ADVERTISEMENT

ಕೆಂಪು ಟೀ ‘ಖರ್‌ಕದೆ’

ಡಿ.ಜಿ.ಮಲ್ಲಿಕಾರ್ಜುನ
Published 12 ಡಿಸೆಂಬರ್ 2018, 19:30 IST
Last Updated 12 ಡಿಸೆಂಬರ್ 2018, 19:30 IST
ಈಜಿಪ್ಟ್‌ನ ಖರಕದೆ ಟೀ
ಈಜಿಪ್ಟ್‌ನ ಖರಕದೆ ಟೀ   

ಈಜಿಪ್ಟ್‌ನಲ್ಲಿ ದಕ್ಷಿಣದಿಂದ ಉತ್ತರ ದಿಕ್ಕಿಗೆ ಹರಿಯುವ ನೈಲ್ ನದಿಯ ಮೇಲೆ ಕ್ರೂಸ್‌ಗಳು ಪ್ರವಾಸಿಗರನ್ನು ಹೊತ್ತು ಸಾಗುತ್ತವೆ. ಈಜಿಪ್ಟ್ ಅನ್ನು ಪ್ರವಾಸಿಗರು ನೋಡುವುದು ಹೀಗೆಯೇ. ಆಸ್ವಾನ್ ಬಳಿ ಹೈಡ್ಯಾಂ ಮತ್ತು ಇಮ್ಮಡಿ ರಾಮ್‌ಸೆಸ್‌ನ ಅಬೂಸಿಂಬಲ್ ನೋಡಿಕೊಂಡು ನೈಲ್ ನದಿಯ ಕ್ರೂಸ್‌ನಲ್ಲಿ ಪ್ರಯಾಣಿಸುತ್ತಾ ಹಲವು ಪ್ರೇಕ್ಷಣೀಯ ಐತಿಹಾಸಿಕ ಸ್ಥಳಗಳನ್ನು ನೋಡಿಕೊಂಡು ಮೂರು ದಿನಗಳು ಪ್ರಯಾಣಿಸಿ ಲಕ್ಸರ್ ತಲುಪುತ್ತೇವೆ.

ಲಕ್ಸರ್‌ನಲ್ಲಿ ಹೋಟೆಲನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವಾಗತ ಕೋರುತ್ತಾ ತರುಣನೊಬ್ಬ ಕೆಂಬಣ್ಣದ ಶರಬತ್ ಕುಡಿಯಲು ಕೊಟ್ಟರು. ‘ಏನಿದು ವೈನ್ ಇದ್ದಂತಿದೆ’ ಎಂದು ಅವರನ್ನು ಕೇಳಿದಾಗ, ‘ಇದು ಖರ್‌ಕದೆ, ಕುಡಿಯಿರಿ ಚೆನ್ನಾಗಿರುತ್ತದೆ, ಆರೋಗ್ಯಕ್ಕೆ ಒಳ್ಳೆಯದು’ ಅಂದು ನಗುಮುಖದಲ್ಲಿ ಪ್ರೀತಿಯಿಂದ ಸ್ವಾಗತಿಸಿದ. ಕೈಲಿ ಹಿಡಿದ ನಾನು ಕುಡಿಯುವ ಮುನ್ನ ಸ್ವಾಭಾವಿಕವಾಗಿ ಮೂಸಿದೆ. ಹೂವಿನ ಸುವಾಸನೆಯಿತ್ತು. ರುಚಿ ನೋಡಿದೆ ಸ್ವಲ್ಪ ಒಗರು, ಅಲ್ಪ ಉಳಿ, ಕೊಂಚ ಸಿಹಿ ಒಟ್ಟಾರೆ ಇಷ್ಟವಾಯಿತು. ದಣಿದು ಬಂದವರಿಗೆ ನಮ್ಮಲ್ಲಿ ಬೆಲ್ಲ ಮತ್ತು ನೀರು ಕೊಟ್ಟರೆ, ನಿಂಬೂ ಶರಬತ್ ಕೊಟ್ಟರೆ ಅವರ ಮೈ ಮನಸ್ಸು ನಿರಾಳವಾಗುತ್ತದೆ. ಖರ್‌ಕದೆ ಕುಡಿದಾಗ ಇದೇ ಅನುಭವವಾಯಿತು.

ಈಜಿಪ್ಟ್‌ನಲ್ಲಿ ಸೌಕ್ ಎಂದು ಕರೆಯುವ ಅವರ ಮಾರ್ಕೆಟ್ ನೋಡಲು ಬಲು ಚೆನ್ನ. ಭಾರತೀಯರನ್ನು ಕಂಡೊಡನೆ ‘ಇಂಡಿಯ ಗುಡ್ ಕಂಟ್ರಿ, ಗುಡ್ ಪೀಪಲ್, ಮಹಾರಾಜ, ಅಮಿತಾಬ್‌ಬಚ್ಚನ್’ ಎಂದು ಕೂಗುತ್ತಾ ಆಕರ್ಷಿಸಲು ಪ್ರಯತ್ನಿಸುವರು. ವಿದೇಶದಲ್ಲಿ ‘ಇಂಡಿಯಾ ಗುಡ್ ಕಂಟ್ರಿ’ ಎಂಬ ಮಾತು ಕೇಳಿದಾಗ ಸಂಭ್ರಮವಾಗುತ್ತದೆ. ಅಂಗಡಿಯೊಳಕ್ಕೆ ವ್ಯಾಪಾರಕ್ಕೆ ಹೋದರೆ, ‘ಏನು ಕುಡಿಯುತ್ತೀರಿ? ಕಾಫಿ, ಟೀ, ಖರ್‌ಕದೆ’ ಎಂದು ಪ್ರಶ್ನಿಸುತ್ತಾ ಮನೆಗೆ ನೆಂಟರು ಬಂದಾಗ ಆತಿಥ್ಯ ನೀಡುವಂತೆ ಮಾತನಾಡಿಸುವರು. ನಾವು ಏನಾದರೂ ಹೇಳುವವರೆಗೂ ಇವರು ಬಿಡರು.

ADVERTISEMENT

ಖರ್‌ಕದೆ ಎನ್ನುವುದು ಸ್ಥಳೀಯ ಕಡು ಕೆಂಪು ಬಣ್ಣದ ಶರಬತ್ತು. ದಾಸವಾಳದ ಪಕಳೆಗಳನ್ನು ಒಣಗಿಸಿ, ನಂತರ ಕುದಿಸಿ ತಯಾರಿಸುತ್ತಾರೆ. ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು, ಇದರ ರುಚಿ ನೋಡಬಹುದಲ್ಲ ಎಂದು ನಾವು ಖರ್‌ಕದೆ ಕೊಡಲು ಹೇಳಿದರೆ, ಸಕ್ಕರೆ ಹಾಕಬೇಕಾ ಎಂದು ಕೇಳುತ್ತಾರೆ. ಬೇಕಿದ್ದರೆ ಹೇಳಬಹುದು. ಖರ್‌ಕದೆ ರುಚಿ ಇಷ್ಟವಾಗುತ್ತದೆ.

ಈಜಿಪ್ಟ್‌ನಲ್ಲಿ ಸಾಮಾನ್ಯವಾಗಿ ನಾವು ಉಳಿಯುವ ಹೋಟೆಲುಗಳಲ್ಲಿ ಪ್ರವೇಶಿಸುತ್ತಿದ್ದಂತೆ ನಮಗೆ ಅಲ್ಲಿನ ಸ್ಥಳೀಯ ಶರಬತ್ ಖರ್‌ಕದೆ ನೀಡಿ ಸ್ವಾಗತಿಸುವ ಅಭ್ಯಾಸವಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಆಯುರ್ವೇದದ ಗುಣವಿರುವ ಖರ್‌ಕದೆಯಲ್ಲಿ ವಿಟಮಿನ್ ಸಿ ಇದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಇದರ ಬಗ್ಗೆ ಅಲ್ಲಿನವರು ವಿವರಿಸುತ್ತಾರೆ.

ಈಜಿಪ್ಟ್‌ನ ಕೈರೋದಲ್ಲಿ ಕಾಫಿ ಶಾಪ್‌ಗಳು ಬಲು ಚೆನ್ನ. ಅಲ್ಲಿ ಕುಳಿತು ಕಾಫಿ ಕುಡಿಯುತ್ತಾ ಹುಕ್ಕಾ ಸೇದುತ್ತಾ ಸಾಗುವ ಜಗತ್ತನ್ನು ನೋಡುತ್ತಾ ನೆಮ್ಮದಿಯಿಂದ ಕೂರುವುದೇ ಒಂದು ಆನಂದ. ಅಲ್ಲಿನವರು ಕಾಫಿ ಹೌಸ್‌ಗಳನ್ನು ಅಹ್ವಾಗಳೆನ್ನುತ್ತಾರೆ. ಅರೆಬಿಕ್ ಭಾಷೆಯಲ್ಲಿ ಕಾಫಿ ಎನ್ನುವುದಕ್ಕೆ ‘ಅಹ್ವಾ’ ಎನ್ನುತ್ತಾರೆ. ನಮ್ಮಲ್ಲಿಯ ನಾಲ್ಕು ಗೋಡೆಯ ಮಧ್ಯದಲ್ಲಿರುವುದಲ್ಲ ಅವರ ಕಾಫಿ ಶಾಪ್‌ಗಳು. ಎಲ್ಲ ರಸ್ತೆ ಮೇಲೆಯೇ. ಬಯಲೇ ಆಲಯದಂತೆ. ಒಳ್ಳೆ ಸೋಫಾದಂತಿರುವ ಕುರ್ಚಿ ಮತ್ತು ಸುಂದರ ಮೇಜುಗಳನ್ನು ಹೊರಗಡೆ ಹಾಕಿರುತ್ತಾರೆ. ಅಲ್ಲಿ ಕೂಡ ಖರ್‌ಕದೆ ಕುಡಿಯಬಹುದು.

ಖರ್‌ಕದೆ ನೋಡಲು ಕೆಂಪಾಗಿ ಸುಂದರವಾಗಿರುವುದಲ್ಲದೆ ರುಚಿಯಾಗಿಯೂ ಇದೆ. ಹಾಗಾಗಿ ಇದನ್ನು ಸೇವಿಸದೆ ಬಂದಲ್ಲಿ ಈಜಿಪ್ಟ್ ಪ್ರವಾಸ ಅಪೂರ್ಣ !!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.