ADVERTISEMENT

ರುಚಿಗೂ ಸೈ, ಫಿಟ್‌ನೆಸ್‌ಗೂ ಸೈ: ಚಿಕನ್ ಸೂಪ್, ಮೀನಿನ ಸಲಾಡ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 1:23 IST
Last Updated 18 ಏಪ್ರಿಲ್ 2020, 1:23 IST
ಚಿಕನ್ ಸೂಪ್
ಚಿಕನ್ ಸೂಪ್   
""
""

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದಷ್ಟು ದಿನ ಮಾಂಸ ಮಾರಾಟಕ್ಕೆ ತಡೆ ಬಿದ್ದು ಮಾಂಸಾಹಾರಿಗಳಿಗೆ ಕೊಂಚ ನಿರಾಸೆಯಾಗಿತ್ತು. ಈಗ ಮತ್ತೆ ಮಾಂಸ ಮಾರಾಟ ಆರಂಭವಾಗಿದೆ. ಆದರೆ ಮಾಂಸಾಹಾರ ತಿನ್ನುವುದರೊಂದಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬೆರೆಸಿ ಚಿಕನ್ ಸೂಪ್, ಮೀನಿನ ಸಲಾಡ್, ಮೊಟ್ಟೆ ಹಾಗೂ ತರಕಾರಿ ಮಿಶ್ರಿತ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಇದರಿಂದ ನಾಲಿಗೆ ರುಚಿ ತಣಿಸಿಕೊಳ್ಳುವುದರ ಜೊತೆಗೆ ಫಿಟ್‌ನೆಸ್‌ ಕೂಡ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಮನಸ್ವಿ

ಚಿಕನ್ ಸೂಪ್

ಬೇಕಾಗುವ ಸಾಮಗ್ರಿಗಳು: ಚಿಕನ್ ತುಂಡುಗಳು – ಕಾಲು ಕೆ.ಜಿ., ಕ್ಯಾರೆಟ್ – 1, ಆಲೂಗೆಡ್ಡೆ – 1‌‌, ಸ್ವೀಟ್ ಕಾರ್ನ್ – 1/2 ಕಪ್‌, ತರಕಾರಿ – 1 ಕಪ್‌ (ನಿಮಗೆ ಇಷ್ಟವಾದದ್ದು), ನಿಂಬೆರಸ – 2 ಟೇಬಲ್ ಚಮಚ, ಶುಂಠಿ – 1 ಟೇಬಲ್ ಚಮಚ, ಬೆಳ್ಳುಳ್ಳಿ – 1ಟೇಬಲ್ ಚಮಚ, ತುಪ್ಪ – 1ಟೀ ಚಮಚ,

ADVERTISEMENT

ಒಗ್ಗರಣೆಗೆ: ಪಲಾವ್ ಎಲೆ – 1 ಚಿಕ್ಕದು, ಕಾಳುಮೆಣಸು – 4, ಚಕ್ಕೆ – ಚೂರು

ತಯಾರಿಸುವ ವಿಧಾನ: ಕುಕ್ಕರ್‌ನಲ್ಲಿ ಚಿಕನ್ ತುಂಡುಗಳು, ಆಲೂಗೆಡ್ಡೆ, ತರಕಾರಿ ಹಾಗೂ 3 ಕಪ್ ನೀರು ಸೇರಿಸಿ. ಅದಕ್ಕೆ ಪಲಾವ್ ಎಲೆ ಹಾಗೂ ಚಕ್ಕೆಯನ್ನು ತುಂಡರಿಸಿ ಹಾಕಿ. ಕಾಳುಮೆಣಸು ಸೇರಿಸಿ 3 ವಿಷಲ್‌ ಕೂಗಿಸಿ. ನಂತರ ಚಿಕನ್ ತುಂಡುಗಳನ್ನು ತೆಗೆದು ತಣ್ಣಗಾದ ಮೇಲೆ ಮೂಳೆಯಿಂದ ಚಿಕನ್ ಮಾಂಸಗಳನ್ನು ಬೇರ್ಪಡಿಸಿ.

ಸೂಪ್ ತಯಾರಿಸುವ ವಿಧಾನ: ಪಾತ್ರೆಯೊಂದನ್ನು ಬಿಸಿ ಮಾಡಿ ಎಣ್ಣೆ ಹಾಕಿ. ಅದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. ಕ್ಯಾರೆಟ್ ಹಾಗೂ ಸ್ವೀಟ್ ಕಾರ್ನ್ ಸೇರಿಸಿ ಒಂದು ನಿಮಿಷ ಹುರಿಯಿರಿ. ನಂತರ ಮೊದಲು ಬೇಯಿಸಿಕೊಂಡ ತರಕಾರಿಗಳನ್ನು ನೀರಿನ ಸಮೇತ ಹಾಕಿ. ಕಾರ್ನ್ ಹಾಗೂ ಕ್ಯಾರೆಟ್ ಬೇಯುವವರೆಗೆ ಕುದಿಸಿ. ಅದಕ್ಕೆ ಉಪ್ಪು ಹಾಗೂ ಚಿಕನ್ ತುಂಡುಗಳನ್ನು ಸೇರಿಸಿ. ಸ್ವಲ್ಪ ತಣ್ಣಗಾಗಲು ಬಿಟ್ಟು ನಿಂಬೆರಸ ಹಾಗೂ ಕಾಳುಮೆಣಸಿನ ಪುಡಿ ಚಿಮುಕಿಸಿ ಬಿಸಿಯಿದ್ದಾಗಲೇ ಸವಿಯಿರಿ.

ಮೀನು– ತರಕಾರಿ ಸಲಾಡ್‌

ಬೇಕಾಗುವ ಸಾಮಗ್ರಿಗಳು: ಸಾಸಿವೆ – 2 ಟೀ ಚಮಚ, ಜೀರಿಗೆ – 1 ಟೀ ಚಮಚ, ಅರಿಸಿನ – 1/2 ಟೀ ಚಮಚ, ಈರುಳ್ಳಿ – 1/2 ಚಿಕ್ಕದಾಗಿ ಹೆಚ್ಚಿಕೊಂಡಿದ್ದು, ಲೈಮ್‌ಜೆಸ್ಟ್‌ – 1 ಟೀ ಚಮಚ, ಮೀನು – 4 ತುಂಡು, ಕ್ಯಾರೆಟ್ – 4 ಚಿಕ್ಕದಾಗಿ ಹೆಚ್ಚಿಕೊಂಡಿದ್ದು, ಕೊತ್ತಂಬರಿ ಸೊಪ್ಪು – ಸ್ವಲ್ಪ (ಹೆಚ್ಚಿಕೊಂಡಿದ್ದು), ತೆಂಗಿನತುರಿ – 2 ಟೇಬಲ್ ಚಮಚ, ನಿಂಬೆರಸ – 2 ಟೀ ಚಮಚ, ಆಲಿವ್ ಎಣ್ಣೆ – 2 ಟೀ ಚಮಚ, ಬ್ರೆಡ್ ತುಂಡುಗಳು – 4

ತಯಾರಿಸುವ ವಿಧಾನ: ಪಾತ್ರೆಯೊಂದನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಂಡು ಸಾಸಿವೆ ಹಾಗೂ ಜೀರಿಗೆಯನ್ನು ಪರಿಮಳ ಬರುವವರೆಗೂ ಹುರಿದುಕೊಳ್ಳಿ. ನಂತರ ಅದನ್ನು ಪುಡಿ ಮಾಡಿಕೊಳ್ಳಿ. ಅದಕ್ಕೆ ಅರಿಸಿನ ಪುಡಿ, ಈರುಳ್ಳಿ, ಲೈಮ್‌ಜೆಸ್ಟ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪುಡಿಯನ್ನು ಮೀನಿನ ಮೇಲೆ ಸವರಿ ಅದರ ಮೇಲೆ ಆಲಿವ್ ಎಣ್ಣೆ ಚಿಮುಕಿಸಿ. ನಂತರ ಪಾತ್ರೆಯಲ್ಲಿ ಕೊಂಚ ಎಣ್ಣೆ ಸೇರಿಸಿ ಮೀನನ್ನು ಅದರಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಎರಡೂ ಕಡೆ ಚೆನ್ನಾಗಿ ಬೇಯಬೇಕು. ಅದಕ್ಕೆ ಕ್ಯಾರೆಟ್‌, ಕೊತ್ತಂಬರಿ ಸೊಪ್ಪು, ತೆಂಗಿನತುರಿ, ನಿಂಬೆರಸ ಹಾಗೂ ಆಲಿವ್ ಎಣ್ಣೆ ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ಬ್ರೆಡ್ ಜೊತೆ ಸೇರಿಸಿ ತಿನ್ನಿ.

ತರಕಾರಿ ಸ್ಕ್ರ್ಯಾಂಬಲ್ಡ್ ಎಗ್

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 4, ಹಾಲು – 1/4 ಕಪ್‌, ಹಸಿಮೆಣಸು – 1‌–2, ಉಪ್ಪು – ರುಚಿಗೆ, ಕಾಳುಮೆಣಸು – ಚಿಟಿಕೆ, ಟೊಮೆಟೊ – 1

ತಯಾರಿಸುವ ವಿಧಾನ: ಒಂದು ಚಿಕ್ಕ ಪಾತ್ರೆಯಲ್ಲಿ ಮೊಟ್ಟೆಯನ್ನು ಒಡೆದು ಹಾಕಿ. ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಹಸಿಮೆಣಸು, ಈರುಳ್ಳಿ, ಉಪ್ಪು ಹಾಗೂ ಕಾಳುಮೆಣಸು ಸೇರಿಸಿ. ನಂತರ ಎಣ್ಣೆ ಸವರಿದ ಪ್ಯಾನ್‌ಗೆ ಆ ಮಿಶ್ರಣವನ್ನು ಹಾಕಿ. ಅದನ್ನು ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. ಅದಕ್ಕೆ ಟೊಮೆಟೊ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇನ್ನಷ್ಟು ಬೇಯಿಸಿ. ಇದು ಸುಲಭವಾಗಿ ಮಾಡಬಹುದಾದ ಆರೋಗ್ಯಕರ ರೆಸಿಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.