ADVERTISEMENT

ಇಗೋ ಮಾಡಿ ದಿಢೀರ್‌ ಸಲಾಡ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 3:57 IST
Last Updated 28 ಫೆಬ್ರುವರಿ 2026, 3:57 IST
<div class="paragraphs"><p>ಮೆಂತೆ ಸೊಪ್ಪಿನ ಪಚಡಿ</p></div>

ಮೆಂತೆ ಸೊಪ್ಪಿನ ಪಚಡಿ

   

ಮನೆಯ ದೇಖರೇಖಿ ನೋಡಿಕೊಳ್ಳುವ ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು. ಆಗಾಗ್ಗೆ ಆರೋಗ್ಯಕರ ಸಲಾಡ್‌ ಅಥವಾ ಪಚಡಿಗಳ ಸೇವನೆಯಿಂದ ದೇಹಕ್ಕೆ ಕಬ್ಬಿಣಾಂಶ ಸಮರ್ಪಕವಾಗಿ ದೊರೆಯುತ್ತದೆ. ಕ್ರಮೇಣ ಕಾಣಿಸಿಕೊಳ್ಳುವ ಬೆನ್ನುನೋವು, ಮೂಳೆಗಳ ಆರೋಗ್ಯಕ್ಕೂ ಇವು ಉತ್ತಮ ಮದ್ದಾಗಬಲ್ಲವು. ಇವುಗಳ ರೆಸೆಪಿಗಳನ್ನು ನೀಡಿದ್ದಾರೆ ಶಕುಂತಲಾ ಜಾಲವಾದಿ.

ಹತ್ತರಕಿ ಸೊಪ್ಪಿನ ಸಲಾಡ್


ಹತ್ತರಕಿ ಸೊಪ್ಪು ಬಹೂಪಯೋಗಿ. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಅಲ್ಲದೆ ಹೊಟ್ಟೆಯ ಹರಳುಗಳನ್ನು ಕರಗಿಸುವ ಸಾಮರ್ಥ್ಯವೂ ಇದೆ.

ADVERTISEMENT

ಬೇಕಾಗುವ ಸಾಮಗ್ರಿ: ಎರಡು ಹಿಡಿ ಹತ್ತರಕಿ ಸೊಪ್ಪು, ಖಾರದಪುಡಿ, ಹುರಿದ ಗುರೆಳ್ಳು (ಹುಚ್ಚೆಳ್ಳು ಅಥವಾ ಕಾರೆಳ್ಳು) ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಸ್ವಚ್ಛವಾಗಿ ತೊಳೆದು ಕತ್ತರಿಸಿದ ಹತ್ತರಕಿ ಸೊಪ್ಪನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಖಾರದ ಪುಡಿ, ಗುರೆಳ್ಳು ಪುಡಿ, ರುಚಿಗೆ ಬೇಕಾಗುವಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲೆಸಿ. ಅದಕ್ಕೆ ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಆರೋಗ್ಯವರ್ಧಕ ಹತ್ತರಕಿ ಸೊಪ್ಪಿನ ಕೋಸಂಬರಿ ಅಥವಾ ಸಲಾಡ್ ತಿನ್ನಲು ಸಿದ್ಧ. ಈ ಸೊಪ್ಪನ್ನು ಉತ್ತರ ಕರ್ನಾಟಕದಲ್ಲಿ ಜೋಳದ ಹೊಲದಲ್ಲಿ ಬೆಳೆಯುತ್ತಾರೆ.

ಮೆಂತ್ಯ ಸೊಪ್ಪಿನ ಪಚಡಿ


ಬೇಕಾಗುವ ಸಾಮಗ್ರಿ:
2 ಕಟ್ಟು ಮೆಂತ್ಯ ಸೊಪ್ಪು, ಒಂದು ಎಳೆಸೌತೆಕಾಯಿ, ಹುರಿದು ಪುಡಿಮಾಡಿದ ಶೇಂಗಾಪುಡಿ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಒಣಮೆಣಸಿನಕಾಯಿ.

ಮಾಡುವ ವಿಧಾನ: ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಎಳೆಸೌತೆಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಎರಡನ್ನೂ ಚೆನ್ನಾಗಿ ಕಲೆಸಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಖಾರದಪುಡಿ, ಶೇಂಗಾಪುಡಿ ಹಾಗೂ ಉಪ್ಪನ್ನು ಹಾಕಿ, ಕರಿಬೇವು ಒಣಮೆಣಸಿನಕಾಯಿಯ ಒಗ್ಗರಣೆ ಕೊಟ್ಟರೆ ರುಚಿಕರ ಹಾಗೂ ಅತ್ಯಂತ ಆರೋಗ್ಯಕರವಾದ ಮೆಂತ್ಯ ಸೊಪ್ಪಿನ ಸಲಾಡ್ ಸವಿಯಲು ಸಿದ್ದ. ಇದನ್ನು ಅನ್ನ ಅಥವಾ ಚಪಾತಿಯ ಜೊತೆ ಸವಿಯಬಹುದು. ಇದಕ್ಕೆ ಒಂದು ಗಜ್ಜರಿ ಅಥವಾ ಕ್ಯಾರೆಟ್‌ ಅನ್ನು ಸಣ್ಣದಾಗಿ ಕತ್ತರಿಸಿ ಹಾಕಿದರೆ ಇನ್ನೂ ರುಚಿಕರ. ಬರಿ ಸಲಾಡನ್ನೇ ಬಾಯಿ ಚಪ್ಪರಿಸಿಕೊಂಡು ಸವಿಯಬಹುದು. ತುಂಬಾ ಕಡಿಮೆ ಅವಧಿಯಲ್ಲಿ ದಿಢೀರ್ ಎಂದು ತಯಾರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.