ಊಟಕ್ಕೆ ಉಪ್ಪಿನಕಾಯಿ ಜೊತೆಯಾದರೆ ದೋಸೆಗೆ ಚಟ್ನಿ ಜೋಡಿ. ಆದರೆ ಊಟಕ್ಕೆ ಉಪ್ಪಿನಕಾಯಿಯಷ್ಟೇ ಚಟ್ನಿಯೂ ಹಿತ. ಪಲ್ಯದ ಬದಲು ತಟ್ಟೆಯ ತುದಿಯಲ್ಲಿ ಹುಳಿ, ಖಾರದ ಚಟ್ನಿ ಇದ್ದರೆ ಹೊಟ್ಟೆ ಹಸಿವು ತುಸು ಹೆಚ್ಚಾಗುವುದು ಸುಳ್ಳಲ್ಲ. ಬರೀ ಹಸಿಮೆಣಸು, ಶೇಂಗಾ, ಕೊಬ್ಬರಿ ಚಟ್ನಿ ತಿಂದು ಬೇಜಾರಾಗಿದ್ದರೆ ತರಕಾರಿಗಳನ್ನು ಹಾಕಿ ಚಟ್ನಿ ತಯಾರಿಸಬಹುದು. ಅವುಗಳು ರುಚಿಯಲ್ಲಿಯೂ ಕೊಂಚ ಭಿನ್ನವಾಗಿದ್ದು ತಿನ್ನಲು ಇಷ್ಟವಾಗುತ್ತವೆ. ಮೂಲಂಗಿ, ಕ್ಯಾರೆಟ್, ಟೊಮೆಟೊ ಚಟ್ನಿಗಳು ಊಟ, ತಿಂಡಿ, ಚಪಾತಿ, ರೊಟ್ಟಿ ಎಲ್ಲವಕ್ಕೂ ಜೊತೆಯಾಗುವುದರಲ್ಲಿ ಸಂಶಯವಿಲ್ಲ. ಇಂತಹ ರುಚಿಯಾದ ಚಟ್ನಿಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ರಾಜಲಕ್ಷ್ಮಿ ಕೆ. ವಿ.
**
ಕ್ಯಾರೆಟ್ ಚಟ್ನಿ
ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ ತುರಿ – 1ಕಪ್, ತೆಂಗಿನತುರಿ – ಅರ್ಧ ಕಪ್, ಕಡಲೆಬೇಳೆ – 1ಟೀ ಚಮಚ, ಒಣಮೆಣಸಿನಕಾಯಿ 2ರಿಂದ 3, ಹುಣಸೆಹಣ್ಣು – ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕದೆ ಕಡಲೆಬೇಳೆ, ಒಣಮೆಣಸಿನಕಾಯಿ, ಹುಣಸೆಹಣ್ಣು ಎಲ್ಲವನ್ನು ಒಟ್ಟಿಗೆ ಹಾಕಿ ಕಡಲೆಬೇಳೆ ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಈ ಮಿಶ್ರಣಕ್ಕೆ ಕ್ಯಾರೆಟ್ ತುರಿ, ತೆಂಗಿನ ತುರಿ ಮತ್ತು ಉಪ್ಪು ಸೇರಿಸಿ, ನಂತರ ನುಣ್ಣಗೆ ರುಬ್ಬಿ. ಸಾಸಿವೆ ಹಾಗೂ ಇಂಗಿನ ಒಗ್ಗರಣೆ ಕೊಡಿ.
**
ಮೂಲಂಗಿ ಚಟ್ನಿ
ಬೇಕಾಗುವ ಸಾಮಗ್ರಿಗಳು: ಮೂಲಂಗಿತುರಿ – 1 ಕಪ್, ತೆಂಗಿನತುರಿ – ಅರ್ಧ ಕಪ್, ಹುರಿಗಡಲೆ – 1 ಟೀ ಚಮಚ, ಹಸಿಮೆಣಸಿನಕಾಯಿ 3ರಿಂದ 4, ನಿಂಬೆರಸ – ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ರುಬ್ಬಿ ಸಾಸಿವೆ, ಇಂಗಿನ ಒಗ್ಗರಣೆ ಕೊಟ್ಟರೆ ರುಚಿಕರ ಮೂಲಂಗಿ ಚಟ್ನಿ ರೆಡಿ.
**
ಸೀಮೆಬದನೆಕಾಯಿ ಚಟ್ನಿ
ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಸೀಮೆಬದನೆ ಹೋಳುಗಳು – 1 ಕಪ್, ತೆಂಗಿನತುರಿ – ಅರ್ಧ ಕಪ್, ಉದ್ದಿನಬೇಳೆ – 1 ಟೀ ಚಮಚ, ಶೇಂಗಾ – 1/4 ಕಪ್, ಹಸಿಮೆಣಸಿನಕಾಯಿ 5 ರಿಂದ 6, ಹುಣಸೆಹಣ್ಣು – ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:ಬಾಣಲಿಯಲ್ಲಿ ಎಣ್ಣೆ ಹಾಕದೇ ಉದ್ದಿನಬೇಳೆ, ಶೇಂಗಾ ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಬೇಯಿಸಿದ ಸೀಮೆಬದನೆ ಹೋಳುಗಳು, ತೆಂಗಿನತುರಿ, ಹಸಿಮೆಣಸಿನಕಾಯಿ, ಹುಣಸೆಹಣ್ಣು, ಉಪ್ಪು ಹಾಕಿ ಮಿಶ್ರಣ ಮಾಡಿ. ನುಣ್ಣಗೆ ರುಬ್ಬಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಕೊಡಿ.
**
ಟೊಮೆಟೊ ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಕತ್ತರಿಸಿದ ಟೊಮೆಟೊ – 1 ಕಪ್, ಕತ್ತರಿಸಿದ ಈರುಳ್ಳಿ – ಅರ್ಧ ಕಪ್, ಒಣಕೊಬ್ಬರಿ ತುರಿ – 1/4 ಕಪ್, ಖಾರಕ್ಕೆ ತಕ್ಕಂತೆ ಹಸಿ ಶುಂಠಿ ತುಂಡು, ಅರ್ಧ ಚಮಚ ಸೋಂಪು, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದು ಬಿಸಿಯಾಗುತ್ತಲೇ ಟೊಮೆಟೊ, ಈರುಳ್ಳಿ, ಸೋಂಪು ಹಾಕಿ ಚೆನ್ನಾಗಿ ಬಾಡಿಸಿ. ನಂತರ ಒಣಕೊಬ್ಬರಿ, ಶುಂಠಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಸಾಸಿವೆ, ಇಂಗಿನ ಒಗ್ಗರಣೆ ಕೊಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.