ಕೆಲವು ಆ ಜೀವದ್ರವ್ಯದಿಂದಲೇ ಉಸಿರಾಡುತ್ತಿವೆ. ಬೆರಳೆಣಿಕೆಯ ನಿಗಮಗಳಷ್ಟೆ ಸರ್ಕಾರ ದಿಂದ ಯಾವುದೇ ನೆರವು ಪಡೆಯದೆ ಜೀವ ಉಳಿಸಿಕೊಂಡಿವೆ.ನಿರಂತರ ನಷ್ಟದಿಂದ ಕೆಲವು ನಿಗಮಗಳು ಲಾಭದ ಹಳಿಗೆ ಬಂದರೂ, ಸಾಲ ಬಾಧ್ಯತೆಯಲ್ಲಿ ಸಿಲುಕಿ, ಆರ್ಥಿಕ ಒತ್ತಡ ಸಹಿಸಲಾಗದೆ ನರಳುತ್ತಿವೆ.

ಸಾರ್ವಜನಿಕ ವಲಯದ 125 ಉದ್ದಿಮೆಗಳ ಪೈಕಿ ಕೇವಲ 34 ಲಾಭದಲ್ಲಿವೆ. 16 ನಿಷ್ಕ್ರಿಯಗೊಂಡಿವೆ. ಇನ್ನು 33 ನಷ್ಟದಲ್ಲಿವೆ ಎಂದು ಇದೇ ಫೆಬ್ರುವರಿ ತಿಂಗಳಲ್ಲಿ ಆರ್ಥಿಕ ಇಲಾಖೆಯು ಸಚಿವ ಸಂ‍ಪುಟಕ್ಕೆ ಟಿಪ್ಪಣಿ ಮಂಡಿಸಿದೆ. ಇನ್ನು 42 ಕಂಪನಿ ಅಥವಾ ನಿಗಮಗಳು ಜಾತಿ ಆಧಾರಿತ ಅಥವಾ ಸಾರ್ವಜನಿಕ ಸೇವೆ (ನೀರಾವರಿ ನಿಗಮಗಳು), ಮೂಲಸೌಕರ್ಯ ಅಭಿವೃದ್ಧಿ ಉದ್ದೇಶದಿಂದ (ವಿವಿಧ ಸ್ಮಾರ್ಟ್‌ ಸಿಟಿ ಲಿಮಿಟೆಡ್‌) ಸ್ಥಾಪನೆ ಆದವು ಎಂದೂ ಆ ಟಿಪ್ಪಣಿಯಲ್ಲಿ ವಿವರಿಸಿದೆ.

ಶಾಸಕ ಆರ್‌.ವಿ. ದೇಶಪಾಂಡೆ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು, 80 ನಿಗಮ–ಮಂಡಳಿಗಳ ಐದು ವರ್ಷದ ಆರ್ಥಿಕ ಸ್ಥಿತಿ, ಸಿಬ್ಬಂದಿ, ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಿತ್ತು.

ನಷ್ಟದಲ್ಲಿರುವ ಹಾಗೂ ಜನರಿಗೆ ಉಪಯೋಗವಾಗದ ನಿಗಮ–ಮಂಡಳಿಗಳ ಪೈಕಿ ಏಳನ್ನು ಸಂಪೂರ್ಣವಾಗಿ ಮುಚ್ಚಬೇಕು ಎಂದು ಆಯೋಗವು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. ಅಲ್ಲದೆ, ಒಂಬತ್ತನ್ನು ವಿಲೀನಗೊಳಿಸಲು ಸಲಹೆ ನೀಡಿದೆ. 60 ನಿಗಮ–ಮಂಡಳಿ ಬಲಪಡಿಸಲು ಕೆಲವು ಸೂಚನೆಗಳನ್ನೂ ನೀಡಿದೆ. ನಷ್ಟದಲ್ಲಿರುವ ಮತ್ತು ನಿಷ್ಕ್ರಿಯವಾಗಿರುವ ನಿಗಮ–ಮಂಡಳಿಗಳಿಗೆ ಬೀಗ ಹಾಕಲು ಅಥವಾ ವಿಲೀನಗೊಳಿಸಲು ಆರು ತಿಂಗಳ ಒಳಗೆ ಏಕೀಕೃತ ಕ್ರಿಯಾ ಯೋಜನೆ ಸಿದ್ದಪಡಿಸಬೇಕು ಎಂದೂ ಆಯೋಗ ಹೇಳಿದೆ.

ಸದ್ಯ ಕಾರ್ಯನಿರ್ವಹಿಸುತ್ತಿರುವ ಮತ್ತು ಕಾರ್ಯನಿರ್ವಹಿಸದಿರುವ ನಿಗಮ, ಮಂಡಳಿ ಹಾಗೂ ಕಂಪನಿಗಳಲ್ಲಿ ರಾಜ್ಯ ಸರ್ಕಾರ ₹ 64,440 ಕೋಟಿಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿದೆ. ಆದರೆ, ಈ ದೊಡ್ಡ ಮೊತ್ತದ ಹೂಡಿಕೆಯ ಮೇಲೆ 2023–24ನೇ ಆರ್ಥಿಕ ವರ್ಷದಲ್ಲಿ ಸರ್ಕಾರ ಗಳಿಸಿದ ಲಾಭಾಂಶ ಕೇವಲ ₹ 285 ಕೋಟಿ. ಇದು ಕೆಲವೇ ಕೆಲವು ಉದ್ದಿಮೆಗಳ ಕೊಡುಗೆ. ಒಟ್ಟು ಹೂಡಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಈ ಲಾಭಾಂಶ ತೀರಾ ಕಡಿಮೆ. ಈಕ್ವಿಟಿಯ ಮೇಲಿನ ಲಾಭ ಶೇ 0.46ರಷ್ಟು ಮಾತ್ರ ಎನ್ನುವುದನ್ನು ಆರ್ಥಿಕ ಇಲಾಖೆ ಪತ್ತೆ ಮಾಡಿದೆ.

ರಾಜ್ಯದ ಎಲ್ಲ ಸಾರ್ವಜನಿಕ ಉದ್ದಿಮೆಗಳ ಹೂಡಿಕೆಗಳ ಮೇಲಿನ ಆದಾಯದ ಸಂಪೂರ್ಣ ಹೊರೆಯನ್ನು ಲಾಭದಾಯಕವಾಗಿರುವ 34 ಉದ್ದಿಮೆಗಳು (ಶೇ 26ರಷ್ಟಿರುವ) ಮಾತ್ರ ಹೊರಬೇಕಾಗಿದೆ. ಹೂಡಿಕೆ ಮೇಲಿನ ಆದಾಯ (ಆರ್‌ಒಐ) ತುಂಬಿಕೊಡಲು 2024ರ ಜುಲೈ 15ರಂದು ಆದೇಶವೊಂದನ್ನು ಹೊರಡಿಸಿ, ವಿಶೇಷ ಲಾಭಾಂಶವನ್ನು  ಕೂಡಾ ಪಾವತಿಸುವಂತೆ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಸಲಹೆ ನೀಡಲಾಗಿತ್ತು. ನಿಷ್ಕ್ರಿಯಗೊಂಡ ಹಾಗೂ ನಷ್ಟದಲ್ಲಿರುವ ಕಂಪನಿಗಳನ್ನು ಪಟ್ಟಿ ಮಾಡಿ, ಅವುಗಳ ಮೌಲ್ಯಮಾಪನ ಮಾಡಿ ಬೀಗ ಹಾಕುವ ಅಥವಾ ವಿಲೀನಗೊಳಿಸಲು ಪ್ರಕ್ರಿಯೆ ಆರಂಭಿಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಈಗಾಗಲೇ  ನಿರ್ದೇಶನವನ್ನೂ ನೀಡಲಾಗಿದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.

ನಷ್ಟದ ಹಾದಿಯಲ್ಲಿರುವ ಕಂಪನಿಗಳ ಬಗ್ಗೆಯೂ ತಜ್ಞರ ಮೂಲಕ ಮೌಲ್ಯಮಾಪನ ನಡೆಸಬೇಕು. ಜೊತೆಗೆ, ಸರ್ಕಾರದ ಹೂಡಿಕೆ ಮೇಲೆ ಉತ್ತಮ ಲಾಭ ಗಳಿಸಲು ಸಾಧ್ಯವಾಗುವಂತೆ ಇತರ ಕಂಪನಿಗಳ ಕಾರ್ಯಚಟುವಟಿಕೆಯ ಬಗ್ಗೆಯೂ ಮೌಲ್ಯಮಾಪನ ನಡೆಸಬೇಕು. ನಿಷ್ಕ್ರಿಯಗೊಂಡಿರುವ ಕಂಪನಿಗಳನ್ನು ಮುಚ್ಚುವುದರಿಂದ ಕಾರ್ಯಾಚರಣೆಗಳಿಗೆ ತಗಲುವ ವೆಚ್ಚವನ್ನು ಉಳಿತಾಯ ಮಾಡಬಹುದು. ಅಲ್ಲದೆ, ಸಂಪನ್ಮೂಲ ಕ್ರೋಡೀಕರಣ ಮತ್ತು ಉತ್ತಮ ಬಂಡವಾಳ ನಿರ್ವಹಣೆಯೂ ಸಾಧ್ಯವಾಗಲಿದೆ. ನಿಗದಿಪಡಿಸಿದ ರೀತಿಯಲ್ಲಿಯೇ ಕಂಪನಿಗಳನ್ನು ವಿಲೀನಗೊಳಿಸಿದರೆ ಆರ್ಥಿಕ ಲಾಭ ಪಡೆಯಬಹುದು ಎನ್ನುವುದು ಆರ್ಥಿಕ ಇಲಾಖೆಯ ಲೆಕ್ಕಾಚಾರ.

ಸಚಿವ ಸಂಪುಟ ಉಪ ಸಮಿತಿಯ ಶಿಫಾರಸಿನ ಅನ್ವಯ ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು 2022ರ ಮೇ 25ರಂದು ರದ್ದುಪಡಿಸಲಾಗಿದೆ. ಈ ಇಲಾಖೆಯು ನಿರ್ವಹಿಸುತ್ತಿದ್ದ ಉದ್ದಿಮೆಗಳನ್ನು ಆರ್ಥಿಕ ಇಲಾಖೆಗೆ ವಹಿಸಲಾಗಿದೆ. ಆ ನಂತರ ಸಾರ್ವಜನಿಕ ಉದ್ದಿಮೆಗಳನ್ನು ಪುನರ್ ರಚಿಸುವ ಮತ್ತು ಸದೃಢಗೊಳಿಸಲು ಹಲವು ಕ್ರಮಗಳನ್ನು ಆರ್ಥಿಕ ಇಲಾಖೆ ತೆಗೆದುಕೊಂಡಿದೆ. ಹಣಕಾಸು ಬೆಂಬಲ ನೀಡಲು ಆಂತರಿಕ ಕಾರ್ಪೊರೇಟ್ ಠೇವಣಿಗಳನ್ನು ಆರಂಭಿಸಲು ಸಚಿವ ಸಂಪುಟದಿಂದ ಅನುಮೋದನೆಯನ್ನೂ ಇಲಾಖೆ ಪಡೆದುಕೊಂಡಿತ್ತು.

‘ನಷ್ಟದಲ್ಲಿರುವ ಮತ್ತು ನಷ್ಟದ ಕಡೆಗೆ ಸಾಗಿರುವ ಉದ್ಯಮಗಳನ್ನು ಲಾಭದ ಕಡೆಗೆ ಕೊಂಡೊಯ್ಯಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಹೆಚ್ಚಿನ ಸಂಖ್ಯೆ ಸಾರ್ವಜನಿಕ ಉದ್ಯಮಗಳು ಯಶಸ್ವಿಯಾಗಿ ನಡೆಯುತ್ತಿಲ್ಲ. ಪ್ರಸ್ತುತ 33 ವಾಣಿಜ್ಯ ಲಾಭರಹಿತ ಕಂಪನಿಗಳಿವೆ. ಅವುಗಳನ್ನು ಲಾಭದ ಕಡೆಗೆ ಕೊಂಡೊಯ್ಯಲು ರಚನಾತ್ಮಕ ಆಡಳಿತ ಚೌಕಟ್ಟು, ಹಣಕಾಸು ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಆಡಳಿತ ಇಲಾಖೆಗಳು ಮೇಲ್ವಿಚಾರಣೆ ನಡೆಸಬೇಕಿದೆ. ಈ ಕುರಿತಂತೆ ಮೌಲ್ಯಮಾಪನ ಮಾಡುವಂತೆ ಇದೇ ಫೆ. 15ರಂದೇ ಆದೇಶ ಹೊರಡಿಸಲಾಗಿದೆ. ನಿಷ್ಕ್ರಿಯಗೊಂಡಿರುವ ಕಂಪನಿಗಳನ್ನು ಮುಚ್ಚುವ ಪ್ರಸ್ತಾವದ ಬಗ್ಗೆ 2024ರ ಅ. 9ರಂದು ನಡೆದ ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಭೆಯಲ್ಲಿ ಕೂಡಾ ಚರ್ಚಿಸಲಾಗಿತ್ತು. ಅಲ್ಲದೆ, ಈ ಕಂಪನಿಗಳು ಕುರಿತಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರ್ಥಿಕ ಇಲಾಖೆಗೆ ಸಲಹೆ ನೀಡಲಾಗಿತ್ತು’ ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕೆಲವು ಕಂಪನಿಗಳು ತುಂಬ ಹಳೆಯದಾಗಿದ್ದು, ಸುದೀರ್ಘ ಅವಧಿಯಿಂದ ನಷ್ಟದಲ್ಲಿವೆ. ಎಲ್ಲ ಕಂಪನಿಗಳು ಕಂಪನಿ ಕಾಯ್ದೆಯಡಿ ನೋಂದಣಿಯಾಗಿವೆ. ಹೀಗಾಗಿ, ಅವುಗಳನ್ನು ಮುಚ್ಚುವ, ವಿಲೀನಗೊಳಿಸುವ ಮೊದಲು ಕಾಯ್ದೆಯಲ್ಲಿರುವ ನಿಯಮಗಳನ್ನು ಪಾಲಿಸಬೇಕಿದೆ. ದಿವಾಳಿಯಾಗಿರುವ ಕಂಪನಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಟಿ) ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಕ್ರಮಗಳಿಂದ ಮಾನವ ಸಂಪನ್ಮೂಲ ಮತ್ತು ಕಂಪನಿ ಹೊಂದಿರುವ ಆಸ್ತಿಯ ಸಮರ್ಪಕ ಬಳಕೆ ಸಾಧ್ಯ. ನಿಷ್ಕ್ರಿಯ ಮತ್ತು ಲಾಭದ ಹಳಿಗೆ ತರಲು ಸಾಧ್ಯವೇ ಇಲ್ಲದ ತುಂಬಾ ನಷ್ಟದಲ್ಲಿರುವ ಕಂಪನಿಗಳನ್ನು ಮುಚ್ಚಲು, ಸ್ವಲ್ಪ ಪ್ರಮಾಣದ ನಷ್ಟ ಅಥವಾ ಲಾಭವೂ ಇಲ್ಲದ ನಷ್ಟವೂ ಇಲ್ಲದ ಕಂಪನಿಗೆ ದೊಡ್ಡ ಬಂಡವಾಳ ಹಾಕದೆ ಉತ್ತೇಜನ ನೀಡಲು, ಉತ್ತಮವಾಗಿ ನಡೆಯುವ ಕಂಪನಿಗಳನ್ನು ಇನ್ನಷ್ಟು ಸದೃಢಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ’ ಎಂದೂ ಅವರು ವಿವರಿಸಿದರು.

ವಿಪರ್ಯಾಸವೆಂದರೆ, ಹಲವು ವರ್ಷಗಳ ಹಿಂದೆಯೇ ಮುಚ್ಚಲು ಅಥವಾ ವಿಲೀನಕ್ಕೆ ಸೂಚನೆ ನೀಡಿದ್ದ ಹಲವು ನಿಗಮ–ಮಂಡಳಿಗಳು, ಉದ್ದಿಮೆಗಳು, ಕೆಲವು ಸಿಬ್ಬಂದಿಗಳ ಕಾರಣಕ್ಕೆ, ಸಾಲ ಬಾಧ್ಯತೆಗಳ ಕಾರಣಕ್ಕೆ ಇನ್ನೂ ‘ಜೀವಂತ’ವಾಗಿರುವುದರಿಂದ ನಷ್ಟದ ಹೊರೆ ಹೆಚ್ಚುತ್ತಲೇ ಇದೆ. ಮುಚ್ಚಲು ಅಥವಾ ವಿಲೀನ ಪ್ರಕ್ರಿಯೆ ವಿಳಂಬವಾಗಲು ಹೊಣೆಗಾರಿಕೆಯನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳ ಸಮನ್ವಯದೊಂದಿಗೆ ನಿಗದಿಪಡಿಸುವ ಕೆಲಸ ಆಗಬೇಕಿದೆ. ಮುಚ್ಚಲು ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು. ನಷ್ಟದಲ್ಲಿರುವ ಮತ್ತು ನಿಷ್ಕ್ರಿಯವಾಗಿರುವ ನಿಗಮ, ಮಂಡಳಿಗಳನ್ನು ಮುಚ್ಚಲು, ವಿಲೀನಗೊಳಿಸಲು ಅಥವಾ ಪುನರ್‌ರಚಿಸಲು ಪ್ರತಿ ಇಲಾಖೆಯು ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳಿದರು. 

44 ಉದ್ದಿಮೆಗಳು ಲೆಕ್ಕಪತ್ರವನ್ನೇ ಸಲ್ಲಿಸಿಲ್ಲ!

44 ಸಾರ್ವಜನಿಕ ಉದ್ದಿಮೆಗಳು 2024–25ನೇ ಸಾಲಿನ ಹಾಗೂ ಅದಕ್ಕಿಂತ ಹಿಂದಿನ ಹಲವಾರು ವರ್ಷಗಳ ವಾರ್ಷಿಕ ಲೆಕ್ಕಪತ್ರವನ್ನೇ ಅಂತಿಮಗೊಳಿಸಿಲ್ಲ. ಅಷ್ಟೇ ಅಲ್ಲ, ಸಾರ್ವಜನಿಕ ವಲಯದ ದಿ. ಮೈಸೂರು ಅಸೀಟೆಡ್‌ ಆ್ಯಂಡ್ ಕೆಮಿಕಲ್ಸ್‌ ಕಂಪನಿ ಲಿಮಿಟೆಡ್‌, ಕರ್ನಾಟಕ ಟೆಲಿಕಾಂ ಲಿಮಿಟೆಡ್‌ ಮತ್ತು ಮೈಸೂರು ಕಾಸ್ಮೆಟಿಕ್ಸ್‌ ಲಿಮಿಟೆಡ್‌ ಈ ಮೂರು ಉದ್ದಿಮೆಗಳು ಕಳೆದ 20 ವರ್ಷಗಳಿಂದಲೂ ಲೆಕ್ಕಪತ್ರವನ್ನೇ ಮಂಡಿಸಿಲ್ಲ.

ಈ ಮೂರೂ ಕಂಪನಿಗಳು ಅಸ್ವಿತ್ವದಲ್ಲಿದೆಯೇ ಇಲ್ಲವೊ ಎಂಬ ಬಗ್ಗೆಯೇ ಮಾಹಿತಿ ಇಲ್ಲ! ವಾರ್ಷಿಕ ಲೆಕ್ಕಪತ್ರ ಸಲ್ಲಿಸದ ಮತ್ತು ಅಸ್ವಿತ್ವದಲ್ಲಿದೆಯೇ ಎಂಬ ಅನುಮಾನ ಇರುವ ಉದ್ದಿಮೆಗಳ ಪಟ್ಟಿಯ ಸಹಿತ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಇದೇ ಅ. 14ರಂದು ಪತ್ರ ಕಳುಹಿಸಿರುವ ಪ್ರಧಾನ ಮಹಾಲೇಖಪಾಲರು, ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಈ ಬಗ್ಗೆ ಸೂಚನೆ ನೀಡುವಂತೆ ತಿಳಿಸಿದ್ದಾರೆ. ಸಾರ್ವಜನಿಕ ಉದ್ದಿಮೆಗಳು ನಿಗದಿತ ಕಾಲಮಿತಿಯೊಳಗೆ ವಾರ್ಷಿಕ ಲೆಕ್ಕಪತ್ರಗಳನ್ನು ಅಂತಿಮಗೊಳಿಸಿ ಆಯಾ ಆರ್ಥಿಕ ವರ್ಷ ಮುಕ್ತಾಯಗೊಂಡ ಆರು ತಿಂಗಳ ಒಳಗಾಗಿ ವಾರ್ಷಿಕ ಲೆಕ್ಕಪತ್ರಗಳನ್ನು ವಾರ್ಷಿಕ ಸಾಮಾನ್ಯ ಸಭೆಯ ಮುಂದೆ ಮಂಡಿಸಬೇಕು ಎಂದು ಸರ್ಕಾರ 2023ರ ಜ. 13ರಂದು ಸ್ಪಷ್ಟ ಸೂಚನೆ ನೀಡಿದೆ.

ವಾರ್ಷಿಕ ಲೆಕ್ಕಪತ್ರ ಸಲ್ಲಿಸದಿರುವುದು ಶಾಸನಬದ್ಧ ನಿಬಂಧನೆಗಳ ಉಲ್ಲಂಘನೆ. ಹೀಗಾಗಿ, ಎಲ್ಲ ಸಾರ್ವಜನಿಕ ಉದ್ದಿಮೆಗಳು ನಿಯಮಾನುಸಾರ ನಿಗದಿತ ಅವಧಿಯೊಳಗೆ ಅಂತಿಮ ವಾರ್ಷಿಕ ಲೆಕ್ಕಪತ್ರಗಳನ್ನು ಮಹಾಲೇಖಪಾಲರ ಕಚೇರಿಗೆ ಸಲ್ಲಿಸಲು ಕ್ರಮ ವಹಿಸಬೇಕು ಎಂದು ಆಡಳಿತ ಇಲಾಖೆಗಳಿಗೆ ಆರ್ಥಿಕ ಇಲಾಖೆ ಇದೇ ಅ. 15ರಂದು ಟಿಪ್ಪಣಿ ಕಳುಹಿಸಿದೆ.

ಆರ್ಥಿಕ ಇಲಾಖೆಯ ಪ್ರಕಾರ ನಿಷ್ಕ್ರಿಯಗೊಂಡಿರುವ 16 ಕಂಪನಿಗಳು
  1. ಕರ್ನಾಟಕ ರಾಜ್ಯ ಆಗ್ರೊ ಕಾರನ್‌ ಪ್ರಾಡಕ್ಸ್ಸ್,

  2. ಕರ್ನಾಟಕ ಕೃಷಿ ಕೈಗಾರಿಕೆಗಳ ನಿಗಮ ನಿಯಮಿತ,

  3. ಬೆಂಗಳೂರು ವಿಮಾನ ನಿಲ್ದಾಣ ರೈಲು ಸಂಪರ್ಕ ನಿಯಮಿತ,

  4. ಬೆಂಗಳೂರು ಪಿಆರ್‌ಆರ್‌ ಅಭಿವೃದ್ಧಿ ನಿಗಮ ನಿಯಮಿತ,

  5. ಮೈಸೂರು ತಂಬಾಕು ಕಂಪನಿ ನಿಯಮಿತ,

  6. ಕರ್ನಾಟಕ ಪಲ್ಪ್‌ವುಡ್‌ ಲಿಮಿಟೆಡ್‌,

  7. ಕರ್ನಾಟಕ ರಾಜ್ಯ ವೀನರ್ಸ್‌ ಲಿಮಿಟೆಡ್‌,

  8. ಸಿ. ಮೈಸೂರು ಮ್ಯಾಚ್‌ ಕಂಪನಿ ಲಿಮಿಟೆಡ್‌,

  9. ದಿ ಮೈಸೂರು ಲ್ಯಾಂಪ್‌ ವರ್ಕ್ಸ್‌ ಲಿಮಿಟೆಡ್‌,

  10. ಮೈಸೂರು ಕಾಸ್ಮೆಟಿಕ್ಸ್‌ ಲಿಮಿಟೆಡ್‌,

  11. ದಿ ಮೈಸೂರು ಕ್ರೋಮ್‌ ಟ್ಯಾನಿಂಗ್‌ ಕಂಪನಿ ಲಿಮಿಟೆಡ್‌,

  12. ಎನ್‌ಜಿಇಎಫ್‌ ಲಿಮಿಟೆಡ್‌ (ಬೆಂಗಳೂರು),

  13. ಕರ್ನಾಟಕ ಟೆಲಿಕಾಂ ಲಿಮಿಟೆಡ್‌,

  14. ದಿ. ಮೈಸೂರು ಅಸೀಟೆಡ್‌ ಆ್ಯಂಡ್ ಕೆಮಿಕಲ್ಸ್‌ ಕಂಪನಿ ಲಿಮಿಟೆಡ್‌,

  15. ವಿಜಯನಗರ ಸ್ಟೀಲ್‌ ಲಿಮಿಟೆಡ್‌,

  16. ಬೆಂಗಳೂರು ಉಪ ನಗರ ರೈಲು ಕಂಪನಿ ಲಿಮಿಟೆಡ್‌

ನಷ್ಟದಲ್ಲಿರುವ 33 ಕಂಪನಿಗಳು
1. ಬೆಸ್ಕಾಂ, 2. ಚೆಸ್ಕಾಂ, 3. ಮೈಸೂರು ಕಾಗದ ಕಾರ್ಖಾನೆ, 4. ಹೆಸ್ಕಾಂ, 5. ರಾಯಚೂರು ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌, 6. ಕೆಎಸ್‌ಆರ್‌ಟಿಸಿ, 7. ಬಿಎಂಟಿಸಿ, 8. ರಾಜೀವ್ ಗಾಂಧಿ ವಸತಿ ನಿಗಮ, 9. ಜೆಸ್ಕಾಂ 10. ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ, 11. ಆಹಾರ ಕರ್ನಾಟಕ ನಿಯಮಿತ, 12. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ, 13. ಶ್ರೀ ಕಂಠೀರವ ಸ್ಟುಡಿಯೊ ನಿಯಮಿತ, 14. ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್‌ 15. ಬೆಂಗಳೂರು ಸಂಯೋಜಿತ ರೈಲು ಮೂಲಸೌಲಭ್ಯ ಅಭಿವೃದ್ಧಿ ಉದ್ಯಮ ನಿಯಮಿತ 16. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ 17. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, 18. ಬಾಬು ಜಗಜೀವನ್‌ ರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, 19. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, 20. ಮೈಸೂರು ಸಕ್ಕರೆ ಕಂಪನಿ ನಿಯಮಿತ, 21. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, 22 ಹುಬ್ಬಳ್ಳಿ– ಧಾರವಾಡ ಬಿಆರ್‌ಟಿಎಸ್‌ ಕಂಪನಿ ಲಿಮಿಟೆಡ್‌, 23 ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮ, 24. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, 25. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, 26. ಎನ್‌ಜಿಇಎಫ್‌ (ಹುಬ್ಬಳ್ಳಿ), 27, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, 28. ಕರ್ನಾಟಕ ಗೇರು ಅಭಿವೃದ್ಧಿ ನಿಗಮ, 29. ದಿ ಮೈಸೂರು ಇಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, 30. ಮೆಸ್ಕಾಂ, 31. ಕರ್ನಾಟಕ ರಾಜ್ಯ ನಿರ್ಮಾಣ ನಿಗಮ, 32. ಡಿ. ದೇವರಾಜ್‌ ಅರಸ್‌ ಟ್ರಕ್‌ ಟರ್ಮಿನಲ್ಸ್‌ ಲಿಮಿಟೆಡ್‌. 33. ಕರ್ನಾಟಕ ವಿದ್ಯುತ್‌ ಕಾರ್ಖಾನೆ ನಿಯಮಿತ.
ಆಡಳಿತ ಸುಧಾರಣಾ ಆಯೋಗ ಮುಚ್ಚಲು ಶಿಫಾರಸು ಮಾಡಿದ ನಿಗಮ– ಮಂಡಳಿ
  • ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ

  • ಕರ್ನಾಟಕ ರಾಜ್ಯ ಸಂಯಮ ಮಂಡಳಿ

  • ಕರ್ನಾಟಕ ಸಹಕಾರಿ ಕೋಳಿ ಸಾಕಾಣಿಕೆ ಒಕ್ಕೂಟ

  • ಕರ್ನಾಟಕ ಪಲ್ಪ್ ವುಡ್ ಲಿಮಿಟೆಡ್

  • ಕರ್ನಾಟಕ ರಾಜ್ಯ ಆಗ್ರೋ –ಕಾರ್ನ್ ಪ್ರಾಡಕ್ಟ್‌ ಲಿಮಿಟೆಡ್

  • ಮೈಸೂರು ಲ್ಯಾಂಪ್ ವರ್ಕ್ಸ್‌ ಲಿಮಿಟೆಡ್

  • ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್

ಆಡಳಿತ ಸುಧಾರಣಾ ಆಯೋಗ ಮುಚ್ಚಲು ಶಿಫಾರಸು ಮಾಡಿರುವ ನಿಗಮ– ಮಂಡಳಿಗಳ ವಸ್ತುಸ್ಥಿತಿ

ರಾಜ್ಯ ಸಮಾಜ ಕಲ್ಯಾಣ ಮಂಡಳಿ

ಈ ಮಂಡಳಿಗೆ ನೀಡುತ್ತಿದ್ದ ಅನುದಾನವನ್ನು 2023ರ ಏಪ್ರಿಲ್‌ನಿಂದಲೇ ಸ್ಥಗಿತಗೊಳಿಸಲಾಗಿದೆ. ಮಂಡಳಿಯಲ್ಲಿ ಕಾರ್ಯನಿರತ ಸಿಬ್ಬಂದಿಯನ್ನು‌ ರಾಜ್ಯ ಸರ್ಕಾರದ ಜೊತೆ ವಿಲೀನಗೊಳಿಸಲು ಮತ್ತು 23 ಪಿಂಚಣಿದಾರರಿಗೆ ಪಿಂಚಣಿ ಮುಂದುವರಿಸುವ ಕುರಿತ ಪ್ರಸ್ತಾವದ ಕಡತ ಆರ್ಥಿಕ ಇಲಾಖೆಯಲ್ಲಿದೆ. 2024–25ನೇ ಸಾಲಿನಲ್ಲಿ ಮಂಡಳಿಯ 8 ಸಿಬ್ಬಂದಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ. ಪಿಂಚಣಿದಾರರಿಗೆ ಪಿಂಚಣಿ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.

ಕರ್ನಾಟಕ ರಾಜ್ಯ ಸಂಯಮ ಮಂಡಳಿ

ಅತ್ತ ಮದ್ಯ ಮಾರಾಟದಿಂದ ಲಾಭ ಪಡೆಯಲು ಸರ್ಕಾರ ಯತ್ನಿಸುತ್ತಿದ್ದರೆ, ಇತ್ತ ‘ಕರ್ನಾಟಕ ರಾಜ್ಯ ಸಂಯಮ ಮಂಡಳಿ’ ಮದ್ಯ ಸೇವನೆಯನ್ನು ಕಡಿಮೆ ಮಾಡುವಂತೆ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. ಈ ‘ಸಂಘರ್ಷ’ವನ್ನು ಗಮನಿಸಿರುವ ಆಡಳಿತ ಸುಧಾರಣಾ ಆಯೋಗ, ಈ ಮಂಡಳಿಯನ್ನು ಮುಚ್ಚುವಂತೆ ಸಲಹೆ ನೀಡಿದೆ. ಹಾರನಹಳ್ಳಿ ರಾಮಸ್ವಾಮಿ ವರದಿಯಲ್ಲಿಯೂ ಮುಚ್ಚಲು ಶಿಫಾರಸು ಮಾಡಲಾಗಿತ್ತು.ಈ ಮಂಡಳಿಗೆ 13 ಹುದ್ದೆಗಳು ಮಂಜೂರಾಗಿದ್ದು, ಸದ್ಯ 4 ಸಿಬ್ಬಂದಿ ಇದ್ದಾರೆ.

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಗೆ (ಕೆಸಿಪಿಎಫ್‌)

ಸಹಕಾರಿ ತತ್ವದಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಕೆಸಿಪಿಎಫ್‌ಗೆ ಆದಾಯ ಗಳಿಸಲು ಸಾಧ್ಯವಾಗಿಲ್ಲ. 1995ರಿಂದ ಇಲ್ಲಿಯವರೆಗೆ ಈ ಒಕ್ಕೂಟವು ಸರ್ಕಾರದ ಅನುದಾನದ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಇದರ ಅಡಿಯಲ್ಲಿ ನೋಂದಣಿಯಾಗಿರುವ ಕೋಳಿ ಸಹಕಾರ ಸಂಘಗಳು ತಮ್ಮ ಉದ್ದೇಶಗಳನ್ನು ಈಡೇರಿಸಲು ವಿಫಲವಾಗಿವೆ.

ಕರ್ನಾಟಕ ಪಲ್ಪ್ ವುಡ್ ಲಿಮಿಟೆಡ್

ಅರಣ್ಯ ಅಭಿವೃದ್ಧಿ ನಿಗಮ ಮತ್ತು ಹರಿಹರ ಪಾಲಿಫೈಬರ್ಸ್‌ ನಡುವಿನ ಜಂಟಿ ಉದ್ಯಮವಾಗಿ 1985ರಲ್ಲಿ 51:49ರ ಈಕ್ವಿಟಿ ಷೇರು ಅನುಪಾತದಲ್ಲಿ ಕರ್ನಾಟಕ ಪಲ್ಪ್ ವುಡ್ ಲಿಮಿಟೆಡ್‌ನ್ನು ಸ್ಥಾಪಿಸಲಾಗಿತ್ತು. ಅರಣ್ಯ ಕಾಯ್ದೆಯನ್ವಯ ಖಾಸಗಿ ಸಂಸ್ಥೆಗಳು ಅರಣ್ಯ ಚಟುವಟಿಕೆಯಲ್ಲಿ ಕೆಲಸ ಮಾಡಲು ಸಾಧ್ಯ ಇಲ್ಲ ಎಂಬ ದೂರಿನ ಕಾರಣಕ್ಕೆ ಸರ್ಕಾರವು ಈ ಕಂಪನಿಯನ್ನು 2005ರ ಫೆಬ್ರುವರಿಯಲ್ಲಿ ಮುಚ್ಚಲು ಆದೇಶಿಸಿತ್ತು. ಸರ್ಕಾರಕ್ಕೆ ಪಾವತಿಸಲು ಬಾಕಿ ಇರುವ ₹ 3.80 ಕೋಟಿಯನ್ನು ಮನ್ನಾ ಮಾಡಬೇಕು. ಕಂಪನಿಯ ಬಾಕಿ ಬಾಧ್ಯತೆಗಳನ್ನು ತೀರಿಸಲು ₹ 1.86 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವ ಆರ್ಥಿಕ ಇಲಾಖೆಯಲ್ಲಿದೆ.

ಕರ್ನಾಟಕ ರಾಜ್ಯ ಆಗ್ರೋ –ಕಾರ್ನ್ ಪ್ರಾಡಕ್ಟ್‌ ಲಿಮಿಟೆಡ್

ಮೆಕ್ಕಜೋಳ ಮತ್ತು ಸಂಬಂಧಿತ ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ಸಂಸ್ಕರಣೆಯನ್ನು ಉತ್ತೇಜಿಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಕೆಟಿಟಿಪಿ ಕಾಯ್ದೆ ಮತ್ತು ಆನ್‌ಲೈನ್‌ ವ್ಯವಹಾರ ವ್ಯವಸ್ಥೆ ಬಂದ ನಂತರ ಅದರ ಉತ್ಪನ್ನಗಳು ಮತ್ತು ಸೇವೆಗಳಿಗೆ ಬೇಡಿಕೆ ತೀವ್ರವಾಗಿ ಕುಸಿಯಿತು. ಹೀಗಾಗಿ 2012ರಿಂದ ಕಾರ್ಯನಿರ್ವಹಿಸುತ್ತಿಲ್ಲ. ಆದರೂ ಉಳಿದ ವೆಚ್ಚಗಳನ್ನು ಭರಿಸುತ್ತಿದೆ ಮತ್ತು ಬಾಕಿ ಮೊಕದ್ದಮೆಗಳನ್ನು ನಿರ್ವಹಿಸುತ್ತಿದೆ.

ಮೈಸೂರು ಲ್ಯಾಂಪ್ ವರ್ಕ್ಸ್‌ ಲಿಮಿಟೆಡ್

2003ರ ಜೂನ್‌ 11ರಂದು ಮೈಸೂರು ಲ್ಯಾಂಪ್ ವರ್ಕ್ಸ್‌ ಲಿಮಿಟೆಡ್‌ನ್ನು ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ. ಅಂದಿನಿಂದ ನಿರಂತರ ನಷ್ಟ ಅನುಭವಿಸುತ್ತಿದೆ. ಕಂಪನಿಯನ್ನು ಮುಚ್ಚಿದ್ದರೂ ಆಸ್ತಿಗಳು ಇನ್ನೂ ಸಾಲದ ಬಾಧ್ಯತೆಗಳಲ್ಲಿ ಸಿಲುಕಿವೆ. 2023–24ರಲ್ಲಿ ₹ 14.47 ಕೋಟಿ, 2024–25ರಲ್ಲಿ ₹ 13.85 ಕೋಟಿ ನಷ್ಟ ಅನುಭವಿಸಿದೆ.

ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್

ಕೃಷಿ ಉಪಕರಣಗಳನ್ನು ಮಾರಾಟ ಮಾಡುವ ಪ್ರಾಥಮಿಕ ಉದ್ದೇಶದಿಂದ ರಾಜ್ಯ ಶೇ 51 ಮತ್ತು ಕೇಂದ್ರದ ಶೇ 49 ಆರಂಭಿಕ ಪಾಲಿನಲ್ಲಿ 1967ರಲ್ಲಿ ಈ ನಿಗಮವನ್ನು ಸ್ಥಾಪಿಸಲಾಗಿತ್ತು. ನಂತರ ಕೇಂದ್ರದ ಷೇರುಗಳನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಿ, ರಾಜ್ಯದ ಒಡತನದ ನಿಗಮವಾಗಿ ಮಾಡಲಾಗಿತ್ತು. 1990ರ ದಶಕದಲ್ಲಿ ಮತ್ತು 2000ರ ದಶಕದ ಆರಂಭದಲ್ಲಿ ಈ ನಿಗಮ ನಷ್ಟ ಅನುಭವಿಸಲು ಆರಂಭವಾಯಿತು. ನಿರಂತರ ನಷ್ಟದ ಕಾರಣಕ್ಕೆ ನಿಗಮವನ್ನು ಮುಚ್ಚಲು ತೀರ್ಮಾನಿಸಲಾಯಿತು. 2003ರಲ್ಲಿ ಎಲ್ಲ 656 ಉದ್ಯೋಗಿಗಳಿಗೆ ಸ್ವಯಂ ಪ್ರೇರಿತ ನಿವೃತ್ತಿ ನೀಡಿ ನಿಗಮದ ಕಚೇರಿಗಳನ್ನು 2004ರಲ್ಲಿ ಮುಚ್ಚಲಾಯಿತು. ಮುಚ್ಚಿದ ನಂತರವೂ ವರ್ಷದಿಂದ ವರ್ಷಕ್ಕೆ ಪುಸ್ತಕದ ನಷ್ಟ ಅನುಭವಿಸುತ್ತಲೇ ಇದೆ.

ಅತೀ ಹೆಚ್ಚು ಲಾಭದಲ್ಲಿರುವ ನಿಗಮ– ಮಂಡಳಿಗಳು

ಕರ್ನಾಟಕ ಸೋಪ್ಸ್ ಆ್ಯಂಡ್‌ ಡಿಟರ್ಜೆಂಡ್‌ ಲಿಮಿಟೆಡ್‌ (ಕೆಎಸ್‌ಡಿಎಲ್‌)

ಸರ್ಕಾರಿ ಸ್ವಾಮ್ಯದ ಬ್ರ್ಯಾಂಡ್‌ಗಳಲ್ಲಿ ಅತ್ಯಂತ ಮಾನ್ಯತೆ ಪಡೆದ ಮತ್ತು ಲಾಭದಾಯಕ ಉದ್ಯಮವಿದು. ಮೈಸೂರು ಸ್ಯಾಂಡಲ್‌ ಸೋಪ್ ಇದರ ಪ್ರಮುಖ ಉತ್ಪನ್ನ. ಮುಖ್ಯವಾಗಿ, 2020–21ರಿಂದ 2024–25ವರೆಗೆ ಯಾವುದೇ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬಿಯಾಗಿದೆ. 2020–21ರಲ್ಲಿ ₹ 112.94 ಕೋಟಿಯಷ್ಟಿದ್ದ ಲಾಭ 2024–25ರಲ್ಲಿ ₹ 451.04 ಕೋಟಿಗೆ ಏರಿಕೆ ಆಗಿದೆ. 2024–25ನೇ ಸಾಲಿನಲ್ಲಿ ಸಂಸ್ಥೆಯು ₹ 1,700 ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ ಶೇ 30ರಷ್ಟು ಲಾಭಾಂಶವನ್ನು (₹ 135 ಕೋಟಿ) ಸರ್ಕಾರಕ್ಕೆ ಹಸ್ತಾಂತರಿಸಿದೆ. 2022–23ರಲ್ಲಿ ₹ 54 ಕೋಟಿ, 2023–24ರಲ್ಲಿ ₹ 108 ಕೋಟಿ ಲಾಭಾಂಶವನ್ನು ನಿಗಮವು ಸರ್ಕಾರಕ್ಕೆ ಹಸ್ತಾಂತರಿಸಿತ್ತು.

ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್‌ (ಎಂಪಿವಿಎಲ್‌)

ಮೈಸೂರಿನಲ್ಲಿ ಮಾರಾಟ ಮಳಿಗೆ ಮತ್ತು ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಹೊಂದಿರುವ ಈ ಸಂಸ್ಥೆಯು, ಚುನಾವಣೆಗಳಲ್ಲಿ ಬಳಸುವ ಅಳಿಸಲಾಗದ ಶಾಯಿಯನ್ನು ತಯಾರಿಸುವ ಅಧಿಕಾರ ಹೊಂದಿರುವ ದೇಶದ ಏಕೈಕ ಕಂಪನಿ. ಇಲ್ಲಿ ತಯಾರಾಗುವ ಶಾಯಿಯನ್ನು ನೇರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಪೂರೈಕೆ ಮಾಡಲಾಗುತ್ತದೆ. ಎಂಪಿವಿಎಲ್‌ 2019ರಿಂದ ಈವರೆಗೆ ಸ್ಥಿರವಾಗಿ ಲಾಭದಾಯಕವಾಗಿದೆ. ಲಾಭವು 2020–21ರಲ್ಲಿ ₹ 4.81 ಕೋಟಿಯಿಂದ 2023–24ರಲ್ಲಿ ₹ 11.95 ಕೋಟಿಗಳಿಗೆ ಹೆಚ್ಚಳವಾಗಿತ್ತು. ನಿಗಮವು ಆಧುನೀಕರಣ ಮತ್ತು ವಿಸ್ತರಣೆಗಾಗಿ ₹ 50 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ
ಪ್ರಸ್ತಾವ ಸಲ್ಲಿಸಿದೆ.

ಕರ್ನಾಟಕ ರಾಜ್ಯ ಮಾರುಕಟ್ಟೆ ಸಂವಹನ ಮತ್ತು ಜಾಹೀರಾತು ನಿಯಮಿತ

17 ಶಾಖೆಗಳನ್ನು ಹೊಂದಿರುವ ಈ ನಿಗಮವು ಸರ್ಕಾರದಿಂದ ಯಾವುದೇ ಅನುದಾನ ಪಡೆಯುವುದಿಲ್ಲ. 2019–20ರಿಂದ ನಿರಂತರ ಆದಾಯ ಗಳಿಸುತ್ತಿದ್ದು, 2022–23ರಲ್ಲಿ ₹ 26.32 ಕೋಟಿ, 2023–24ರಲ್ಲಿ ₹ 17.87 ಕೋಟಿ ಲಾಭ ಗಳಿಸಿದೆ.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ

ನವದೆಹಲಿ, ಹೈದರಾಬಾದ್, ಕೊಲ್ಕತ್ತಾ, ಗುಜರಾತಿನ ನರ್ಮದಾ, ಚೆನ್ನೈನಲ್ಲಿ ಶಾಖೆಗಳೊಂದಿಗೆ ಕರ್ನಾಟಕದಲ್ಲಿ ಏಳು ಶೋ ರೂಂಗಳನ್ನು ಹೊಂದಿರುವ ಈ ನಿಗಮವು ಸ್ಥಿರವಾದ ಲಾಭ ಗಳಿಸಿದೆ. ಅದರಲ್ಲೂ ಕರ್ನಾಟಕ, ದೆಹಲಿ, ಚೆನ್ನೈನ ಮಳಿಗೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 2020–21ರಲ್ಲಿ
₹ 68.34 ಲಕ್ಷ, 2021–22ರಲ್ಲಿ ₹ 41.51 ಲಕ್ಷ, 2022–23ರಲ್ಲಿ ₹ 6.12 ಕೋಟಿ, 2023–24ರಲ್ಲಿ
₹ 8.91 ಕೋಟಿ, 2024–25ರಲ್ಲಿ ₹ 10.83 ಕೋಟಿಯ ಲಾಭ ತೋರಿಸುವ ಮೂಲಕ ಸಕಾರಾತ್ಮಕ ತಿರುವು ತೋರಿಸಿದೆ.

ಕರ್ನಾಟಕ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮ

ಕೇಂದ್ರ ಉಗ್ರಾಣ ನಿಗಮ ಮತ್ತು ರಾಜ್ಯ ಸರ್ಕಾರದ ನಡುವೆ 50:50 ಅನುಪಾತದಲ್ಲಿ ಷೇರುದಾರರ ಮಾದರಿಯಲ್ಲಿ ಜಂಟಿ ಸ್ವಾಮ್ಯದ ಈ ನಿಗಮ ರಾಜ್ಯದ 30 ಜಿಲ್ಲೆಗಳಲ್ಲಿ ಉಗ್ರಾಣ ಸೌಲಭ್ಯ ಹೊಂದಿದೆ. ರೈತರ ಮತ್ತು ಠೇವಣಿದಾರರ ಬೇಡಿಕೆ ಆಧಾರದಲ್ಲಿ ವಾರ್ಷಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಈ ನಿಗಮವು, 2022–23ರಲ್ಲಿ₹ 6.64 ಕೋಟಿ ನಷ್ಟ ಅನುಭವಿಸಿದ್ದರೂ 2020–21, 2021–22, 2023–24, 2024–25ನೇ ಸಾಲಿನಲ್ಲಿ ಆದಾಯ ಗಳಿಸುತ್ತಲೇ ಬಂದಿದೆ. 2024–25ರಲ್ಲಿ
₹ 20.90 ಕೋಟಿ ಲಾಭ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.