ADVERTISEMENT

ಮಾಂಸಪ್ರಿಯರೇ ನಿಮಗೆ ಈ ವಿಷಯ ಗೊತ್ತಾ?

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
ಕೋಳಿ ಖಾದ್ಯ (ಸಾಂದರ್ಭಿಕ ಚಿತ್ರ)
ಕೋಳಿ ಖಾದ್ಯ (ಸಾಂದರ್ಭಿಕ ಚಿತ್ರ)   

ಮಾಂಸಾಹಾರಪಪ್ರಿಯರಿಗೆ ಖಾದ್ಯಗಳ ಮೂಲಕ ಸುಲಭವಾಗಿ ಸೋಂಕು ಹರಡುತ್ತದೆ. ನೋಡಲೂ, ತಿನ್ನಲೂ ವ್ಹಾವ್‌ ಎನಿಸುವ ಖಾದ್ಯ ವೈವಿಧ್ಯಗಳ ತಟ್ಟೆಯನ್ನು ನಮ್ಮ ಮುಂದೆ ತಂದಿಟ್ಟಾಗ ಗುಣಮಟ್ಟ, ಬ್ಯಾಕ್ಟೀರಿಯಾಗಳ ಯೋಚನೆ ಬರುವುದುಂಟೆ?

ಆದರೆ ಯೋಚನೆ ಮಾಡಲೇಬೇಕಾದ ಅವಶ್ಯಕತೆ ಈಗ ನಮ್ಮ ಮುಂದಿದೆ.ಅಮೆರಿಕದ ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನ ವರದಿ ಇದಕ್ಕೆ ಕಾರಣ.

ಕೊಳೆತ ಕೋಳಿ ಮತ್ತು ಟರ್ಕಿ ಕೋಳಿ ಮಾಂಸದಲ್ಲಿ ಕಂಡುಬರುವ ಇ–ಕೊಲಿ ಎಂಬ ಮಾರಕ ಬ್ಯಾಕ್ಟೀರಿಯಾಗಳು ಮೂತ್ರಾಶಯದ ಸೋಂಕು ಮತ್ತು ಮೂತ್ರದ ಸೋಂಕಿಗೆ ಕಾರಣವಾಗುತ್ತವೆ. ಮಾಂಸ ಮತ್ತು ಸಿದ್ಧ ಮಾಂಸಾಹಾರಗಳಲ್ಲಿ ಕಂಡುಬರುವ ST131 ಎಂಬ ಇ–ಕೊಲಿ ಬ್ಯಾಕ್ಟೀರಿಯಾ ಮೂತ್ರಪಿಂಡದ ಮೂಲಕ ರಕ್ತವನ್ನು ಪ್ರವೇಶಿಸುತ್ತದೆ. ಮುಂದೆ ಮಾರಕ ಕಾಯಿಲೆಗಳಿಗೆ ನಾಂದಿಯಾಗುತ್ತದೆ. ಜಗತ್ತಿನಲ್ಲಿ ಸಾವಿರಾರು ಮಂದಿ ಈ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಮೆರಿಕದ ಜಾರ್ಜ್‌ ವಾಷಿಂಗ್ಟನ್‌ ಯುನಿವರ್ಸಿಟಿಯ ವಿಜ್ಞಾನಿಗಳ ತಂಡ ತಿಳಿಸಿದೆ.

ADVERTISEMENT

ಕೋಳಿ, ಟರ್ಕಿಕೋಳಿ ಮತ್ತು ಹಂದಿ ಮಾಂಸ ಮತ್ತು ಖಾದ್ಯಗಳ ಸಗಟು ಮಳಿಗೆಗಳ ಗ್ರಾಹಕರ ನೆರವಿನೊಂದಿಗೆ ಒಂದು ವರ್ಷ ಅಧ್ಯಯನ ನಡೆಸಲಾಯಿತು. ಆ ಮಳಿಗೆಗಳ ಗ್ರಾಹಕರ ಮೂತ್ರದ ಮಾದರಿ ಹಾಗೂ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಗ್ರಾಹಕರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಈ ಅಂಶ ಪತ್ತೆಯಾಯಿತು. ಈ ಮಳಿಗೆಗಳಿಂದ ಸಂಗ್ರಹಿಸಲಾಗಿದ್ದ 2,452 ಮಾಂಸದ ಮಾದರಿಗಳ ಪೈಕಿ ಶೇ 80ರಷ್ಟು ಮಾದರಿಗಳಲ್ಲಿ ಹಾಗೂ ಶೇ 70ರಷ್ಟು ಮೂತ್ರ ಮತ್ತು ರಕ್ತದ ಮಾದರಿಗಳಲ್ಲಿ ಇ–ಕೊಲಿST131 ಬ್ಯಾಕ್ಟೀರಿಯಾ ಪತ್ತೆಯಾಗಿತ್ತುಎಂದು ಅಧ್ಯಯನ ತಂಡ ಹೇಳಿದೆ.

ಕೋಳಿ ಮತ್ತು ಟರ್ಕಿ ಕೋಳಿ ಮಾಂಸದ ಸಗಟು ಮಳಿಗೆಗಳ ಆಹಾರದ ಮೂಲಕ ಇ–ಕೊಲಿ ಬ್ಯಾಕ್ಟೀರಿಯಾ ಮಾನವ ದೇಹ ಪ್ರವೇಶಿಸುತ್ತವೆ. ಮೂತ್ರಕೋಶದ ಸೋಂಕಿಗೆ ಕಾರಣವಾಗುತ್ತವೆ ಎಂಬ ಅಂಶವನ್ನು ಪತ್ತೆ ಹಚ್ಚಿದೆ. ಈ ಹಿಂದೆಯೂ ಇಂತಹ ಅಧ್ಯಯನ ನಡೆದಿದ್ದರೂ ಹೊಸ ಅಧ್ಯಯನದಲ್ಲಿ ವ್ಯಕ್ತಿಗತ ಅನುಭವಗಳನ್ನು ಆಧಾರವಾಗಿಟ್ಟುಕೊಂಡಿರುವುದು ಗಮನಾರ್ಹ.

ಇ–ಕೊಲಿ ಬ್ಯಾಕ್ಟೀರಿಯಾಗಳು ನಿವಾರಣೆಯಾಗಬೇಕಾದರೆ 160 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಶಾಖದಲ್ಲಿ ಮಾಂಸವನ್ನು ಬೇಯಿಸಬೇಕಾಗುತ್ತದೆ. ಹೋಟೆಲ್‌ ಅಥವಾ ಬ್ರ್ಯಾಂಡೆಡ್‌ ಸಿದ್ಧ ಆಹಾರ ಸೇವಿಸುವಾಗ ಪತ್ತೆ ಹಚ್ಚುವುದು ಕಷ್ಟ. ಸಿದ್ಧ ಆಹಾರ ಮತ್ತು ಮಾಂಸ ಮಾರಾಟ ಅಂಗಡಿಗಳಲ್ಲಿ ಮಾಂಸದ ಗುಣಮಟ್ಟ ತಪಾಸಣೆ ಮಾಡುವ ಕಟ್ಟುನಿಟ್ಟಿನ ಕಾನೂನುಪಾಲನೆಯಾಗಬೇಕಾಗಿದೆ. ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.