ADVERTISEMENT

ನಳಪಾಕ | ವೈವಿಧ್ಯಮಯ ಈರುಳ್ಳಿ ದೋಸೆ ‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 19:30 IST
Last Updated 15 ಏಪ್ರಿಲ್ 2022, 19:30 IST
ರಾಗಿ ಈರುಳ್ಳಿ ದೋಸೆ
ರಾಗಿ ಈರುಳ್ಳಿ ದೋಸೆ   

ಸಾದಾ ಈರುಳ್ಳಿ ದೋಸೆ
ಬೇಕಾಗುವ ಸಾಮಗ್ರಿಗಳು
: ದೋಸೆಹಿಟ್ಟು, ಉಪ್ಪು - ರುಚಿಗೆ ತಕ್ಕಷ್ಟು, ಅಡುಗೆ ಸೋಡಾ - ಎರಡು ಚಿಟಿಕೆ, ಅಡುಗೆ ಎಣ್ಣೆ.

ಈರುಳ್ಳಿ ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು: ಈರುಳ್ಳಿ -3, ಚಿಟಿಕೆ ಸಾಸಿವೆ, ಕರಿಬೇವು, ಕಡಲೆಬೇಳೆ (ಬೇಕಿದ್ದವರು ಬಳಸಬಹುದು), ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಉಪ್ಪು - ಎರಡು ಚಿಟಿಕೆ, ಅಡುಗೆ ಎಣ್ಣೆ - 2 ಚಮಚ.

ತಯಾರಿಸುವ ವಿಧಾನ: ಒಗ್ಗರಣೆಗೆ ಬೇಕಾಗುವ ಪದಾರ್ಥಗಳೆಲ್ಲವನ್ನೂ ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ.‌ ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಎರಡು ಚಿಟಿಕೆ ಉಪ್ಪು ಸೇರಿಸಿ. ಸ್ಟವ್ ಆಫ್ ಮಾಡಿ. ನಂತರ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ ತಣ್ಣಗಾಗಲು ಬಿಡಿ. ದೋಸೆ ತವಾ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಹರಡಿ ತಕ್ಷಣವೇ ಈರುಳ್ಳಿ ಒಗ್ಗರಣೆಯನ್ನು ದೋಸೆಯ ಮೇಲೆ ಹರಡಿ ಸ್ವಲ್ಪ ನಿಧಾನಕ್ಕೆ ಒತ್ತಿ. ಮೇಲೊಂದು ಚಮಚ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ. ಈರುಳ್ಳಿ ದೋಸೆ ಕಾಯಿ ಚಟ್ನಿಯೊಂದಿಗೆ ಸವಿಯಲು ಕೊಡಿ.

ADVERTISEMENT

ನೆನಪಿಡಿ: ಒಗ್ಗರಣೆಗೆ ಹಸಿಮೆಣಸಿನಕಾಯಿ ಬದಲಿಗೆ ಸಾಂಬಾರಿನ ಪುಡಿ ಬೆರೆಸಿದರೆ ಮತ್ತೊಂದು ರುಚಿ ಸಿಗುತ್ತದೆ.

*

ಪಾಲಕ್ ಈರುಳ್ಳಿ ದೋಸೆ
ಬೇಕಾಗುವ ಸಾಮಗ್ರಿಗಳು:
ದೋಸೆ ಹಿಟ್ಟು, ಪಾಲಕ್ ಸೊಪ್ಪು– ಎರಡು ಹಿಡಿ, ಉಪ್ಪು - ರುಚಿಗೆ ತಕ್ಕಷ್ಟು, ಸೋಡಾ - ಎರಡು ಚಿಟಿಕೆ, ಅಡುಗೆ ಎಣ್ಣೆ.

ಈರುಳ್ಳಿ ಒಗ್ಗರಣೆ: ಸಾದಾ ಈರುಳ್ಳಿ ದೋಸೆ ರೆಸಿಪಿಯಲ್ಲಿ ನೀಡಿರುವ ಮಾಹಿತಿಯಂತೆ ಒಗ್ಗರಣೆ ಸಿದ್ಧಪಡಿಸಿಕೊಳ್ಳಿ.

ತಯಾರಿಸುವ ವಿಧಾನ: ಎರಡು ಹಿಡಿ ಪಾಲಕ್ ಸೊಪ್ಪನ್ನು ತೊಳೆದು ಸ್ವಲ್ಪ ನೀರಿನಲ್ಲಿ ಬೇಯಿಸಿಕೊಳ್ಳಿ. ತಣ್ಣಗಾದ ಪಾಲಕ್ ಸೊಪ್ಪನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಪಾಲಕ್ ಪೇಸ್ಟ್ ಅನ್ನು ದೋಸೆ ಹಿಟ್ಟಿಗೆ ಸೇರಿಸಿ, ಉಪ್ಪು, ಎರಡು ಚಿಟಿಕೆ ಸೋಡಾ ಹಾಕಿ ಕಲೆಸಿಡಿ.

ದೋಸೆ ಹೆಂಚು/ತವಾ ಮೇಲೆ ಪಾಲಕ್ ಮಿಶ್ರಿತ ದೋಸೆ ಹಿಟ್ಟು ಹರಡಿ. ಒಗ್ಗರಣೆ ಹಾಕಿದ ಈರುಳ್ಳಿ ಮಿಶ್ರಣವನ್ನು ದೋಸೆ ಹಿಟ್ಟು ಹಸಿ ಇರುವಾಗಲೇ ಹರಡಿ, ಸ್ವಲ್ಪ ಒತ್ತಿ. ಮೇಲೊಂದು ಚಮಚ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದರೆ ಪಾಲಕ್ ದೋಸೆ ಸವಿಯಲು ಸಿದ್ದ.

ಇದೇ ವಿಧಾನದಲ್ಲಿ ಪಾಲಕ್‌ ಬದಲು ಬೇರೆ ಬೇರೆ ಸೊಪ್ಪುಗಳು ಅಥವಾ ಬೀಟ್‌ರೂಟ್ ಬಳಸಿ ವಿಧವಿಧವಾದ ದೋಸೆ ತಯಾರಿಸಬಹುದು.

*

ರಾಗಿ ಈರುಳ್ಳಿ ದೋಸೆ
ಬೇಕಾಗುವ ಸಾಮಗ್ರಿಗಳು:
ರಾಗಿಹಿಟ್ಟು - 1ಕಪ್, ಉದ್ದಿನಬೇಳೆ - ಅರ್ಧ ಕಪ್, ಅವಲಕ್ಕಿ - ಕಾಲು ಕಪ್, ಮೆಂತ್ಯೆ - ಒಂದು ಚಮಚ.

ಈರುಳ್ಳಿ ಒಗ್ಗರಣೆ: ಸಾದಾ ಈರುಳ್ಳಿ ದೋಸೆ ರೆಸಿಪಿಯಲ್ಲಿ ತಿಳಿಸಿರುವಂತೆ ಒಗ್ಗರಣೆ ಸಿದ್ಧಪಡಿಸಿಕೊಳ್ಳಿ.

ತಯಾರಿಸುವ ವಿಧಾನ: ಉದ್ದಿನಬೇಳೆ, ಮೆಂತ್ಯೆಯನ್ನು 5 ತಾಸು ನೆನೆಸಿಕೊಳ್ಳಿ. ರುಬ್ಬುವ ಅರ್ಧ ಗಂಟೆ ಮೊದಲು ಅವಲಕ್ಕಿ ತೊಳೆದು ನೆನೆಸಿಡಿ. ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರಾಗಿಹಿಟ್ಟನ್ನು ಸ್ವಲ್ಪವೇ ನೀರಿನಲ್ಲಿ ಕಲೆಸಿಕೊಂಡು ರುಬ್ಬಿದ ಉದ್ದಿನಬೇಳೆ ಮಿಶ್ರಣದೊಂದಿಗೆ ಕಲೆಸಿ. ಒಂದು ರಾತ್ರಿ ಅಥವಾ 8 ತಾಸು ಹುದುಗು ಬರಲು ಬಿಡಿ.

ರಾಗಿದೋಸೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಎರಡು ಚಿಟಿಕೆ ಸೋಡಾ ಬೆರೆಸಿ ಕಾದ ಹೆಂಚು/ತವಾದ ಮೇಲೆ ಸೌಟಿನಿಂದ ಹರಡಿ. ಹಿಟ್ಟು ಹಸಿಯಿರುವಾಗಲೇ ಒಗ್ಗರಣೆ ಮಾಡಿಕೊಂಡ ಈರುಳ್ಳಿ ಮಿಶ್ರಣವನ್ನು ಹರಡಿ ಮೇಲೊಂದು ಚಮಚ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದರೆ ರಾಗಿ ಈರುಳ್ಳಿ ದೋಸೆ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.