ADVERTISEMENT

ಒಳನೋಟ: ಬಹುಮಾನವೊಂದೇ ಅಧಿಕೃತ; ಉಳಿದದ್ದೆಲ್ಲ ವಿವೇಚನೆ ಆಧಾರಿತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 19:31 IST
Last Updated 6 ಫೆಬ್ರುವರಿ 2021, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದೇಶದಲ್ಲೇ ಅತಿ ಹೆಚ್ಚು, 10 ಅರ್ಜುನ ಪ್ರಶಸ್ತಿ ಗಳಿಸಿದ ಅಂಗವಿಕಲ ಕ್ರೀಡಾಪಟುಗಳು ಇರುವ ರಾಜ್ಯ ಕರ್ನಾಟಕ. ಮೂರು ಪದ್ಮಶ್ರೀ ಪ್ರಶಸ್ತಿಗಳು ಕೂಡ ಇಲ್ಲಿನ ಅಂಗವಿಕಲ ಕ್ರೀಡಾಪಟುಗಳಿಗೆ ಸಂದಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ, ಪ್ಯಾರಾಲಿಂಪಿಕ್‌ನಲ್ಲಿ ರಾಜ್ಯದ ಕ್ರೀಡಾಪಟುಗಳ ಸಾಧನೆ ದೊಡ್ಡದು. ಇಷ್ಟೆಲ್ಲ ಇದ್ದರೂ ಇಲ್ಲಿನವರಿಗೆ ಅಂಗ ವಿಕಲರ ಸಬಲೀಕರಣ ಇಲಾಖೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯಿಂದ ಸಿಗುವುದು ‘ಬಹುಮಾನ’ ಮಾತ್ರ!

ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿದ ಅಂಗವಿಕಲರಿಗೆ ಕ್ರೀಡಾ ಇಲಾಖೆಯಿಂದ ₹ 2 ಲಕ್ಷದಿಂದ ₹ 50 ಸಾವಿರದ ವರೆಗೆ ನಗದು ಬಹುಮಾನ ನೀಡಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದವರಿಗೆ ‘ಸಾಧನೆ’ ಯೋಜನೆಯಡಿ ಅಂಗವಿಕಲರ ಸಬಲೀಕರಣ ಇಲಾಖೆ ₹ 50 ಸಾವಿರದಿಂದ ₹ 20 ಸಾವಿರದ ವರೆಗೆ ನಗದು ಬಹುಮಾನ ನೀಡುತ್ತದೆ. ತರಬೇತಿ, ಕ್ರೀಡಾಕೂಟಗಳ ಆಯೋಜನೆ ಮತ್ತಿತರ ಚಟುವಟಿಕೆಗೆಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆರವು–ಪ್ರೋತ್ಸಾಹ ನೀಡುತ್ತದೆ. ಆದರೆ ಅದು ಯಾವುದೂ ‘ಅಧಿಕೃತ’ ಅಲ್ಲ. ಬೇಡಿಕೆಗೆ ಅನುಗುಣವಾಗಿ, ಅಧಿಕಾರಿಗಳು ವಿವೇಚನೆ ಬಳಸಿ ಇದನ್ನು ನೀಡುತ್ತಾರೆ.

‘ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಅಂಗವಿಕಲರ ಕ್ರೀಡೆಯನ್ನು ಬೆಳೆಸಲು ಮತ್ತು ಪ್ಯಾರಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ವಿವಿಧ ಯೋಜನೆಗಳು ಇವೆ. ನಮ್ಮಲ್ಲಿ ತರಬೇತಿಗೆ ಸಮರ್ಪಕ ಸೌಲಭ್ಯ ಇಲ್ಲ. ಬಹುತೇಕರು ವೈಯಕ್ತಿಕ ವೆಚ್ಚ ಮಾಡಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ವತಿಯಿಂದ ಕೋಚ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ’ ಎಂದು ರಾಜ್ಯ ಅಂಗವಿಕಲರ ಕ್ರೀಡಾಸಂಸ್ಥೆಯ ಜಂಟಿ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್‌. ಮಹೇಶ್‌ಗೌಡ ತಿಳಿಸಿದರು. ‌

ADVERTISEMENT

‘ಏಕಲವ್ಯ ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಪಟ್ಟಿಯಲ್ಲಿ ಪ್ರತಿ ವರ್ಷ ತಲಾ ಒಬ್ಬರು ಅಂಗವಿಕಲ ಕ್ರೀಡಾಪಟುವನ್ನು ಸೇರಿಸಲಾಗುತ್ತದೆ. ಈ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ರಾಜ್ಯದ ನಾಲ್ಕು ವಲಯಗಳಲ್ಲಿ ವಸತಿನಿಲಯಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಅವರು ವಿವರಿಸಿದರು.

‘ಸೌಲಭ್ಯ ಕೋರಿ ಮನವಿ ಸಲ್ಲಿಸಿದರೆ ಸ್ಪಂದಿಸಲಾಗುತ್ತದೆ. ತರಬೇತಿ ಮತ್ತಿತರ ಕಾರ್ಯಗಳಿಗೆ ಇಲಾಖೆಯ ಎಲ್ಲ ಸವಲತ್ತುಗಳೂ ಮುಕ್ತವಾಗಿವೆ. ಆದರೆ ಅಂಗವಿಕಲರಿಗೆಂದೇ ಪ್ರತ್ಯೇಕವಾಗಿ ಯಾವುದನ್ನೂ ಮೀಸಲಿಡುತ್ತಿಲ್ಲ’ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.