ADVERTISEMENT

ದಸರಾ ಸಂಭ್ರಮಕ್ಕಿರಲಿ ಲಾಡುಗಳ ಸಿಹಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:30 IST
Last Updated 27 ಸೆಪ್ಟೆಂಬರ್ 2019, 19:30 IST
ಮೋಹನ ಲಡ್ಡು
ಮೋಹನ ಲಡ್ಡು   

ಹಬ್ಬ ಹರಿದಿನಗಳು ಬಂದಾಗ ಪೂಜೆ ಪುನಸ್ಕಾರಗಳ ಗಮ್ಮತ್ತಿನೊಂದಿಗೆ ಸಿಹಿತಿಂಡಿಗಳ ಘಮಲು ಮನೆಯನ್ನು ಆವರಿಸುತ್ತದೆ. ಹಬ್ಬದ ದಿನವೇ ಸಿಹಿ ತಿಂಡಿಗಳನ್ನು ಮಾಡಲು ಸಮಯವಿಲ್ಲದೇ ಪರದಾಡುವುದಕ್ಕಿಂತ ವಾರಕ್ಕೆ ಮೊದಲೇ ಹಾಳಾಗದಂತಹ ತಿಂಡಿಗಳನ್ನು ಮಾಡಿಟ್ಟುಕೊಂಡರೆ ಚೆನ್ನ. ಅದರಲ್ಲೂ ಕಡಿಮೆ ಸಾಮಗ್ರಿಗಳನ್ನು ಬಳಸಿ ಸಿಹಿಯಾದ, ರುಚಿಯಾದ ಲಡ್ಡುಗಳನ್ನು ತಯಾರಿಸಿ ಇಟ್ಟುಕೊಂಡರೆ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ಕಟ್ಟುತ್ತದೆ ಎನ್ನುತ್ತಾರೆ ರೇವತಿ ಎಂ. ಬಿ.

ಮೋಹನ ಲಾಡು

ಬೇಕಾಗುವ ಸಾಮಗ್ರಿಗಳು: ಮೈದಾ – ನಾಲ್ಕು ಕಪ್‌, ಸಕ್ಕರೆ – ಮೂರೂವರೆ ಕಪ್, ಗೋಡಂಬಿ, ದ್ರಾಕ್ಷಿ – ಸ್ವಲ್ಪ, ಏಲಕ್ಕಿ – ಚಿಟಿಕೆ, ಉಪ್ಪು – ರುಚಿಗೆ ತಕ್ಕಷ್ಟು, ತುಪ್ಪ – ಒಂದು ಚಮಚ, ಕರಿಯಲು – ಎಣ್ಣೆ.

ADVERTISEMENT

ತಯಾರಿಸುವ ವಿಧಾನ: ಮೈದಾಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಆದಷ್ಟು ತೆಳ್ಳಗೆ ಲಟ್ಟಿಸಿಕೊಳ್ಳಿ. ಕಾದ ಎಣ್ಣೆಯಲ್ಲಿ ಪೂರಿಯಂತೆ ಗರಿಗರಿಯಾಗಿ ಕರಿಯಿರಿ. ನಂತರ ಪುಡಿಮಾಡಿ. ನಂತರ ಸಕ್ಕರೆ ಪಾಕ ತಯಾರಿಸಿಕೊಳ್ಳಿ. ಪಾಕ ರೆಡಿಯಾದಾಗ ಚಿಟಿಕೆ ಏಲಕ್ಕಿ ಪುಡಿ ಹಾಕಿ. ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಹಾಕಿ. ಸ್ಟವ್ ಆಫ್ ಮಾಡಿ. ನಂತರ ಪುಡಿ ಮಾಡಿಟ್ಟ ಪೂರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಸು ಬಿಸಿ ಇರುವಾಗಲೇ ಉಂಡೆ ಕಟ್ಟಿಕೊಳ್ಳಿ.

ಡ್ರೈ ಫ್ರೂಟ್ಸ್ ಲಾಡು

ಬೇಕಾಗುವ ಸಾಮಗ್ರಿಗಳು: ಖರ್ಜೂರ – ಎರಡು ಕಪ್ (ಬೀಜ ತೆಗೆದಿಟ್ಟದ್ದು), ಗೋಡಂಬಿ, ದ್ರಾಕ್ಷಿ ಹಾಗೂ ಬಾದಾಮಿ – ಒಂದು ಕಪ್‌, ತುಪ್ಪ – ನಾಲ್ಕು ಚಮಚ.

ತಯಾರಿಸುವ ವಿಧಾನ: ಖರ್ಜೂರದ ಬೀಜ ತೆಗೆದು ಸಣ್ಣಗೆ ತುಂಡು ಮಾಡಿಕೊಳ್ಳಿ ಅಥವಾ ಮಿಕ್ಸಿಯಲ್ಲಿ ನೀರು ಹಾಕದೆ ಪುಡಿಮಾಡಿಕೊಳ್ಳಿ. ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ, ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಹುರಿಯಿರಿ. ನಂತರ ಅದಕ್ಕೆ ಖರ್ಜೂರವನ್ನು ಸೇರಿಸಿ ಹುರಿಯಿರಿ. ಬೆಚ್ಚಗೆ ಇರುವಾಗಲೇ ಕೈಗೆ ತುಪ್ಪ ಸವರಿಕೊಂಡು ಉಂಡೆ ಮಾಡಿ. ಡ್ರೈ ಫ್ರೂಟ್ಸ್ ಉಂಡೆ ಬಾಯಿಗೆ ಸಿಹಿಯೊಂದಿಗೆ ಆರೋಗ್ಯಕ್ಕೂ ಉತ್ತಮ.

ಓಟ್ಸ್ ಲಾಡು

ಬೇಕಾಗುವ ಸಾಮಗ್ರಿಗಳು: ಓಟ್ಸ್ – ಎರಡು ಕಪ್, ಬೆಲ್ಲ – ಒಂದೂವರೆ ಕಪ್, ತೆಂಗಿನತುರಿ – ಅರ್ಧ ಕಪ್‌, ಗೋಡಂಬಿ, ದ್ರಾಕ್ಷಿ – ಸ್ವಲ್ಪ, ತುಪ್ಪ – ನಾಲ್ಕು ಚಮಚ, ಏಲಕ್ಕಿ – ಸ್ವಲ್ಪ

ತಯಾರಿಸುವ ವಿಧಾನ; ಎರಡು ಚಮಚ ತುಪ್ಪ ಹಾಕಿ ಓಟ್ಸ್‌ ಅನ್ನು ಹುರಿದುಕೊಳ್ಳಿ.ಬಾಣಲೆಯಲ್ಲಿ ಬೆಲ್ಲದ ಪುಡಿಗೆ ನೀರು ಸೇರಿಸಿ ಪಾಕ ಮಾಡಿಕೊಳ್ಳಿ. ಬೆಲ್ಲದ ಪಾಕ ತಯಾರಾದಾಗ ತೆಂಗಿನತುರಿ ಹಾಕಿ. ಗೋಡಂಬಿ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಿ.ಏಲಕ್ಕಿ ಪುಡಿಯನ್ನೂ ಸೇರಿಸಿ. ನಂತರ ಓಟ್ಸ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಂಡೆ ಮಾಡಿದರೆ ಓಟ್ಸ್ ಲಾಡು ರೆಡಿ.

ಕೋಕೋನಟ್ ಲಾಡು

ಬೇಕಾಗುವ ಸಾಮಗ್ರಿಗಳು: ತೆಂಗಿನತುರಿ – ಮೂರು ಕಪ್(ಬಿಳಿ ಭಾಗ ಮಾತ್ರ), ಸಕ್ಕರೆ – ಎರಡೂವರೆ ಕಪ್‌, ಹಾಲು – ಅರ್ಧ ಕಪ್, ಏಲಕ್ಕಿ – ಸ್ವಲ್ಪ.

ತಯಾರಿಸುವ ವಿಧಾನ: ತೆಂಗಿನತುರಿಯನ್ನು ಸ್ವಲ್ಪ ಹುರಿದುಕೊಳ್ಳಿ. ಆರಿದ ಬಳಿಕ ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿಕೊಳ್ಳಿ. ನಂತರ ಬಾಣಲೆಗೆ ಹಾಲು ಹಾಕಿ, ತೆಂಗಿನತುರಿ ಹಾಕಿ ಹುರಿಯಿರಿ. ಹಾಲಿನ ಅಂಶ ಆರುವವರೆಗೆ ಹುರಿಯಿರಿ. ನಂತರ ಸಕ್ಕರೆ ಹಾಕಿ. ಕೈ ಬಿಡದೆ ಮಗುಚುತ್ತಾ ಇರಿ. ಏಲಕ್ಕಿ ಪುಡಿಯನ್ನು ಹಾಕಿ. ನೀರು ಆರುತ್ತಾ ಬಂದಾಗ ಒಂದು ಚಮಚ ತುಪ್ಪ ಹಾಕಿ.ಆರಿದ ಬಳಿಕ ಉಂಡೆ ಮಾಡಿಕೊಳ್ಳಿ.

ಗೋಧಿಹುಡಿ ಲಾಡು

ಬೇಕಾಗುವ ಸಾಮಗ್ರಿಗಳು: ಗೋಧಿಹುಡಿ – ಎರಡು ಕಪ್, ಸಕ್ಕರೆ – ಎರಡು ಕಪ್‌, ಏಲಕ್ಕಿ – ಸ್ವಲ್ಪ, ತುಪ್ಪ – ಒಂದು ಕಪ್
ತಯಾರಿಸುವ ವಿಧಾನ: ಗೋಧಿಹುಡಿಯನ್ನು ತುಪ್ಪ ಹಾಕದೆ ಸ್ವಲ್ಪ ಹುರಿದುಕೊಳ್ಳಿ. ಮಿಕ್ಸಿಯಲ್ಲಿ ಸಕ್ಕರೆ ಹಾಗೂ ಏಲಕ್ಕಿಯನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಹುರಿದ ಗೋಧಿಹುಡಿ ಆರಿದ ಬಳಿಕ ಸಕ್ಕರೆಪುಡಿ ಸೇರಿಸಿ ಮಿಕ್ಸ್ ಮಾಡಿ. ಸ್ವಲ್ಪಸ್ವಲ್ಪವೇ ತುಪ್ಪ ಹಾಕುತ್ತಾ ಉಂಡೆ ಮಾಡಿಕೊಳ್ಳಿ. ಎಲ್ಲಾ ತುಪ್ಪವನ್ನು ಒಟ್ಟಿಗೆ ಹಾಕಬೇಡಿ. ನಂತರ ಉಂಡೆಗಳನ್ನು ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಟ್ಟು ಒಂದು ಗಂಟೆಯ ಬಳಿಕ ಹೊರ ತೆಗೆದರೆ ಲಾಡು ಗಟ್ಟಿಯಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.