
ಸೈನಿಕರಿಗಾಗಿ ದೀರ್ಘಕಾಲ ಕೆಡದಂತಹ ಪೌಷ್ಟಿಕಾಂಶಯುಕ್ತ ಆಹಾರವನ್ನು ತಯಾರಿಸಲು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‍ಟಿಆರ್‌ಐ) ಹಾಗೂ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‍ಆರ್‌ಎಲ್) ಹಗಲಿರುಳೂ ಸಂಶೋಧನೆ ನಡೆಸುತ್ತಿರುತ್ತವೆ. ಆದರೆ ನಮ್ಮ ಪೂರ್ವಜರು ಹೀಗೆ ದೀರ್ಘಕಾಲ ಕೆಡದಂತಹ ‘ಘಟ್ಟದ ರೊಟ್ಟಿ’ಗಳನ್ನು ನೂರಾರು ವರ್ಷಗಳ ಹಿಂದೆಯೇ ತಯಾರಿಸುತ್ತಿದ್ದರು. ಘಟ್ಟಕ್ಕೆ ಹೋಗುವಾಗ ಈ ರೊಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರಿಂದಲೋ ಅವು ಗಟ್ಟಿಯಾಗಿ ಇರುತ್ತಿದ್ದರಿಂದಲೋ ಘಟ್ಟ ಪ್ರದೇಶದಲ್ಲಿ ಪ್ರಚಲಿತವಾಗಿ ಇದ್ದುದರಿಂದಲೋ ಈ ಹೆಸರು ಬಂದಿರಬಹುದು.
ಹಿಂದೆ ಜಾತ್ರೆಗೆ, ಘಟ್ಟ ಪ್ರದೇಶದಲ್ಲಿ ನಡೆಯುತ್ತಿದ್ದ ದನಗಳ ಜಾತ್ರೆಗೆ, ಕುಟುಂಬ ಸಮೇತ ಪ್ರವಾಸಕ್ಕೆ ಹೋಗುವಾಗಲೆಲ್ಲ ಈಗಿನಂತೆ ಹೋಟೆಲ್‍ಗಳಾಗಲಿ, ಎಲ್ಲಿ ಬೇಕೆಂದರಲ್ಲಿ ಅಡುಗೆ ಮಾಡಿಕೊಳ್ಳಲು ಗ್ಯಾಸ್ ಸ್ಟೌವ್‍ಗಳಾಗಲಿ ಇಲ್ಲದಿದ್ದರಿಂದ, ತಿಂಡಿ ಮತ್ತು ಊಟದ್ದು ಪ್ರಮುಖ ಸಮಸ್ಯೆಯಾಗಿ ಕಾಡುತ್ತಿತ್ತು. ಇದಕ್ಕೆ ಪರಿಹಾರವೆಂಬಂತೆ ಅವರು ಈ ರೊಟ್ಟಿಗಳನ್ನು ಸಂಶೋಧಿಸಿಕೊಂಡಿರಬಹುದು.
ಹಾಸನ ಜಿಲ್ಲೆಯ ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ ಪ್ರದೇಶಗಳಲ್ಲಿ ಈ ರೊಟ್ಟಿಗಳನ್ನು ಹೆಚ್ಚಾಗಿ ಮಾಡಲಾಗುತ್ತಿತ್ತು. ಈಗಲೂ ಅಲ್ಲಲ್ಲಿ ಕೆಲವರು ಅಪರೂಪಕ್ಕೆ ಮಾಡುತ್ತಾರೆ. ನಾವು ಇಂತಹ ರೊಟ್ಟಿಗಳನ್ನು ಮಾಡಿಕೊಂಡರೆ, ತಿಂಗಳುಗಳ ಕಾಲ ಕೆಡದಂತೆ ಇಟ್ಟುಕೊಂಡು ಬೆಳಗಿನ ಉಪಾಹಾರ ಅಥವಾ ಸಂಜೆ ಕಾಫಿ-ಟೀ ಜೊತೆ ತಿನ್ನಬಹುದು.
ಹಿಂದಿನ ಕಾಲದಲ್ಲಿ ರೊಟ್ಟಿಗಳನ್ನು ಪ್ರವಾಸಕ್ಕೆ ಹೊರಡುವ ಮುನ್ನಾದಿನ ತಯಾರಿಸುತ್ತಿದ್ದರು. ಕಾವಲಿಯ ಮೇಲಿಟ್ಟ ಸೌದೆ ಒಲೆಯಲ್ಲಿ ರೊಟ್ಟಿಗಳನ್ನು ಬೇಯಿಸಿದ ನಂತರ ಕೆಂಡವನ್ನು ಒಲೆಯಿಂದ ಹೊರಗೆಳೆದು ರೊಟ್ಟಿಗಳನ್ನು ಒಂದರ ಪಕ್ಕ ಒಂದರಂತೆ ರಾತ್ರಿ ಪೂರ್ತಿ ಜೋಡಿಸಿಟ್ಟು ಮಲಗುತ್ತಿದ್ದರು. ಒಲೆಯ ಶಾಖಕ್ಕೆ ರೊಟ್ಟಿಗಳು ಬೆಳಗಾಗುವುದರೊಳಗೆ ಚೆನ್ನಾಗಿ ಒಣಗಿ ಪುಡಿಪುಡಿಯಾಗುವಂತೆ ಆಗಿರುತ್ತಿದ್ದವು. ಆದರೆ ಈಗ ಸೌದೆ ಒಲೆ ವಿರಳವಾದ್ದರಿಂದ ಗ್ಯಾಸ್ ಸ್ಟೌವ್‌ನಲ್ಲೇ ಹೇಗೆ ಈ ರೊಟ್ಟಿಗಳನ್ನು ಮಾಡುವುದು ಎಂದು ತಿಳಿಯೋಣ ಬನ್ನಿ.
ಏನೇನು ಬೇಕು?
ಅಕ್ಕಿಹಿಟ್ಟು– 1 ಕೆ.ಜಿ., ಹುರುಳಿಕಾಳು– 400 ಗ್ರಾಂ, ಹುಚ್ಚೆಳ್ಳು– 400 ಗ್ರಾಂ, ಮೆಣಸಿನಕಾಯಿ ಪುಡಿ– 1 ಸ್ಪೂನ್, ಜೀರಿಗೆ ಸ್ವಲ್ಪ, ಉಪ್ಪು.
ಮಾಡುವುದು ಹೇಗೆ?
• ಹುರುಳಿಕಾಳನ್ನು ಸಣ್ಣ ಉರಿಯಲ್ಲಿ ಹುರಿದು, ಒಮ್ಮೆ ಮಿಕ್ಸಿಗೆ ಹಾಕಿ ತರಿತರಿಯಾಗಿ ಬೇಳೆ ಮಾಡಿಟ್ಟುಕೊಳ್ಳಿ.
• ಅಕ್ಕಿಹಿಟ್ಟು, ಮೆಣಸಿನಕಾಯಿಪುಡಿ, ಹುರುಳಿಕಾಳು, ಜೀರಿಗೆ, ಹುರಿದ ಹುಚ್ಚೆಳ್ಳು, ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ.
ಅದಕ್ಕೆ ಕಾಯಿಸಿದ ನೀರನ್ನು ಹಾಕಿ ಹದವಾಗಿ ಕಲಸಿ ಉಂಡೆ ಮಾಡಿಟ್ಟುಕೊಳ್ಳಿ. ಕಾದ ಕಾವಲಿಯಲ್ಲಿ ಈ ಹಿಟ್ಟಿನಿಂದ ತೆಳ್ಳಗೆ ರೊಟ್ಟಿ ತಟ್ಟಿ ಹದವಾದ ಉರಿಯಲ್ಲಿ ಬೇಯಿಸಿ. ಬಳಿಕ ಸ್ಟೌವ್ ಅನ್ನು ಸಿಮ್ಮರ್ ಮೋಡ್‌ನಲ್ಲಿ ಇಟ್ಟು, ಬೇಯಿಸಿಟ್ಟ ರೊಟ್ಟಿಗಳನ್ನು ಮತ್ತೆ ಒಂದೊಂದಾಗಿ ಬೇಯಿಸಿ. ಆಗ ರೊಟ್ಟಿಗಳು ಚೆನ್ನಾಗಿ ಒಣಗಿ ಪುಡಿಪುಡಿ ಆಗುವ ಹದಕ್ಕೆ ಬರುತ್ತವೆ.
ಏನಿದರ ವಿಶೇಷ?
• ಪೌಷ್ಟಿಕಾಂಶಗಳ ಆಗರ ಅಕ್ಕಿಯ ಬದಲು ರಾಗಿಯನ್ನು ಬಳಸಿದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.
• ಗದ್ದೆ ಕೊಯ್ಲಿನ ಸಮಯದಲ್ಲಿ ಮಲೆನಾಡಿನಲ್ಲಿ ಬೇಡಿಕೆ ಹೆಚ್ಚು.• ಚೆನ್ನಾಗಿ ಒಣಗಿದ ರೊಟ್ಟಿಗಳನ್ನು ತೆರೆದ ಡಬ್ಬದಲ್ಲಿ ಶೇಖರಿಸಿಟ್ಟರೆ ತಿಂಗಳುಗಳ ಕಾಲ ಹಾಳಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.