ADVERTISEMENT

Explainer: ಪಿಎಫ್‌ಐ ಸಂಘಟನೆ ಎಂದರೆ ಏನು? ಇದನ್ನು ನಿಷೇಧ ಮಾಡಿದ್ದು ಯಾಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2022, 7:30 IST
Last Updated 28 ಸೆಪ್ಟೆಂಬರ್ 2022, 7:30 IST
ಪಿಎಫ್ಐ ಕಾರ್ಯಕರ್ತರ ಪ್ರತಿಭಟನೆ (ಸಾಂಕೇತಿಕ ಚಿತ್ರ)
ಪಿಎಫ್ಐ ಕಾರ್ಯಕರ್ತರ ಪ್ರತಿಭಟನೆ (ಸಾಂಕೇತಿಕ ಚಿತ್ರ)   

ನವದೆಹಲಿ: ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಪಿಎಫ್‌ಐ ಹಾಗೂಅದರ ಅಂಗ ಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳ ಅವಧಿಗೆ ನಿಷೇಧವಿಧಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಇದೀಗಪಿಎಫ್‌ಐ ಎಂದರೆ ಏನು? ಈ ಸಂಘಟನೆಯ ಇತಿಹಾಸ, ಇದನ್ನು ನಿಷೇಧ ಮಾಡುತ್ತಿರುವುದು ಏಕೆ? ಎಂಬ ವಿಷಯಗಳನ್ನು ತಿಳಿಯೋಣ..

ADVERTISEMENT

ಪಿಎಫ್‌ಐ ಎಂದರೆ ಏನು?

ಕೇರಳದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್, ಕರ್ನಾಟಕದ ಫೋರಂ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮನಿತಾ ನೀತಿ ಪಸರೈ ಎಂಬ ಮೂರು ಮುಸ್ಲಿಂ ಸಂಘಟನೆಗಳು ವಿಲೀನಗೊಂಡು 2007ರಲ್ಲಿ ಪಿಎಫ್‌ಐ ಸಂಘಟನೆಯನ್ನು ರೂಪಿಸಲಾಯಿತು. ವಿಲೀನಗೊಂಡು 4 ತಿಂಗಳ ಬಳಿಕ ಫೆಬ್ರುವರಿ 2007ರಲ್ಲಿ ಬೆಂಗಳೂರಿನಲ್ಲಿ ರ್‍ಯಾಲಿ ನಡೆಸುವ ಮೂಲಕ ಅಧಿಕೃತವಾಗಿ ಸಂಘಟನೆ ಅಸ್ತಿತ್ವಕ್ಕೆ ಬಂದಿತು.

ಹಿಂದುಳಿದ, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಸಮುದಾಯದ ಜನರ ಹಕ್ಕುಗಳಿಗಾಗಿ ಹೋರಾಡುವುದಾಗಿ ಪಿಎಫ್‌ಐ ಹೇಳುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ನೀತಿಗಳ ಬಗ್ಗೆ ಈ ಸಂಘಟನೆಯು ಆಗಾಗ್ಗೆ ಭಿನ್ನಾಭಿಪ್ರಾಯ ಹೊಂದಿತ್ತು. ಮುಸ್ಲಿಂ ಮತದಾರರನ್ನು ಸೆಳೆಯಲು ಪಿಎಫ್‌ಐ ಜೊತೆ ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಲಾಗಿದೆ ಎಂದು ರಾಜಕೀಯ ಪಕ್ಷಗಳು ಪರಸ್ಪರ ಆರೋಪ–ಪ್ರತ್ಯಾರೋಪಗಳೂ ನಡೆಯುತ್ತಲೇ ಇರುತ್ತವೆ.

ಪಿಎಫ್‌ಐ ಸಂಘಟನೆಯು ಚುನಾವಣೆಯಲ್ಲಿ ಎಂದಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಮುಸ್ಲಿಮರಿಗಾಗಿ ಸಾಮಾಜಿಕ ಕೆಲಸ ಮಾಡುವುದಾಗಿ ಹೇಳುತ್ತದೆ. ಆದರೆ, ಸಂಸ್ಥೆಯು ಸದಸ್ಯತ್ವದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು ಇಟ್ಟುಕೊಂಡಿಲ್ಲ.

2001ರಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದ ನಂತರ ಪಿಎಫ್ಐ ಅನ್ನು ರಚಿಸಲಾಯಿತು. 2007ರಲ್ಲಿ ಪಿಎಫ್‌ಐ ಪ್ರಾರಂಭವಾದ ಎರಡು ವರ್ಷಗಳ ನಂತರ, ಮುಸ್ಲಿಮರು, ಪರಿಶಿಷ್ಟ ಜಾತಿಗಳು ಮತ್ತು ಇತರ ಹಿಂದುಳಿದ ವರ್ಗದವರ ರಾಜಕೀಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ಸಂಘಟನೆಯು ಒಳಗಿನಿಂದಲೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ರಚಿಸಿತು.

ಈ ಸಂಘಟನೆಯು ಕೇರಳದಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿದ್ದು, ಅದರ ವಿರುದ್ಧ ಕೊಲೆ, ಬೆದರಿಕೆ, ಗಲಭೆ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದಡಿ ಅನೇಕ ಪ್ರಕರಣಗಳು ದಾಖಲಾಗಿವೆ. ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ.

ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ನಿಷೇಧಿಸಿದ್ದು ಯಾಕೆ?

ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಯಾಕೆ ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ. ಹಾಗೇ ತನ್ನ ನಿಲುವನ್ನು ಸಮರ್ಥನೆ ಮಾಡಿಕೊಂಡಿದೆ.

ಪಿಎಫ್‌ಐ ಹಾಗೂ ಅದರ ಅಂಗ ಸಂಘಟನೆಗಳನ್ನು ನಿಯಂತ್ರಣ ಮಾಡದಿದ್ದರೆ, ಅವುಗಳಿಗೆ ದೇಶದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರೆಸಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಹಾಗೂ ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದುಗೃಹ ಇಲಾಖೆ ಸಮರ್ಥನೆ ಮಾಡಿಕೊಂಡಿದೆ.

ಒಂದು ವೇಳೆ ಈ ಸಂಘಟನೆಗಳನ್ನು ನಿಷೇದ ಮಾಡದಿದ್ದರೆ,, ದೇಶದಲ್ಲಿಭಯೋತ್ಪಾದಕ ಹಾಗೂ ತೀವ್ರಗಾಮಿ ಚಟುವಟಿಗಳಿಗೆ ಉತ್ತೇಜನ ನೀಡುವುದರ ಜತೆಗೆಸಮಾಜದಲ್ಲಿರಾಷ್ಟ್ರವಿರೋಧಿ ಭಾವನೆಗಳನ್ನು ಪ್ರಚಾರ ಮಾಡುತ್ತಿದ್ದವು. ಇವು ದೇಶದ ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಹಾನಿಕಾರಕವಾಗುವ ಚಟುವಟಿಕೆಗಳನ್ನು ನಡೆಸುತ್ತಿದ್ದವು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳು ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸಂಸ್ಥೆಗಳಂತೆ ಕೆಲಸ ಮಾಡುವುದಾಗಿ ಬಹಿರಂಗವಾಗಿ ತೋರಿಸಿಕೊಳ್ಳುತ್ತವೆ. ಆದರೆ ಅವು ಆಂತರಿಕವಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆ ಹಾಗೂ ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿವೆ. ಈ ಸಂಘಟನೆಗಳು ರಹಸ್ಯ ಕಾರ್ಯಸೂಚಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ. ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಸಂಘಟನೆಗಳನ್ನು ಬ್ಯಾನ್‌ ಮಾಡಲಾಗಿದೆಎಂದು ಗೃಹ ಇಲಾಖೆ ಹೇಳಿದೆ.

ಪಿಎಫ್‌ಐ ವಿರುದ್ಧ ಯಾಕೆ ತನಿಖೆ ನಡೆಯುತ್ತಿದೆ?

ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಗಳು, ಹಾಥರಸ್ ಅತ್ಯಾಚಾರ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರಕ್ಕೆ ಉತ್ತೇಜನ ನೀಡಲುಪಿಎಫ್‌ಐ ಹಣಕಾಸಿನ ನೆರವು ನೀಡಿದೆ ಎಂಬ ಆರೋಪಗಳಿವೆ. ಇವುಗಳಿಗೆ ಸಂಬಂಧಿಸಿದಂತೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಿವೆ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಪಿಎಫ್‌ಐ ಸಂಘಟನೆಗೆ ಹಣಕಾಸಿನ ನೆರವು ನೀಡುತ್ತಿರುವುದರ ಬಗ್ಗೆಯೂ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ.

ಪ್ರಕರಣ ಸಂಬಂಧಿತ ದೋಷಾರೋಪಪಟ್ಟಿಯಲ್ಲಿ ಸಿಎಫ್‌ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಎ ರೌಫ್ ಷರೀಫ್, ಪಿಎಫ್‌ಐ ಸದಸ್ಯ ಅತಿಕುರ್ ರೆಹಮಾನ್, ಸಿಎಫ್‌ಐ ರಾಷ್ಟ್ರೀಯ ಖಜಾಂಚಿ ಮಸೂದ್ ಅಹ್ಮದ್, ದೆಹಲಿ ಮೂಲದ ಸಿಎಫ್‌ಐ ಪ್ರಧಾನ ಕಾರ್ಯದರ್ಶಿ ಮತ್ತು ಪಿಎಫ್‌ಐ ಸಂಬಂಧ ಹೊಂದಿರುವ ಆರೋಪ ಹೊತ್ತಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಮತ್ತೊಬ್ಬ ಪಿಎಫ್‌ಐ ಸದಸ್ಯ ಮೊಹಮ್ಮದ್ ಆಲಂ ಹೆಸರಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.