
‘ಇದೇನೇ... ಕೆನ್ನೆ ಕಡುಬಿನಂಗೆ ಊದಿದೆ. ಆ ಮಗೀಗೆ ಇಷ್ಟು ಜೋರಾಗಿ ಹೊಡ್ದೀಯಲ್ಲ’. ‘ಅಯ್ಯೋ... ನಾ ಹೊಡೆದಿದ್ದಲ್ಲ, ಅವ್ಳಿಗೆ ಹಲ್ಲು ನೋವಂತೆ’. ಮೊಮ್ಮಗಳ ಉಬ್ಬಿದ ಕೆನ್ನೆ ನೋಡಿ ಅಜ್ಜಿಗೆ ನೆನಪಾದದ್ದು ‘ಕಡುಬು’.
‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು’– 1870-1901ರ ಕಾಲಘಟ್ಟದ ಕವಿ ಮುದ್ದಣ ರಚಿಸಿದ ‘ರಾಮಾಶ್ವಮೇಧ’ ಕೃತಿಯಲ್ಲಿ ಈ ಸಾಲು ಇದೆ. ಮುದ್ದಣ ತನ್ನ ಸತಿ ಮನೋರಮೆಗೆ ಶ್ರೀರಾಮಚಂದ್ರನ ಕತೆಯನ್ನು ಸಂಸ್ಕೃತದಲ್ಲಿ ಹೇಳಲು ಹೊರಟಾಗ ಅದನ್ನು ತಡೆಯುವ ಮನೋರಮೆ, ‘ಕನ್ನಡವೇ ಸರಿಯಾಗಿ ಗೊತ್ತಿಲ್ಲದ ನನಗೆ ಸಂಸ್ಕೃತದಲ್ಲಿ ಕತೆಯ ಸೊಗಸನ್ನು ಹೇಳುವುದೇ’ ಎಂಬ ಅರ್ಥದಲ್ಲಿ ಈ ಸಾಲುಗಳನ್ನು ಉಲ್ಲೇಖಿಸುತ್ತಾಳೆ. ಕಡುಬೆಂಬೋ ಖಾದ್ಯ ಆ ಕಾಲದಿಂದಲೂ ಬಳಕೆಯಲ್ಲಿದೆ ಎನ್ನುವುದನ್ನು ಈ ಸಾಲುಗಳು ಪುಷ್ಟೀಕರಿಸುತ್ತವೆ.
ಆರೋಗ್ಯವರ್ಧಕ, ಸುಲಭ ಜೀರ್ಣಕಾರಿ, ಕಡಿಮೆ ಕ್ಯಾಲೊರಿ ಇರುವ, ಕೊಬ್ಬು ಅಥವಾ ಕೊಲೆಸ್ಟ್ರಾಲ್ ಹಂಗಿಲ್ಲದ ಮಲೆನಾಡಿನ ಹಬೆ ಕಡುಬಿನ ನೆನಪಿನ ಸುರುಳಿ ಹೀಗೆ ತೆರೆದುಕೊಳ್ಳುತ್ತದೆ.
ಕಡುಬಿನ ಕವಲುಗಳು ಹಲವು. ಒಂದೊಂದು ಭಾಗದಲ್ಲಿ ಒಂದೊಂದು ಖಾದ್ಯಕ್ಕೆ ‘ಕಡುಬು’ ಎಂಬ ನಾಮಾಂಕಿತ ಅಂಟಿಕೊಂಡಿದೆ.
ಅಕ್ಕಿ ಕಡುಬು, ಕರಿಗಡುಬು, ಖಾರದ ಕಡುಬು, ಸಿಹಿ ಕಡುಬು, ಕುಚ್ಚಿದ ಕಡುಬು, ಉದ್ದಿನ ಕಡುಬು, ರವೆ ಕಡುಬು, ಕೊಟ್ಟೆ ಕಡುಬು, ಮೂಡೆ ಕಡುಬು, ಕೊಬ್ಬರಿ ಕಡುಬು ಹೀಗೆ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಕಡುಬಿನ ಕವಲುಗಳು ಟಿಸಿಲೊಡೆದಿವೆ.
ಕೆಲವರು ಕಡುಬನ್ನು ಎಣ್ಣೆಯಲ್ಲಿ ಕರಿದರೆ, ಇನ್ನು ಕೆಲವರು ಹಬೆಯಲ್ಲಿ ಬೇಯಿಸುವರು. ಮಗದೊಂದು ಕಡೆ ಎಲೆಯ ರಕ್ಷಾ ಕವಚ ಕಡುಬಿಗೆ ಜೊತೆಯಾಗುತ್ತದೆ. ಮಲೆನಾಡು, ಅರೆ ಮಲೆನಾಡಿನ ಭಾಗದಲ್ಲಿ ಹಬೆ ಕಡುಬು, ಉದ್ದಿನ ಕಡುಬು ಸಾಂಪ್ರದಾಯಿಕ ಖಾದ್ಯಗಳು. ಎಣ್ಣೆಯ ಪಸೆ ಇಲ್ಲದ, ಹೆಚ್ಚು ಸಾಮಗ್ರಿ ಬೇಡದ ಇದು ಫಿಟ್‌ನೆಸ್ ಮಂತ್ರ ಜಪಿಸುವವರಿಗೆ ಹೇಳಿ ಮಾಡಿಸಿದ ಖಾದ್ಯ.
ಅಕ್ಕಿಹಿಟ್ಟು ಅಥವಾ ಅಕ್ಕಿ ರವೆಯಿಂದ ತಯಾರಿಸುವ ಇದು ಬಹುತೇಕರಿಗೆ ಅಚ್ಚುಮೆಚ್ಚು. ಆದರೆ, ತಯಾರಿಕೆಗೆ ಸ್ವಲ್ಪ ಸಮಯ ಬೇಡುತ್ತದೆ.
ಗ್ರಾಮೀಣ ಭಾಗದ ಮನೆಗಳಲ್ಲಿ ಹಸು ಅಥವಾ ಎಮ್ಮೆ ಕರು ಹಾಕಿತೆಂದರೆ ಆ ಮನೆಗಳಲ್ಲಿ ಅರಸಿನದ ಎಲೆ ಹಾಕಿ ಹಬೆಯಲ್ಲಿ ಬೇಯಿಸಿದ ‘ಬೊಟ್ಟು ಕಡುಬಿನ’ ಘಮಲು ಕೇರಿಯ ತುಂಬಾ ಪಸರಿಸುತ್ತದೆ. ಹಸುವಿನ ಮೊದಲ ಹಾಲಿನಿಂದ ತಯಾರಿಸುವ ಗಿಣ್ಣಿಗೆ ಕಡುಬು ಅತ್ಯುತ್ತಮ ಸಂಗಾತಿ.
ಮಾಂಸಾಹಾರ ಪ್ರಿಯರಿಗೂ ಇದು ಅಚ್ಚುಮೆಚ್ಚು. ಚಿಕನ್ ಸಾಂಬಾರ್, ಅಣಬೆ ಸಾರಿಗೆ ಅತ್ಯುತ್ತಮ ಕಾಂಬಿನೇಷನ್. ಅಕ್ಕಿಹಿಟ್ಟಿನ ಸರಿಯನ್ನು ತಯಾರಿಸಿಕೊಂಡು ಬಟ್ಟಲಿನ ರೀತಿ ಕಡುಬು ಮಾಡಿಕೊಂಡು ಬೇಳೆ, ಹಸಿಕೊಬ್ಬರಿ ಮಿಶ್ರಿತ ಹೂರಣ ತುಂಬಿದರೆ ಅದು ಸಿಹಿ ಕಡುಬು. ಕಾಳುಗಳ ಮಿಶ್ರಣದ ಪೇಸ್ಟ್ ತುಂಬಿದರೆ ಅದು ಉದ್ದಿನ ಕಡುಬು. ಇನ್ನು ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವನ್ನೇ ಕೊಡಬೇಕು ಎಂದು ಬಯಸುವ ಆಧುನಿಕ ಅಮ್ಮಂದಿರು ಸಕ್ಕರೆ, ಖೋವಾ ಜೊತೆಗೆ ಒಣಹಣ್ಣುಗಳ ಹುಡಿಯನ್ನು ಮಿಶ್ರ ಮಾಡಿ ಕಡುಬು ತಯಾರಿಸುವುದುಂಟು.
ಚಿಕ್ಕ ಮಕ್ಕಳಿಗೆ ಅದು ಸಿಹಿ ಕಡುಬೋ ಅಥವಾ ಖಾರದ್ದೋ ಎಂಬ ಕುತೂಹಲದ ಮೂಟೆಯಾಗಿಯೂ ಗೋಚರಿಸುತ್ತದೆ.
* ಕಡುಬು ಹಬೆಯಲ್ಲಿ ಬೇಯುವುದರಿಂದ ಸುಲಭ ಜೀರ್ಣಕಾರಿ. ಒಳಗೆ ತುಂಬುವ ಬೇಳೆ– ತೆಂಗಿನಕಾಯಿ ಮಿಶ್ರಣ, ಕಾಳುಗಳ ಮಿಶ್ರಣದಿಂದ ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶ ದೊರೆಯುತ್ತವೆ.
* ಇದು ಕಡಿಮೆ ಕ್ಯಾಲೊರಿ ಆಹಾರವಾಗಿರುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿ.
* ದೇಹಕ್ಕೆ ಶಕ್ತಿ ನೀಡಿ ದಣಿವನ್ನು ಕಡಿಮೆ ಮಾಡುವ ಕಡುಬು ಮಕ್ಕಳು, ವಯಸ್ಕರು, ಹಿರಿಯರು ಹೀಗೆ ಎಲ್ಲ ವಯಸ್ಸಿನವರಿಗೂ ಆರೋಗ್ಯಪೂರ್ಣ ಖಾದ್ಯ.
* ಎಣ್ಣೆ ಪಸೆ ಇರದ ಕಾರಣ ಹೃದಯದ ಆರೋಗ್ಯಕ್ಕೆ ಉತ್ತಮ. ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.
* ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ನಿರ್ವಹಿಸಲು ಹಬೆ ಕಡುಬು ಅತ್ಯುತ್ತಮ ಆಹಾರ.
ವಿವಿಧ ಬೇಳೆಗಳನ್ನು ನೆನೆಸಿ ತಯಾರಿಸುವ ಉದ್ದಿನ ಕಡುಬು ಮಲೆನಾಡಿನ ಮನೆಗಳಲ್ಲಿ ಘಮಗುಡುತ್ತದೆ.
ಏನೇನು ಬೇಕು?: ಅಕ್ಕಿಹಿಟ್ಟು 2 ಕಪ್, ಉದ್ದಿನಬೇಳೆ, ಹೆಸರುಬೇಳೆ, ಕಡಲೆಬೇಳೆ ತಲಾ 1/4 ಕಪ್, ಕೊತ್ತಂಬರಿ ಬೀಜ 1 ಟೀ ಚಮಚ, ಜೀರಿಗೆ 1 ಟೀ ಚಮಚ, ಬೆಳ್ಳುಳ್ಳಿ 6ರಿಂದ 8 ಎಸಳು, ಶುಂಠಿ ಸ್ವಲ್ಪ, ಕರಿಬೇವು 2 ಎಸಳು, ಹಸಿಮೆಣಸಿನಕಾಯಿ 2– 3, ಉಪ್ಪು, ನೀರು.
ಹೀಗೆ ಮಾಡಿ: ಹಿಂದಿನ ರಾತ್ರಿ ಮೂರೂ ಬೇಳೆಗಳನ್ನು ತೊಳೆದು ನೆನೆಹಾಕಿ (ರಾತ್ರಿ ನೆನೆಹಾಕಲು ಮರೆತರೆ ಬೆಳಿಗ್ಗೆ ಬಿಸಿನೀರಿನಲ್ಲಿ ಒಂದು ಗಂಟೆ ನೆನೆಸಿಡಬಹುದು). ನೆನೆದ ಬೇಳೆಗಳನ್ನು ಮಿಕ್ಸಿಯಲ್ಲಿ ಹಾಕಿ, ಅದಕ್ಕೆ ಕೊತ್ತಂಬರಿ ಬೀಜ, ಜೀರಿಗೆ, ಬೆಳ್ಳುಳ್ಳಿ, ಶುಂಠಿ, ಕರಿಬೇವು, ಹಸಿಮೆಣಸಿನಕಾಯಿ, ಉಪ್ಪು ಹಾಕಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಇತ್ತ ಒಂದು ಪಾತ್ರೆಯಲ್ಲಿ ಮೂರು ಲೋಟ ನೀರು, ಸ್ವಲ್ಪ ಉಪ್ಪು ಹಾಕಿ ಕುದಿಯಲು ಬಿಡಬೇಕು. ನೀರು ಕುದಿ ಬಂದ ಬಳಿಕ ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟು ಹಾಕುತ್ತ ಕೂಡಿಸಬೇಕು. ಹಿಟ್ಟು ಸ್ವಲ್ಪ ಗಟ್ಟಿಯಾದ ಬಳಿಕ ಎರಡು ನಿಮಿಷ ಬಿಟ್ಟು ಉರಿ ಆರಿಸಬೇಕು.
ಸ್ವಲ್ಪ ಉಗುರು ಬೆಚ್ಚಗಿರುವಾಗಲೇ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ನಾದಿಕೊಂಡಷ್ಟೂ ಕಡುಬು ಮೃದುವಾಗಿ ಬರುತ್ತದೆ. ಬಳಿಕ ಸ್ವಲ್ಪ ಸ್ವಲ್ಪವೇ ಹಿಟ್ಟಿನಿಂದ ಬಟ್ಟಲಿನ ಆಕೃತಿ ಮಾಡಿಕೊಂಡು ಅದರ ಒಳಗೆ ರುಬ್ಬಿಕೊಂಡ ಮಿಶ್ರಣ ತುಂಬಿ ಕಡುಬಿನ ಎರಡೂ ಬದಿಯನ್ನೂ ಸೇರಿಸಬೇಕು. ಈ ರೀತಿ ಎಲ್ಲವನ್ನೂ ಮಾಡಿಟ್ಟುಕೊಂಡ ಬಳಿಕ ಇಡ್ಲಿ ಪಾತ್ರೆಯಲ್ಲಿ ತಳಕ್ಕೆ ನೀರು ಹಾಕಿ, ತೂತಿರುವ ತಾಟು ಇಟ್ಟು, ಅದರ ಮೇಲೆ ಕಡುಬುಗಳನ್ನು ಜೋಡಿಸಿಡಬೇಕು.
ಮುಚ್ಚಳ ಮುಚ್ಚಿ 20ರಿಂದ 25 ನಿಮಿಷ ಮಧ್ಯಮ ಪ್ರಮಾಣದ ಉರಿಯಲ್ಲಿ ಬೇಯಿಸಬೇಕು. ಬೇಯಿಸುವಾಗ ಲಭ್ಯವಿದ್ದರೆ ಅರಸಿನದ ಎಲೆಗಳನ್ನು ಕಡುಬುಗಳ ಮೇಲ್ಭಾಗದಲ್ಲಿ ಇರಿಸಿ. ಉತ್ತಮ ಘಮ ಬರುತ್ತದೆ.
(ರುಬ್ಬಿಕೊಂಡ ಪೇಸ್ಟ್ ಉಳಿದರೆ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ ಉದ್ದಿನ ವಡೆ ಸಹ ಮಾಡಿಕೊಳ್ಳಬಹುದು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.