
ಆಗಸದಲ್ಲಿ ಕಾಮನಬಿಲ್ಲನ್ನು ನೋಡಿರುತ್ತೇವೆ. ಇದೇನಿದು ಪೂರಿ ಎಂದಿರಾ? ಚೇತನ್ ರಾವ್ ಅವರು ಕಾಮನಬಿಲ್ಲಿನ ಕೆಲವು ಬಣ್ಣಗಳನ್ನು ಊಟದ ತಟ್ಟೆಗೇ ಬರುವಂತೆ ಮಾಡಿದ್ದಾರೆ! ಮಕ್ಕಳನ್ನಂತೂ ಸೂಜಿಗಲ್ಲಿನಂತೆ ಸೆಳೆಯುವ ಈ ಬಣ್ಣಬಣ್ಣದ ಪೂರಿಯನ್ನು ಹೀಗೆ ಮಾಡಿ:
ಮೂರು ಕಪ್ ಗೋಧಿಹಿಟ್ಟು, ಮೂರು ಟೀ ಚಮಚ ಚಿರೋಟಿ ರವೆ, ಬಣ್ಣಕ್ಕೆ ಸ್ವಲ್ಪ ಅರಸಿನ. ರುಬ್ಬಿ ಸೋಸಿದ ಬೀಟ್‌ರೂಟ್ ರಸ, ಬೇಯಿಸಿ ರುಬ್ಬಿದ ಪಾಲಾಕ್ ರಸ, ರುಚಿಗೆ ಉಪ್ಪು, ಕರಿಯಲು ಎಣ್ಣೆ.
ಒಂದೊಂದು ಕಪ್ ಗೋಧಿಹಿಟ್ಟನ್ನು ಪ್ರತ್ಯೇಕವಾಗಿ ಮೂರು ಪಾತ್ರೆಗಳಲ್ಲಿ ಹಾಕಬೇಕು. ಅದಕ್ಕೆ ಒಂದೊಂದು ಚಮಚ ಚಿರೋಟಿ ರವೆ, ಚಿಟಿಕೆ ಉಪ್ಪು ಹಾಕಬೇಕು. ಬಳಿಕ ಒಂದಕ್ಕೆ ಅರಸಿನ, ಇನ್ನೊಂದಕ್ಕೆ ಬೀಟ್‌ರೂಟ್ ರಸ, ಮಗದೊಂದಕ್ಕೆ ಪಾಲಾಕ್ ರಸ ಹಾಕಿ ಪೂರಿ ಹದಕ್ಕೆ ಕಲೆಸಿ 10 ನಿಮಿಷ ತಟ್ಟೆ ಮುಚ್ಚಿ ಇಡಬೇಕು. ಬಳಿಕ ಮೂರು ಉಂಡೆಗಳನ್ನಾಗಿ ಮಾಡಿಟ್ಟು ಚಪಾತಿಯಷ್ಟು ಅಗಲಕ್ಕೆ ಪ್ರತ್ಯೇಕವಾಗಿ ಲಟ್ಟಿಸಿ ಇಟ್ಟುಕೊಳ್ಳಬೇಕು.
ಮೂರನ್ನೂ ಒಂದರಮೇಲೆ ಒಂದು ಹಾಕಿ ಸುತ್ತಬೇಕು (ರೋಲ್ ಮಾಡಿ). ಐದು ನಿಮಿಷದ ಬಳಿಕ ರೋಲ್ ಅನ್ನು ಕತ್ತರಿಸಿ ಉಂಡೆಗಳನ್ನಾಗಿ ಮಾಡಿ, ಪೂರಿ ಅಳತೆಯಲ್ಲಿ ಲಟ್ಟಿಸಿ ಎಣ್ಣೆಯಲ್ಲಿ ಕರಿದರೆ ಕಾಮನಬಿಲ್ಲಿನ ಪೂರಿ ಸವಿಯಲು ಸಿದ್ಧ. ಬಣ್ಣಬಣ್ಣದ ಈ ಪೂರಿ ಮಕ್ಕಳಿಗಂತೂ ಅತ್ಯಾಕರ್ಷಕ. ಸಾಗೂ, ಕಾಯಿಚಟ್ನಿ ಜೊತೆ ಸವಿಯಲು ಕೊಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.