ವ್ಯಾಯಾಮ, ಕ್ರೀಡೆಗಳ ಮೂಲ ಉದ್ದೇಶ ಆರೋಗ್ಯವರ್ಧನೆ, ಮನೋಲ್ಲಾಸಗಳನ್ನು ನೀಡುವುದೇ ಆಗಿದೆ. ಆದರೆ, ಅಲ್ಪಕಾಲದ ಯಶಸ್ಸು, ಹಣ ಗಳಿಕೆ, ಖ್ಯಾತಿ ಮತ್ತಿತರ ಆಮಿಷಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಹುರಿಗಟ್ಟಿದ ದೇಹ ಕಟ್ಟಲು ಹೆಚ್ಚು ಉತ್ಸುಕರಾಗಿರುವ ಇಂದಿನ ಯುವ ಸಮೂಹ ಅದಕ್ಕಾಗಿ ಅಗತ್ಯವಿರುವ ಸಮಯಕ್ಕಾಗಿ ಕಾಯುವಷ್ಟೂ ವ್ಯವಧಾನವಿಲ್ಲ. ಹೀಗಾಗಿ ತ್ವರಿತವಾಗಿ ಮಾಂಸಖಂಡಗಳನ್ನು ಉಬ್ಬಿಸಿಕೊಳ್ಳಲು ಗ್ರೋತ್ ಹಾರ್ಮೋನ್‌ಗಳು, ಸ್ಟೆರಾಯ್ಡ್‌ಗಳ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಚುಚ್ಚುಮದ್ದು ಅಥವಾ ಅನ್ಯ ಮಾರ್ಗಗಳನ್ನು ಆಯ್ದುಕೊಂಡು ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ.
ಬೆಂಗಳೂರು: ಬಾಹುಬಲಿಯಂತೆ ಕಾಣುವ 40 ವರ್ಷ ವಯಸ್ಸಿನ ಆ ವ್ಯಕ್ತಿ ವೃತ್ತಿಯಲ್ಲಿ ವೈದ್ಯನಾಗಿದ್ದ. ಆದರೆ, ಒಂದು ದಿನ ಹಠತ್ತಾಗಿ ಸಾವಿಗೀಡಾದ! ಆವರನ್ನು ನೋಡಿದವರು ‘ಅಬ್ಬಾ..’ ಎನ್ನುವ ಮಟ್ಟಿಗೆ ಮಾಂಸಖಂಡಗಳನ್ನು ಬೆಳೆಸಿಕೊಂಡಿದ್ದ. ಆದರೆ, ಆ ಹಂತದಲ್ಲಿ ಮಾಡಿದ್ದ ಪ್ರಮಾದ ಭವಿಷ್ಯದ ಜೀವನವನ್ನು ಅಂತ್ಯ ಮಾಡಿತ್ತು. ಪೌಷ್ಟಿಕ ಆಹಾರೌಷಧಿ (ಫುಡ್ ಸಪ್ಲಿಮೆಂಟ್) ಹೆಸರಿನಲ್ಲಿ ಸ್ಟೆರಾಯ್ಡ್‌ಗಳನ್ನು ಸೇವಿಸಿದ್ದ ಎಂಬ ವಿಷಯ ಗೊತ್ತಾಗಲೇ ಇಲ್ಲ.
ಇನ್ನೊಬ್ಬ ಯುವಕನ ಕತೆಯೂ ಇದೇ ತರ. ಬೆಂಗಳೂರಿನ ನಿವಾಸಿಯಾಗಿದ್ದ ಆತ ಖಾಸಗಿ ಕಂಪೆನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ಎರಡೂ ಹೊತ್ತು ವ್ಯಾಯಾಮ ಮಾಡುತ್ತಿದ್ದ. ಒಂದು ವರ್ಷ ದಾಟುವಷ್ಟರಲ್ಲಿ ಮಾಂಸಖಂಡಗಳು ಹುರಿಗಟ್ಟತೊಡಗಿದವು. ಕಡಿಮೆ ಅವಧಿಯಲ್ಲಿ ಆತನ ಈ ಬೆಳವಣಿಗೆ ನೋಡಿ ಸ್ನೇಹಿತರು ಅಚ್ಚರಿಯಿಂದ ನೋಡುತ್ತಿದ್ದರು. ಆದರೆ ಅದೊಂದು ದಿನ ಸಂಜೆ ಮನೆಗೆ ಬಂದವನೇ ಎದೆನೋವು ಎಂದು ಕುಸಿದ. ಆಸ್ಪತ್ರೆ ಮುಟ್ಟುವಷ್ಟರಲ್ಲಿ ಹೃದಯ ನಿಂತು ಪ್ರಾಣಪಕ್ಷಿ ಹಾರಿಹೋಗಿತ್ತು. ಆತನ ಸುಂದರ ಬದುಕಿಗಾಗಿ ದುಡಿದ ಪಾಲಕರಿಗೆ ಈಗ ನಿರಂತರ ಶೋಕ. ಆತ ಪ್ರತಿದಿನ ಹಾಲಿಗೆ ಬೆರೆಸಿ ಕುಡಿಯುತ್ತಿದ್ದ ಶಕ್ತಿವರ್ಧಕ ಪುಡಿ ಜೀವಕ್ಕೆ ಕುತ್ತು ತಂದಿತ್ತು.
ಮತ್ತೊಬ್ಬ ಯುವಕನ ಕತೆ ವಿಭಿನ್ನ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈತನ ವಯಸ್ಸು 30 ವರ್ಷ. ಪ್ರತಿದಿನ ಜಿಮ್‌ಗೆ ಹೋಗುತ್ತಿದ್ದ ಈತ ನೋಡಲು ಬಲು ದಷ್ಟಪುಷ್ಟವಾಗಿದ್ದ. ಕೆಲವೇ ದಿನಗಳಲ್ಲಿ ‘ಸಿಕ್ಸ್‌ಪ್ಯಾಕ್’ ಹೊಂದಲೇ ಬೇಕೆಂಬ ಹಠಕ್ಕೆ ಬಿದ್ದು ತರಬೇತುದಾರ ಸೂಚಿಸಿದ ‘ಸ್ಟೆರಾಯ್ಡ್’ಗಳ ಮೊರೆ ಹೋಗಿದ್ದ. ಸದ್ಯ ಈ ಯುವಕ ಸಿಡುಕುತನ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಸ್ನೇಹಿತರು, ಪೋಷಕರಿಂದಲೇ ದೂರವಾಗಿದ್ದಾನೆ.
ಇಂತಹ ಪ್ರಕರಣಗಳು ರಾಜ್ಯದ ಪಟ್ಟಣ, ನಗರ, ಮಹಾನಗರಗಳಲ್ಲಿ ಬಹಳಷ್ಟು ನಡೆಯುತ್ತಿವೆ. ಯುವ ಸಮೂಹ, ಕ್ರೀಡೆ, ಸಿನಿಮಾ ಜಗತ್ತನ್ನು ಕಂಡುಕಾಣದಂತೆ ಆವರಿಸಿಕೊಂಡಿರುವ ‘ಸ್ಟೆರಾಯ್ಡ್ ದಂಧೆ’ ಈಗ ಕರಾಳ ಮುಖ ತೋರಿಸತೊಡಗಿದೆ. ದುಡ್ಡಿನ ಆಸೆಗೆ ಬಹಳಷ್ಟು ಜಿಮ್ನಾಷಿಯಂಗಳು, ಟ್ರೇನರ್‌ಗಳು ಈ ಮಾರಕ ‘ಪೌಡರ್’, ‘ಸ್ಟೆರಾಯ್ಡ್’ಗಳ ಏಜೆಂಟ್‌ರಾಗಿದ್ದಾರೆ. ಕೆರೆಟಿಯನ್, ಅನಾಬೊಲಿಕ್ ಸ್ಟೆರಾಯ್ಡ್‌ಗಳನ್ನು ದೇಹಕ್ಕೆ ಸೇರಿಸುವ ದಂಧೆ ಇದಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಕ್ರೀಡಾ ವೈದ್ಯರು.
‘ಹೆಚ್ಚಿನ ಪ್ರೋಟಿನ್ ಪೌಡರ್‌ಗಳು ಹಾಲಿನಲ್ಲಿ ಬೆರಸಿಕೊಂಡು ಕುಡಿಯುವಂತಹವೇ ಆಗಿವೆ. ಬಹುತೇಕ ಪ್ರೋಟಿನ್‌ಗಳು ಆಹಾರ ಮತ್ತು ಔಷಧ ಸಂಸ್ಥೆಯಿಂದ (ಎಫ್‌ಡಿಎ) ಅನುಮೋದನೆ ಪಡೆದಿವೆ. ಇವುಗಳನ್ನು ವಿಶ್ವದಾದ್ಯಂತ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಪ್ರೋಟಿನ್ ಎಂಬುದು ಹಾನಿಕಾರಕ ಪದಾರ್ಥವಲ್ಲ. ಆದರೆ, ಗ್ರೋತ್ ಹಾರ್ಮೋನ್ (ಜಿಎಚ್) ಮತ್ತು ಸ್ಟೆರಾಯ್ಡ್‌ಗಳ ಬಳಕೆ ಹೆಚ್ಚು ಅಪಾಯಕಾರಿ. ಟೆಸ್ಟೋಸ್ಟಿರಾನ್ ಪುರುಷರಲ್ಲಿನ ಪ್ರಮುಖ ಹಾರ್ಮೋನ್ ಆಗಿದೆ. ಮಹಿಳೆಯರಲ್ಲಿ ಇದು ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಈ ಹಾರ್ಮೋನ್ ಮಟ್ಟ ಹೆಚ್ಚಿಸಿಕೊಳ್ಳಲು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ (ಚಯಾಪಚಯ) ಸಮಸ್ಯೆಯಿಂದ ಹೊರಬರಲು ಹಾಗೂ ಬೊಜ್ಜು ಕರಗಿಸಲು ಸ್ಟೆರಾಯ್ಡ್‌ಗಳ ಬಳಸಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಿಮ್‌ಗಳಿಗೆ ತೆರಳುವ ಯುವಕರು ಕೆಲವೇ ದಿನಗಳಲ್ಲಿ ಮಾಂಸಖಂಡಗಳನ್ನು ಹುರಿಗೊಳಿಸುವ ಉದ್ದೇಶದಿಂದ ಸ್ಟೆರಾಯ್ಡ್‌ಗಳ ಮೊರೆ ಹೋಗುತ್ತಿದ್ದಾರೆ‘ ಎಂದು ಗೋಲ್ಡ್ ಜಿಮ್‌ನ ಸಿಒಒ ವಿನಯ್ ಹೇಳುತ್ತಾರೆ.
‘ಬ್ಲಾಕ್ ಮಾಂಬಾ’ದಂತಹ ಸ್ಟೆರಾಯ್ಡ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇವುಗಳನ್ನು ಬಳಸುವುದರಿಂದ ದೇಹದ ಹಾರ್ಮೋನುಗಳ ನಿಯಂತ್ರಣದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಓಟಕ್ಕೂ ಮುನ್ನ ಕುದುರೆಗೆ ನೀಡುವ ಚುಚ್ಚುಮದ್ದುಗಳನ್ನು ಒಳಗೊಂಡ ಪದಾರ್ಥಗಳನ್ನು ಈ ಸ್ಟೆರಾಯ್ಡ್‌ಗಳಲ್ಲಿ ಬಳಸಲಾಗಿರುತ್ತದೆ. ಇವು ಮನುಷ್ಯನ ದೇಹಕ್ಕೆ ಹೆಚ್ಚು ಅಪಾಯಕಾರಿ. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಜಿಮ್‌ಗಳಲ್ಲಿ ಟ್ರೇನರ್‌ಗಳು ಕಡ್ಡಾಯವಾಗಿ ತರಬೇತಿ ಪಡೆದಿರುತ್ತಾರೆ. ಜತೆಗೆ ಸೂಕ್ತ ಪ್ರಮಾಣಪತ್ರಗಳನ್ನು ಹೊಂದಿರುತ್ತಾರೆ. ಜತೆಗೆ, ಮೂರು ಹಂತ ಡಯಟೀಷಿಯನ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುತ್ತಾರೆ. ಸದ್ಯದ ಮಟ್ಟಿಗೆ ಬೆಂಗಳೂರು ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಶೇ 90ರಷ್ಟು ಜಿಮ್‌ಗಳಲ್ಲಿ ಈ ನಿಯಮಗಳು ಪಾಲನೆ ಆಗುತ್ತಿಲ್ಲ. ಶೇ 8ರಿಂದ 10ರಷ್ಟು ಜಿಮ್‌ಗಳಲ್ಲಿ ಮಾತ್ರ ಕಡ್ಡಾಯವಾಗಿ ನಿಯಮಗಳನ್ನು ಅನುಸರಿಸಲಾಗುತ್ತಿದೆ‘ ಎಂದು ಹೇಳುತ್ತಾರೆ ವಿನಯ್.
‘ನಾನು ಮಾಡಿದ್ದೇನೆ.. ಪರಿಚಯಸ್ಥರೊಬ್ಬರು ಮಾಡಿದ್ದಾರೆ... ವರ್ಕ್ ಆಗಿದೆ, ನೀನು ಮಾಡು’ ಎಂಬ ಮಾತಿನ ಶಿಫಾರಸಿನ ಆಧಾರದ ಮೇಲೆ, ಕೆಲವೇ ದಿನಗಳಲ್ಲಿ ‘ಸಿಕ್ಸ್‌ಪ್ಯಾಕ್’ ಗ್ಯಾರಂಟಿ ಎಂದು ಸ್ಟೆರಾಯ್ಡ್‌ಯುಕ್ತ ಪದಾರ್ಥಗಳನ್ನು ಸೇವಿಸುವಂತೆ, ದೇಹ ಹುರಿಗೊಳಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್ ತೆಗೆದುಕೊಳ್ಳುವಂತೆ ಸಲಹೆ ನೀಡುವ ಮೂಲಕ ಯುವಕರನ್ನು ‘ಬಕರಾ’ ಮಾಡುತ್ತಿದ್ದಾರೆ‘ ಎನ್ನುವುದು ಅವರ ವಿವರಣೆ.
ಈಗಂತೂ ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಕಲಬುರಗಿ ಸೇರಿದಂತೆ ಎಲ್ಲಾ ನಗರಗಳಲ್ಲಿ ಪ್ಯಾಕೇಜ್ (ವ್ಯಾಯಾಮ +ವೈಯಕ್ತಿಕ ಟ್ರೇನರ್+ ಫುಡ್ ಸಪ್ಲಿಮೆಂಟ್) ಕೂಡ ನೀಡಲಾಗುತ್ತಿದೆ. ತಿಂಗಳಿಗೆ ₹30ರಿಂದ ₹50 ಸಾವಿರದವರೆಗೂ ಶುಲ್ಕ ಪಡೆಯಲಾಗುತ್ತಿದೆ. ಕೆಲವೇ ತಿಂಗಳಲ್ಲಿ ’ಸಿಕ್ಸ್‌ಪ್ಯಾಕ್‘ ಗ್ಯಾರಂಟಿ ಎಂಬ ವಾಗ್ದಾನವೂ ದೊರೆಯುತ್ತದೆ.
ಯುಟ್ಯೂಬ್ ಅಥವಾ ಅಂತರ್ಜಾಲತಾಣಗಳಲ್ಲಿ ಉಚಿತವಾಗಿ ಲಭ್ಯವಿರುವ ಕೆಲವರ ಮಾರ್ಗದರ್ಶನಗಳನ್ನು ಆಧರಿಸಿ ದೇಹ ಹುರಿಗಟ್ಟುವ (ಬಾಡಿ ಬಿಲ್ಡ್ ಮಾಡುವುದು) ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳನ್ನು ವೀಕ್ಷಿಸಿ ರಾತ್ರಿ ಬೆಳಗಾಗುವುದರೊಳಗೆ ಮಾಂಸಖಂಡಗಳನ್ನು ಹುರಿಗೊಳಿಸುವ ಹಠಕ್ಕೆ ಬಿದ್ದ ಅನೇಕರು ಸ್ಟೆರಾಯ್ಡ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಮೂತ್ರಪಿಂಡ, ಯಕೃತ್ ಹಾನಿಯಾಗುವುದರ ಜತೆಗೆ ದೇಹದ ಮೇಲೆ ಲೆಕ್ಕವಿಲ್ಲಷ್ಟು ಅಡ್ಡ ಪರಿಣಾಮಗಳು ಬೀರುತ್ತವೆ ಎನ್ನುತ್ತಾರೆ ವೈದ್ಯರು.
‘ಚುಚ್ಚುಮದ್ದು, ಸ್ಟಿರಾಯ್ಡ್ ತೆಗೆದುಕೊಂಡಾಗ ವ್ಯಾಯಾಮ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಟೆಸ್ಟೋಸ್ಟಿರಾನ್ ಹಾರ್ಮೋನ್ ಅನ್ನು ಉದ್ದೀಪನಗೊಳಿಸುತ್ತದೆ. 100 ಬಸ್ಕಿ ಹೊಡೆಯಬಲ್ಲ ವ್ಯಕ್ತಿ ಸ್ಟೆರಾಯ್ಡ್ ತೆಗೆದುಕೊಂಡಾಗ ಸಾವಿರಕ್ಕೂ ಹೆಚ್ಚು ಬಸ್ಕಿ ತೆಗೆಯಬಲ್ಲ. ಇದರಿಂದ ಬೇಗನೇ ದೇಹ ಹುರಿಗಟ್ಟುತ್ತದೆ. ಆದರೆ, ಈ ಮದ್ದುಗಳನ್ನು ತೆಗೆದುಕೊಳ್ಳುವವರು ಆರಂಭದ ಕೆಲವು ವರ್ಷ ಆರಾಮಾಗಿ ಇರುತ್ತಾರೆ. ಆದರೆ, ದೀರ್ಘಾವಧಿಯಲ್ಲಿ ಪ್ರತಿಕೂಲ ಪರಿಣಾಮ ಬೀರುವ ಈ ಔಷಧಿಗಳು ಉಳಿದ ಆಯಸ್ಸನ್ನು ನುಂಗಿಬಿಡುವುದು ಗ್ಯಾರಂಟಿ’ ಎನ್ನುತ್ತಾರೆ ವೈದ್ಯರಾದ ಕಿಶೋರ್.
‘ಜಿಮ್‌ಗಳಲ್ಲಿ ಯಾರಾದರೂ ಪುಡಿ, ಔಷಧಿಗಳನ್ನು ಕೊಡಲು ಬಂದರೆ ಜಾಗೃತರಾಗಿರಬೇಕು. ಈಗಿನ ದಿನಗಳಲ್ಲಿ ಅರ್ಹತೆ, ವಿದ್ಯಾಭ್ಯಾಸಗಳಿಲ್ಲದವರೇ ಟ್ರೇನರ್‌ಗಳಾಗುತ್ತಿದ್ದಾರೆ. ದುಡ್ಡು ಗಳಿಸಲು ವಾಮಮಾರ್ಗ ಹಿಡಿಯುತ್ತಿದ್ದಾರೆ. ನಿಮಗೆ ನಿಜಕ್ಕೂ ಔಷಧಿಗಳನ್ನು ಕೊಡುವವರು ವೈದ್ಯರು ಮಾತ್ರ. ಈಗಂತೂ ಗೂಗಲ್‌ನಲ್ಲಿ ಸರ್ಚ್ ಮಾಡಿ ಔಷಧಿ, ಪೌಡರ್ ತೊಗೊಂಡು ಬರುವವರೇ ಹೆಚ್ಚು. ನಾವು ತಿಳಿವಳಿಕೆ ಹೇಳುವ ಪ್ರಯತ್ನ ಮಾಡುತ್ತೇನೆ. ಆದರೆ, ಅದರಲ್ಲಿ ಬಹುತೇಕರು ಪಾಲಿಸುವುದಿಲ್ಲ. ಎಲ್ಲ ಕೆಟ್ಟ ಮೇಲೆ ಮತ್ತೆ ಬರುತ್ತಾರೆ. ಪ್ರೊಟೀನ್ ಪೌಡರ್, ಸ್ಟೆರಾಯ್ಡ್ ದಂಧೆಯಲ್ಲಿ ತೊಡಗುವ ಕೋಚ್‌ಗಳು, ಜಿಮ್ ಮಾಲೀಕರಷ್ಟೇ ತಪ್ಪಿತಸ್ಥರಲ್ಲ. ಬಳಸುವವರೂ ಅಪರಾಧಿಗಳೇ. ಅವರಿಗೆ ಗೊತ್ತಿಲ್ಲದೇ ಏನೂ ನಡೆಯುವುದಿಲ್ಲ. ಸಿಕ್ಕಿಬಿದ್ದಾಗ ಮಾತ್ರ ನಮಗೇನು ಗೊತ್ತಿಲ್ಲ ಎಂದು ಹೇಳುತ್ತಾರೆ. ಇವತ್ತಿನ ದಿನಗಳಲ್ಲಿ ಯಾವ ಔಷಧಿ ತೆಗೆದುಕೊಳ್ಳಬೇಕು, ತೆಗೆದುಕೊಳ್ಳಬಾರದು ಎಂಬುದು ಇಂಟರ್‌ನೆಟ್‌ನಲ್ಲಿ ಸಿಗುತ್ತದೆ. ಆದರೆ ವೈದ್ಯರು, ತಜ್ಞರು ಇದ್ದಾರೆ. ಅವರಿಂದಲೇ ಮಾಹಿತಿ ಪಡೆಯಬಹುದು. ಆದರೆ, ಸಾಧನೆ, ಕೀರ್ತಿ ಮತ್ತು ಹಣದ ವ್ಯಾಮೋಹ ದಾರಿ ತಪ್ಪಿಸುತ್ತಿವೆ‘ ಎಂದು ಹೆಸರು ಹೇಳಲು ಇಚ್ಚಿಸದ ವೈದ್ಯರೊಬ್ಬರು ತಿಳಿಸಿದ್ದಾರೆ.
‘ಹಳೆಯ ಜಿಮ್‌ಗಳು ಯುವಕರ ಅಭಿರುಚಿಗೆ ತಕ್ಕಂತೆ ಆಧುನಿಕ ಉಪಕರಣಗಳನ್ನು ಅಳವಡಿಸಿದ್ದು, ಒಳಾಂಗಣ ವಿನ್ಯಾಸವನ್ನು ಬದಲಿಸಿಕೊಂಡು ಆಕರ್ಷಿಸುತ್ತಿವೆ. ಮೊದಮೊದಲು ಜನ ಅಷ್ಟಾಗಿ ಬರುತ್ತಿರಲಿಲ್ಲ. ಫಿಟ್‌ನೆಸ್ ಮಹತ್ವ ತಿಳಿದು ಕ್ರಮೇಣ ಜಿಮ್‌ನತ್ತ ಮುಖಮಾಡತೊಡಗಿದ್ದಾರೆ. ಈಗ ಫಿಟ್‌ನೆಸ್ ಬಗೆಗಿನ ಯುವಕರ ಮನೋಭಾವವೂ ಬದಲಾಗಿದೆ. ನ್ಯೂಟ್ರಿಷನ್, ಕಾರ್ಡಿಯೋ ವ್ಯಾಯಾಮ, ತೂಕ ಇಳಿಕೆ, ಆಹಾರ ಪದ್ಧತಿಯ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ’ ಎನ್ನುತ್ತಾರೆ ಬೆಂಗಳೂರಿನ ಜಿಮ್‌ವೊಂದರ ತರಬೇತುದಾರರಾದ ಪ್ರಕಾಶ್.
‘ಯುವಕರು ಸದೃಢ ದೇಹ, ಸಿಕ್ಸ್‌ಪ್ಯಾಕ್ ಹೊಂದಲು ಬರುತ್ತಾರೆ. ಮಧ್ಯ ವಯಸ್ಸಿನರು ರಕ್ತದೊತ್ತಡ, ಮಧುಮೇಹ, ಮೊಣಕಾಲು ನೋವು, ಬೆನ್ನುನೋವು ನಿವಾರಣೆಗಾಗಿ ಕಸರತ್ತು ಮಾಡುತ್ತಾರೆ. ಯಾವುದೇ ಸಲಕರಣೆಗಳಿಲ್ಲದೆ, ಮನರಂಜನೆ ಮೂಲಕ ಫಿಟ್ ಆಗಲು ಏರೋಬಿಕ್ಸ್, ಜುಂಬಾ ತುಂಬಾ ಪರಿಣಾಮಕಾರಿಯಾಗಿದೆ’ ಎಂಬುದು ಪ್ರಕಾಶ್ ಅವರ ವಿವರಣೆ.
‘ನಮ್ಮ ಮನೆಗಳಲ್ಲಿ ಲಭ್ಯವಿರುವ ಊಟವೇ ಶ್ರೇಷ್ಠ. ಅದನ್ನು ತಿಂದು ದೊಡ್ಡ ದೇಹದಾರ್ಢ್ಯಪಟು ಆಗಬಹುದು ಎನ್ನುವುದು ನನ್ನ ಸ್ವಾನುಭವ. ಪ್ರೊಟೀನ್ ಪೌಡರ್, ಡ್ರಿಂಕ್ಸ್, ಸ್ಟೆರಾಯ್ಡ್ ಇಂಜೆಕ್ಷನ್‌ಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇನೆ. ನ್ಯಾಚುರಲ್ ಬಾಡಿಬಿಲ್ಡಿಂಗ್ (ಸಹಜ ವ್ಯಾಯಾಮ, ಅಂಗಸೌಷ್ಠವ) ಪದ್ಧತಿಗೆ ಒತ್ತು ನೀಡುತ್ತಿದ್ದೇನೆ. ಅಮೆರಿಕ, ಯುರೋಪ್‌ಗಳಲ್ಲೂ ಈಗ ಈ ಮದ್ದು, ಪೌಡರ್‌ಗಳನ್ನು ಬಳಸುವುದು ಕಮ್ಮಿಯಾಗಿದೆ. ಕೇವಲ ಶೋಕಿಗಾಗಿ ವ್ಯಾಯಾಮ ಮಾಡದೇ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಬೇಕು. ತಲೆತಲಾಂತರಗಳಿಂದ ರೂಢಿಯಲ್ಲಿರುವ ಆಹಾರ ಪದ್ಧತಿಯೇ ಉತ್ತಮ. ನಮ್ಮ ಜಿಮ್‌ನಲ್ಲೂ ಹೊಸದಾಗಿ ಸೇರ್ಪಡೆಯಾಗುವ ಯುವಕರು ಪ್ರೊಟೀನ್ ಶೇಕ್ಸ್ ಸಪ್ಲಿಮೆಂಟ್ಸ್‌ಗಳನ್ನು ತೆಗೆದುಕೊಳ್ಳುವ ಬಗ್ಗೆ ಕೇಳುತ್ತಾರೆ. ಆದರೆ, ಕಡ್ಡಾಯವಾಗಿ ಬೇಡ ಎಂದೇ ಹೇಳುತ್ತೇನೆ’ ಎಂದು ಕೋಲಾರದ ದೇಹದಾರ್ಢ್ಯಪಟು, ಜಿಮ್ ಟ್ರೇನರ್ ಪುರುಷೋತ್ತಮ ಹೇಳುತ್ತಾರೆ.
‘ಡ್ರೈ ಫ್ರೂಟ್ಸ್‌ಗಳಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಸೇರಿದಂತೆ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಆಯುರ್ವೇದದಲ್ಲಿ ಕೂಡ ಒಣ ಹಣ್ಣುಗಳನ್ನು ಶಕ್ತಿಯುತ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ’ ಎಂಬುದು ಪುರುಷೋತ್ತಮ ಅವರ ಮಾತು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂತಹ ಸಪ್ಲಿಮೆಂಟ್‌ಗಳ ಪೈಕಿ ಶೇ 99ರಲ್ಲಿ ನಿಷೇಧಿತ ಉದ್ದೀಪನ ಮದ್ದಿನ ಅಂಶಗಳಿವೆ ಎಂದು ಕೆಲವು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಸಿ) ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು. ಹಲವು ವರ್ಷಗಳಿಂದ ಐಒಸಿಯು ಇಂತಹ ಮಾರಕ ಔಷಧಗಳ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇದೆ. ಭಾರತದಲ್ಲಿ ದೇಹದಾರ್ಢ್ಯ, ಪವರ್ ಲಿಫ್ಟಿಂಗ್ ಕ್ರೀಡೆಗಳಲ್ಲಿ ಬಡಕುಟುಂಬಗಳಿಂದ ಬಂದವರೇ ಹೆಚ್ಚು. ರಾಷ್ಟ, ಅಂತರರಾಷ್ಟ್ರೀಯ ಪದಕ ಗಳಿಸಿ ನೌಕರಿ ಗಿಟ್ಟಿಸಿಕೊಳ್ಳಬೇಕೆನ್ನುವ ಅವರ ತುಡಿತವೇ ‘ಪ್ರೊಟೀನ್ ಪೌಡರ್’ಗೆ ಬಂಡವಾಳ.
‘ಪ್ರೋಟಿನ್ ಒಳ್ಳೆಯದು ಆದರೆ ಅದು ಶುದ್ಧವಾಗಿರಬೇಕು. ಬಹುತೇಕ ಪ್ರೋಟಿನ್ ಸಪ್ಲಿಮೆಂಟ್‌ಗಳಲ್ಲಿ ಸ್ಟಿರಾಯ್ಡ್ ಮತ್ತು ಮಾಸ್ಕಿಂಗ್ ಏಜೆಂಟ್‌ಗಳನ್ನು ಬಳಸುತ್ತಾರೆ. ಇದು ದೇಹಕ್ಕೆ ಹಾನಿಕರ. ಕೆಲವು ತಿಂಗಳುಗಳ ಹಿಂದೆ ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ (ಐಒಸಿ) ವಿಶ್ವದಾದ್ಯಂತ 625 ಬೇರೆಬೇರೆ ಪ್ರೋಟಿನ್ ಸಪ್ಲಿಮೆಂಟ್‌ಗಳ ಸ್ಯಾಂಪಲ್ ಪರೀಕ್ಷಿಸಿತು. ಅದರಲ್ಲಿ ಶೇ 86ರಷ್ಟು ಸಪ್ಲಿಮೆಂಟ್‌ಗಳಲ್ಲಿ ನಿಷೇಧಿತ ಸ್ಟಿರಾಯ್ಡ್ ಅಂಶಗಳು ಪತ್ತೆಯಾದವು. ಅದರಲ್ಲೂ ಅನಾಬೊಲಿಕ್ ಸ್ಟಿರಾಯ್ಸ್‌ಗಳು ತುಂಬಾ ಹಾನಿಕರ. ಇದನ್ನು ಸೇವಿಸಿದ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದರೆ ಶಿಕ್ಷೆ ಖಂಡಿತ. ಆದರೆ, ಇವತ್ತು ದೊಡ್ಡ ಸವಾಲೆಂದರೆ ನಮ್ಮಲ್ಲಿ ಸಿಗುತ್ತಿರುವ ಪ್ರೊಟೀನ್‌ನಲ್ಲಿ ಸ್ಟಿರಾಯ್ಡ್ ಬೆರಕೆಯಾಗಿರುವುದರ ಕುರಿತು ಪತ್ತೆ ಹಚ್ಚಲು ಆಗುವುದಿಲ್ಲ. ಈ ಹಿಂದೆ ಜಲಂಧರ್, ಲುಧಿಯಾನ ನಗರಗಳಲ್ಲಿ ಪ್ರೊಟೀನ್‌ಗಳಲ್ಲಿ ಕಲಬೆರಕೆ ಮಾಡುವ ಜಾಲವನ್ನು ಪತ್ತೆಹಚ್ಚಿದ್ದು ದೊಡ್ಡ ಸುದ್ದಿಯಾಗಿತ್ತು’ ಎಂದು ಕ್ರೀಡಾ ವೈದ್ಯ, ಫಿಫಾದ ಡೋಪಿಂಗ್ ಕಂಟ್ರೋಲ್ ಅಧಿಕಾರಿಯೂ ಆಗಿರುವ ಡಾ. ಕಿರಣ ಕುಲಕರ್ಣಿ ವಿವರಿಸುತ್ತಾರೆ.
‘ಸ್ಟಿರಾಯ್ಡ್‌ಗಳ ಸೇವನೆಯಿಂದ ಗಂಡಸರಲ್ಲಿ ಹೃದಯಾಘಾತ, ಕೂದಲುದುರುವಿಕೆ, ಕ್ಯಾನ್ಸರ್, ವೃಷಣಗಳ ಕುಗ್ಗುವಿಕೆ ಇತ್ಯಾದಿ ತೊಂದರೆಗಳಾಗುತ್ತವೆ. ಮಹಿಳೆಯರಲ್ಲಿಯೂ ದೈಹಿಕ ರಚನೆಯಲ್ಲಿ ವ್ಯತ್ಯಾಸ, ಋತುಚಕ್ರದಲ್ಲಿ ಏರುಪೇರು, ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡ ವೈಫಲ್ಯ ಹಾಗೂ ಧ್ವನಿ ಗಡಸಾಗುವ ಸಮಸ್ಯೆಗಳಾಗುತ್ತವೆ. ಆದರೆ, ಈ ರೋಗಲಕ್ಷಣಗಳಿಗೆ ತಾವು ಸೇವಿಸುತ್ತಿರುವ ಸಪ್ಲಿಮೆಂಟ್‌ಗಳಲ್ಲಿರುವ ಕಲಬೆರಕೆ ಸ್ಟಿರಾಯ್ಡ್ ಎಂಬ ಅರಿವು ರೋಗಿಗಳಲ್ಲಿ ಮೂಡುವುದು ತೀರಾ ಕಡಿಮೆ. ಅರಿವಿಗೆ ಬರುವಷ್ಟರಲ್ಲಿ ಕಾಲ ಮೀರಿರುತ್ತದೆ’ ಎಂದೆನ್ನುತ್ತಾರೆ ಡಾ.ಕುಲಕರ್ಣಿ.
‘ಕಸರತ್ತು, ವ್ಯಾಯಾಮಗಳನ್ನು ಮಾಡುವವರು ಪ್ರೊಟೀನ್ ತೆಗೆದುಕೊಳ್ಳಬಹುದು. ಆದರೆ, ಅದಕ್ಕೊಂದು ಅಳತೆಗೋಲು ಇದೆ. ಸಾಮನ್ಯ ಜನರು ಅಂದರ ಫಿಟ್‌ನೆಸ್‌ಗಾಗಿ ತಾಲೀಮು ಮಾಡುವವರು ತಮ್ಮ ದೇಹ ತೂಕಕ್ಕೆ ತಕ್ಕಂತೆ ಪ್ರೊಟೀನ್ ಸ್ವೀಕರಿಸಬೇಕು. ಅಂದರೆ ಪ್ರತಿ ಕೆ.ಜಿಗೆ ಒಂದು ಗ್ರಾಮ್ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಉದಾಹರಣೆಗೆ ಒಬ್ಬ ವ್ಯಕ್ತಿ 60 ಕೆ.ಜಿ ಇದ್ದರೆ, ದಿನಕ್ಕೆ 60 ಗ್ರಾಂ ಪ್ರೊಟೀನ್ ಸೇವಿಸಬಹುದು. ಆದರೆ, ಇದನ್ನು ದಿನದ ಮೂರು ಭಾಗಗಳಲ್ಲಿ ವಿಭಜಿಸಿ ತೆಗೆದುಕೊಳ್ಳಬೇಕು. ಬೆಳಿಗ್ಗೆ ಮಧ್ಯಾಹ್ನ ಮತ್ತು ಸಂಜೆ ತಲಾ 20 ಗ್ರಾಂ ತೆಗೆದುಕೊಂಡರೆ ಸರಿಯಾಗುತ್ತದೆ. ವೃತ್ತಿಪರ ಕ್ರೀಡಾಪಟುಗಳು ಪ್ರತಿ ಕೆಜಿ 1.5 ಗ್ರಾಂ ಕೂಡ ತೆಗೆದುಕೊಳ್ಳಬಹುದು. ವೇ ಐಸೋಲೆಟ್ ಮತ್ತು ವೇ ಪ್ರೋಟಿನ್‌ಗಳೆಂಬ ಎರಡು ಪದ್ಧತಿಗಳಿವೆ’ ಎಂದು ಅವರು ಹೇಳುತ್ತಾರೆ.
ಪ್ರೋಟಿನ್, ಸ್ಟೆರಾಯ್ಡ್ ಬಳಕೆ ಲಾಭಕ್ಕಿಂತ ನಷ್ಟ ಜಾಸ್ತಿ. ಅವುಗಳನ್ನು ಬಳಸುವ ಮುನ್ನ ನೂರು ಬಾರಿ ಯೋಚಿಸಬೇಕು. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಹೆಚ್ಚಬೇಕು ಎನ್ನುತ್ತಾರೆ ಮಂಗಳೂರಿನ ಜಿಮ್ ತರಬೇತುದಾರ ಶ್ರೀಧರ ಪೂಜಾರಿ.
ಅಲ್ವಾವಧಿಯಲ್ಲಿಯೇ ಸ್ನಾಯುಗಳ ಬಲವರ್ಧನೆಗೆ ಪ್ರೊಟೀನ್ ಪೌಡರ್, ಸ್ಟೆರಾಯ್ಡ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳ ಬಳಕೆಯು ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿವೆ. ವಿಶೇಷವಾಗಿ ‘ಅನಾಬೊಲಿಕ್ ಸ್ಟೆರಾಯ್ಡ್’ ಅಪಾಯಕಾರಿಯಾಗಿದೆ. ಅತಿಯಾದ ಪ್ರೊಟೀನ್ ಪೌಡರ್‌ಗಳ ಬಳಕೆಯಿಂದ ಮೂತ್ರಪಿಂಡದ ಒತ್ತಡ, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸ್ಟೆರಾಯ್ಡ್ ಬಳಕೆಯಿಂದ ಯಕೃತ್ತಿಗೆ ಹಾನಿಯಾಗುವ ಜತೆಗೆ ಹೃದಯ ರಕ್ತನಾಳದ ಕಾಯಿಲೆ ಮತ್ತು ಹಾರ್ಮೋನುಗಳ ಅಸಮತೋಲನದಂತಹ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ.
ದೀರ್ಘಕಾಲ ಸ್ಟೆರಾಯ್ಡ್ ಬಳಕೆ ಮಾಡಿದವರು ಮಾನಸಿಕ ಅಸ್ವಸ್ಥರಾಗುವ ಸಾಧ್ಯತೆಯೂ ಇದೆ. ಮೊಡವೆಗಳು ಮತ್ತು ಬೆಳವಣಿಗೆ ಕುಂಠಿತಕ್ಕೂ ಕಾರಣವಾಗಬಹುದು. ಸ್ಟೆರಾಯ್ಡ್ ಬಳಕೆ ನಿಲ್ಲಿಸುವ ಸಂದರ್ಭದಲ್ಲಿಯೂ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸ್ನಾಯುಗಳು ಸಂಪೂರ್ಣವಾಗಿ ಬಲಹೀನವಾಗುತ್ತದೆ. ಆದ್ದರಿಂದ ಈ ಹಿಂದೆ ಬಳಕೆಯಲ್ಲಿದ್ದ ಸಹಜ ವಿಧಾನಗಳಿಂದಲೇ ಸ್ನಾಯುಗಳನ್ನು ಬಲಿಷ್ಠಗೊಳಿಸಿಕೊಳ್ಳಬೇಕು. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು
– ಡಾ. ಅನಂತ ಪದ್ಮನಾಭ, ಆಂತರಿಕ ಔಷಧ ವಿಭಾಗದ ಹಿರಿಯ ಸಲಹೆಗಾರ, ಫೋರ್ಟಿಸ್ ಆಸ್ಪತ್ರೆ
ಡಾ. ಅನಂತ ಪದ್ಮನಾಭ
ನಾನು ಪ್ರಾಕೃತಿಕ ಆಹಾರ ಪದ್ಧತಿ ಅನುಸರಿಸುವ ಜೊತೆಗೆ ನಿಯಮಿತ ವ್ಯಾಯಾಮ, ದೈಹಿಕ ಕಸರತ್ತು ನಡೆಸಿ ದೇಹವನ್ನು ದಂಡಿಸಿಕೊಂಡು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಮಿಸ್ಟರ್ ವಲ್ಡ್ ಸೇರಿದಂತೆ ಹಲವು ಪ್ರಶಸ್ತಿ ಗೆದ್ದಿದ್ದೇನೆ. ಇಂದೂ ಆರೋಗ್ಯವಂತನಾಗಿದ್ದೇನೆ.
ಎರಡು ದಶಕಗಳ ಹಿಂದೆ ಈ ಪ್ರೋಟಿನ್, ಸ್ಟಿರಾಯ್ಡ್ ಹಾವಳಿ ಇರಲಿಲ್ಲ. ಇವುಗಳ ಬಳಕೆ ತಾತ್ಕಾಲಿಕ ಖುಷಿ ತರಬಹುದು. ಆದರೆ, ಭವಿಷ್ಯದಲ್ಲಿ ಅದರಿಂದ ಅಪಾಯ ತಪ್ಪಿದಲ್ಲ. ಇಂದಿನ ಯುವಕರಿಗೆ ಎಲ್ಲವೂ ವೇಗವಾಗಿ ಆಗಬೇಕು. ಸಿಕ್ಸ್‌ಪ್ಯಾಕ್ ಪ್ರದರ್ಶಿಸಿ ಜನಪ್ರಿಯವಾಗುವ ಹುಚ್ಚಾಟಕ್ಕೆ ಅಡ್ಡದಾರಿ ಹುಡುಕುತ್ತಾರೆ. ಕೊನೆಗೆ ಅದೇ ಅವರಿಗೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತಿದೆ.
ನಾನು ದೇಹದಾರ್ಢ್ಯಪಟುವಾಗಿದ್ದಾಗ ಡಯಟ್‌ನಲ್ಲಿ ಚಪಾತಿ, ಎಳನೀರು ಅದರ ಗಂಜಿ ಜೊತೆ ಅವಲಕ್ಕಿ, ಹಾಲು, ನಾಟಿ ಕೋಳಿ ಮೊಟ್ಟೆ, ತರಕಾರಿ, ಸೊಪ್ಪು, ಗೆಡ್ಡೆ ಗೆಣಸು, ಮೊಳಕೆ ಕಾಳು ಸೇವಿಸುತ್ತಿದ್ದೆ. ಇದರಿಂದ ದೇಹ ಸೌಂದರ್ಯ ನಿಧಾನವಾಗಿ ವೃದ್ಧಿಸಿದರೂ ಅದು ದೀರ್ಘಕಾಲ ಉಳಿದಿದೆ. ಆದರೆ, ಇಂದಿನ ಫಾಸ್ಟ್‌ಫುಡ್ ಜಗತ್ತಿನಲ್ಲಿ ಎಲ್ಲವೂ ವೇಗವಾಗಿ ನಡೆಯುತ್ತಿದೆ. ಅದರಿಂದ ಕಾಯಿಲೆಯೂ ಹೊರತಾಗಿಲ್ಲ.
– ರೇಮಂಡ್ ಡಿಸೋಜ, ಅಂತರರಾಷ್ಟ್ರೀಯ ದೇಹದಾರ್ಢ್ಯಪಟು
ಕಳೆದ 34 ವರ್ಷಗಳಿಂದ ಜಿಮ್ ನಡೆಸಿಕೊಂಡು ಬರುತ್ತಿದ್ದೇನೆ. ಆರಂಭದಿಂದಲೂ ನಾನು ಈ ಪ್ರೋಟಿನ್ ಪೌಡರ್, ಸ್ಟೆರಾಯ್ಡ್‌ಗಳನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಯುಟ್ಯೂಬ್, ಇನ್‌ಸ್ಟಾಗ್ರಾಂ ಬಂದ ಕಳೆದೊಂದು ದಶಕದಲ್ಲಿ ಈ ಪದಾರ್ಥಗಳ ಬಳಕೆ ಹೆಚ್ಚಾಗಿದೆ. ಯಾರೂ ಕೋಚ್ ಮಾತನ್ನು ಕೇಳುತ್ತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನೇ ನಂಬುತ್ತಾರೆ.
ಮನೆಯ ಊಟ ಮಾಡಿಕೊಂಡು ನೈಸರ್ಗಿಕವಾಗಿ ದೇಹ ಹುರಿಗೊಳಿಸಬೇಕು. ನಾವು ಬೆಳೆದ ವಾತಾವರಣದ ಊಟ ಮಾಡಬೇಕು. ಕಲಬೆರಕೆ ಪ್ರೋಟಿನ್ ತೆಗೆದುಕೊಳ್ಳುವುದು ಅವೈಜ್ಞಾನಿಕ. ಇದರಿಂದ ಮೂರೇ ತಿಂಗಳಲ್ಲಿ ರಿಸಲ್ಟ್ ಪಡೆಯಬಹುದು. ಆದರೆ ಮೂರೇ ವರ್ಷದಲ್ಲಿ ಇದರ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಎಲ್‌ಕೆಜಿಗೆ ಓದುತ್ತಿರುವ ಮಗುವಿಗೇಕೆ ಐಎಎಸ್ ಪರೀಕ್ಷೆಯ ಟ್ಯೂಷನ್! ಯಾವುದೋ ಉದ್ಯೋಗದಲ್ಲಿದ್ದುಕೊಂಡು ಕೇವಲ ವ್ಯಾಯಾಮಕ್ಕಾಗಿ ಹೋಗುವ ಹಲವರೂ ಈ ಪ್ರೋಟಿನ್ ದಾಸರಾಗುತ್ತಿದ್ದಾರೆ. ಇದರಿಂದ ದೇಹದಲ್ಲಿ ಕೆಟ್ಟ ವಾಸನೆ, ಕೂದಲು ಉದುರುವಿಕೆ, ಬಂಜೆತನ. ಎಲ್ಲವುದಕ್ಕಿಂತ ಹೆಚ್ಚಾಗಿ ಒಂದು ರೀತಿಯಲ್ಲಿ ರೇಗಾಡುತ್ತಿರುತ್ತಾರೆ. ಅವರ ಮುಖ ನೋಡಿದ ತಕ್ಷಣ ನಮಗೆ ಗೊತ್ತಾಗುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಕಥೆಗಾಗಿ ಮೂರು ತಿಂಗಳಲ್ಲಿ ಬಾಡಿ ಬಿಲ್ಡ್ ಮಾಡಬೇಕು, ಮೂರು ತಿಂಗಳಲ್ಲಿ ತೂಕ ಇಳಿಸಿಕೊಳ್ಳಬೇಕು ಎಂದು ಕೇವಲ ಹೀರೊ ಆಗಿ ಮಾಡುತ್ತಿರುವವರಲ್ಲ, ಖಳನಾಯಕ, ನಾಯಕಿಯರೂ ಈ ದಾರಿ ಹಿಡಿಯುತ್ತಿದ್ದಾರೆ.
– ಎ.ವಿ.ರವಿ (ಜಿಮ್ ರವಿ), ಅಂತರರಾಷ್ಟ್ರೀಯ ಬಾಡಿಬಿಲ್ಡರ್
ಜಿಮ್ ರವಿ
ನನ್ನ ಈ ದೇಹಕ್ಕಾಗಿ 20 ವರ್ಷ ಸವಿಸಿದ್ದೇನೆ. ಯಾರದರೂ ಏಕಾಏಕಿ ಹೀಗೆ ದೇಹರಚನೆಯನ್ನು ಸಾಧಿಸಿದ್ದಾರೆ ಎಂದರೆ ಅಡ್ಡದಾರಿ ಹಿಡಿದಿದ್ದಾರೆ ಎಂದರ್ಥ. ಕಸರತ್ತುಗಳನ್ನು ಮಾಡುವ ಸಂದರ್ಭದಲ್ಲಿ ತರಬೇತುದಾರರ ಮಾತು ಕೇಳುವುದು ಮುಖ್ಯ. ದೇಹಕ್ಕೆ ಈ ಸಂದರ್ಭದಲ್ಲೇ ಪ್ರೊಟೀನ್ ಕೂಡಾ ಅಗತ್ಯ. ಆದರೆ ಯಾವುದನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ತರಬೇತುದಾರರನ್ನು ಸಂಪರ್ಕಿಸಿಯೇ ಸೇವಿಸಬೇಕು. ತರಬೇತುದಾರರ ಆಯ್ಕೆಯಲ್ಲೂ ಜಾಗೃತೆಯಿಂದಿರಿ.
– ಡ್ರ್ಯಾಗನ್ ಮಂಜು, (‘ಭೀಮ’ ಸಿನಿಮಾ ಖ್ಯಾತಿಯ ನಟ)
ಡ್ರಾಗನ್ ಮಂಜು
ಸುಂದರ ಮೈಕಟ್ಟು ಹೊಂದುವ ಬಯಕೆಯಿಂದ ಅನೇಕರು ಪ್ರೋಟಿನ್ ಪೌಡರ್, ‘ಅನಾಬೊಲಿಕ್ ಸ್ಟೆರಾಯ್ಡ್’ ಚುಚ್ಚುಮದ್ದುಗಳನ್ನು ಪಡೆಯುತ್ತಿದ್ದಾರೆ. ಇದು ಸ್ನಾಯುಗಳ ಬಲವರ್ಧನೆಗೆ ಸಂಬಂಧಿಸಿದಂತೆ ತ್ವರಿತ ಫಲಿತಾಂಶ ನೀಡಿದರೂ, ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಶೇಷವಾಗಿ ಮೂತ್ರಪಿಂಡ ಹಾನಿ ಮತ್ತು ಹಾರ್ಮೋನುಗಳ ಏರುಪೇರಿಗೆ ಕಾರಣವಾಗುತ್ತವೆ.
ಪ್ರೊಟೀನ್ ಪೌಡರ್‌ಗಳನ್ನು ಸಾಮಾನ್ಯವಾಗಿ ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಗೆ ಬಳಸಲಾಗುತ್ತದೆ. ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಸೇವನೆ ಆರೋಗ್ಯಕ್ಕೆ ಅಪಾಯಗಳನ್ನು ಉಂಟುಮಾಡಬಹುದು. ಮೂತ್ರಪಿಂಡದೊಳಗೆ ಅಧಿಕ ರಕ್ತದೊತ್ತಡಕ್ಕೂ ಕಾರಣವಾಗುತ್ತದೆ. ಮೂತ್ರಪಿಂಡದಲ್ಲಿ ಗಾಯ ಮತ್ತು ಮೂತ್ರದಲ್ಲಿ ಪ್ರೊಟೀನ್ ಸೋರಿಕೆಯೂ ಆಗಬಹುದು. ಮೂತ್ರಪಿಂಡದಲ್ಲಿ ದೀರ್ಘಕಾಲದ ಉರಿಯೂತದಂತಹ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಜಿಮ್‌ಗಳಲ್ಲಿ ಕಸರತ್ತು ಮಾಡುವವರು ಸೂಕ್ತ ಆಹಾರ ಸೇವಿಸುವ ಜತೆಗೆ ವೈದ್ಯಕೀಯ ಮಾರ್ಗದರ್ಶನದೊಂದಿಗೆ ಕಾರ್ಯತತ್ಪರರಾಗಬೇಕು.
–ಡಾ. ದೀಪಕ್ ಕುಮಾರ್ ಚಿತ್ರಳ್ಳಿ, ಮೂತ್ರಪಿಂಡ ವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ, ಮಣಿಪಾಲ್ ಆಸ್ಪತ್ರೆ
ಡಾ. ದೀಪಕ್ ಕುಮಾರ್ ಚಿತ್ರಳ್ಳಿ
ಕೂದಲು: ಪುರುಷರ ಕೂದಲುಗಳು ಅಕಾಲಿಕವಾಗಿ ನೆರೆಯುತ್ತವೆ. ಹೆಣ್ಣುಮಕ್ಕಳ ಕೂದಲುಗಳು ಉದುರಿ ತಲೆ ಬೋಳಾಗುತ್ತದೆ.
ಕಣ್ಣು: ಹಳದಿ ಛಾಯೆ ದಟ್ಟವಾಗಿರುತ್ತದೆ.
ಮುಖ: ಗಡ್ಡ, ಮೀಸೆಗಳು ಸರಿಯಾಗಿ ಬೆಳೆಯುವುದಿಲ್ಲ ಮತ್ತು ವಿಕಾರವಾಗಿರುತ್ತವೆ.
ಎದೆ: ಪುರುಷರ ಎದೆಯಲ್ಲಿ ಹಾಲು ಒಸರಲು ಆರಂಭಿಸುತ್ತದೆ. ಅದೇ ಮಹಿಳೆಯರಲ್ಲಿ ಸ್ತನಗಳ ಬೆಳವಣಿಗೆ ಕುಂಠಿತಗೊಂಡು ಹಾಲಿನ ಅಂಶ ಬತ್ತಿಹೋಗುತ್ತದೆ.
ಕರುಳು: ಕ್ಯಾನ್ಸರ್, ಕಾಮಾಲೆ, ಗಡ್ಡೆಗಳು ಮತ್ತು ಉರಿಯೂತದ ತೊಂದರೆ.
ಪುರುಷತ್ವ ನಾಶ: ವೃಷಣ ಸಣ್ಣದಾಗುವುದು ಮತ್ತು ಉರಿಯೂತದ ತೊಂದರೆ.
ರೋಗಪ್ರತಿರೋಧಕ ಶಕ್ತಿ: ದಿನದಿಂದ ದಿನಕ್ಕೆ ಕುಂಠಿತ, ಸಣ್ಣಪುಟ್ಟ ಸೋಂಕುಗಳಿಗೂ ತೊಂದರೆ.
ಸ್ನಾಯು ರಚನೆ: ಮೂಳೆಮುರಿತಗಳು ಹೆಚ್ಚಾಗುತ್ತವೆ. ಎಲುವು–ಕೀಲುಗಳ ಸಾಂದ್ರತೆ ದುರ್ಬಲವಾಗುತ್ತದೆ.
ಮೆದುಳು–ನರವ್ಯೂಹ: ರಕ್ತ ಪರಿಚಲನೆ ಏರುಪೇರು, ಅಪಸ್ಮಾರ, ಲಕ್ವಾ ಮತ್ತು ನೆನಪಿನ ಶಕ್ತಿ ನಾಶ.
ಧ್ವನಿ: ಗಡಸಾಗುತ್ತದೆ. ಮಹಿಳೆಯರ ಧ್ವನಿಯು ಗೊಗ್ಗರಾಗುತ್ತದೆ.
ಚರ್ಮ: ಒರಟಾಗಿರುತ್ತದೆ. ತೇವ ಮತ್ತು ಎಣ್ಣೆಯ ಅಂಶ ಕುಸಿದು ಕಳಾಹೀನವಾಗುತ್ತದೆ.
ಹೃದಯ: ಸ್ತಂಭನದ ಸಾಧ್ಯತೆಗಳು, ಏರು ರಕ್ತದೊತ್ತಡ, ಹೃದ್ರೋಗ ಕಾಯಿಲೆಗಳು, ಕವಾಟಗಳು ಬ್ಲಾಕ್ ಆಗುವುದು.
ಮೂತ್ರಪಿಂಡಗಳು: ಕಾರ್ಯವೈಫಲ್ಯ ಮತ್ತು ಗಡ್ಡೆಗಳು.
ಸಂತಾನೋತ್ಪತ್ತಿ ಶಕ್ತಿ: ಪುರುಷರಲ್ಲಿ ವೀರ್ಯದ ಪ್ರಮಾಣ ಕುಗ್ಗುತ್ತದೆ. ಮಹಿಳೆಯರ ಅಂಡಾಣುಗಳು ನಾಶವಾಗುತ್ತವೆ. ಬಂಜೆತನ, ಗರ್ಭಾಶಯದ ಸೋಂಕು.
ಎಲುಬು–ಕೀಲುಗಳು: ಪೆಡಸಾಗುತ್ತವೆ. ಸ್ನಾಯುಶಕ್ತಿ ಕುಂದುತ್ತದೆ. ಸಣ್ಣಪುಟ್ಟ ಗಾಯಗಳೂ ಬೇಗ ಗುಣಮುಖವಾಗುವುದಿಲ್ಲ.
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ.
ಪೂರಕ ಮಾಹಿತಿ: ಗಿರೀಶ ದೊಡ್ಡಮನಿ, ವರುಣ ಹೆಗಡೆ, ಅಭಿಲಾಷ್ ಪಿ.ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.