ADVERTISEMENT

ರೆಸಿಪಿ | ಸಿಗಡಿ ಗಸಿ, ಸಿಗಡಿ ಸುಕ್ಕ, ಸಿಗಡಿ ಬಿರಿಯಾನಿ ಮಾಡುವ ವಿಧಾನ ಹೇಗೆ ?

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:45 IST
Last Updated 4 ಫೆಬ್ರುವರಿ 2022, 19:45 IST
ಸಿಗಡಿ ಗಸಿ
ಸಿಗಡಿ ಗಸಿ   

ಸಿಗಡಿ ಸುಕ್ಕ

ಬೇಕಾಗುವ ಸಾಮಗ್ರಿಗಳು:
ಸಿಗಡಿ – 500 ಗ್ರಾಂ, ಹಸಿಮೆಣಸು – 2, ಈರುಳ್ಳಿ – ದೊಡ್ಡದು 2, ಟೊಮೆಟೊ – 1, ತೆಂಗಿನತುರಿ – 1 ಕಪ್‌, ಎಣ್ಣೆ – ಸ್ವಲ್ಪ, ಅರಿಸಿನಪುಡಿ – ಅರ್ಧ ಚಮಚ, ಹುಣಸೆಹಣ್ಣು – ನಿಂಬೆಹಣ್ಣಿನ ಗಾತ್ರದ್ದು, ಕರಿಬೇವು – 10 ಎಸಳು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಸುಕ್ಕ ಪುಡಿ (ಮನೆಯಲ್ಲೂ ತಯಾರಿಸಿಕೊಳ್ಳಬಹುದು).

ತಯಾರಿಸುವ ವಿಧಾನ:
ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ಮೇಲೆ ಕರಿಬೇವಿನ ಎಲೆ ಹಾಕಿ. ಅದಕ್ಕೆ ತೆಂಗಿನತುರಿ ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದಿಟ್ಟಕೊಳ್ಳಿ. ಮತ್ತೆ ಬಾಣಲೆಗೆ ಎಣ್ಣೆ ಹಾಕಿ ಕರಿಬೇವು ಹಾಗೂ ಈರುಳ್ಳಿ ಹಾಕಿ ಅದನ್ನೂ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ತೊಳೆದು ಸ್ವಚ್ಛ ಮಾಡಿದ ಸಿಗಡಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಸಿನ ಪುಡಿ, ಹಸಿಮೆಣಸು ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ ಪಾತ್ರೆಯನ್ನು ಮುಚ್ಚಿ 10 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಸುಕ್ಕ ಪುಡಿ, ಹುಣಸೆರಸ ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಶ್ರಣ ಮಾಡಿ ಪುನಃ 8 ರಿಂ 10 ನಿಮಿಷ ಕುದಿಸಿ. ಸುಕ್ಕ ಸ್ವಲ್ಪ ಗಟ್ಟಿಯಾದಾಗ ಅದಕ್ಕೆ ಹುರಿದುಕೊಂಡ ತೆಂಗಿನತುರಿ ಸೇರಿಸಿ ಮಿಶ್ರಣ ಮಾಡಿ ಮತ್ತೆ 2 ನಿಮಿಷ ಕುದಿಸಿ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಸಿಂಗರಿಸಿ.

ADVERTISEMENT

ಸಿಗಡಿ ಗಸಿ

ಬೇಕಾಗುವ ಸಾಮಗ್ರಿಗಳು:
ಸಿಗಡಿ – 250 ಗ್ರಾಂ, ಅರಿಸಿನ – 1 ಚಮಚ, ಖಾರದಪುಡಿ – 1 ಚಮಚ, ಈರುಳ್ಳಿ – 3 ದೊಡ್ಡದು, ಬೆಳ್ಳುಳ್ಳಿ – 5 ರಿಂದ 6 ಎಸಳು, ತೆಂಗಿನತುರಿ – ಅರ್ಧ ಕಪ್‌, ಹುಣಸೆಹಣ್ಣು – ಅರ್ಧ ನಿಂಬೆ ಗಾತ್ರದ್ದು. ಕರಿಬೇವು – 10 ರಿಂದ 15 ಎಸಳು, ಉಪ್ಪು – ರುಚಿಗೆ, ಎಣ್ಣೆ

ಮಸಾಲೆಗೆ:
ಸಾಸಿವೆ – 1 ಚಮಚ, ಮೆಣಸು – 8, ಕೊತ್ತಂಬರಿ – 2 ಚಮಚ, ಮೆಂತ್ಯ– ಅರ್ಧ ಚಮಚ, ಜೀರಿಗೆ – 1 ಚಮಚ,

ತಯಾರಿಸುವ ವಿಧಾನ:
ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಸೇರಿಸಿ, ನಂತರ ಮಸಾಲೆಗೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ. ಎಲ್ಲವನ್ನೂ ಸಣ್ಣ ಉರಿಯಲ್ಲಿ 4 ನಿಮಿಷಗಳ ಕಾಲ ಹುರಿದುಕೊಳ್ಳಿ. ತೆಂಗಿನತುರಿ ಸೇರಿಸಿ ಅದನ್ನು ಬಣ್ಣ ಬದಲಾಗುವವರೆಗೂ ಹುರಿಯಿರಿ. ಅದಕ್ಕೆ ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನೂ ಸೇರಿಸಿ ಹುರಿಯಿರಿ. ಈರುಳ್ಳಿ ಚೆನ್ನಾಗಿ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ ಪಾತ್ರೆಯಲ್ಲಿರುವುದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಿಗಡಿ, ಅರಿಸಿನ, ಕರಿಬೇವು ಹಾಗೂ ಖಾರದ ಪುಡಿ ಸೇರಿಸಿ ಎಲ್ಲವನ್ನೂ ಹುರಿಯಿರಿ. ನಂತರ ರುಬ್ಬಿಕೊಂಡ ಮಸಾಲೆ ಹಾಗೂ ಹುಣಸೆರಸ ಸೇರಿಸಿ ಚೆನ್ನಾಗಿ ಕುದಿಸಿದರೆ ರುಚಿಯಾದ ಸಿಗಡಿ ಗಸಿ ಸವಿಯಲು ಸಿದ್ಧ.

ಸಿಗಡಿ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು:
ಸಿಗಡಿ – 20, ಅಕ್ಕಿ – 1 ಕಪ್‌ (20 ನಿಮಿಷಗಳ ಕಾಲ ನೆನೆಸಿದ್ದು), ಎಣ್ಣೆ – 3 ರಿಂದ 4 ಚಮಚ, ಏಲಕ್ಕಿ – 3, ದಾಲ್ಚಿನ್ನಿ ಎಲೆ – 2, ಚಕ್ಕೆ – 1 ಇಂಚು, ಕಾಳುಮೆಣಸು – 5, ಈರುಳ್ಳಿ – 1 ಮಧ್ಯಮ ಗಾತ್ರದ್ದು (ಹೆಚ್ಚಿಕೊಂಡಿದ್ದು), ಲವಂಗ – 3, ಉಪ್ಪು – ರುಚಿಗೆ, ಖಾರದಪುಡಿ – 1 ಟೀ ಚಮಚ, ಅರಿಸಿನ ಪುಡಿ – 1/4 ಟೀ ಚಮಚ, ಗರಂ ಮಸಾಲೆ – 1 ಟೀ ಚಮಚ.

ತಯಾರಿಸುವ ವಿಧಾನ:
ಪ್ಯಾನ್‌ವೊಂದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಏಲಕ್ಕಿ, ದಾಲ್ಚಿನ್ನಿ, ಚಕ್ಕೆ, ಕಾಳುಮೆಣಸು, ಲವಂಗ ಹಾಕಿ ಹುರಿಯಿರಿ. ಅದಕ್ಕೆ ಈರುಳ್ಳಿ, ಉಪ್ಪು ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ನಂತರ ಸಿಗಡಿ, ಖಾರದಪುಡಿ, ಅರಿಸಿನಪುಡಿ, ಗರಂ ಮಸಾಲೆ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅಕ್ಕಿ, ಉಪ್ಪು ಹಾಗೂ ಬೇಕಾದಷ್ಟು ನೀರು ಸೇರಿಸಿ ಸಿಗಡಿ ಹಾಗೂ ಅಕ್ಕಿ ಬೇಯು ವವರೆಗೂ ಬೇಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.