ADVERTISEMENT

ಒಳನೋಟ | ಕ್ರೀಡೆ: ಖಾಸಗಿ ವಿವಿ: ಸಾಧನೆಗೆ ಬಲ

ಕ್ರೀಡಾಸೌಲಭ್ಯಗಳ ಜೊತೆಯಲ್ಲಿ ಅಥ್ಲೀಟ್‌ಗಳಿಗೆ ವಿದ್ಯಾರ್ಥಿವೇತನ, ಬಹುಮಾನ ಮೊತ್ತ

ವಿಕ್ರಂ ಕಾಂತಿಕೆರೆ
Published 30 ಏಪ್ರಿಲ್ 2022, 19:31 IST
Last Updated 30 ಏಪ್ರಿಲ್ 2022, 19:31 IST
ಬೆಂಗಳೂರಿನ ಜೈನ್‌ ವಿವಿ ಆವರಣದ ಈಜುಕೊಳ –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಜೈನ್‌ ವಿವಿ ಆವರಣದ ಈಜುಕೊಳ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಮೊದಲ ದಿನ ಬೆಳಿಗ್ಗೆಯೇ ಈಜಿನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಬೆಂಗಳೂರಿನ ಶಿವಶ್ರೀಧರ್ ಮಾಧ್ಯಮಗಳ ಜೊತೆ ಮಾತನಾಡುವಾಗ ಮೊದಲು ಜ್ಞಾಪಿಸಿಕೊಂಡದ್ದು ಅವರು ಓದುತ್ತಿರುವ ಕಾಲೇಜು ಮತ್ತು ವಿಶ್ವವಿದ್ಯಾಲಯವನ್ನು.

ಕ್ರೀಡಾಕೂಟದಲ್ಲಿ ಅತಿಹೆಚ್ಚು ಚಿನ್ನ ಗೆದ್ದ ಶಿವಶ್ರೀಧರ್‌ ಅವರ ಸಾಧನೆಗೆ ಬೆನ್ನೆಲುಬು ಆಗಿ ನಿಂತದ್ದು ಜೈನ್ ವಿಶ್ವವಿದ್ಯಾಲಯ.

‘ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಆದರೆ ನನಗೆ ಜೈನ್ ವಿವಿ ಸಂಪೂರ್ಣ ಬೆಂಬಲ ನೀಡುತ್ತಿದೆ. ವಿದ್ಯಾರ್ಥಿವೇತನ ನೀಡಿ ಎಂಬಿಎ ಪದವಿ ಪೂರೈಸಲು ನೆರವಾಗಿದೆ’ ಎಂದು ಅವರು ಹೇಳಿದ್ದರು.

ADVERTISEMENT

ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಬಹುತೇಕ ಅಥ್ಲೀಟ್‍ಗಳು ಇಂಥದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು, ಖಾಸಗಿ ವಿವಿಗಳು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಸಾಕ್ಷಿ.

ಕರ್ನಾಟಕದಲ್ಲಿ ಕೂಡ ಕ್ರೀಡಾಕ್ಷೇತ್ರದಲ್ಲಿ ಖಾಸಗಿ ವಿವಿಗಳು ಸಾಂಪ್ರದಾಯಿಕ ವಿವಿಗಳ ಸರಿಸಮಾನವಾಗಿ ಮೇಲುಗೈ ಸಾಧಿಸಿವೆ. ಈ ಬಾರಿ ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟಕ್ಕೆ ಆಯ್ಕೆಯಾದವರ ಮೇಲೆ ಕಣ್ಣಾಡಿಸಿದರೆ ಇದು ಖಾತರಿಯಾಗುತ್ತದೆ.

ಮಂಗಳೂರು, ಮೈಸೂರು, ಬೆಂಗಳೂರು ಹಾಗೂ ಬೆಂಗಳೂರು ನಗರ ವಿವಿಗಳಿಂದ ಕ್ರಮವಾಗಿ 96, 43, 29, 23 ಮಂದಿ ಆಯ್ಕೆಯಾಗಿದ್ದರೆ ಜೈನ್ ವಿವಿಯಿಂದ 82 ಮಂದಿ ಅರ್ಹತೆ ಗಳಿಸಿದ್ದಾರೆ. ಇತರ ಖಾಸಗಿ ವಿವಿಗಳಿಂದಲೂ ಉತ್ತಮ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಅರ್ಹತೆ ಪಡೆದುಕೊಂಡಿದ್ದಾರೆ. ಇವರೆಲ್ಲರೂ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಗೆದ್ದು ಬಂದವರು.

‘ಜೈನ್ ಶಿಕ್ಷಣ ಸಂಸ್ಥೆಯು ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವಾಗಲೇ ಅವರ ಕ್ರೀಡಾಸಾಮರ್ಥ್ಯದ ಮೇಲೆ ಕಣ್ಣಿಡುತ್ತದೆ. ಇದು ವಿಶ್ವವಿದ್ಯಾಲಯ ಮಟ್ಟದ ವರೆಗೂ ಮುಂದುವರಿಯುತ್ತದೆ. ಇಲ್ಲಿ ಪ್ರತಿಯೊಂದು ಕ್ರೀಡೆಗೆ ವಿಶೇಷ ಮೂಲಸೌಲಭ್ಯಗಳನ್ನು ರೂಪಿಸಿದ್ದು ತರಬೇತಿಗೂ ಪ್ರತ್ಯೇಕ ವ್ಯವಸ್ಥೆ ಇದೆ. ಸ್ಕಾಲರ್‌ಷಿಪ್‌, ಬಹುಮಾನ ಮೊತ್ತದಂಥ ಪ್ರೋತ್ಸಾಹದೊಂದಿಗೆ ಶುಲ್ಕದಲ್ಲೇ ಲಕ್ಷಾಂತರ ಮೊತ್ತದ ವಿನಾಯಿತಿ ನೀಡಲಾಗುತ್ತಿದೆ’ ಎಂದು ಜೈನ್ ವಿವಿ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಗೋಪಾಲ ನಾಯಕ್ ತಿಳಿಸಿದರು.

ಅಪ್ಪಟ ಬೆಳ್ಳಿ ಪದಕ ಉಡುಗೊರೆ: ತಂತ್ರಜ್ಞಾನ ಮತ್ತು ವೈದ್ಯಕೀಯ ಶಿಕ್ಷಣದ ‘ಕಠಿಣ’ ಪಠ್ಯ ಚಟುವಟಿಕೆಯ ನಡುವೆಯೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಲು ಮತ್ತು ಸಾಧನೆ ಮಾಡಲು ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು) ಮತ್ತು ರಾಜೀವಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೌಲಭ್ಯ ಒದಗಿಸಿದೆ.

ಕ್ರೀಡಾಸೌಕರ್ಯಗಳ ಜೊತೆಯಲ್ಲಿ ವೈಯಕ್ತಿಕವಾಗಿ ಆರ್ಥಿಕ ಸೌಲಭ್ಯಗಳನ್ನು ಒದಗಿಸುತ್ತಿವೆ. ಪ್ರಮುಖ ಕೂಟಗಳಲ್ಲಿ ಪದಕ ಗೆದ್ದರೆ ಬಹುಮಾನ ಮೊತ್ತ, ಕ್ರೀಡಾಕೂಟಕ್ಕೆ ತೆರಳುವ ವೆಚ್ಚ ಇತ್ಯಾದಿಗಳಿಂದಾಗಿ ವಿದ್ಯಾರ್ಥಿಗಳ ದೈಹಿಕ ದೃಢತೆ ಕಾಯ್ದುಕೊಳ್ಳಲು ಪ್ರೇರಣೆ ನೀಡುತ್ತಿವೆ.

ವಿಶ್ವೇಶ್ವರಯ್ಯ ವಿವಿ, ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದವರಿಗೆ ಹೆಚ್ಚುವರಿಯಾಗಿ ಅಪ್ಪಟ ಬೆಳ್ಳಿ ಪದಕಗಳನ್ನು ನೀಡುತ್ತಿದೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದವರಿಗೆ ಕ್ರಮವಾಗಿ 25, 20, 15 ಗ್ರಾಂ ತೂಕದ ಪದಕ ಲಭಿಸುತ್ತದೆ.

‘ಈಜು, ಆರ್ಚರಿ, ಜೂಡೊ, ಚೆಸ್, ಟೇಬಲ್ ಟೆನಿಸ್‌ನಂಥ ಕ್ರೀಡೆಯಲ್ಲಿ ವಿವಿ ಉತ್ತಮ ಸಾಧನೆ ಮಾಡುತ್ತಿದೆ. ವಿದ್ಯಾರ್ಥಿ ವೇತನ, ಬಹುಮಾನ ಕೊಡುವುದರ ಜೊತೆಯಲ್ಲಿ ವಿವಿ ಬ್ಲೂ ಆದವರಿಗೆ ಬೆಲೆಬಾಳುವ ಬ್ಲೇಜರ್ ನೀಡಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳ ಉತ್ಸಾಹ ಹೆಚ್ಚುತ್ತಿದೆ’ ಎನ್ನುತ್ತಾರೆ ವಿಟಿಯು ಕ್ರೀಡಾ ನಿರ್ದೇಶಕ ಎ.ಜಿ.ಬುಜುರ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.