ADVERTISEMENT

ಹೊಸ ಅಡುಗೆ: ಹಸಿವಿಗೂ ರುಚಿಗೂ ಫ್ರಿಟ್ಟಾಟ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:30 IST
Last Updated 22 ಅಕ್ಟೋಬರ್ 2021, 19:30 IST
Frittata made of eggs, potato, bacon, paprika, parsley, green peas, onion, cheese in iron pan on wooden table
Frittata made of eggs, potato, bacon, paprika, parsley, green peas, onion, cheese in iron pan on wooden table   

ಹೊಸ ಹೊಸ ಅಡುಗೆ ಪ್ರಯೋಗಗಳನ್ನು ಮಾಡುವುದು ಎಂದರೆ ಹಲವರಿಗೆ ಅಚ್ಚುಮೆಚ್ಚು. ಮನೆಯಲ್ಲಿ ಬಿಡುವಿನ ವೇಳೆ ಭಾರತೀಯ, ಇಟಾಲಿನ್‌, ಉತ್ತರ ಭಾರತೀಯ ಶೈಲಿ ಹೀಗೆ ವಿವಿಧ ಬಗೆಯ ಅಡುಗೆ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ನಿಮ್ಮ ಅಡುಗೆ ಪ್ರಯೋಗದ ಪಟ್ಟಿಗೆ ಫ್ರಿಟ್ಟಾಟವನ್ನೂ ಸೇರಿಸಿಕೊಳ್ಳಬಹುದು. ಇದು ಹೊಟ್ಟೆ ತುಂಬಿಸುವುದರೊಂದಿಗೆ ಬಾಯಿ ಚಪಲವನ್ನೂ ತಣಿಸುತ್ತದೆ. ನಿಮಗೆ ಸ್ವಲ್ಪ ಹಸಿವಾಗುತ್ತಿದ್ದು ಹೊಟ್ಟೆ ತುಂಬಿಸಿಕೊಳ್ಳುವ ಯೋಚನೆ ಇದ್ದರೆ ಇದನ್ನು ಪ್ರಯತ್ನಿಸಬಹುದು. ಪಿಜ್ಜಾದಂತೆ ಅಗಲವಾಗಿರುವ ಫ್ರಿಟ್ಟಾಟ ಪಿಜ್ಜಾಕ್ಕಿಂತ ಕೊಂಚ ಭಿನ್ನ ರುಚಿಯನ್ನು ಹೊಂದಿರುತ್ತದೆ. ಮೊಟ್ಟೆಯಿಂದ ಮಾಡುವ ಕಾರಣ ವೆಜ್‌ ಪ್ರಿಯರಿಗೆ ಇದು ಇಷ್ಟವಾಗದೇ ಇರಬಹುದು. ಫ್ರಿಜ್‌ ಮೂಲೆಯಲ್ಲಿ ಸ್ವಲ್ಪ ತರಕಾರಿಗಳು ಹಾಗೂ ಉಳಿದ ಮಾಂಸವಿದ್ದರೆ 20 ನಿಮಿಷದಲ್ಲಿ ಇದನ್ನು ತಯಾರಿಸಬಹುದು. ಮನೆಗೆ ಯಾರಾದರೂ ನೆಂಟರು ಬಂದರೂಇದರ ರುಚಿ ತಿನ್ನಿಸಬಹುದು.

ಫ್ರಿಟ್ಟಾಟ ಮಾಡುವ ತಂತ್ರವನ್ನು ಒಮ್ಮೆ ಕಲಿತರೆ ಇದನ್ನು ಮಾಡುವುದು ಬಲು ಸುಲಭ. ಇದನ್ನು ತಯಾರಿಸಲು ಕಡಿಮೆ ಸಮಯ ಹಾಗೂ ಸಾಮಗ್ರಿಗಳು ಸಾಕು. ಹದ ಸರಿಯಾಗಿ ಫ್ರಿಟ್ಟಾಟ ಸಖತ್ ಆಗಿರುತ್ತದೆ. ಇದಕ್ಕೆ ಬಳಸುವ ಮೊಟ್ಟೆ, ಕ್ರೀಮ್‌, ಚೀಸ್‌, ತರಕಾರಿ ಎಲ್ಲವೂ ತಾಜಾವಾಗಿರುವಂತೆ ನೋಡಿಕೊಳ್ಳಬೇಕು. ಆಗ ಇದು ಇನ್ನಷ್ಟು ಚೆನ್ನಾಗಿರುತ್ತದೆ.

6 ಮೊಟ್ಟೆಗೆ ಕಾಲು ಕಪ್‌ ಕ್ರೀಮ್‌, ಚೀಸ್ 1 ಕಪ್‌ ಹಾಗೂ ತರಕಾರಿ 2 ಕಪ್‌ ಸೇರಿಸಬೇಕು. ಫ್ರಿಟ್ಟಾಟವನ್ನು ನಾನ್‌ಸ್ಟಿಕ್ ಪಾತ್ರೆಯಲ್ಲಿ ಮಾಡುವುದು ಉತ್ತಮ. ಸ್ಟೇನ್‌ಲೆಸ್‌ ಸ್ಟೀಲ್‌ ಪಾತ್ರೆಯಲ್ಲಿ ಮಾಡಬಹುದು, ಆದರೆ ಜಾಸ್ತಿ ಎಣ್ಣೆ ಬಳಸಬೇಕಾಗುತ್ತದೆ. ಕೆಲವೊಮ್ಮೆ ಪಾತ್ರೆಯ ತಳ ಹಿಡಿಯುವ ಸಾಧ್ಯತೆಯೂ ಇದ್ದು ಕೆಡಬಹುದು. ಇದನ್ನು ಬೆಳಗಿನ ತಿಂಡಿ ಅಥವಾ ರಾತ್ರಿಯೂಟ ಸಂದರ್ಭದಲ್ಲಿ ಸೇವಿಸಬಹುದು. ಒಂದು ಪೂರ್ಣ ಫ್ರಿಟ್ಟಾಟವನ್ನು 4 ರಿಂದ 6 ಜನ ತಿನ್ನಬಹುದು.

ADVERTISEMENT

ಫ್ರಿಟ್ಟಾಟ ಮಾಡುವುದು...

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 6, ಕ್ರೀಮ್‌ – ಕಾಲು ಕಪ್‌, ಉಪ್ಪು – 1 ಟೀ ಚಮಚ, ಮಾಂಸದ ತುಂಡು – 4, ಕಾಳುಮೆಣಸಿನ ಪುಡಿ – ಕಾಲು ಚಮಚ, ಪಾಲಕ್‌ – 2 ಕಪ್‌, ಕೊತ್ತಂಬರಿ ಸೊಪ್ಪು – 2 ಟೀ ಚಮಚ, ಚೀಸ್ – 1 ಕಪ್‌, ಬ್ರೊಕೊಲಿ – ಸ್ವಲ್ಪ, ಈರುಳ್ಳಿ – 1

ತಯಾರಿಸುವ ವಿಧಾನ: ಒಂದು ನಾನ್‌ಸ್ಟಿಕ್ ತವಾಕ್ಕೆ ಒಂದೆರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ. ಅದಕ್ಕೆ ಈರುಳ್ಳಿ ಕತ್ತರಿಸಿ ಹಾಕಿ. ಮಾಂಸದ ತುಂಡನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ. ಬ್ರೊಕೊಲಿಯನ್ನು ಚಿಕ್ಕದಾಗಿ ಕತ್ತರಿಸಿ. ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ. ಕಪ್‌ವೊಂದಕ್ಕೆ ಮೊಟ್ಟೆಯನ್ನು ಒಡೆದು ಹಾಕಿ. ಅದಕ್ಕೆ ಕ್ರೀಮ್ ಸೇರಿಸಿ. ಈ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ. ಚೀಸ್‌ ತುರಿದಿಟ್ಟುಕೊಳ್ಳಿ. ಕತ್ತರಿಸಿಕೊಂಡ ತರಕಾರಿ ಚೂರುಗಳನ್ನು ಎಣ್ಣೆಯಲ್ಲಿ ಬೇಯುತ್ತಿರುವ ಈರುಳ್ಳಿ ಹಾಗೂ ಮಾಂಸಕ್ಕೆ ಸೇರಿಸಿ ಎಲ್ಲವೂ ಮಿಶ್ರಣವಾಗುವಂತೆ ನೋಡಿಕೊಳ್ಳಿ. ಅದರ ಮೇಲೆ ಮೊಟ್ಟೆಯ ಮಿಶ್ರಣವನ್ನು ಸುರಿಯಿರಿ. ಅದನ್ನು ಒಂದೆರಡು ನಿಮಿಷ ಬಿಸಿ ಮಾಡಿ ಅದರ ಮೇಲೆ ಚೀಸ್ ಉದುರಿಸಿ. ನಂತರ ಕಡಿಮೆ ಉಷ್ಣಾಂಶದಲ್ಲಿ ಓವೆನ್‌ನಲ್ಲಿ ಬೇಯಿಸಿ. ಅದನ್ನು ಹೊರ ತೆಗೆದು ಮತ್ತೆ ಪುನಃ ಇರಿಸಿ ದೊಡ್ಡ ಉರಿಯಲ್ಲಿ ಬೇಯಿಸಿ. ಈಗಫ್ರಿಟ್ಟಾಟ ತಿನ್ನಲು ಸಿದ್ಧ. ಇದನ್ನು ಪಿಜ್ಜಾದಂತೆ ತುಂಡು ಮಾಡಿ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.