ADVERTISEMENT

ರಸಾಸ್ವಾದ: ಚೇತನ ಉಕ್ಕಿಸುವ ಪಾಕ ವೈವಿಧ್ಯ

ಸುಮಾ ಬಿ.
Published 21 ನವೆಂಬರ್ 2025, 23:30 IST
Last Updated 21 ನವೆಂಬರ್ 2025, 23:30 IST
   

ಬೆಳ್ಳಿತೆರೆಯಲ್ಲಿ ಬಣ್ಣ ಹಚ್ಚುವ ಅವಕಾಶವನ್ನು ನಯವಾಗೇ ತಿರಸ್ಕರಿಸಿದ, ಒದಗಿಬಂದ ಸರ್ಕಾರಿ ಹುದ್ದೆಯನ್ನು ಪ್ರಜ್ಞಾಪೂರ್ವಕವಾಗೇ ದೂರ ಮಾಡಿದ, ಕ್ರಿಕೆಟ್‌, ಕಬಡ್ಡಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಅರ್ಹತೆ ಪಡೆದರೂ ಉತ್ಸಾಹ ತೋರದೆ ಅಡುಗೆ ಮನೆಯ ಹಾದಿ ಹಿಡಿದ ಮೈಸೂರಿನ ಚೇತನ್‌ ರಾವ್‌ ‘ಅಡುಗೆಯೇ ದೇವರು’ ಎಂದು ನಂಬಿ, ಅದರಲ್ಲೇ ಬದುಕಿನ ಹೊಳಹುಗಳನ್ನು ಕಂಡುಕೊಂಡವರು.

ಸಾಂಪ್ರದಾಯಿಕ ಅಡುಗೆಗೆ ಹೊಸತೊಂದು ಲೇಪ ಹಚ್ಚಿ ಮೌಲ್ಯವರ್ಧನೆ ಮಾಡುವುದರಲ್ಲಿ ಚೇತನ್‌ ಸಿದ್ಧಹಸ್ತರು. ಮನೆಯಲ್ಲಿ ಇರುವ ಪದಾರ್ಥಗಳನ್ನೇ ಬಳಸಿ ಸುಲಭವಾಗಿ ಮಾಡಬಲ್ಲ, ಭಿನ್ನ ರುಚಿ ನೀಡುವ ಅಡುಗೆ ಕಲೆಯನ್ನು ಕರಗತ ಮಾಡಿಕೊಂಡಿರುವ ಅವರು, ಎಂಥದ್ದೇ ಪದಾರ್ಥ ಕೊಟ್ಟರೂ ಅದರಲ್ಲಿ ಹೊಸ ರುಚಿ ಅರಸುತ್ತಾರೆ.

ತಂದೆಯ ಅಡುಗೆ ಕಾಯಕವನ್ನೇ ಮುಂದುವರಿಸಿ ಮೈಸೂರಿನಲ್ಲಿ ಸಿಎಸ್‌ಆರ್‌ ಕೇಟರಿಂಗ್‌ ಮೂಲಕ ತಮ್ಮ ಪಾಕದ ಗಮ್ಮತ್ತನ್ನು 13 ವರ್ಷಗಳಿಂದ ಉಣಬಡಿಸುತ್ತಿದ್ದಾರೆ. ಚೇತನ್‌ ಅವರ ಫೇಣಿ, ಚಿರೋಟಿ ಎಂದರೆ ತಿನಿಸುಪ್ರಿಯರು ಬಾಯಿಚಪ್ಪರಿಸುತ್ತಾರೆ. ಮೈಸೂರಿಗಷ್ಟೇ ಅವರ ಪಾಕ ವೈವಿಧ್ಯ ಸೀಮಿತವಾಗಿಲ್ಲ, ಭಾಷೆಯ ಗಡಿ ದಾಟಿ ಆಹಾರಪ್ರಿಯರ ಮನತಟ್ಟಿದೆ. ಇದು ಸಾಧ್ಯವಾಗಿರುವುದು ಅರುಣ್‌ ಅಬ್ಬಿಗೆರೆ ಅವರ ‘ಮನೆಮನೆ ರಸದೂಟ’ ಯೂಟ್ಯೂಬ್‌ ಚಾನೆಲ್‌ ಮೂಲಕ.

ADVERTISEMENT

‘ಸಿಂಪಲ್‌ ಆಗಿ ಮೂರು ನಿಮಿಷದಲ್ಲೇ ಮಾಡಿಕೊಳ್ಳಿ’ ಎಂದೇ ರೆಸಿಪಿ ಹೇಳಿಕೊಡಲು ಶುರುಮಾಡುವ ಚೇತನ್‌, ಎಂತಹ ಕಷ್ಟದ ಅಡುಗೆಯನ್ನೂ ಸುಲಭದಲ್ಲಿ ತಯಾರಿಸುವ ಗುಟ್ಟನ್ನು ಬಿಚ್ಚಿಡುತ್ತಾರೆ. ಸಾಂಪ್ರದಾಯಿಕ ಅಡುಗೆಯಿಂದ ಹಿಡಿದು ಮಕ್ಕಳಿಗೆ ಇಷ್ಟವಾಗುವ ಆರೋಗ್ಯಕರ ಸ್ನ್ಯಾಕ್ಸ್‌ ತಯಾರಿಯವರೆಗೆ ಅವರದು ಎತ್ತಿದ ಕೈ. ಯೂಟ್ಯೂಬ್‌ ಅಂಗಳದಲ್ಲಿ ಅವರು ಹಂಚಿಕೊಳ್ಳುವ ರೆಸಿಪಿಗಳಿಗಾಗಿ ತಿನಿಸುಪ್ರಿಯರು ಕಾತರಿಸುತ್ತಿ
ರುತ್ತಾರೆ. ನಿತ್ಯದ ಅಡುಗೆಗಳಿಗೇ ಭಿನ್ನ ರುಚಿ ಕೊಡುವ ಅವರು, ಮಾತಿನ ಹದದಲ್ಲೇ ಜಿಹ್ವಾಚಾಪಲ್ಯ ಹೆಚ್ಚಿಸುತ್ತಾರೆ. ಅವರು ಹೇಳಿಕೊಟ್ಟ ಟೊಮೆಟೊ ಬಾತ್‌, ಪುಲಾವ್‌ ರೆಸಿಪಿಗಳು ಅಲ್ಪ ಸಮಯದಲ್ಲೇ 25 ಲಕ್ಷ ವೀಕ್ಷಣೆ ಪಡೆದಿರುವುದು ಅವರ ಪಾಕ ಪ್ರಾವೀಣ್ಯವನ್ನು ಸಾರುತ್ತವೆ.

ಜೇನುತುಪ್ಪದ ಕೇಸರಿಬಾತ್‌, ದಮ್‌ ವಾಂಗಿಬಾತ್‌, ಅವಲಕ್ಕಿ ಬಿಸಿಬೇಳೆಬಾತ್‌, ರಾಯಲ್‌ ರಸಂ, ವೆಜ್‌ ದಮ್‌ ಬಿರಿಯಾನಿ, ಕೊಳುಕಟ್ಟೈ ಇಡ್ಲಿ, ಸ್ಟಫ್ಡ್ ಇಡ್ಲಿ, ಕಾಯಿಸಾಸಿವೆ ಚಿತ್ರಾನ್ನ, ಶಾಯಿ ಮಧುರ ರಬಡಿ, ಟಿಕ್ಕಿ ಹರಬರ ಕಬಾಬ್‌, ಬರ್ಗರ್‌... ಹೀಗೆ ಅವರ ಪಾಕ ವೈವಿಧ್ಯದ ಪಟ್ಟಿ ಬೆಳೆಯುತ್ತದೆ.

ಮೈಸೂರೆಂದರೆ ಸ್ಮೃತಿಪಟಲದಲ್ಲಿ ಸುಳಿಯುವುದೇ ‘ಮೈಸೂರ್‌ಪಾಕ್‌’.  ಅದನ್ನು ಸವಿಯಲು ಸಿಹಿತಿಂಡಿಯ ಮಳಿಗೆಗೇ ಹೋಗಬೇಕೆಂದಿಲ್ಲ. ಅದೇ ಶೈಲಿಯಲ್ಲಿ ಮನೆಯಲ್ಲೇ ಸುಲಭದಲ್ಲಿ ಮಾಡಿ ಎಂದು ಅಷ್ಟೇ ಸರಳವಾಗಿ ಹೇಳಿಕೊಡುತ್ತಾರೆ ಚೇತನ್‌. ಆಗೆಲ್ಲ ಮದುವೆ ಮನೆಗಳೆಂದರೆ ಲಾಡು (ಬೂಂದಿ) ಹಾಜರಿ ಇದ್ದೇ ಇರುತ್ತಿತ್ತು. ಈಗ ಹೋಳಿಗೆ ಆ ಸ್ಥಾನವನ್ನು ಆಕ್ರಮಿಸಿದೆ. ಒಂದೇ ಬಗೆಯ ಹೋಳಿಗೆ ತಿಂದು ಬೇಸರ
ಎನಿಸಿದರೆ ಚೇತನ್‌ ವೈವಿಧ್ಯಮಯ ಹೋಳಿಗೆ ತಯಾರಿಯನ್ನು ಹೇಳಿಕೊಡುತ್ತಾರೆ. ಬೇಳೆ ಹೋಳಿಗೆ, ಕಾಯಿ ಹೋಳಿಗೆ ಸಾಮಾನ್ಯವಾದವು, ಈಗ ಪೈನಾಪಲ್‌ ಹೋಳಿಗೆ, ಖರ್ಜೂರದ ಹೋಳಿಗೆ, ಬಾದಾಮ್‌ ಹೋಳಿಗೆ, ಕ್ಯಾರೆಟ್‌ ಹೋಳಿಗೆ, ಖೋವಾ ಹೋಳಿಗೆ, ಚಾಕೊಲೇಟ್‌ ಹೋಳಿಗೆ, ಗುಲ್ಕನ್‌ ಹೋಳಿಗೆ, ಹಲಸಿನ ಹೋಳಿಗೆ... ಹೀಗೆ ತರಹೇವಾರಿ ಹೋಳಿಗೆ ತಯಾರಿಯಲ್ಲಿ ಚೇತನ್‌ ಅವರದು ಎತ್ತಿದ ಕೈ. ಇವರ ಅಡುಗೆ ನೋಡಿ ಕಲಿತು ಕೆಲವರು ಹೋಟೆಲ್‌ ಶುರುಮಾಡಿದ್ದರೆ, ಇನ್ನು ಕೆಲವರು ಮನೆಯಲ್ಲೇ ಕೇಟರಿಂಗ್‌ ಆರಂಭಿಸಿದ್ದಾರೆ.

ಚೇತನ್‌ ಹೇಳುತ್ತಾರೆ
  • ಮೈಸೂರ್‌ಪಾಕ್‌ ತಯಾರಿಸುವುದು ಚಿಟಿಕೆ ಹೊಡೆದಷ್ಟೇ ಸುಲಭ. ಒಂದು ನೂಲು ಸಕ್ಕರೆ ಪಾಕ ಹಿಡಿದರೆ ಮೈಸೂರ್‌ಪಾಕ್‌ ಹದವಾಗಿ ಬಂದಂತೆಯೇ. ಒಂದು ಲೋಟ ಸಕ್ಕರೆಗೆ ಕಾಲು ಲೋಟ ನೀರು ಹಾಕಿದರೆ ಸಾಕು ಪಾಕ ಬೇಗ ಬರುತ್ತದೆ.

  • ಮೈಸೂರ್‌ಪಾಕ್‌ ತಯಾರಿಸಲು ‘ಒನ್‌, ಟೂ, ತ್ರೀ’ ಅಳತೆ ಇಟ್ಟುಕೊಳ್ಳಿ. 1 ಕಪ್‌ ಕಡಲೆಹಿಟ್ಟು, 2 ಕಪ್‌ ಸಕ್ಕರೆ, ಮೂರು ಕಪ್‌ನಲ್ಲಿ ಎರಡು ಕಪ್ ಎಣ್ಣೆ, ಒಂದು ಲೋಟ ತುಪ್ಪ. ಇವಿಷ್ಟೇ ಪದಾರ್ಥದಲ್ಲಿ, ಇದಿಷ್ಟೇ ಅಳತೆಯಲ್ಲಿ, ಬಾಯಿಗಿಟ್ಟರೆ ಕರಗುವ ಮೈಸೂರ್‌ಪಾಕ್‌ ತಯಾರಿಸಬಹುದು.

ಸವಿದಿದ್ದೀರ ಕಾಮನಬಿಲ್ಲಿನ ಪೂರಿ?

ಆಗಸದಲ್ಲಿ ಕಾಮನಬಿಲ್ಲನ್ನು ನೋಡಿರುತ್ತೇವೆ. ಇದೇನಿದು ಪೂರಿ ಎಂದಿರಾ? ಚೇತನ್‌ ರಾವ್‌ ಅವರು ಕಾಮನಬಿಲ್ಲಿನ ಕೆಲವು ಬಣ್ಣಗಳನ್ನು ಊಟದ ತಟ್ಟೆಗೇ ಬರುವಂತೆ ಮಾಡಿದ್ದಾರೆ! ಮಕ್ಕಳನ್ನಂತೂ ಸೂಜಿಗಲ್ಲಿನಂತೆ ಸೆಳೆಯುವ ಈ ಬಣ್ಣಬಣ್ಣದ ಪೂರಿಯನ್ನು ಹೀಗೆ ಮಾಡಿ:

ಏನೇನು ಬೇಕು?: 

ಮೂರು ಕಪ್‌ ಗೋಧಿಹಿಟ್ಟು, ಮೂರು ಟೀ ಚಮಚ ಚಿರೋಟಿ ರವೆ, ಬಣ್ಣಕ್ಕೆ ಸ್ವಲ್ಪ ಅರಸಿನ. ರುಬ್ಬಿ ಸೋಸಿದ ಬೀಟ್‌ರೂಟ್‌ ರಸ, ಬೇಯಿಸಿ ರುಬ್ಬಿದ ಪಾಲಾಕ್‌ ರಸ, ರುಚಿಗೆ ಉಪ್ಪು, ಕರಿಯಲು ಎಣ್ಣೆ.

ಹೀಗೆ ಮಾಡಿ: 

ಒಂದೊಂದು ಕಪ್‌ ಗೋಧಿಹಿಟ್ಟನ್ನು ಪ್ರತ್ಯೇಕವಾಗಿ ಮೂರು ಪಾತ್ರೆಗಳಲ್ಲಿ ಹಾಕಬೇಕು. ಅದಕ್ಕೆ ಒಂದೊಂದು ಚಮಚ ಚಿರೋಟಿ ರವೆ, ಚಿಟಿಕೆ ಉಪ್ಪು ಹಾಕಬೇಕು. ಬಳಿಕ ಒಂದಕ್ಕೆ ಅರಸಿನ, ಇನ್ನೊಂದಕ್ಕೆ ಬೀಟ್‌ರೂಟ್‌ ರಸ, ಮಗದೊಂದಕ್ಕೆ ಪಾಲಾಕ್‌ ರಸ ಹಾಕಿ ಪೂರಿ ಹದಕ್ಕೆ ಕಲೆಸಿ 10 ನಿಮಿಷ ತಟ್ಟೆ ಮುಚ್ಚಿ ಇಡಬೇಕು. ಬಳಿಕ ಮೂರು ಉಂಡೆಗಳನ್ನಾಗಿ ಮಾಡಿಟ್ಟು ಚಪಾತಿಯಷ್ಟು ಅಗಲಕ್ಕೆ ಪ್ರತ್ಯೇಕವಾಗಿ ಲಟ್ಟಿಸಿ ಇಟ್ಟುಕೊಳ್ಳಬೇಕು. 

ಮೂರನ್ನೂ ಒಂದರಮೇಲೆ ಒಂದು ಹಾಕಿ ಸುತ್ತಬೇಕು (ರೋಲ್‌ ಮಾಡಿ). ಐದು ನಿಮಿಷದ ಬಳಿಕ ರೋಲ್‌ ಅನ್ನು ಕತ್ತರಿಸಿ ಉಂಡೆಗಳನ್ನಾಗಿ ಮಾಡಿ, ಪೂರಿ ಅಳತೆಯಲ್ಲಿ ಲಟ್ಟಿಸಿ ಎಣ್ಣೆಯಲ್ಲಿ ಕರಿದರೆ ಕಾಮನಬಿಲ್ಲಿನ ಪೂರಿ ಸವಿಯಲು ಸಿದ್ಧ. ಬಣ್ಣಬಣ್ಣದ ಈ ಪೂರಿ ಮಕ್ಕಳಿಗಂತೂ ಅತ್ಯಾಕರ್ಷಕ. ಸಾಗೂ, ಕಾಯಿಚಟ್ನಿ ಜೊತೆ ಸವಿಯಲು ಕೊಡಬಹುದು. 

ಅಮ್ಮ ಹೇಳ್ತಾಳೆ
ಶಾವಿಗೆ ಪಾಯಸ ಮಾಡುವಾಗ ಹಾಲು ಸಂಪೂರ್ಣ ಕುದಿ ಬಂದ ಬಳಿಕವೇ ಶಾವಿಗೆ ಹಾಕಬೇಕು. ಪಾಯಸ ತಯಾರಾಗಿ ಇಳಿಸುವಾಗ ಎರಡು ಲವಂಗ ಹಾಕಬೇಕು. ಆಗ ಅದರ ಘಮ ಹೆಚ್ಚುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.