ಶಾಲೆಗೆ ಹೋಗುವ ಮಕ್ಕಳಿರುವ ಮನೆಗಳಲ್ಲಿ ಬೆಳಗಿನ ತಿಂಡಿ ತಯಾರಿಸುವುದು ಅಮ್ಮಂದಿರಿಗೆ ಒಂದು ಸವಾಲು.
ಶಾಲಾ ಬಸ್ ಬರುವ ವೇಳೆಗೆ ಅಥವಾ ತಮ್ಮದೇ ವಾಹನದಲ್ಲಿ ಅವರನ್ನು ಕರೆದೊಯ್ದು ಬಿಟ್ಟು ಬರುವ ಧಾವಂತದಲ್ಲಿ ಡಬ್ಬಿ ಸಿದ್ಧಗೊಳಿಸಿ ಕಳಿಸುವುದು ಒಂದು ಹರಸಾಹಸವೇ ಆಗಿರುತ್ತದೆ. ಅಷ್ಟೆಲ್ಲ ಮಾಡಿದ ಮೇಲೂ ‘ಅಯ್ಯೋ ಸ್ಪೂನ್ ಹಾಕುವುದು ಮರೆತೆ’, ‘ಚಟ್ನಿ ಡಬ್ಬಿ ಇಡಲೇ ಇಲ್ಲ’, ‘ಲಂಚ್ ಬ್ಯಾಗ್‌ಗೆ ನ್ಯಾಪ್ಕಿನ್ ಹಾಕಿದೆನೋ ಇಲ್ಲವೋ’ ಎಂಬಂತಹ ಗೊಂದಲ, ಆತಂಕದಲ್ಲಿ ಅಮ್ಮಂದಿರ ಬಿ.ಪಿ ಏರದಿದ್ದರೆ ಪವಾಡವೇ ಸರಿ. ಬೆಳಗಿನ ತಿಂಡಿಯನ್ನು ಯೋಜಿಸಿ ಮಾಡುವುದು ಇಂತಹ ಎಷ್ಟೋ ಗೊಣಗಾಟ, ಕಿರಿಕಿರಿಯನ್ನು ತಪ್ಪಿಸಬಲ್ಲದು. ಅದಕ್ಕಾಗಿ ಇಲ್ಲಿವೆ ಒಂದಿಷ್ಟು ಸೂತ್ರಗಳು:
1. ಯಾವ ತಿಂಡಿ ಮಾಡಬೇಕು ಎಂಬುದನ್ನು ಹಿಂದಿನ ದಿನವೇ ನಿರ್ಧರಿಸಿಕೊಳ್ಳಿ. ಕೆಲವರು ಒಂದು ವಾರದ ಮೆನು ಸಿದ್ಧಪಡಿಸಿಕೊಳ್ಳುವುದೂ ಉಂಟು!
2. ನಿಗದಿಪಡಿಸಿಕೊಂಡ ತಿಂಡಿಗೆ ಬೇಕಾದ ಪದಾರ್ಥಗಳು ಮನೆಯಲ್ಲಿ ಇವೆಯೇ ಪರಿಶೀಲಿಸಿಕೊಳ್ಳಿ.
3. ಬೇಕಾದ ಪದಾರ್ಥ ಇಲ್ಲದಿದ್ದರೆ ಹಿಂದಿನ ದಿನವೇ ಬಿಡುವು ಮಾಡಿಕೊಂಡು ಅವುಗಳನ್ನು ತಂದಿಟ್ಟುಕೊಳ್ಳಿ.
4. ತರಕಾರಿ, ಸೊಪ್ಪನ್ನು ಮೊದಲೇ ತೊಳೆದು ಫ್ರಿಜ್‌ನಲ್ಲಿ ಇಡಿ.
5. ಚಪಾತಿ ಅಥವಾ ಪೂರಿ ಮಾಡುವುದಾದರೆ ಹಿಂದಿನ ರಾತ್ರಿಯೇ ಹಿಟ್ಟನ್ನು ಕಲಸಿ ಇಟ್ಟುಕೊಳ್ಳಿ.
6. ಹೆಚ್ಚಲು ಹರಿತವಾದ ಚಾಕು, ಪ್ಯಾಕೆಟ್ ಕತ್ತರಿಸಲು ಕತ್ತರಿ ಕೈಗೆ ಸಿಗುವಂತಿರಲಿ.
7. ಮಕ್ಕಳ ಊಟದ ಡಬ್ಬಿಯು ರಾತ್ರಿಯ ವೇಳೆಗೆ ತೊಳೆದಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬೆಳಿಗ್ಗೆ ಮುಚ್ಚಳ ಸಿಗುತ್ತಿಲ್ಲ, ಡಬ್ಬಿ ಕಾಣುತ್ತಿಲ್ಲ ಎಂದು ಹುಡುಕಾಡುವುದಕ್ಕೇ ಸಮಯ ಹೋಗಿರುತ್ತದೆ.
8. ಸಿದ್ಧಪಡಿಸಲು ಗಂಟೆಗಟ್ಟಲೆ ತೆಗೆದುಕೊಳ್ಳುವ ತಿಂಡಿಗಳನ್ನು ವಾರದ ರಜಾದಿನಕ್ಕೆ ಮುಂದೂಡಿ, ಅಲ್ಪ ಸಮಯದಲ್ಲಿ ತಯಾರಾಗುವ ತಿಂಡಿಗಳನ್ನೇ ಆಯ್ದುಕೊಳ್ಳುವುದು ಒಳ್ಳೆಯದು.
9. ಶಾರ್ಟ್ ಬ್ರೇಕ್‌ಗೆ ಜಂಕ್ ಫುಡ್ ಮೊರೆ ಹೋಗದಿರಿ. ಆದಷ್ಟೂ ಮನೆಯಲ್ಲಿ ಮಾಡಿದ ಕುರುಕಲು ತಿಂಡಿಗಳನ್ನೇ ಕೊಡಿ. ಜೊತೆಗೆ ಸಲಾಡ್, ಕೋಸಂಬರಿಯಂತಹ ತಿನಿಸುಗಳನ್ನು ಅಭ್ಯಾಸ ಮಾಡಿಸುವುದು ತುಂಬಾ ಒಳ್ಳೆಯದು.
10. ಬೆಳಿಗ್ಗೆ ಬೇಗ ಏಳದಿದ್ದರೆ ಏನೆಲ್ಲಾ ಪೂರ್ವಸಿದ್ಧತೆ ಇದ್ದರೂ ಪ್ರಯೋಜನ ಇರದು, ಧಾವಂತ ತಪ್ಪದು! →v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.