ADVERTISEMENT

ಕ್ಲೌಡ್‌ ಕಿಚನ್‌: ಕೋವಿಡ್‌ ಕೊಟ್ಟ ದೊನ್ನೆ ಬಿರಿಯಾನಿ | ಆರ್‌ಎನ್‌ಆರ್‌ ಯಶಸ್ಸು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 19:30 IST
Last Updated 22 ಏಪ್ರಿಲ್ 2022, 19:30 IST
ಆರ್‌ಎನ್‌ಆರ್‌ ದೊನ್ನೆ ಬಿರಿಯಾನಿಯ ಪಾಕ ವೈವಿಧ್ಯ
ಆರ್‌ಎನ್‌ಆರ್‌ ದೊನ್ನೆ ಬಿರಿಯಾನಿಯ ಪಾಕ ವೈವಿಧ್ಯ   

ಕೋವಿಡ್‌ ಸೃಷ್ಟಿಸಿದ ಅವಕಾಶವೊಂದು ಪಾರಂಪರಿಕ ರುಚಿಯೊಂದನ್ನು ಜನರಿಗೆ ತಲುಪಿಸಿದೆ. 2020ರಲ್ಲಿ ಕೋವಿಡ್‌ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಹೋಟೆಲ್‌ಗಳೂ ಮುಚ್ಚಿ ಹೋಗಿದ್ದವು. ಹಾಗೆಂದು ಹೊಸ ಉದ್ಯಮ ತೆರೆಯುವುದಂತೂ ದೂರದ ಮಾತು.

ಆಗ ರಮ್ಯಾ ರವಿ ಅವರಿಗೆ ಹೊಳೆದದ್ದೇ ಕ್ಲೌಡ್‌ ಕಿಚನ್‌. ಮನೆಯಲ್ಲಿಯೇ ಚಿಕ್ಕ ಪ್ರಮಾಣದಲ್ಲಿ ಬಿರಿಯಾನಿ ತಯಾರಿಸಿ ಸ್ಥಳೀಯವಾಗಿ ತಲುಪಿಸಿದರು. ಅಲ್ಲಿಂದು ಮುಂದುವರಿದು ಸೃಷ್ಟಿಯಾದ ಹೆಸರೇ ಆರ್‌ಎನ್‌ಆರ್‌ ದೊನ್ನೆ ಬಿರಿಯಾನಿ. ‘ಪುಟ್ಟ ಅಡುಗೆ ಮನೆಯಲ್ಲಿ ತಯಾರಿಸಿ ಸ್ವಿಗ್ಗಿ ಮೂಲಕ ವಿತರಿಸಲಾರಂಭಿಸಿದೆ. ಮೊದಲವಾರವೇ ಉತ್ತಮ ಪ್ರತಿಕ್ರಿಯೆ ಗಳಿಸಿದ ಈ ಬಿರಿಯಾನಿ ಕೆಲವೇ ದಿನಗಳಲ್ಲಿ ಟ್ರೆಂಡ್‌ ಆಯಿತು. ನಿರಂತರ ಬೇಡಿಕೆ ಬರಲಾರಂಭಿಸಿತು’ ಎಂದು ಒಂದೇ ಸಾಲಿನಲ್ಲಿ ತಮ್ಮ ಯಶೋಗಾಥೆ ವಿವರಿಸಿದರು ರಮ್ಯಾ.

ಆಗ ಹೆಚ್ಚಿನ ಬೇಡಿಕೆ ಪೂರೈಸಲು ದೊನ್ನೆ ಬಿರಿಯಾನಿಯ ಪುಟ್ಟ ಔಟ್‌ಲೆಟ್‌ನ್ನು ಜಯನಗರದಲ್ಲಿ ಆರಂಭಿಸಿದರು. ಕೋವಿಡ್‌ ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆಯೇ ಈ ಪುಟ್ಟ ಮಳಿಗೆಗೆ ಜೀವ ಬಂದಿತು. ‘ಈಗ ಅದನ್ನೊಂದು ಬ್ರ್ಯಾಂಡ್‌ ಆಗಿ ರೂಪಿಸಿದ್ದೇವೆ’ ಎಂದು ಖುಷಿ ಹಂಚಿಕೊಂಡರು ರಮ್ಯಾ.

ADVERTISEMENT

ರಮ್ಯಾ ಜೊತೆ ಅವರ ಸಹೋದರಿಯೂ ಕೈಜೋಡಿಸಿದ್ದಾರೆ.

ಪಾಕವಿಶೇಷ: ಮನೆಯ ಅಡುಗೆ ಮನೆಯಿಂದಲೇ ತಯಾರಿಸಲಾದ ಪಾಕ ಈ ಬಿರಿಯಾನಿಯದ್ದು. ರಮ್ಯಾ ಹೇಳುವಂತೆ, ‘ಹಾಗೆ ನೋಡಿದರೆ ಇದರ ಹಿಂದಿರುವುದು ಅಜ್ಜಿಯ ಕೈ ರುಚಿ. ಭಿನ್ನವಾದ ಪರಿಮಳ, ಸಾಂಪ್ರದಾಯಿಕ ಮತ್ತು ಸುರಕ್ಷಿತ ಪ್ಯಾಕೇಜಿಂಗ್‌, ಪ್ರಸ್ತುತಿ ಇಲ್ಲಿದೆ. ಬಿರಿಯಾನಿಗಳು ದೇಶದಾದ್ಯಂತ ಜನಪ್ರಿಯವಾಗಿವೆ. ಆದರೆ ದುರದೃಷ್ಟವಶಾತ್ ದೇಶದಾದ್ಯಂತ ದೊನ್ನೆ ಬಿರಿಯಾನಿಯನ್ನು ಜನಪ್ರಿಯಗೊಳಿಸುವ ಬ್ರ್ಯಾಂಡ್‌ಗಳ ಕೊರತೆಯಿದೆ. ಈ ಎರಡೇ ನೋಟವನ್ನು ಮುಂದಿಟ್ಟುಕೊಂಡು ಆರ್‌ಎನ್‌ಆರ್‌ ಹುಟ್ಟಿಕೊಂಡಿತು’ ಎನ್ನುತ್ತಾರೆ.

ಆರ್‌ಎನ್‌ಆರ್‌ ಇತರ ಖಾದ್ಯಗಳು: ನಾಟಿಕೋಳಿ ಸಾರು, ಫ್ರೈ, ಡ್ರಮ್ ಸ್ಟಿಕ್ ಚಿಲ್ಲಿ, ಎಳನೀರುಪಾಯಸ... ಹೀಗೆ ಮೆನು ಮುಂದುವರಿದಿದೆ.

ರಮ್ಯಾ ಅವರು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ ಪರಿಣತರು. ಫಿಟ್‌ನೆಸ್‌, ಭರತನಾಟ್ಯ ಅವರ ಆಸಕ್ತಿ, ತಂದೆಯೇ ಉದ್ಯಮದ ಗುರು. ಹೀಗಾಗಿ ಆಹಾರ ಕ್ಷೇತ್ರದ ನವೋದ್ಯಮ ಮುನ್ನಡೆಯುತ್ತಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.