ADVERTISEMENT

Makar Sankranti Special: ಸಂಕ್ರಾಂತಿಯ ಸುಗ್ಗಿಗೆ ಹುಗ್ಗಿಯ ಸಿಹಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 19:30 IST
Last Updated 14 ಜನವರಿ 2022, 19:30 IST
   

ಬಾಳೆಹಣ್ಣಿನ ಪಾಯಸ

ಬೇಕಾಗುವ ಸಾಮಗ್ರಿಗಳು: ಪಚ್ಚ ಬಾಳೆ – 2, ಹೆಸರುಬೇಳೆ – ಅರ್ಧಕಪ್, ತುಪ್ಪ –2ಟೇಬಲ್ ಚಮಚ, ಗೋಡಂಬಿ– 10ರಿಂದ 15, ಹಸಿ ತೆಂಗಿನಕಾಯಿ ಚೂರು – 2ಟೇಬಲ್ ಚಮಚ (ಚಿಕ್ಕದಾಗಿ ಕತ್ತರಿಸಿದ್ದು) ಪುಡಿ ಬೆಲ್ಲ – 1ಕಪ್, ಗಟ್ಟಿ ತೆಂಗಿನಹಾಲು – 1ಕಪ್, ಏಲಕ್ಕಿ ಪುಡಿ – ಅರ್ಧಟೀ ಚಮಚ

ತಯಾರಿಸುವ ವಿಧಾನ: ಬಾಳೆಹಣ್ಣಿನ ಸಿಪ್ಪೆ ತೆಗೆದು ಅರ್ಧ ಇಂಚಿಗೆ ಕತ್ತರಿಸಿಕೊಳ್ಳಿ. ಹೆಸರುಬೇಳೆಯನ್ನು ಪರಿಮಳ ಬರುವರೆಗೆ ಹುರಿದುಕೊಳ್ಳಿ. ಬಳಿಕ 3 ಕಪ್ ನೀರನ್ನು ಹಾಕಿ ಮೆತ್ತಗಾಗುವರೆಗೆ ಬೇಯಿಸಿ. ಬಾಣಲೆಗೆ ತುಪ್ಪ ಹಾಕಿ ಗೋಡಂಬಿಯನ್ನು ಹುರಿದು ತೆಗೆದಿಡಿ. ಅದೇ ತುಪ್ಪದಲ್ಲಿ ತೆಂಗಿನಚೂರನ್ನು ಹಾಕಿ ಬಣ್ಣ ಬದಲಾಗುವರೆಗೆ ಹುರಿದು ತೆಗೆದಿಡಿ. ಕತ್ತರಿಸಿಕೊಂಡ ಬಾಳೆಹಣ್ಣನ್ನು ಉಳಿದ ತುಪ್ಪದಲ್ಲಿ ಹಾಕಿ. ಬಣ್ಣ ಬದಲಾಗುವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಬೆಲ್ಲವನ್ನು ಬಾಣಲೆಗೆ ಹಾಕಿ ಅರ್ಧ ಕಪ್ ನೀರನ್ನು ಸೇರಿಸಿ. ಬೆಲ್ಲ ಕರಗುವರೆಗೆ ಕುದಿಸಿ. ಬೆಂದ ಬೇಳೆಗೆ ಬಾಳೆಹಣ್ಣನ್ನು ಸೇರಿಸಿ ಮಿಶ್ರಣ ಮಾಡಿ. ಕರಗಿಸಿಕೊಂಡ ಬೆಲ್ಲವನ್ನು ಸೋಸಿಕೊಂಡು ಹಾಕಿ. ಒಂದು ನಿಮಿಷ ಕುದಿ ಬರಲಿ. ಬಳಿಕ ತೆಂಗಿನ ಹಾಲನ್ನು ಹಾಕಿ ಒಂದು ನಿಮಿಷ ಕುದಿಸಿ. ಹುರಿದ ಗೋಡಂಬಿ, ತೆಂಗಿನಚೂರು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ರುಚಿಕರವಾದ ಮತ್ತು ಆರೋಗ್ಯಕರವಾದ ಬಾಳೆಹಣ್ಣಿನ ಪಾಯಸ ಸವಿಯಲು ಸಿದ್ಧ.

ADVERTISEMENT

ಗೋಧಿ ನುಚ್ಚಿನ ಸಿಹಿ ಪೊಂಗಲ್

ಬೇಕಾಗುವ ಸಾಮಗ್ರಿಗಳು: ಗೋಧಿ ನುಚ್ಚು/ವಡಕಲು ಗೋಧಿ – 1 ಕಪ್, ಹೆಸರುಬೇಳೆ – 1/4 ಕಪ್, ನೀರು – 3ಕಪ್, ಹಾಲು – 1/2 ಲೀಟರ್‌, ಬೆಲ್ಲ – 1 ಕಪ್, ತುಪ್ಪ – 1/4 ಕಪ್, ಒಣಕೊಬ್ಬರಿ – 1/4 ಕಪ್, ಲವಂಗದ ಪುಡಿ – 1/4ಟೀ ಚಮಚ, ಏಲಕ್ಕಿ ಪುಡಿ – 1/2ಟೀ ಚಮಚ, ಗೋಡಂಬಿ, ದ್ರಾಕ್ಷಿ ಸ್ವಲ್ಪ, ಪಚ್ಚ ಕರ್ಪೂರದ ಪುಡಿ ಚಿಟಿಕೆ, ಉಪ್ಪು ಚಿಟಿಕೆ.

ತಯಾರಿಸುವ ವಿಧಾನ: ಹೆಸರುಬೇಳೆ ಮತ್ತು ಗೋಧಿನುಚ್ಚನ್ನು ಬೇರೆ ಬೇರೆಯಾಗಿ 2 ರಿಂದ 3 ನಿಮಿಷಗಳ ಕಾಲ ಹುರಿಯಿರಿ. ಬಳಿಕ ಹುರಿದ ಬೇಳೆ ಮತ್ತು ಗೋಧಿ ನುಚ್ಚನ್ನು ಕುಕ್ಕರಿನಲ್ಲಿ ಹಾಕಿ. ನೀರು ಮತ್ತು ಹಾಲನ್ನು ಸೇರಿಸಿ. 5-6 ವಿಷಲ್ ಕೂಗಿಸಿ. ಇನ್ನೊಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಕಾಲು ಕಪ್ ನೀರು ಸೇರಿಸಿ ಕುದಿಸಿ ಸೋಸಿಕೊಳ್ಳಿ. ನಂತರ ಬೆಲ್ಲದ ನೀರನ್ನು ಬೇಯಿಸಿದ ಮಿಶ್ರಣಕ್ಕೆ ಸೇರಿಸಿ. ಒಣ ಕೊಬ್ಬರಿಯನ್ನು ಸೇರಿಸಿ. ಗಟ್ಟಿಯಾಗುತ್ತಾ ಬಂದಾಗ ತುಪ್ಪವನ್ನು ಚಿಟಿಕೆ ಉಪ್ಪನ್ನು ಸೇರಿಸಿ. ಲವಂಗ, ಪಚ್ಚ ಕರ್ಪೂರದ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಕೈಬಾಣಲೆಯಲ್ಲಿ ಒಂದು ಟೀ ಚಮಚ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಈ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ತಯಾರಿಸಿ ಕೊಂಡ ಪೊಂಗಲ್‌ಗೆ ಮಿಶ್ರಣ ಮಾಡಿ. ರುಚಿಯಾದ ಗೋಧಿ ನುಚ್ಚಿನ ಸಿಹಿ ಪೊಂಗಲ್ ತಯಾರಿಸಿ ಸವಿಯಿರಿ.

ಶೇಂಗಾ ಎಳ್ಳಿನ ಉಂಡೆ

ಬೇಕಾಗುವ ಸಾಮಗ್ರಿಗಳು: ಶೇಂಗಾ ಬೀಜ – 1 ಕಪ್, ಎಳ್ಳು – ಅರ್ಧ ಕಪ್, ಗಟ್ಟಿ ಅವಲಕ್ಕಿ – ಅರ್ಧ ಕಪ್, ಒಣಕೊಬ್ಬರಿ – ಕಾಲು ಕಪ್ , ಬೆಲ್ಲ – 1 ಕಪ್ ಪುಡಿ, ಏಲಕ್ಕಿಪುಡಿ,– ಅರ್ಧ ಟೀ ಚಮಚ, ತುಪ್ಪ – 2 ಚಮಚ

ತಯಾರಿಸುವ ವಿಧಾನ: ಶೇಂಗಾವನ್ನು ಹುರಿದು ಸಿಪ್ಪೆ ತೆಗೆಯಿರಿ. ಎಳ್ಳು ಸಿಡಿಯುವರೆಗೆ ಹುರಿಯಿರಿ. ಅವಲಕ್ಕಿಯನ್ನು ಗರಿಗರಿಯಾಗುವರೆಗೆ ಹುರಿಯಿರಿ. ಒಣಕೊಬ್ಬರಿಯನ್ನು ಒಂದು ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಮಿಕ್ಸಿ ಜಾರಿಗೆ ಶೇಂಗಾ, ಎಳ್ಳು, ಅವಲಕ್ಕಿ, ಒಣಕೊಬ್ಬರಿ ಹಾಕಿ ನುಣ್ಣಗೆ ಪುಡಿ ಮಾಡಿ. ಪುಡಿ ಮಾಡಿದ ಮಿಶ್ರಣಕ್ಕೆ ಬೆಲ್ಲದಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ನುಣ್ಣಗೆ ಮಾಡಿಕೊಳ್ಳಿ. ತಯಾರಿಸಿದ ಪುಡಿಯನ್ನು ಬೌಲಿಗೆ ಹಾಕಿ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ನಿಂಬೆ ಗಾತ್ರದ ಉಂಡೆಯನ್ನು ತಯಾರಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.