ADVERTISEMENT

ನೈಸರ್ಗಿಕ ಎನರ್ಜಿ ಡ್ರಿಂಕ್‌: ಹೆಸರುಕಾಳು ತಂಪು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 19:30 IST
Last Updated 26 ಆಗಸ್ಟ್ 2020, 19:30 IST
ಹೆಸರು ಕಾಳು ಡ್ರಿಂಕ್ಸ್‌
ಹೆಸರು ಕಾಳು ಡ್ರಿಂಕ್ಸ್‌   

ತಂಪು ಪಾನೀಯ, ಎನರ್ಜಿ ಡ್ರಿಂಕ್‌ ಎಂದೆಲ್ಲ ಮಕ್ಕಳು ಮಾತ್ರವಲ್ಲ, ದೊಡ್ಡವರೂ ಕೂಡ ಬೇಕೆಂದಾಗಲೆಲ್ಲ ಕುಡಿಯುವುದು ಚಟವೆನಿಸುವಷ್ಟು ಅತಿಯಾಗಿಬಿಟ್ಟಿದೆ. ಅದರಲ್ಲಿರುವ ಹಾನಿಕಾರಕ ರಾಸಾಯನಿಕಗಳು, ಪ್ರಿಸರ್ವೇಟಿವ್‌ ಅಪಾಯಕಾರಿ ಎಂದು ಗೊತ್ತಿದ್ದರೂ ಸಹ ಅದರ ಬಗ್ಗೆ ಕ್ರೇಜ್‌ ಬೆಳೆಸಿಕೊಂಡವರು ಬಹಳಷ್ಟು ಮಂದಿ.

ಆದರೆ ಈಗಿನ ಸಂದರ್ಭದಲ್ಲಿ ಮಳೆ ಇದ್ದರೂ ಸಹ ಯಾವುದೇ ಹಾನಿ ಮಾಡದ, ಪೌಷ್ಟಿಕಾಂಶಗಳಿಂದ ಕೂಡಿದ ನೈಸರ್ಗಿಕ ತಂಪು ಪಾನೀಯವೊಂದನ್ನು ಮನೆಯಲ್ಲೇ ಮಾಡಿ ಕುಡಿಯಬಹುದು. ಅದು ಹೆಸರುಕಾಳಿನ ತಂಪು.

ಹೆಸರೇ ಹೇಳುವಂತೆ ಹೆಸರುಕಾಳು ಬೇಕಾಗುವ ಮುಖ್ಯ ಸಾಮಗ್ರಿ. ಒಂದು ಕಪ್‌ನಷ್ಟು ಹೆಸರುಕಾಳನ್ನು ತೊಳೆದು ನೆನೆ ಹಾಕಿ. ಒಂದೆರಡು ಗಂಟೆ ಬಿಟ್ಟರೆ ಇದು ಚೆನ್ನಾಗಿ ನೆನೆದು ಮೆದುವಾಗುತ್ತದೆ. ಇದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಸಾಕಷ್ಟು ಅಂದರೆ 4–6 ಕಪ್ ನೀರು ಸೇರಿಸಿ. ನಯವಾಗಿ ರುಬ್ಬಿಕೊಂಡ ಮಿಶ್ರಣವನ್ನು ಸೋಸಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಅಂದರೆ ಸಿಹಿಯಾಗುವಷ್ಟು ಬೆಲ್ಲ ಸೇರಿಸಿ. ಜೊತೆಗೆ ಚಿಟಿಕೆ ಏಲಕ್ಕಿ ಪುಡಿ. ನಿಮ್ಮ ಹೆಸರುಕಾಳು ತಂಪು ರೆಡಿ. ಇದನ್ನು ಫ್ರಿಜ್‌ನಲ್ಲಿಟ್ಟುಕೊಂಡು ಕೂಡ ಸೇವಿಸಬಹುದು.

ADVERTISEMENT

ಇದರಲ್ಲಿರುವ ಪೌಷ್ಟಿಕಾಂಶಗಳು ಬಹಳಷ್ಟು. ವಿಟಮಿನ್‌ ಬಿ ಅಧಿಕ ಪ್ರಮಾಣದಲ್ಲಿದ್ದು, ಗ್ಲುಕೋಸ್‌ ನಿಮ್ಮ ದೇಹಕ್ಕೆ ತಕ್ಷಣಕ್ಕೆ ಸಿಗುತ್ತದೆ. ಹೀಗಾಗಿ ಇದನ್ನು ಎನರ್ಜಿ ಡ್ರಿಂಕ್‌ ಎನ್ನಬಹುದು. ಇದರಲ್ಲಿರುವ ಅಂಶಗಳು ಉರಿಯೂತವನ್ನು ಶಮನ ಮಾಡುತ್ತವೆ. ಬ್ಯಾಕ್ಟೀರಿಯದಂತಹ ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವ ಶಕ್ತಿಯಿದ್ದು, ಆ್ಯಂಟಿ ಆಕ್ಸಿಡೆಂಟ್‌ಗಳು ಜಾಸ್ತಿ ಇವೆ. ಹಾಗೆಯೇ ಇದರಲ್ಲಿರುವ ನಾರಿನಂಶ ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ.

ಒಂದು ಲೋಟ ಹೆಸರುಕಾಳು ತಂಪನ್ನು ಕುಡಿದರೆ ಸಾಕು, ನಿಮ್ಮ ಮೆದುಳು ನಿಮಗೆ ತೃಪ್ತಿಯ ಸಂಕೇತ ನೀಡುತ್ತದೆ. ಹೀಗಾಗಿ ಹಸಿವು ಬೇಗ ನೀಗುತ್ತದೆ. ಮಲೆನಾಡಿನ ತೋಟಗಳಲ್ಲಿ, ಕಟ್ಟಡ ಕೆಲಸ ಮಾಡುವ ಕಾರ್ಮಿಕರು ಇದನ್ನು ಲಾಗಾಯ್ತಿನಿಂದ ಕುಡಿಯುವ ರೂಢಿಯಿದೆ. ಕಾರಣ ಇದು ಆಯಾಸ ನೀಗಿಸುವುದಲ್ಲದೇ, ತಕ್ಷಣಕ್ಕೆ ಎನರ್ಜಿ ನೀಡುತ್ತದೆ. ಮಧುಮೇಹಿಗಳಿಗೂ ಉಪಯುಕ್ತ. ಆದರೆ ಬೆಲ್ಲ ಹಾಕಿಕೊಳ್ಳದೇ ಕುಡಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.