ADVERTISEMENT

ಜೋಳದ ರೊಟ್ಟಿ ಫಜೀತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ಶ್ವೇತಾ
ಶ್ವೇತಾ   

ನಾನು ದಕ್ಷಿಣ ಕನ್ನಡದ ಅಪ್ಪಟ ಸಸ್ಯಾಹಾರಿ ಹುಡುಗಿ. ನೀರುದೋಸೆ, ಬನ್ಸ್, ಗೋಳಿಬಜೆ ಮಾಡೋದ್ರಲ್ಲಿ ನನ್ನಮ್ಮ ಎಕ್ಸ್‌ಫರ್ಟ್‌. ಕಾಲೇಜು ಮುಗಿಸಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದೆ. ಅಲ್ಲಿ ಪೇಯಿಂಗ್‌ ಗೆಸ್ಟ್‌ ಆಗಿ ಉಳಿದುಕೊಂಡಿದ್ದೆ. ಅಲ್ಲಿದ್ದ ಗೆಳತಿಯರು  ಉತ್ತರ ಕರ್ನಾಟಕದವರು. ವಾರಾಂತ್ಯದಲ್ಲಿ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಕೆಂಪು ಚಟ್ನಿ, ಮಂಡಕ್ಕಿ, ಒಗ್ಗರಣೆ ಅವಲಕ್ಕಿ ಮಾಡುತ್ತಿದ್ದರು. ನಾನೂ ಇಷ್ಟಪಟ್ಟು ತಿನ್ನುತ್ತಿದ್ದೆ. ಹಾಗೆ ಆ ಅಡುಗೆ ಬಗ್ಗೆ ಕೇಳಿ ವಿವರಣೆ ಪಡೆದುಕೊಂಡಿದ್ದೆ.

ಅದೊಂದು ದೀಪಾವಳಿ ಹಬ್ಬದ ರಜೆಗೆ ಊರಿಗೆ ಹೋಗಿದ್ದೆ. ಮನೆಯಲ್ಲಿ ಸಿಹಿತಿಂಡಿಗಳದ್ದೆ ದರ್ಬಾರು. ಸಿಹಿ ತಿಂಡಿ ತಿಂದು ಎಲ್ಲರಿಗೂ ಸಾಕಾಗಿತ್ತು. ಹೀಗಾಗಿ ಅಮ್ಮ ಖಾರದ ಅಡುಗೆಗೆ ಪ್ಲಾನ್ ಮಾಡ್ತಿದ್ರು. ಆಗ ರಾತ್ರಿ ಊಟಕ್ಕೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹಾಗೂ ಎಣ್ಣೆಗಾಯಿ ಪಲ್ಯ ಮಾಡ್ತಿನಿ ಅಂತ ಅಮ್ಮನಲ್ಲಿ ಅನುಮತಿ ಪಡೆದೆ. ಜೋಳದ ಹಿಟ್ಟನ್ನು ತರಿಸಿಕೊಂಡೆ. ಹೊಸ ಹುಮ್ಮಸ್ಸು. ಮೊದಲು ಯೂಟ್ಯೂಬ್ ನೋಡಿ ರೊಟ್ಟಿ, ಪಲ್ಯ ಮಾಡುವ ವಿಧಾನವನ್ನು ನೋಟ್ ಮಾಡಿಕೊಂಡೆ. ಅಮ್ಮನಿಗೆ ಈ ಅಡುಗೆ ಸಂಪೂರ್ಣ ಹೊಸದು. ಹೀಗಾಗಿ ಅಡುಗೆಮನೆ ಜವಾಬ್ದಾರಿ ನನ್ನದೇ. ಮೊದಲಿಗೆ ಎಣ್ಣೆಗಾಯಿ ಪಲ್ಯ ಮಾಡಿದೆ. ಅಪ್ಪನ ಮೇಲೆ ಪ್ರಯೋಗ ಮಾಡಿದ್ದಾಯ್ತು.

ನಾನು ಅಪ್ಪನ ಪ್ರೀತಿಯ ಮಗಳಲ್ವಾ? ಅಪ್ಪ ರಿವ್ಯೂ ಮಾಡುವ ಕಷ್ಟನೇ ತಗೊಳ್ದೆ ಚೆನ್ನಾಗಿದೆ ಅಂದುಬಿಟ್ರು. ನಂಗೂ ಧೈರ್ಯ ಬಂತು.

ADVERTISEMENT

ಈಗ ಜೋಳದ ರೊಟ್ಟಿ ಮಾಡುವ ಕೆಲಸ. ಮೊದಲಿಗೆ ಎಲ್ಲರಿಗೂ ಎಷ್ಟು ರೊಟ್ಟಿ ಬೇಕು ಅಂತ ಕೇಳಿ ಒಟ್ಟು 15 ರೊಟ್ಟಿಗೆ ಹಿಟ್ಟು ಕಲಸಿಟ್ಟೆ. ಜೋಳದ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡೆ. ಅರ್ಧ ಹಿಟ್ಟು ನನ್ನ ಕೈಗೆ ಅಂಟಿಕೊಂಡಿತು. ಇನ್ನರ್ಧ ಪಾತ್ರೆ ಅಂಚಲ್ಲಿ. ಅರ್ಧ ಗಂಟೆ ನೆನೆಸಿಟ್ಟರೆ ಸರಿಹೋದಿತು ಎಂದು ಮುಚ್ಚಳ‌ ಮುಚ್ಚಿಟ್ಟೆ. ಬಳಿಕ ರೊಟ್ಟಿ ತಟ್ಟಲು ಪ್ರಯತ್ನಿಸಿದೆ. ಅದು ಸಾಧ್ಯವಾಗದಿದ್ದಾಗ ಚಪಾತಿಯಂತೆ ಲಟ್ಟಣಿಗೆಯಿಂದ ಲಟ್ಟಿಸಿದೆ. ಚಪಾತಿ ಆಕಾರ ಬಂತು. ಆದರೆ ಮಣೆಗೆ ಅಂಟಿಕೊಂಡಿತ್ತು. ಕೊನೆಗೆ ರೊಟ್ಟಿ ಆಸೆ ಬಿಟ್ಟು ಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕೆ ನೀರು ಮಾಡಿಕೊಂಡೆ. ನಾನ್ ಸ್ಟಿಕ್ ತವಾದಲ್ಲಿ ದೋಸೆ ಹೊಯ್ದೆ. ದೋಸೆ ತವಾ ಬಿಟ್ಟು ಮೇಲಕ್ಕೆ ಬರಲೇ ಇಲ್ಲ. ಕೊನೆಗೆ ಬೇಸರಬಂದು ಹಿಟ್ಟನ್ನು ದನಕ್ಕೆ ಕೊಟ್ಟೆ.

ನನ್ನ ಅಡುಗೆ ಪ್ರಯೋಗದಿಂದ ದೀಪಾವಳಿಯ ದಿನ ಅವಲಕ್ಕಿ ಮತ್ತು ಎಣ್ಣೆಗಾಯಿ ಪಲ್ಯ ನಮ್ಮ ಹಬ್ಬದ ಅಡುಗೆಯಾಯಿತು. ಮದುವೆಯಾದ ಮೇಲೆ ರೊಟ್ಟಿ, ಪಲ್ಯ ಎಲ್ಲಾ ಚೆನ್ನಾಗೇ ಮಾಡುತ್ತೇನೆ. ಆದರೂ ನನ್ನ ಮೊದಲ ಪ್ರಯೋಗವನ್ನು ನೆನಪಿಸಿ ಈಗಲೂ ಮನೆಯಲ್ಲಿ ನನ್ನನ್ನು ರೇಗಿಸುತ್ತಾರೆ.
–ಶ್ವೇತಾ ಕೊಮ್ಮುಂಜೆ, ಚಾಮರಾಜಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.