ಲತಾ ಶೆಟ್ಟಿ
ಅಡುಗೆಯನ್ನೇನೋ ಮಾಡಿದ್ದಾಯಿತು; ಇನ್ನು ಈ ಅಡುಗೆಮನೆಯನ್ನು ಕ್ಲೀನ್ ಮಾಡುವುದು ಹೇಗಪ್ಪಾ, ಅಯ್ಯೋ... ಇಷ್ಟೊಂದು ಬೆಳ್ಳುಳ್ಳಿ ಸುಲಿಬೇಕಲ್ಲ; ಎಷ್ಟೊತ್ತಾಗುತ್ತೋ ಏನೊ, ಸಿಂಕ್‌ನಲ್ಲಿ ಯಾವಾಗ್ಲೂ ಪಾಚಿ ಕಟ್ಟಿಕೊಳ್ಳುತ್ತೆ; ಶುಚಿಯಾಗಿಡೋದು ಹೇಗೆ? ಟೊಮೆಟೊ ಬೇಗ ಹಾಳಾಗುತ್ತೆ, ಫ್ರೆಷ್ ಆಗಿಡಲು ಏನ್ ಮಾಡ್ಬೇಕು, ತೆಂಗಿನಕಾಯಿ ಮಿಕ್ಕಿದೆ, ಹಾಳಾಗದಂತೆ ಇಡೋದು ಹೇಗೆ?
ಚಪಾತಿ ಹೇಗೆ ಲಟ್ಟಿಸಿದ್ರೂ ಒರಟಾಗೇ ಇರುತ್ತೆ, ಅದು ಮೃದುವಾಗಿ ಬರುವಂತೆ ಮಾಡೋದು ಹೇಗೆ? ಚಳಿಗಾಲದಲ್ಲಿ ದೋಸೆ ಹಿಟ್ಟು ಉಬ್ಬಿ ಬರೋದೇ ಇಲ್ವಲ್ಲ...
ಅಡುಗೆ ಮನೆಯೆಂಬೋ ‘ಅರಮನೆ’ಯಲ್ಲಿ (ಕೆಲವರಿಗೆ ಅದು ‘ಸೆರೆಮನೆ’ಯಂತೆಯೂ ಭಾಸವಾಗಬಹುದು!) ಪಾಕ ತಯಾರಿಗೂ ಹೊರತಾದ ಇಂತಹ ಅನೇಕ ಸಂಗತಿಗಳು ಹೆಂಗಳೆಯರನ್ನು ನಿತ್ಯ ಕಾಡುತ್ತವೆ. ಉದರದ ಹಸಿವು ನೀಗಿಸಲು ಏನಾದರೊಂದು ಅಡುಗೆ ಮಾಡಿಟ್ಟರಷ್ಟೇ ಸಾಕೆ? ಇಲ್ಲ, ಅದರಾಚೆಗೂ ತಾನಾಗೇ ಒದಗಿಬರುವ ಕೆಲಸಗಳನ್ನು ಅಚ್ಚುಕಟ್ಟಾಗಿ, ಅಲ್ಪ ಸಮಯದಲ್ಲೇ ಮಾಡಿ ಮುಗಿಸುವ ನಿತ್ಯದ ಸವಾಲು ಗೃಹಿಣಿಯದ್ದು. ಇಂತಹ ಸಣ್ಣ ಸಣ್ಣ ಸಂಗತಿಗಳಿಗೂ ಕನ್ನಡಿ ಹಿಡಿದು, ಫಟಾಫಟ್ ಎಂದು ಅಡುಗೆ ಮಾಡಿ ಮುಗಿಸೋಣ ಎನ್ನುತ್ತಾರೆ ‘ಅಮ್ಮೀಸ್ ಕುಕರಿ’ ಯೂಟ್ಯೂಬ್ ಚಾನೆಲ್‌ನ ಲತಾ ಶೆಟ್ಟಿ.
‘ಅಡುಗೆ’ ಒಂದು ಕಷ್ಟದ ಕೆಲಸ ಎಂದು ಮೂಗು ಮುರಿಯುವವರಿಗೆ, ದಿನವಿಡೀ ಅಡುಗೆ ಮನೆಯಲ್ಲೇ ಠಿಕಾಣಿ ಹೂಡುವವರಿಗೆ ಸುಲಭದಲ್ಲಿ, ರುಚಿಕಟ್ಟಾಗಿ ಪಾಕ ತಯಾರಿಸುವ ವಿಧಾನವನ್ನು ಹೇಳಿಕೊಡುತ್ತಲೇ ಅಡುಗೆಮನೆಯ ಇತರ ಕೆಲಸಗಳನ್ನು ಕರಗತ ಮಾಡಿಕೊಳ್ಳುವ ಗುಟ್ಟನ್ನೂ ರಟ್ಟು ಮಾಡುತ್ತಾರೆ ಲತಾ. ಜೊತೆಗೆ, ಅಡುಗೆ ಮನೆಗೇ ಅಂಟಿಕೊಂಡು ತಮ್ಮ ಸೌಂದರ್ಯಪ್ರಜ್ಞೆಯನ್ನೇ ಮರೆತ ವನಿತೆಯರಿಗೆ ಮನೆಯಲ್ಲೇ ಸೌಂದರ್ಯವನ್ನುಇಮ್ಮಡಿಗೊಳಿಸಿಕೊಳ್ಳುವ ಕಿವಿಮಾತಿಗೂ ದನಿಯಾಗುತ್ತಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿಕೊಂಡೇ ಯೂಟ್ಯೂಬ್ ಚಾನೆಲ್ ನಿರ್ವಹಿಸುತ್ತಿರುವ ಲತಾ, ಉದ್ಯೋಗಸ್ಥ ಹೆಣ್ಣುಮಕ್ಕಳ ಧಾವಂತದ ಬದುಕನ್ನು ಸ್ವತಃ ಅನುಭವಿಸಿದವರು. ಅಂತಹ ಮಿತಿಗಳನ್ನು ಮೀರಿ ಬೆಳೆಯಬಯಸುವ ಹೆಣ್ಣುಮಕ್ಕಳಿಗಾಗಿ ಬಹಳಷ್ಟು ಸಲಹೆಗಳು ಅವರ ಬಳಿ ಇವೆ.
‘ಹೆಣ್ಣುಮಕ್ಕಳು ಅಡುಗೆ ಮನೆಗೇ ಸೀಮಿತವಾಗಬಾರದು. ಅದರಾಚೆಗೂ ಆಕೆಗೊಂದು ಪ್ರಪಂಚವಿದೆ. ಅದನ್ನು ಆಕೆಯೇ ರೂಪಿಸಿಕೊಳ್ಳಬೇಕು. ಅಡುಗೆ ಮನೆಯ ಕೆಲಸ ಆಕೆಗೆ ಸುಲಭ ಎನಿಸಿದರೆ ಅಲ್ಲಿಂದ ಬೇಗ ಹೊರಬರಲು ಸಾಧ್ಯ. ಹಾಗಾಗಿಯೇ ಅಲ್ಲಿ ಕಾಡುವ ಸಣ್ಣಪುಟ್ಟ ಸಮಸ್ಯೆಗಳನ್ನೂ ಒರೆಗೆ ಹಚ್ಚಿ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದೇನೆ’ ಎನ್ನುವ ಅವರು, 5 ಲಕ್ಷಕ್ಕೂ ಹೆಚ್ಚು ಪಾಕಪ್ರಿಯರನ್ನು ತಮ್ಮ ಚಾನೆಲ್‌ನತ್ತ ಸೆಳೆದಿದ್ದಾರೆ. ಅವರು ಕೊಡುವ ಸಣ್ಣ ಸಣ್ಣ ಟಿಪ್ಸ್‌ಗಳ ವಿಡಿಯೊಗಳು 9 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಲತಾ ಶೆಟ್ಟಿ, ತುಳುನಾಡಿನ ಸಸ್ಯಾಹಾರ, ಮಾಂಸಾಹಾರದ ಅಡುಗೆಗಳ ತಯಾರಿಯಲ್ಲಿ ಸಿದ್ಧಹಸ್ತರು. ಕರಾವಳಿ ಭಾಗದ ಸಾಂಪ್ರದಾಯಿಕ ಹಾಗೂ ಸಮಕಾಲೀನ ತಿನಿಸುಗಳಲ್ಲಿ, ಮಾಡಲು ಕಷ್ಟ ಎನಿಸುವಂತಹವನ್ನು ಸರಳವಾದ ರೀತಿಯಲ್ಲಿ ಇಷ್ಟಪಟ್ಟು ಮಾಡುವಂತೆ ಹೇಳಿಕೊಡುವ ಇರಾದೆಯನ್ನು ತಮ್ಮ ಚಾನೆಲ್‌ನಲ್ಲಿರುವಸ್ವವಿವರದಲ್ಲಿ ಉಲ್ಲೇಖಿಸಿದ್ದಾರೆ. ಕನ್ನಡ, ತುಳು, ಕುಂದಾಪುರ ಕನ್ನಡ ಶೈಲಿಯಲ್ಲಿ ಹೇಳಿಕೊಡುವುದು ಅವರ ಚಾನೆಲ್‌ನ ವಿಶೇಷ.
ಲತಾ ಅವರು ತಯಾರಿಸಿರುವ ತರಹೇವಾರಿ ಚಪಾತಿ, ದೋಸೆಗಳು ಅವರ ಪ್ರಯೋಗಶೀಲತೆಗೆ ನಿದರ್ಶನದಂತಿವೆ. ಹಿಟ್ಟನ್ನು ಹೇಗೆ ಕಲಸಿದರೂ ಎಷ್ಟು ನಾದಿದರೂ ಚಪಾತಿ ಮೃದುವಾಗಿ ಬಾರದು ಎನ್ನುವವರಿಗೆ ಲತಾ ಹೇಳುವುದು ಹೀಗೆ: ಚಪಾತಿ ಹಿಟ್ಟಿಗೆ ಉಗುರು ಬೆಚ್ಚಗಿನ ನೀರು, ಸ್ವಲ್ಪ ಹಾಲು ಅಥವಾ ಮೊಸರು ಹಾಕಿ ಕಲಸಿ ಕೊನೆಯಲ್ಲಿ ಎಣ್ಣೆ ಸವರಿ ಇಡಬೇಕು. ಲಟ್ಟಿಸುವಾಗ ಒತ್ತಿ ಲಟ್ಟಿಸದೆ ಹಗೂರಕ್ಕೆ ಉಜ್ಜಬೇಕು.
ಮಸಾಲ ಚಪಾತಿ, ಈರುಳ್ಳಿ ಮಸಾಲ ಚಪಾತಿ, ಎಂಟು ಪದರದ ಚಪಾತಿ, ಮಸಾಲ ಗೋಧಿ ದೋಸೆ, ಟೊಮೆಟೊ ಮಸಾಲ ಗೋಧಿ ದೋಸೆ, ಈರುಳ್ಳಿ ಗೋಧಿ ದೋಸೆ, ಈರುಳ್ಳಿ– ಮೆಂತೆ– ಬೆಲ್ಲದ ದೋಸೆ... ಹೀಗೆ ಗೋಧಿ ಹಿಟ್ಟು ಅವರ ಪಾಕ ಪ್ರಯೋಗಕ್ಕೆ ಹಲವು ಬಗೆಯಲ್ಲಿ ಒಡ್ಡಿಕೊಂಡಿದೆ. ಮಂಗಳೂರು ಶೈಲಿಯ ಕೋಳಿ ಸಾರು, ಚಿಕನ್ ಸುಕ್ಕ, ಫಿಷ್ ತವಾ ಫ್ರೈ, ಕುಡ್ಲ ಫಿಷ್ ಫ್ರೈ, ಬಂಗುಡೆ ಮೀನು ಸಾರು, ತಂದೂರಿ ಚಿಕನ್, ಮಂಗಳೂರು ಕೋರಿ ಗಸ್ಸಿ, ಚಿಕನ್ ಘೀ ರೋಸ್ಟ್, ಘಮ ಘಮ ಬಿರಿಯಾನಿ... ಹೀಗೆ ತುಳುನಾಡಿನ ಸಾಂಪ್ರದಾಯಿಕ ಮಾಂಸಾಹಾರದ ಜೊತೆಗೆ, ಇದಕ್ಕೆ ಬೇಕಾಗುವ ಮಸಾಲ ಪುಡಿ ತಯಾರಿಸಿಕೊಳ್ಳುವುದನ್ನೂ ಹೇಳಿಕೊಟ್ಟಿದ್ದಾರೆ.
ಅಡುಗೆಗೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದೆಂದರೆ ಬಹುತೇಕರಿಗೆ ರೇಜಿಗೆ. ಮೊದಲು ಬೆಳ್ಳುಳ್ಳಿಯಲ್ಲಿನ ತೆಳು ಪದರವನ್ನು ತೆಗೆದು, ಎಸಳುಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ನಾಲ್ಕೈದು ನಿಮಿಷ ನೆನೆಸಿಟ್ಟರೆ, ಸಿಪ್ಪೆಯನ್ನು ಸುಲಭದಲ್ಲಿ ಬೇರ್ಪಡಿಸಬಹುದು. ಸಾಂಬಾರ್‌ಗೆ ಉಪ್ಪು ಹೆಚ್ಚಾದರೆ ಎರಡು ಚಮಚ ಅಕ್ಕಿಹಿಟ್ಟು ಅಥವಾ ಹುರಿಗಡಲೆ ಹಿಟ್ಟನ್ನು ನೀರಲ್ಲಿ ಕಲಸಿ ಹಾಕಿದರೆ ಉಪ್ಪಿನ ಪ್ರಮಾಣ ಕಡಿಮೆಯಾಗುತ್ತದೆ. ವಿನೆಗರ್ ಅಥವಾ ನಿಂಬೆರಸ, ಅಡುಗೆ ಸೋಡ, ಉಪ್ಪು ಬೆರೆಸಿ ಕಲಸಿ ಗ್ಯಾಸ್ ಕಟ್ಟೆ, ಟೈಲ್ಸ್‌ಗೆ ಸ್ಪ್ರೇ ಮಾಡಿ ಬಟ್ಟೆಯಲ್ಲಿ ಒರೆಸಿದರೆ ಅವು ಫಳಫಳ ಹೊಳೆಯುತ್ತವೆ.
ಹಾಗೇ ಮುಖ ಕಾಂತಿಯುತವಾಗಿರಲು, ಕೂದಲು ಉದುರುವಿಕೆ ತಡೆಯಲು, ಮುಖದಲ್ಲಿನ ಕಪ್ಪುಕಲೆ, ಕಣ್ಣಿನ ಸುತ್ತ ಕಪ್ಪಗಾಗಿರುವುದನ್ನು ಸರಿಪಡಿಸಲು... ಹೀಗೆ ಲಲನೆಯರ ಸೌಂದರ್ಯವರ್ಧನೆಗೆ ಪೂರಕವಾದ ನಾನಾ ಬಗೆಯ ಟಿಪ್ಸ್‌ಗಳು ಅವರ ಬಳಿ ಇವೆ.
ಅಲ್ಪ ಸಮಯದಲ್ಲಿ, ಕಡಿಮೆ ಪದಾರ್ಥ ಬಳಸಿ ಹೋಟೆಲ್ ಶೈಲಿಯಲ್ಲಿ ಮನೆಯಲ್ಲೇ ತಂದೂರಿ ಸ್ಟೈಲ್ ಚಿಕನ್ ಫ್ರೈ ಮಾಡಿ ಎನ್ನುತ್ತಾರೆ ಲತಾ ಶೆಟ್ಟಿ.
ಅರ್ಧ ಕೆ.ಜಿ. ಚಿಕನ್ ತಯಾರಿಸಲು: ಐದಾರು ಹಸಿ ಮೆಣಸಿನಕಾಯಿ, ಐದಾರು ಎಸಳು ಬೆಳ್ಳುಳ್ಳಿ, ಒಂದು ಇಂಚಷ್ಟು ಶುಂಠಿ, ಸ್ವಲ್ಪ ಪುದಿನ, ಕೊತ್ತಂಬರಿ ಸೊಪ್ಪು ಇದಷ್ಟನ್ನೂ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್ ಅನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ 3–4 ಚಮಚ ಮೊಸರು, ಕಾಳು ಮೆಣಸಿನ ಪುಡಿ, ಗರಂ ಮಸಾಲಾ, ಚಿಕನ್ ಮಸಾಲಾ ಪುಡಿ, ಜೀರಿಗೆ ಪುಡಿ, ದನಿಯಾ ಪುಡಿ, ಅರಿಶಿನ ಪುಡಿ, ಖಾರದ ಪುಡಿ ಹಾಗೂ ಉಪ್ಪು (ಎಲ್ಲವೂ ಒಂದೊಂದು ಚಮಚ), ಎರಡು ಚಮಚ ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಕಲೆಸಬೇಕು.
ಅದಕ್ಕೆ ಚೆನ್ನಾಗಿ ತೊಳೆದಿರುವ ಚಿಕನ್ ಅನ್ನು ನೀರಿನ ಪಸೆ ಇಲ್ಲದಂತೆ ಮಾಡಿ ಮಸಾಲೆಗೆ ಹಾಕಿ ಕೈಯಿಂದ ಚೆನ್ನಾಗಿ ಕಲಸಿ 15ರಿಂದ 30 ನಿಮಿಷ ಹಾಗೇ ಬಿಡಬೇಕು. ಬಳಿಕ ಬಾಣಲೆಯಲ್ಲಿ ತುಪ್ಪ ಅಥವಾ ಬೆಣ್ಣೆ ಹಾಕಿ ಕಲೆಸಿಟ್ಟಿರುವ ಚಿಕನ್ ಮಸಾಲ ಹಾಕಬೇಕು. 4–5 ನಿಮಿಷ ತಾಟು ಮುಚ್ಚಿ ಬೇಯಿಸಿ, ಮಗುಚಿ ಮತ್ತೆ ಬೇಯಿಸಬೇಕು. ನೀರಿನ ಪಸೆ ಇಂಗುವವರೆಗೆ ರೋಸ್ಟ್ ಮಾಡಿದರೆ ತಂದೂರಿ ಸ್ಟೈಲ್ ಚಿಕನ್ ಡ್ರೈ ಸವಿಯಲು ಸಿದ್ಧ.
ತಂದೂರಿ ಸ್ಟೈಲ್ ಚಿಕನ್ ಡ್ರೈ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.