ADVERTISEMENT

Pv Web Exclusive| ಪ್ಲಮ್‌ ಕೇಕ್‌ ಪದರಗಳ ಒಳಗೆ

ಸುಮಾ ಬಿ.
Published 19 ಡಿಸೆಂಬರ್ 2020, 7:08 IST
Last Updated 19 ಡಿಸೆಂಬರ್ 2020, 7:08 IST
ಪ್ಲಮ್‌ ಕೇಕ್‌
ಪ್ಲಮ್‌ ಕೇಕ್‌   
""
""

ಕ್ರಿಸ್‌ಮಸ್‌ ಇನ್ನೇನು ಹೊಸ್ತಿಲಲ್ಲಿದೆ. ತರಹೇವಾರಿ ಕೇಕ್‌ಗಳೂ ಆಕರ್ಷಣೀಯವಾಗಿ ಅಣಿಯಾಗುತ್ತಿವೆ. ವಯೋಮಾನದ ಹಂಗಿಲ್ಲದೆ ಎಲ್ಲರ ಬಾಯಲ್ಲೂ ನೀರೂರಿಸುವ ‘ಪ್ಲಮ್‌ ಕೇಕ್‌’ ಕ್ರಿಸ್‌ಮಸ್‌ ಆಚರಣೆಯಲ್ಲಿ ರಾಣಿಯಂತೆ ಮೆರೆಯುತ್ತದೆ. ಪ್ಲಮ್‌ ಕೇಕ್‌ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ…

***

ಬಾಯಿಗಿಡುತ್ತಿದ್ದಂತೆ ಒಂಚೂರು ಖಾರ, ಮೆಲ್ಲುತ್ತ ಹೋದಂತೆ ದ್ರಾಕ್ಷಾ ರಸದ ಘಮಲು. ಮಧ್ಯೆ ಮಧ್ಯೆ ಸಿಗುವ ಒಣಹಣ್ಣುಗಳು ಸಿಹಿ ನೀಡುತ್ತ ಮತ್ತನ್ನು ತರಿಸುತ್ತವೆ. ಇನ್ನಷ್ಟು, ಮಗದಷ್ಟು ಬೇಡುವ ಜಿಹ್ವೆಯ ಚಾಪಲ್ಯ ತಣಿಸುತ್ತ ತಣಿಸುತ್ತ ಒಂದಿಡೀ ಕೇಕ್‌ ಉದರಕ್ಕೆ ಇಳಿದಿರುತ್ತದೆ...

ADVERTISEMENT

ಕೇಕ್‌ ಪ್ರಿಯರಿಗೆ ಇದು ಯಾವ ಕೇಕ್‌ ಎಂದು ಹೇಳುವ ಅಗತ್ಯವಿಲ್ಲವೆಂದೆನಿಸುತ್ತದೆ. ಹೌದು... ಅದೇ ಪ್ಲಮ್‌ ಕೇಕ್‌.

ವಯೋಮಾನದ ಹಂಗಿಲ್ಲದೆ ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿಸುವ ‘ಕೇಕ್‌’ ಘಮಲು ಈಗ ಎಲ್ಲೆಲ್ಲೂ ಪಸರಿಸುತ್ತಿದೆ. ಕ್ರಿಸ್‌ಮಸ್‌ ಬಂತೆಂದರೆ ಕೇಕ್‌ಗಳ ಹಬ್ಬವೂ ಶುರುವಾಯಿತೆಂತಲೇ. ಯಾವುದೇ ಬಗೆಯ ಸಂಭ್ರಮವಿರಲಿ ಸಲೀಸಾಗಿ ಜಾಗ ಪಡೆಯುವ ಕೇಕ್‌, ಕ್ರಿಸ್‌ಮಸ್‌ ಎಂದರೆ ಕೇಳಬೇಕೆ. ತುಸು ಹೆಚ್ಚೇ ಗರ್ವ ಪಡೆಯುತ್ತ ಎಲ್ಲರ ಮನೆ, ಮನದಲ್ಲೂ ನಲಿದಾಡಲು ಶುರುವಿಡುತ್ತದೆ. ಅದರಲ್ಲೂ ವಿಶೇಷವಾಗಿ ‘ಪ್ಲಮ್‌ ಕೇಕ್‌’ ಕ್ರಿಸ್‌ಮಸ್‌ ಆಚರಣೆಯೊಂದಿಗೆ ಬೆರೆತುಕೊಂಡಿದೆ. ಪ್ಲಮ್‌ ಕೇಕ್‌ ಇಲ್ಲದಿದ್ದರೆ ಕ್ರಿಸ್‌ಮಸ್‌ ಆಚರಣೆ ಅಪೂರ್ಣ.

ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ವಾಲ್‌ನಟ್‌, ಪಿಸ್ತಾ, ಗೇರುಬೀಜ, ಕೆಂಪುಚೆರ‍್ರಿ, ಟೂಟಿ ಫ್ರೂಟಿ ಹೀಗೆ ಬಗೆ ಬಗೆಯ ಡ್ರೈಫ್ರೂಟ್ಸ್‌, ವೈನ್‌, ರಮ್‌ ಒಡಲಲ್ಲಿ ಹಾಕಿಕೊಂಡು ರೂಪು ತಳೆಯುವ ಪ್ಲಮ್‌ ಕೇಕ್‌ನ ರುಚಿಗೆ ಕೊನೆಮೊದಲಿಲ್ಲ. ಕ್ರಿಸ್‌ಮಸ್‌ ಸಂಭ್ರಮ ಗರಿಗೇಳುವ ಮೊದಲೇ ಕ್ರಿಶ್ವಿಯನ್ನರ ಮನೆಗಳಲ್ಲಿ ಪ್ಲಮ್‌ಕೇಕ್‌ ತಯಾರಿ ಶುರುವಾಗಿರುತ್ತದೆ. ಕೆಲವರು ವರ್ಷ, ಆರು ತಿಂಗಳು, ಎರಡು ತಿಂಗಳಿಂದಲೇ ಪ್ಲಮ್‌ ಕೇಕ್‌ ತಯಾರಿಗೆ ಸಿದ್ಧತೆ ನಡೆಸುತ್ತಾರೆ. ಡ್ರೈಫ್ರೂಟ್ಸ್‌ ಕಳಿತಷ್ಟೂ ಪ್ಲಮ್‌ಕೇಕ್‌ನ ಸ್ವಾದ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಕೆಲವರು ವರ್ಷದ ಹಿಂದೆಯೇ ಕಪ್ಪು ದ್ರಾಕ್ಷಿ, ಗೋಡಂಬಿ, ಬಾದಾಮಿ, ಆರೆಂಜ್‌ ಪೀಲ್‌, ಒಣಶುಂಠಿ, ಚೆರ‍್ರಿ ಸೇರಿದಂತೆ ಹಲವು ಒಣಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ, ವೈನ್‌ನಲ್ಲಿ ನೆನಸಿ ಇಡುತ್ತಾರೆ. ಇನ್ನು ಕೆಲವರು 45 ದಿನಗಳ ಕಾಲ ಒಣ ಹಣ್ಣುಗಳನ್ನು ವೈನ್‌, ವಿಸ್ಕಿ ಅಥವಾ ಬ್ಯ್ರಾಂಡಿಯಲ್ಲಿ ನೆನೆಸಿಡುತ್ತಾರೆ.

ಆರೋಗ್ಯ ಪೂರ್ಣ ಕೇಕ್‌

ಒಣಹಣ್ಣುಗಳಿಂದಲೇ ಜನಿಸುವ ಪ್ಲಮ್‌ ಕೇಕ್‌ ಪ್ರೊಟೀನ್‌ಗಳ ಆಗರ. ಈ ಕೇಕ್‌ನಲ್ಲಿ ಉತ್ಕರ್ಷಣ ನಿರೋಧಕ ಅಂಶ ಹೆಚ್ಚಿರುತ್ತದೆ. ಪ್ಲಮ್‌ ಕೇಕ್‌ ಸೇವನೆಯಿಂದ ಹೃದಯದ ಆರೋಗ್ಯವೂ ವೃದ್ಧಿಯಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹಿಗಳಿಗ ಆರೋಗ್ಯ ವೃದ್ಧಿಗೂ ಕೇಕ್‌ ವರದಾನ. ಹೀಗಾಗಿ, ಪೋಷಕಾಂಶಯುಕ್ತ ಈ ಕೇಕ್‌ ಅನ್ನು ವಯೋಮಾನದ, ರೋಗದ ಹಂಗಿಲ್ಲದೆ ಎಲ್ಲರೂ ಆಸ್ವಾದಿಸಬಹುದು.

‘ಚಳಿಗಾಲದ ಸಮಯದಲ್ಲಿ ದೇಹಕ್ಕೆ ಅಗ್ಯವಿರುವ ಪ್ರೊಟೀನ್‌ಗಳನ್ನು ಪ್ಲಮ್‌ ಕೇಕ್‌ ಒದಗಿಸುತ್ತದೆ. ಕ್ರಿಸ್‌ಮಸ್‌ ಜತೆಗೇ ಪ್ಲಮ್‌ ಕೇಕ್‌ ತೆಕ್ಕೆ ಹಾಕಿಕೊಂಡಿದೆ. ಸಾಂಪ್ರದಾಯ ಬದ್ಧ ಪ್ಲಮ್‌ ಕೇಕ್‌ ತಯಾರಿಸಲು ಸಾಕಷ್ಟು ತಾಳ್ಮೆ, ಶ್ರಮ ಬೇಕು. ಅಕ್ಟೋಬರ್‌ ತಿಂಗಳಿಂದಲೇ ಪ್ಲಮ್‌ ಕೇಕ್‌ ತಯಾರಿಗೆ ಸಿದ್ಧತೆ ನಡೆಸುತ್ತೇವೆ. ಆರೇಳು ಬಗೆಯ ಒಣಹಣ್ಣುಗಳನ್ನು ತಂದು, ಅದನ್ನು ಚಿಕ್ಕದಾಗಿ ಕತ್ತರಿಸಿ ರಮ್‌ನಲ್ಲಿ ನೆನಸಿ ಇಡುತ್ತೇವೆ. ಡಿಸೆಂಬರ್‌ 15ರ ವೇಳೆಗೆ ಅದನ್ನು ಕೇಕ್‌ ತಯಾರಿಕೆಗೆ ಬಳಸುತ್ತೇವೆ. ಪ್ರತಿ ವರ್ಷ ಡಿ.20ರ ವೇಳೆಗೆ ಕೇಕ್‌ ಸಂಪೂರ್ಣ ಸಿದ್ಧಗೊಳಿಸಿ ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಕ್ರಿಸ್‌ಮಸ್‌ ಹಬ್ಬದಂದು ಕೇಕ್‌ ಹೊರತೆಗೆದು ಬಳಸುತ್ತೇವೆ. ಕೇಕ್‌ ಅನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ, ಐದಾರು ತಿಂಗಳ ಕಾಲ ಬಳಸಬಹುದು. ಕೇಕ್‌ ತಯಾರಿಕೆಗೆ ಪತ್ನಿಯೂ ಜತೆಯಾಗುತ್ತಾಳೆ’ ಎನ್ನುತ್ತಾರೆ 30 ವರ್ಷಗಳಿಂದ ಮನೆಯಲ್ಲೇ ಕೇಕ್‌ ತಯಾರಿಸುತ್ತಿರುವ ದಾವಣಗೆರೆಯ ಸಬಾಸ್ಟಿನ್‌.

ಇಂಗ್ಲೆಂಡ್‌ನಲ್ಲಿ ಜನಿಸಿತು

ಪ್ಲಮ್‌ ಕೇಕ್‌ ಇಂಗ್ಲಿಷರ ಸಾಂಪ್ರದಾಯಿಕ ತಿನಿಸು. ಅದರ ಇತಿಹಾಸ ಕೆದಕುತ್ತ ಹೋದರೆ ಮಧ್ಯಕಾಲೀನ ಯುಗದ ಇಂಗ್ಲೆಂಡ್‌ಗೆ ಕರೆದೊಯ್ಯುತ್ತದೆ. ಇಂಗ್ಲಿಷರು ಕ್ರಿಸ್‌ಮಸ್‌ ಆಚರಣೆಯ ಉಪವಾಸದ ದಿನಗಳಲ್ಲಿ ಓಟ್ಸ್‌, ಒಣಗಿದ ಹಣ್ಣು, ಮಸಾಲೆ ಪದಾರ್ಥ, ಜೇನು ತುಪ್ಪ ಮತ್ತು ಮಾಂಸ ಬಳಸಿ ‘ಶ್ರೀಮಂತ ಗಂಜಿ’ ತಯಾರಿಸಿಕೊಳ್ಳುತ್ತಿದ್ದರು. ಉಪವಾಸದ ಬಳಿಕ ಸೇವಿಸುವ ಈ ಅಂಬಲಿ ದೇಹಕ್ಕೆ ಶಕ್ತಿ ನೀಡುತ್ತಿತ್ತು. ಆ ಖಾದ್ಯ ಮೆಲ್ಲಗೆ ಜನಪ್ರಿಯವಾಗತೊಡಗಿತು. ಬಳಿಕ ಹಬ್ಬದ ದಿನಗಳಲ್ಲಿ ಅವಿಭಾಜ್ಯ ಅಂಗವಾಯಿತು.

ಇಂಗ್ಲಿಷರು ಮೊದಮೊದಲು ಈ ಅಂಬಲಿಯನ್ನು ಪ್ಲಮ್‌ ಪುಡ್ಡಿಂಗ್‌ ಎಂದು ಕರೆಯುತ್ತಿದ್ದರು. ಓವೆನ್‌ ಸಂಶೋಧನೆ ಆದ ಬಳಿಕ ಕೆಲ ಶ್ರೀಮಂತರ ಮನೆಗಳಲ್ಲಿ ಅಂಬಲಿಯನ್ನು ಬೇಯಿಸುವ ಬದಲು ಬೇಕ್‌ ಮಾಡಲು ಆರಂಭಿಸಿದರು. ಅದು ಕೇಕ್‌ನ ರೂಪು ತಳೆಯಿತು. ಆಹಾರದಲ್ಲಿ ಪ್ರಯೋಗಗಳು ಆಗುತ್ತಾ ಓಟ್ಸ್‌ ಹಾಗೂ ಮಾಂಸದ ಬದಲು ಹಿಟ್ಟು, ಮೊಟ್ಟೆ, ಬೆಣ್ಣೆ ಪದಾರ್ಥಗಳನ್ನು ಬಳಸಲು ಆರಂಭಿಸಿದರು. ಇದು ಪ್ಲಮ್‌ ಕೇಕ್‌ ಜನನಕ್ಕೆ ದಾರಿಮಾಡಿಕೊಟ್ಟಿತು. ಇಂಗ್ಲೆಂಡ್‌ನಲ್ಲಿ ಒಣಗಿದ ಹಣ್ಣುಗಳನ್ನು ಪ್ಲಮ್‌ ಎಂದು ಕರೆಯುವರು. ಹೀಗಾಗಿ ‘ಪ್ಲಮ್‌ ಕೇಕ್‌’ ಎಂಬ ನಾಮಕರಣವಾಯಿತು.

ಕೇಕ್‌ ಘಮ ಪಸರಿಸಿತು ವಿಶ್ವವ್ಯಾಪಿ: ಇಂಗ್ಲೆಂಡ್‌ನ ವಸಾಹತುಶಾಹಿ ನೀತಿಯಿಂದಾಗಿ ವಿಶ್ವದಾದ್ಯಂತ ಪ್ಲಮ್‌ ಕೇಕ್‌ನ ಘಮ ಪಸರಿಸಿತು. ಆಸ್ಟ್ರೇಲಿಯ, ಅಮೆರಿಕ ಹಾಗೂ ಭಾರತದಂತಹ ರಾಷ್ಟ್ರಗಳಲ್ಲಿ ಬ್ರಿಟಿಷರು ವಸಾಹತುಶಾಹಿ ಸ್ಥಾಪಿಸಿದರು. ಅನ್ಯ ರಾಷ್ಟ್ರಗಳಲ್ಲಿದ್ದ ಸಂಬಂಧಿಕರಿಗೆ ಕ್ರಿಸ್‌ಮಸ್‌ ಸಮಯದಲ್ಲಿ ಇಂಗ್ಲೆಂಡ್‌ನಿಂದ ಪ್ಲಮ್‌ ಕೇಕ್‌, ವಿವಿಧ ಬಗೆಯ ಉಡುಗೊರೆಗಳು ರವಾನೆಯಾಗುತ್ತಿದ್ದವು. ಈ ಸಂಪ್ರದಾಯ ಆಯಾ ರಾಷ್ಟ್ರಗಳಲ್ಲೂ ನೆಲೆಯೂರಲು ಆರಂಭವಾಯಿತು. ಬ್ರಿಟಿಷರನ್ನು ಕೇಳಿಕೊಂಡು ಪ್ಲಮ್‌ ಕೇಕ್‌ ತಯಾರಿಯ ವಿಧಾನವನ್ನೂ ಕಲಿತರು. ಈಗ ಈ ಸಂಪ್ರದಾಯ ವಿಶ್ವವನ್ನೇ ಆವರಿಸಿದೆ.

ಪ್ಲಮ್‌ ಕೇಕ್‌ ತಯಾರಿ ವಿಧಾನ ಒಬ್ಬೊಬ್ಬರದೂ ಒಂದೊಂದು ಶೈಲಿ. ಅನುಕೂಲಕ್ಕೆ ಅನುಗುಣವಾಗಿ ಕೇಕ್‌ ತಯಾರಾಗುತ್ತವೆ. ಕೆಲ ಒಣಹಣ್ಣು ಕೆಲವರಿಗೆ ಹಿಡಿಸದು. ಇನ್ನು ಕೆಲವರಿಗೆ ವೈನ್‌ ಎಂದರೆ ವರ್ಜ್ಯ. ಕೆಲವರಿಗೆ ಕೇಕ್‌ಗೆ ಬ್ರ್ಯಾಂಡಿಯೇ ಆಗಬೇಕು. ಮಗದೊಬ್ಬರು ಮದ್ಯ ಮುಕ್ತ ಕೇಕ್‌ ಇಷ್ಟ ಪಡುವರು. ಹೀಗೆ ಅಭಿರುಚಿಗೆ ತಕ್ಕಂತೆ ಪ್ಲಮ್‌ ಕೇಕ್‌ ತಯಾರಾಗುತ್ತದೆ.

ವೈನ್‌ ಬಳಸದೆಯೆ ಸಾಮಾನ್ಯ ಪ್ಲಮ್‌ ಕೇಕ್‌ ಮಾಡುವ ವಿಧಾನ ಇಲ್ಲಿದೆ

ಪ್ಲಮ್‌ ಹಣ್ಣುಗಳು– ಒಂದುಕಾಲು ಕಪ್‌

ಮೈದಾ– 1 ಕಪ್‌

ಮೊಟ್ಟೆ– ಮೂರು

ಬೆಣ್ಣೆ– ಅರ್ಧ ಕಪ್‌

ಸಕ್ಕರೆ– ಅರ್ಧ ಕಪ್‌

ನಿಂಬೆ ಝೆಟ್ಸ್‌– 1 ಚಮಚ

ಬೇಕಿಂಗ್‌ ಪೌಡರ್‌– ಅರ್ಧ ಚಮಚ

ಹೀಗೆ ಮಾಡಿ

ಮೊಟ್ಟೆಯ ಬಿಳಿ ಭಾಗವನ್ನು ಬೀಟ್‌ ಮಾಡಿ ಲಿಂಬೆ ಎಸೆನ್ಸ್‌ ಸೇರಿಸಿ. ಬೆಣ್ಣೆ ಹಾಗೂ ಸಕ್ಕರೆಯನ್ನು ಮಿಕ್ಸ್‌ ಮಾಡಿ ಮೊಟ್ಟ ಮಿಶ್ರಣದೊಂದಿಗೆ ಸೇರಿಸಿ. ಬಳಿಕ ಮೈದಾ ಹಿಟ್ಟು ಹಾಗೂ ಬೇಕಿಂಗ್‌ ಪೌಡರ್‌ ಹಾಕಿ ಕಲಸಿ ಕೇಕ್‌ ಪ್ಯಾನ್‌ನಲ್ಲಿ ಹಾಕಿ. ಅದರ ಮೇಲೆ ಕತ್ತರಿಸಿಕೊಂಡ ಪ್ಲಮ್‌ ಹಣ್ಣುಗಳನ್ನು ಆಕರ್ಷಕವಾಗಿ ಅಲಂಕರಿಸಿ. ಈಗಾಗಲೇ 375 ಡಿಗ್ರಿ ಪ್ಯಾರನ್‌ ಹೀಟ್‌ ಕಾದಿರುವ ಓವೆನ್‌ನಲ್ಲಿ 375 ಡಿಗ್ರಿ ಪ್ಯಾರನ್‌ಹೀಟ್‌ನಲ್ಲಿ 40 ನಿಮಿಷ ಬೇಕ್‌ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.