ADVERTISEMENT

ಹುಬ್ಬಳ್ಳಿ ಗಿರ್ಮಿಟ್‌... ನಾಟಿಸ್ಟೈಲ್‌ ಬಿರಿಯಾನಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 18:37 IST
Last Updated 16 ನವೆಂಬರ್ 2018, 18:37 IST
ಕೃಷಿ ಮೇಳದಲ್ಲಿ ಜೋಳದ ರೊಟ್ಟಿಯ ಮಳಿಗೆಯಲ್ಲಿ ಹರಿಹರದ ಮಹಿಳೆಯರು ರೊಟ್ಟಿ ತಟ್ಟುತ್ತಿದ್ದ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಕೃಷಿ ಮೇಳದಲ್ಲಿ ಜೋಳದ ರೊಟ್ಟಿಯ ಮಳಿಗೆಯಲ್ಲಿ ಹರಿಹರದ ಮಹಿಳೆಯರು ರೊಟ್ಟಿ ತಟ್ಟುತ್ತಿದ್ದ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಹುಬ್ಬಳ್ಳಿಯಿಂದ ಬಂಗಾರಪೇಟೆಯವರೆಗಿನ ತಿನಿಸುಗಳು ಮೇಳದಲ್ಲಿ ಘಮಘಮಿಸಿದವು.

ರಾಜ್ಯದ ಆಹಾರ ವೈವಿಧ್ಯ ಮೇಳದಲ್ಲಿ ಅನಾವರಣಗೊಂಡಿತು. ರುಚಿ ಬಯಸುವ ಬಾಯಿ, ಹಸಿದ ಹೊಟ್ಟೆ ಎರಡನ್ನೂ ತಣಿಸುವ ಕೆಲಸ ಆಹಾರ ಮಳಿಗೆಗಳಲ್ಲಿ ನಡೆಯಿತು. ಹೆಸರಿನಲ್ಲೇ ಆಕರ್ಷಿಸಿ ದೂರದಿಂದ ಕೈಬೀಸಿ ಕರೆಯುತ್ತಿದ್ದವು ಈ ತಿಂಡಿ ಕೇಂದ್ರಗಳು.

ರಾಣೆಬೆನ್ನೂರಿನ ಶಶಾಂಕ್‌ ತಮ್ಮ ಕುಟುಂಬ ಸಮೇತ ಇಲ್ಲಿನ ಆಹಾರ ಮಳಿಗೆಯೊಂದರಲ್ಲಿ ಬೀಡುಬಿಟ್ಟಿದ್ದರು. ಅದರ ಹೆಸರು ‘ನಿಮ್ಮ ಮಲೆನಾಡು ತಿಂಡಿ’. ಅಲ್ಲಿದ್ದದ್ದು ಮಾತ್ರ ಮಧ್ಯ ಕರ್ನಾಟಕದ ಮಂಡಕ್ಕಿ ಒಗ್ಗರಣೆ, ಬೆಂಗಳೂರಿನ ಪುಳಿಯೋಗರೆ, ಪುಲಾವ್‌, ಮೊಸರನ್ನ. ಮಧ್ಯಾಹ್ನದ ವೇಳೆಗೆ ರೊಟ್ಟಿ, ಚಪಾತಿ ಪ್ರತ್ಯಕ್ಷವಾಗಿದ್ದವು. ಇಡೀ ಕುಟುಂಬವೇ ಪಾಕ ತಯಾರಿಕೆಯಲ್ಲಿ ನಿರತವಾಗಿತ್ತು.

ADVERTISEMENT

ಪಕ್ಕದಲ್ಲೇ ಇದ್ದದ್ದು ಹುಬ್ಬಳ್ಳಿಯ ಗಿರ್ಮಿಟ್‌ ಮಿರ್ಚಿ. ಸುಮ್ಮನೆ ಹುರಿದು ಉಪ್ಪು ಹಾಕಿದ ಹಸಿ ಮೆಣಸು, ಮೆಣಸಿನ ಬಜ್ಜಿ, ದೊಣ್ಣೆ ಮೆಣಸಿನ ಬಜ್ಜಿಗೆ ಜನ ಬಾಯಿಸೋತರು. ಇದರ ಪಕ್ಕದಲ್ಲೇ ಬೇಡಿಕೆ ಪಡೆದದ್ದು ಖ್ಯಾತನಾಮ ದಾವಣಗೆರೆ ಬೆಣ್ಣೆ ದೋಸೆ. ಹರಿಹರದಿಂದ ಬಂದ ಗಿರಿಜಮ್ಮ ಅವರು ತಮ್ಮ ಪುತ್ರ ಕುಮಾರ್‌ ಜತೆಗೆ ಮಳಿಗೆ ಹಾಕಿದ್ದರು. ಕುಮಾರ್‌ ಬೆಣ್ಣೆ ದೋಸೆ ಸಿದ್ಧಪಡಿಸುತ್ತಿದ್ದರು. ಗಿರಿಜಮ್ಮ ಅವರ ತಂಡ ರೊಟ್ಟಿ ತಟ್ಟುತ್ತಿತ್ತು.

ಸಿರಿಧಾನ್ಯದ ಇಡ್ಲಿ, ಮಸಾಲೆ ದೋಸೆ, ಪಡ್ಡು, ನವಣಕ್ಕಿ ಅನ್ನ, ಪಾಯಸ, ಬಿದಿರಕ್ಕಿ ಅನ್ನ ಸಿದ್ಧಪಡಿಸುವ ಹಲವು ಸ್ಟಾಲ್‌ಗಳು ಇದ್ದವು. ಹಲವರು ಕುತೂಹಲಕ್ಕಾಗಿ ಈ ತಿನಿಸುಗಳನ್ನು ಸವಿದರು.

ಮೇಲುಕೋಟೆಯ ಪುಳಿಯೋಗರೆ, ಬಂಗಾರಪೇಟೆ ಪಾನಿಪೂರಿ, ಕೊಡಗಿನ ಪಂದಿ ಕರಿ, ಕರಾವಳಿಯ ಮೀನಿನೂಟ, ಮೀನು ಫ್ರೈ, ಮಂಡ್ಯ, ಬೆಂಗಳೂರು ಸುತ್ತಮುತ್ತಲಿನ ನಾಟಿ ಸ್ಟೈಲ್ ಬಿರಿಯಾನಿ, ಮಡಕೆ ಬಿರಿಯಾನಿ, ‘ಬೀಗರ ಊಟ’ ಹೆಸರಿನ ಮಾಂಸಾಹಾರಿ ಆಹಾರ ಮಳಿಗೆ... ಹೀಗೆ ಒಂದೊಂದು ತಿನಿಸು ಒಂದೊಂದು ಊರಿನ ಹೆಸರಿನ ಜತೆ ತಳುಕು ಹಾಕಿಕೊಂಡಿತ್ತು. ಕೋಳಿ ಮಾಂಸದ ಎಲ್ಲ ಖಾದ್ಯಗಳೂ ಇಲ್ಲಿದ್ದವು.

ಬಂಗಾರಪೇಟೆ ಪಾನಿಪೂರಿಯ ನೀರು (ಪಾನಿ) ಸಹಜ ಬಣ್ಣದಲ್ಲಿಯೇ ಇತ್ತು. ಕುಡಿದಾಗಲೇ ಗೊತ್ತು ಇದು ಪಾನಿಪೂರಿಯ ‘ಪಾನಿ’ ಎಂದು. ಒಗರಿನ ಜತೆ ಸ್ವಲ್ಪ ಖಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.