ಈಗಿನ ಒತ್ತಡದ ಜೀವನಶೈಲಿಯಲ್ಲಿ, ಕೆಲಸ ಮುಗಿಸಿ ಮನೆಗೆ ಬಂದಾಗ ಪ್ರತಿಯೊಬ್ಬರಿಗೂ ಮೊದಲು ಬೇಕೆನಿಸುವುದು ಮನಸ್ಸಿಗೆ ಮುದ ನೀಡುವ ಬಿಸಿಬಿಸಿಯಾದ ಪಾನೀಯ. ಆದರೆ ಅದು ಟೀ, ಕಾಫಿಯ ಬದಲು ಆರೋಗ್ಯಕರ ಪಾನೀಯವಾಗಿದ್ದರೆ ಮನಸ್ಸಿಗೆ ಮತ್ತು ಮೈಗೆ ಎರಡಕ್ಕೂ ಉತ್ತಮವಾಗಿರುತ್ತದೆ. ಅಂತಹ ಕೆಲವು ಪಾನೀಯಗಳಲ್ಲಿ ನಿಂಬೆಹುಲ್ಲಿನ ಟೀ ಒಂದು. ನಮ್ಮ ಮನೆಯ ಕೈತೋಟದಲ್ಲಿ ಬೆಳೆಸಿರುವ ನಿಂಬೆಹುಲ್ಲು, ಮನೆಯವರೆಲ್ಲರೂ ತಮ್ಮ ದಿನಚರಿಯನ್ನು ಉತ್ತಮ ಸ್ವಾದದೊಂದಿಗೆ ಪ್ರಾರಂಭಿಸುವಂತೆ ಮಾಡಿದೆ. ಬಲ್ಲವರು ಹೇಳುವಂತೆ, ನಿಂಬೆಹುಲ್ಲಿನ ಟೀ ಉಪಯೋಗಗಳು ಹೀಗಿವೆ:
ಜೀರ್ಣಕ್ರಿಯೆ ಸುಧಾರಣೆ: ಅಜೀರ್ಣ, ಉಬ್ಬಸ, ಅಸ್ವಸ್ಥತೆ ಕಡಿಮೆ ಮಾಡುತ್ತದೆ.
ರಕ್ತದ ಒತ್ತಡ ನಿಯಂತ್ರಣ– ನಿಯಮಿತವಾಗಿ ಸೇವಿಸಿದರೆ ಬಿ.ಪಿ ನಿಯಂತ್ರಣಕ್ಕೆ ಸಹಾಯಕ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ– ವಿಟಮಿನ್ ಸಿ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಇರುವುದರಿಂದ ಜ್ವರ, ಶೀತ ತಡೆಯುತ್ತದೆ.
ಮಾನಸಿಕ ಶಾಂತಿ– ಒತ್ತಡ, ಆತಂಕ ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ.
ತೂಕ ನಿಯಂತ್ರಣ: ಕೊಬ್ಬು ಕರಗಿಸಲು ಹಾಗೂ ಮೆಟಬಾಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ.
ಚರ್ಮ ಮತ್ತು ಕೂದಲು ಆರೋಗ್ಯ– ರಕ್ತ ಶುದ್ಧಿಯಾಗುವುದರಿಂದ ಚರ್ಮ ತಾಜಾ ಆಗಿ ಕಾಣಿಸುತ್ತದೆ, ಕೂದಲು ಉದುರುವಿಕೆ ಕಡಿಮೆ ಆಗುತ್ತದೆ.
ವಿಷನಾಶಕ: ದೇಹದ ಅಜೀರ್ಣ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಗಮನಿಸಿ: ಗರ್ಭಿಣಿಯರು, ಹಾಲೂಡಿಸುವ ತಾಯಂದಿರು ಅಥವಾ ದೀರ್ಘಕಾಲದ ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆಯಿಲ್ಲದೆ ಹೆಚ್ಚು ಸೇವಿಸಬಾರದು. ಇತರರು ದಿನಕ್ಕೆ 1–2 ಕಪ್ ಸಾಕು, ಹೆಚ್ಚು ಸೇವಿಸಿದರೆ ತಲೆನೋವು ಅಥವಾ ಹೊಟ್ಟೆ ತೊಂದರೆ ಉಂಟಾಗಬಹುದು.
ಬೇಕಾಗುವ ಸಾಮಗ್ರಿ
* ನಿಂಬೆಹುಲ್ಲು– ನಾಲ್ಕೈದು ತಾಜಾ ಎಳೆಗಳು
* ನೀರು– 2 ಕಪ್
* ಜೇನು/ಬೆಲ್ಲ– ರುಚಿಗೆ ತಕ್ಕಂತೆ
* ಸ್ವಲ್ಪ ಶುಂಠಿ ಅಥವಾ ಏಲಕ್ಕಿ
ತಯಾರಿಸುವ ವಿಧಾನ
ನೀರನ್ನು ಒಂದು ಪಾತ್ರೆಯಲ್ಲಿ ಕುದಿಸಬೇಕು. ಅದಕ್ಕೆ ನಿಂಬೆಹುಲ್ಲಿನ ಎಲೆಗಳನ್ನು ಚೂರು ಮಾಡಿ ಹಾಕಿ. ಬೇಕಿದ್ದರೆ ಸ್ವಲ್ಪ ಶುಂಠಿ ಅಥವಾ ಏಲಕ್ಕಿ ಸೇರಿಸಬಹುದು. 5–7 ನಿಮಿಷ ಕುದಿಸಿ. ಇಷ್ಟವಾದರೆ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಬಿಸಿಯಾಗಿ ಇರುವಾಗಲೇ ಕುಡಿಯಿರಿ. ಬೆಳಿಗ್ಗೆ ಮತ್ತು ಸಂಜೆ ಕುಡಿದರೆ ಶರೀರ ಹಗುರವಾಗುತ್ತದೆ, ಮನಸ್ಸು ಚುರುಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.