ADVERTISEMENT

Hyacinth Bean Recipes: ಅವರೆಕಾಳು ವಿಶೇಷ ಖಾದ್ಯ

ವೇದಾವತಿ ಎಚ್.ಎಸ್.
Published 17 ಜನವರಿ 2025, 23:32 IST
Last Updated 17 ಜನವರಿ 2025, 23:32 IST
   
ಈ ಋತುವಿನಲ್ಲಿ ಹೇರಳವಾಗಿ ಅವರೆಕಾಳು ಸಿಗುತ್ತದೆ. ಅದನ್ನು ಬಳಸಿಕೊಂಡು, ಹಲವು ಬಗೆಯ ರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ಇವುಗಳ ರೆಸಿಪಿ ಹೀಗಿದೆ

ರಾಗಿ ರೊಟ್ಟಿ

ಬೇಕಾಗುವ ಸಾಮಗ್ರಿಗಳು: ಹಿತಕಿದ ಅವರೆಕಾಳು 1 ಕಪ್, ಈರುಳ್ಳಿ ಚಿಕ್ಕದಾಗಿ ಹೆಚ್ಚಿದ್ದು 2, ರಾಗಿ ಹಿಟ್ಟು 2 ಕಪ್, ಹಸಿ ಶುಂಠಿ ಒಂದಿಂಚು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಹಸಿಮೆಣಸಿಕಾಯಿ ಚಿಕ್ಕದಾಗಿ ಹೆಚ್ಚಿದ್ದು 4, ಜೀರಿಗೆ 1 ಟೀ ಚಮಚ, ಕ್ಯಾರೆಟ್ ತುರಿ 1/2 ಕಪ್, ಕೊತ್ತಂಬರಿ ಸೊಪ್ಪು ಒಂದು ಹಿಡಿ, ಮೆಂತ್ಯ ಅಥವಾ ಸಬ್ಬಸಿಗೆ ಸೊಪ್ಪು 1 ಚಿಕ್ಕ ಕಟ್ಟು, ತೆಂಗಿನತುರಿ 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಬೇಯಿಸಲು ತುಪ್ಪ ಅಥವಾ ಎಣ್ಣೆ.

ತಯಾರಿಸುವ ವಿಧಾನ: ಹಿತಕಿದ ಅವರೆಕಾಳನ್ನು ಮೆತ್ತಗೆ ಬೇಯಿಸಿಕೊಂಡು ನೀರನ್ನು ಸೋಸಿಕೊಳ್ಳಿ. ಅಗಲವಾದ ಪಾತ್ರೆಯಲ್ಲಿ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಬಿಸಿ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಿ. ಬೈಡಿಂಗ್ ಪೇಪರಿನಲ್ಲಿ ನಿಮಗೆ ಬೇಕಾದ ಗಾತ್ರದ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ತೆಳುವಾಗಿ ತಟ್ಟಿಕೊಂಡು ಮಧ್ಯಮ ಉರಿಯಲ್ಲಿ ಎರಡೂ ಬದಿಗೂ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬೇಯಿಸಿ. ರೊಟ್ಟಿಯನ್ನು ಚಟ್ನಿಯೊಂದಿಗೆ ಸವಿಯಿರಿ.

ಚಿಕ್ಕಿ

ಬೇಕಾಗುವ ಸಾಮಗ್ರಿಗಳು: ಒಣಗಿಸಿಟ್ಟ ಹಿತಕಿದ ಅವರೆಕಾಳು 150 ಗ್ರಾಂ, ಶೇಂಗಾ ಬೀಜ 350 ಗ್ರಾಂ, ಬೆಲ್ಲ 450 ಗ್ರಾಂ, ನೀರು 1/4 ಕಪ್, ಏಲಕ್ಕಿಪುಡಿ 1/2 ಟೀ ಚಮಚ.

ADVERTISEMENT

ತಯಾರಿಸುವ ವಿಧಾನ: ಹಸಿ ಹಿತಕಿದ ಅವರೆಕಾಳನ್ನು ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ಬಳಿಕ ಅದನ್ನು ಸಣ್ಣ ಉರಿಯಲ್ಲಿ ಗರಿ ಗರಿಯಾಗುವರೆಗೆ ಹುರಿಯಿರಿ. ಶೇಂಗಾ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದು ಸಿಪ್ಪೆ ತೆಗೆಯಿರಿ. ಬಳಿಕ ಎರಡು ಭಾಗ ಮಾಡಿಕೊಳ್ಳಿ. ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಗಟ್ಟಿ ಪಾಕ ತಯಾರಿಸಿಕೊಳ್ಳಿ. ಬಳಿಕ ಒಲೆಯನ್ನು ಆರಿಸಿ. ಪಾಕ ಬಿಸಿ ಇರುವಾಗಲೇ ಏಲಕ್ಕಿಪುಡಿ, ಅವರೆಕಾಳು, ಶೇಂಗಾ ಬೀಜ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ತುಪ್ಪ ಸವರಿದ ತಟ್ಟೆಗೆ ತೆಳುವಾಗಿ ಹರಡಿ. ಸ್ವಲ್ಪ ಬಿಸಿ ಇರುವಾಗಲೇ ಕತ್ತರಿಸಿ. ಆರಿದ ಬಳಿಕ ತಟ್ಟೆಯಿಂದ ತೆಗೆದಿಡಿ.

ಅವರೆಕಾಳು ಗೋಡಂಬಿ ಮಿಕ್ಸ್ಚರ್‌

ಬೇಕಾಗುವ ಸಾಮಗ್ರಿಗಳು: ಹಿತಕಿದ ಅವರೆಕಾಳು 2 ಕಪ್, ಗೋಡಂಬಿ 1/2 ಕಪ್, ಅಚ್ಚಖಾರದ ಪುಡಿ 1 ಟೀ ಚಮಚ ಚಮಚ, ಕಾಳುಮೆಣಸಿನ ಪುಡಿ 1/2 ಟೀ ಚಮಚ, ಗರಂಮಸಾಲೆ 1/4 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕರಿಬೇವು ಸ್ವಲ್ಪ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಹಿತಕಿದ ಅವರೆಕಾಳಿನಲ್ಲಿರುವ ತೇವಾಂಶ ಹೋಗುವವರೆಗೆ ಒಂದು ಬಟ್ಟೆಯಲ್ಲಿ ಒಣಗಲು ಹಾಕಿಡಿ. ಒಣಗಿಸಿದ ಹಿತಕಿದ ಅವರೆಕಾಳಾದರೆ ಉತ್ತಮ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದರಲ್ಲಿ ಅವರೆಕಾಳನ್ನು ಡೀಪ್ ಫ್ರೈ ಮಾಡಿ. ನಂತರ ಎಣ್ಣೆ ಹೋಗಲು ಟಿಷ್ಯು ಪೇಪರಿನಲ್ಲಿ ಹಾಕಿಡಿ. ಬಳಿಕ ಗೋಡಂಬಿ, ಕರಿಬೇವನ್ನು ಅದೇ ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ. ಫ್ರೈ ಮಾಡಿಕೊಂಡ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ. ಸ್ವಲ್ಪ ಬಿಸಿ ಇರುವಾಗಲೇ ಅಚ್ಚಖಾರದ ಪುಡಿ, ಕಾಳುಮೆಣಸಿನ ಪುಡಿ, ಗರಂಮಸಾಲೆ ಪುಡಿ, ಉಪ್ಪುನ್ನು ಸೇರಿಸಿ ಮಿಶ್ರಣ ಮಾಡಿ. ಮಿಕ್ಸ್ಚರ್‌ನ್ನು ಒಂದು ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಡಿ. ಬೇಕಾದಾಗ ಸವಿಯಿರಿ.

ನಿಪ್ಪಟ್ಟು

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಹಿತಕಿದ ಅವರೆಕಾಳು 1 ಕಪ್, ಅಕ್ಕಿ ಹಿಟ್ಟು 1 ಕಪ್, ಹುರಿಗಡಲೆ ಪುಡಿ 1/4 ಕಪ್, ಹುರಿದು ಪುಡಿ ಮಾಡಿದ ಶೇಂಗಾ ಪುಡಿ 1/4 ಕಪ್, ಅಚ್ಚಖಾರದ ಪುಡಿ 1 ಚಮಚ, ಇಂಗು 1/4 ಟೀ ಚಮಚ, ಬಿಳಿ ಎಳ್ಳು 1 ಟೀ ಚಮಚ, ಒಣಕೊಬ್ಬರಿ ತುರಿ 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.

ತಯಾರಿಸುವ ವಿಧಾನ: ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಒಂದು ಬಾಣಲೆಯಲ್ಲಿ ಹಾಕಿ ಮಿಶ್ರಣ ಚೆನ್ನಾಗಿ ಮಾಡಿಕೊಳ್ಳಿ. ಬಳಿಕ ಎರಡು ಚಮಚ ಎಣ್ಣೆಯನ್ನು ಬಿಸಿ ಮಾಡಿ ಅದನ್ನು ಹಿಟ್ಟಿಗೆ ಹಾಕಿ ಹದ ಮಾಡಿಕೊಳ್ಳಿ. ಈಗ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಕೊಳ್ಳುತ್ತಾ ಪೂರಿ ಹಿಟ್ಟಿನ ಹದದಲ್ಲಿ ಕಲಸಿಕೊಳ್ಳಿ. ಹಿಟ್ಟನ್ನು ಕೈಯಲ್ಲಿ ಚೆನ್ನಾಗಿ ನಾದಿಕೊಳ್ಳಿ. ನಂತರ ತಯಾರಿಸಿಕೊಂಡ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಅದನ್ನು ಬೈಡಿಂಗ್ ಪೇಪರ್‌ ಅಥವಾ ಬಾಳೆಎಲೆಯಲ್ಲಿ ತಟ್ಟಿಕೊಳ್ಳಿ. ತುಂಬಾ ತೆಳುವಾಗಿ ಬೇಡ. ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿಕೊಂಡು ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಕೆಂಬಣ್ಣ ಬರುವವರೆಗೆ ಕರಿಯಿರಿ.

ಅವರೆಕಾಳು ನಿಪ್ಪಟ್ಟು

ವಾಂಗಿಬಾತ್ ಪುಡಿ

ಎಣ್ಣೆ 1 ಟೀ ಚಮಚ, ಒಣಮೆಣಸಿನಕಾಯಿ 3-4, 1 ಟೀ ಚಮಚ ಉದ್ದಿನಬೇಳೆ, 1 ಟೀ ಚಮಚ ಕಡಲೆಬೇಳೆ, 1/4 ಟೀ ಚಮಚ ಮೆಂತ್ಯ, 1 ಟೀ ಚಮಚ ಧನಿಯಾ, 3/4 ಟೀ ಚಮಚ ಗಸಗಸೆ, 1 ಇಂಚು ಚಕ್ಕೆ, ಏಲಕ್ಕಿ 2, ಲವಂಗ 2, ಒಣಕೊಬ್ಬರಿ 3-4ಟೀ ಚಮಚ. ತಿಳಿಸಿರುವ ಮಸಾಲ ಪದಾರ್ಥಗಳನ್ನು ಹುರಿದು ನುಣ್ಣಗೆ ಪುಡಿಮಾಡಿಕೊಳ್ಳಿ.

ಖಾರಾಬಾತ್

ತಯಾರಿಸುವ ವಿಧಾನ: ಅವರೆಕಾಳನ್ನು ಸ್ವಲ್ಪ ಮೆತ್ತಗಾಗುವರೆಗೆ ಬೇಯಿಸಿಕೊಳ್ಳಿ. ರವೆಯನ್ನು ಹುರಿದುಕೊಳ್ಳಿ. ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿಮಾಡಿಕೊಳ್ಳಿ. ಅದರಲ್ಲಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಗೋಡಂಬಿ ಮತ್ತು ಕರಿಬೇವನ್ನು ಹಾಕಿ ಹುರಿಯಿರಿ. ಸಾಸಿವೆ ಸಿಡಿದ ನಂತರ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಬಾಡಿಸಿ. ಬಳಿಕ ಚಿಕ್ಕದಾಗಿ ಕತ್ತರಿಸಿದ ಟೊಮೆಟೊ ಸೇರಿಸಿ ಮೆತ್ತಗಾಗುವರೆಗೆ ಬಾಡಿಸಿ. ನಂತರ ತಿಳಿಸಿರುವ ತರಕಾರಿಗಳನ್ನು ಚಿಕ್ಕದಾಗಿ ಹೆಚ್ಚಿ ಜತೆಗೆ ಸೇರಿಸಿ. ಅವುಗಳೊಂದಿಗೆ ಬೇಯಿಸಿ ನೀರನ್ನು ಸೋಸಿಕೊಂಡ ಅವರೆಕಾಳನ್ನು ಸೇರಿಸಿ. ಇವುಗಳನ್ನು 2 ರಿಂದ 3 ನಿಮಿಷ ಮೆತ್ತಗಾಗುವರೆಗೆ ಹುರಿಯಿರಿ. ತರಕಾರಿಗಳು ಮೆತ್ತಗಾದ ಬಳಿಕ ಅರಿಶಿನ, ಉಪ್ಪು ಮತ್ತು ವಾಂಗಿಬಾತ್ ಪುಡಿ ಸೇರಿಸಿ ಮಿಶ್ರಣ ಮಾಡಿ. ನೀರು ಚೆನ್ನಾಗಿ ಕುದಿ ಬಂದ ನಂತರ ಹುರಿದ ರವೆ ಹಾಕಿ. ಸಣ್ಣ ಉರಿಯಲ್ಲಿ ಗಂಟಾಗದ ರೀತಿಯಲ್ಲಿ ಮಗುಚಿ. ಐದು ನಿಮಿಷಮುಚ್ಚಿ ಬೇಯಿಸಿ. ತೆಂಗಿನತುರಿ, ನಿಂಬೆರಸ ಸೇರಿಸಿ ಒಲೆಯಿಂದ ಇಳಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.